ಶನಿವಾರ, 5 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಬಿಬಿಎಂಪಿ: ಬೀದಿ ಬದಿ ವ್ಯಾಪಾರಿಗಳ ಸಮೀಕ್ಷೆ ಆರಂಭ

Published : 5 ಅಕ್ಟೋಬರ್ 2024, 16:09 IST
Last Updated : 5 ಅಕ್ಟೋಬರ್ 2024, 16:09 IST
ಫಾಲೋ ಮಾಡಿ
Comments

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯ ಎಲ್ಲ ವಲಯಗಳಲ್ಲಿ ಬೀದಿ ಬದಿ ವ್ಯಾಪಾರಿಗಳ ಸಮೀಕ್ಷೆ ಪ್ರಾರಂಭಿಸಲಾಗಿದ್ದು, ತ್ವರಿತಗತಿಯಲ್ಲಿ ಪೂರ್ಣಗೊಳಿಸಲು ಕಲ್ಯಾಣ ವಿಭಾಗ ಕ್ರಮ ಕೈಗೊಂಡಿದೆ ಎಂದು ಕಲ್ಯಾಣ ವಿಭಾಗದ ವಿಶೇಷ ಆಯುಕ್ತ ಸುರಳ್ಕರ್ ವಿಕಾಸ್ ಕಿಶೋರ್ ತಿಳಿಸಿದ್ದಾರೆ.

ಬೀದಿ ಬದಿ ವ್ಯಾಪಾರಿಗಳ (ಜೀವನೋಪಾಯ ಸಂರಕ್ಷಣೆ ಮತ್ತು ಬೀದಿ ವ್ಯಾಪಾರ ನಿಯಂತ್ರಣ) ಅಧಿನಿಯಮ-2014 ಮತ್ತು ಕರ್ನಾಟಕ ಬೀದಿ ಬದಿ ವ್ಯಾಪಾರಿಗಳ (ಜೀವನೋಪಾಯ ಸಂರಕ್ಷಣೆ, ಬೀದಿ ಬದಿ ವ್ಯಾಪಾರದ ನಿಯಂತ್ರಣ ಮತ್ತು ಪರವಾನಗಿ) ಯೋಜನೆ-2020 ರಂತೆ ಸಮೀಕ್ಷೆ ನಡೆಸಲಾಗುತ್ತಿದೆ. 600ಕ್ಕೂ ಹೆಚ್ಚು ಗಣತಿದಾರರು ಸಮೀಕ್ಷೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಮೊಬೈಲ್ ತಂತ್ರಾಂಶದ ಮೂಲಕ ಸಮೀಕ್ಷೆ ನಡೆಸಲಾಗುತ್ತಿದ್ದು, ಇದುವರೆಗೆ 1800 ವ್ಯಾಪಾರಿಗಳನ್ನು ಗುರುತಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಅರ್ಹ ಬೀದಿ ಬದಿ ವ್ಯಾಪಾರಿಗಳಿಗೆ ಗುರುತಿನ ಚೀಟಿ ಮತ್ತು ಪ್ರಮಾಣ ಪತ್ರಗಳನ್ನು ವಿತರಿಸಲಾಗುವುದು. ಅಲ್ಲದೇ ವಲಯ ಮಟ್ಟದಲ್ಲಿ ಪಟ್ಟಣ ಮಾರಾಟ ಸಮಿತಿಗಳನ್ನು ರಚಿಸಿ, ಬೀದಿ ವ್ಯಾಪಾರಿಗಳಿಗೆ ಇರುವ ಯೋಜನೆಯನ್ನು ಅನುಷ್ಠಾನಗೊಳಿಸಲಾಗುವುದು. ಸಮೀಕ್ಷೆಯ ಸಂದರ್ಭದಲ್ಲಿ ಆಧಾರ್ ಕಾರ್ಡ್, ಮತದಾರರ ಗುರುತಿನ ಚೀಟಿ, ಬ್ಯಾಂಕ್ ಪಾಸ್ ಬುಕ್, ಕುಟುಂಬ ಪಡಿತರ‌ ಚೀಟಿ, ಕುಟುಂಬ ಸದಸ್ಯರ ಮಾಹಿತಿ, ಸ್ವಯಂ ಘೋಷಣೆ ಪ್ರಮಾಣ ಪತ್ರದ ಪ್ರತಿಗಳನ್ನು ಗಣತಿದಾರರಿಗೆ ಒದಗಿಸಬೇಕು ಎಂದು ಮನವಿ ಮಾಡಿದ್ದಾರೆ.

ಪಿಎಂ ಸ್ವನಿಧಿ, ಪಾಲಿಕೆಯ ಕಲ್ಯಾಣ ವಿಭಾಗದಿಂದ ಇ-ಮಾರಾಟ ವಾಹನ ಖರೀದಿಗೆ ಸಹಾಯಧನ, ಮನೆ/ಅಮೃತ ಮಹೋತ್ಸವ ಮನೆ ಯೋಜನೆಗೆ ಸಹಾಯಧನ, ಗಂಭೀರ ಸ್ವರೂಪ ಕಾಯಿಲೆಗಳಿಂದ ಬಳಲುತ್ತಿರುವವರಿಗೆ ವೈದ್ಯಕೀಯ ವೆಚ್ಚ ಮರು ಪಾವತಿ, ಕೌಶಲ ತರಬೇತಿ ಕಾರ್ಯಕ್ರಮ, ಬೀದಿ ಬದಿ ವ್ಯಾಪಾರಿಗಳ ಮಕ್ಕಳ ಶಿಕ್ಷಣಕ್ಕೆ ಶುಲ್ಕ ಮರುಪಾವತಿ ಸಹಿತ ಬೀದಿ ಬದಿ ವ್ಯಾಪಾರಿಗಳಿಗೆ ಇರುವ ಸೌಲಭ್ಯಗಳ ಬಗ್ಗೆ ಬೀದಿನಾಟಕ, ಕರಪತ್ರ ವಿತರಣೆ ಮೂಲಕ ಅರಿವು ಮೂಡಿಸಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT