ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಬೆಂಗಳೂರು: ಬೀಡಾಡಿ ದನಗಳ ಹಾವಳಿ; ಸಂಚಾರಕ್ಕೆ ಸಂಚಕಾರ

ಸಾರ್ವಜನಿಕರಿಗೆ ತಪ್ಪದ ಗೋಳು; ರಸ್ತೆಯಲ್ಲೇ ಠಿಕಾಣಿ, ಹೆಚ್ಚಿದ ಸಂಚಾರ ದಟ್ಟಣೆ
Published 28 ಜೂನ್ 2024, 20:40 IST
Last Updated 28 ಜೂನ್ 2024, 20:40 IST
ಅಕ್ಷರ ಗಾತ್ರ

ಬೆಂಗಳೂರು: ನಗರದಲ್ಲಿ ಬೀಡಾಡಿ ದನಗಳ ಹಾವಳಿ ಹೆಚ್ಚಾಗಿದೆ. ಇವುಗಳಿಂದ ಬೀದಿಬದಿಯ ವ್ಯಾಪಾರಿಗಳು ಪ್ರತಿನಿತ್ಯ ಕಿರಿಕಿರಿ ಅನುಭವಿಸಿದರೆ, ವಾಹನ ಸವಾರರ ಸಂಚಾರಕ್ಕೆ ಸಂಚಕಾರ ತಂದಿವೆ.

ಕಲಾಸಿಪಾಳ್ಯದಲ್ಲಿರುವ ಜಯಚಾಮರಾಜೇಂದ್ರ ಹಣ್ಣು ಮತ್ತು ತರಕಾರಿ ಸಗಟು ಮಾರುಕಟ್ಟೆ, ಕೆ.ಆರ್. ಮಾರುಕಟ್ಟೆ, ಶಿವಾಜಿನಗರದ ರಸೆಲ್‌ ಮಾರುಕಟ್ಟೆ ಹಾಗೂ ನಗರದ ಪ್ರಮುಖ ರಸ್ತೆಗಳಲ್ಲಿ ಬೀಡಾಡಿ ದನಗಳ ಹಾವಳಿ ಮೀತಿಮೀರಿದೆ. ಇವುಗಳ ನಿಯಂತ್ರಣಕ್ಕೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕಾದ ಸ್ಥಳೀಯ ಆಡಳಿತ ಮೌನವಹಿಸಿದೆ. ಇದರಿಂದ ಸಮಸ್ಯೆ ಮತ್ತಷ್ಟು ಹೆಚ್ಚಾಗಿದೆ.

ಬೀಡಾಡಿ ದನಗಳನ್ನು ಹಿಡಿದು ಬೇರೆಡೆ ಸಾಗಿಸುವ ಕೆಲಸವನ್ನು ಬಿಬಿಎಂಪಿ ಮಾಡುತ್ತಿಲ್ಲ. ರಸ್ತೆಯಲ್ಲಿ ಬೀಡು ಬಿಡುವ ಜಾನುವಾರುಗಳನ್ನು ಸಿಬ್ಬಂದಿ ಪತ್ತೆ ಹಚ್ಚಿ ಗೋಶಾಲೆಗೆ ಕಳುಹಿಸಬೇಕು. ಮೂಲ ಮಾಲೀಕರು ಬಂದರೆ ಅವರಿಗೆ ದಂಡ ವಿಧಿಸಿ ಕಠಿಣ ಎಚ್ಚರಿಕೆ ನೀಡಬೇಕು. ಆದರೆ ಈ ಕೆಲಸಗಳು ಆಗುತ್ತಿಲ್ಲ.

‘ಮೆಟ್ರೊ ನಿಲ್ದಾಣ, ಬಸ್‌ ನಿಲ್ದಾಣ, ಮಾರುಕಟ್ಟೆ ಪ್ರದೇಶಗಳಲ್ಲಿ ಅಡ್ಡಾಡುವ ಈ ಜಾನುವಾರುಗಳಿಂದ ವಾಹನ ಸಂಚಾರರಿಗೆ ತೀವ್ರ ತೊಂದರೆ ಆಗುತ್ತಿದೆ. ಕೆಲವು ಸಲ ಅಪಘಾತಕ್ಕೂ ಇವು ಕಾರಣವಾಗಿವೆ’ ಎಂಬುದು ಸಾರ್ವಜನಿಕರ ಆರೋಪವಾಗಿದೆ.

ಮಾರುಕಟ್ಟೆ ಪ್ರದೇಶಗಳಲ್ಲಿ ಅಡ್ಡಾಡುವ ದನಗಳನ್ನು ಕಟ್ಟಿ ಹಾಕಿದರೆ, ಅವುಗಳನ್ನು ಬಿಡಿಸಿಕೊಂಡು ಹೋಗಲು ಮಾಲೀಕರು ಬರುತ್ತಾರೆ. ಹೀಗಾಗಿ ಎಲ್ಲ ದನಗಳೂ ಬೀಡಾಡಿ ದನಗಳಲ್ಲ. ಆದ್ದರಿಂದ, ಬಿಬಿಎಂಪಿ ಅಸಲಿ ಮಾಲೀಕರನ್ನು ಗುರುತಿಸಿ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಇದರಿಂದ, ಮುಂದಿನ ದಿನಗಳಲ್ಲಿ ಆಗುವ ಸಮಸ್ಯೆಗಳನ್ನು ತಡೆಯಬಹುದು’ ಎಂಬುದು ಜನರ ಒತ್ತಾಯವಾಗಿದೆ.

ವಾಜರಹಳ್ಳಿ, ರಘುವನಹಳ್ಳಿ, ತಲಘಟ್ಟಪುರ, ಬನಶಂಕರಿ ಸೇರಿದಂತೆ ಕನಕಪುರ ಮುಖ್ಯರಸ್ತೆಯ ಉದ್ದಕ್ಕೂ ಬೀಡಾಡಿ ದನಗಳ ಹಾವಳಿ ಹೆಚ್ಚಾಗಿದೆ. ತಲಘಟ್ಟಪುರ ಮೆಟ್ರೊ ನಿಲ್ದಾಣದ ಕೆಳಭಾಗದ ರಸ್ತೆಯಲ್ಲಿ ದನಗಳು ನಿತ್ಯವೂ ಮಲಗುತ್ತವೆ. ಇದರಿಂದ, ವಾಹನ ಸಂಚಾರಕ್ಕೆ ತೊಂದರೆಯಾಗಿದ್ದು, ಸಂಚಾರ ದಟ್ಟಣೆಯೂ ಆಗುತ್ತಿದೆ. ಇಲ್ಲಿನ ಸಂಚಾರ ಪೊಲೀಸರಿಗೆ ಈ ದನಗಳನ್ನು ಓಡಿಸುವುದೇ ಪ್ರತಿನಿತ್ಯದ ಕೆಲಸವಾಗಿದೆ.

‘ತಲಘಟ್ಟಪುರ ವ್ಯಾಪ್ತಿಯಲ್ಲಿ ಕಳೆದ ಒಂದು ತಿಂಗಳಿಂದ ಬೀಡಾಡಿ ದನಗಳ ಹಾವಳಿ ಹೆಚ್ಚಾಗಿದ್ದು, ಇವುಗಳನ್ನು ಹಿಡಿದುಕೊಂಡು ಹೋಗುವಂತೆ ಬಿಬಿಎಂಪಿಗೆ ಪತ್ರ ಬರೆಯಲಾಗಿತ್ತು. ಪತ್ರಕ್ಕೆ ಸ್ಪಂದಿಸಿದ ಬಿಬಿಎಂಪಿ ಸಿಬ್ಬಂದಿ ಶುಕ್ರವಾರ(ಜೂನ್ 28)ದಂದು ಐದು ದನಗಳನ್ನು ಹಿಡಿದುಕೊಂಡು ಹೋಗಿದ್ದಾರೆ’ ಎಂದು ಪೊಲೀಸರೊಬ್ಬರು ಹೇಳಿದರು.

ಪತ್ತಂಗಿ ಎಸ್. ಮುರಳಿ ಕುಮಾರಸ್ವಾಮಿ ಬಡಾವಣೆ
ಪತ್ತಂಗಿ ಎಸ್. ಮುರಳಿ ಕುಮಾರಸ್ವಾಮಿ ಬಡಾವಣೆ
ಕನಕಪುರ ಮುಖ್ಯರಸ್ತೆಯಲ್ಲಿ ಬಿಡಾಡಿ ದನಗಳನ್ನು ಸಂಚಾರಿ ಪೊಲೀಸರು ಓಡಿಸಿದರು - ಪ್ರಜಾವಾಣಿ ಚಿತ್ರ /ಕಿಶೋರ್ ಕುಮಾರ್ ಬೋಳಾರ್
ಕನಕಪುರ ಮುಖ್ಯರಸ್ತೆಯಲ್ಲಿ ಬಿಡಾಡಿ ದನಗಳನ್ನು ಸಂಚಾರಿ ಪೊಲೀಸರು ಓಡಿಸಿದರು - ಪ್ರಜಾವಾಣಿ ಚಿತ್ರ /ಕಿಶೋರ್ ಕುಮಾರ್ ಬೋಳಾರ್
ಸಂಜಯನಗರದ ಮುಖ್ಯರಸ್ತೆಯಲ್ಲಿ ನಿಂತಿರುವ ಬೀಡಾಡಿ ದನ.
ಸಂಜಯನಗರದ ಮುಖ್ಯರಸ್ತೆಯಲ್ಲಿ ನಿಂತಿರುವ ಬೀಡಾಡಿ ದನ.

‘ದನ ಹಿಡಿಯಲು ವಾಹನ ಕೊಡಿ’

‘ಬಿಬಿಎಂಪಿ ವ್ಯಾಪ್ತಿಯಲ್ಲಿ ಬಿಡಾಡಿ ದನಗಳನ್ನು ಹಿಡಿದುಕೊಂಡು ಬರಲು ಕೇವಲ ಎರಡು ವಾಹನಗಳನ್ನು ಮಾತ್ರ ನೀಡಲಾಗಿದ್ದು ಅವು ಆಗಾಗ ಕೈಕೊಡುತ್ತಿವೆ. ವಾಹನಗಳ ಸಂಖ್ಯೆ ಹೆಚ್ಚಿಸುವುದರ ಜೊತೆಗೆ ದನ ಹಿಡಿಯಲು ಪರಿಣತ ಸಿಬ್ಬಂದಿ ನಿಯೋಜಿಸಬೇಕು’ ಎಂದು ಅಧಿಕಾರಿಯೊಬ್ಬರು ಹೇಳಿದರು. ‘ರಸ್ತೆಗಳಲ್ಲಿ ಓಡಾಡುವ ಬಿಡಾಡಿ ದನಗಳ ಮಾಲೀಕರಿಗೆ ನಿಯಮಾನುಸಾರು ದಂಡ ಹಾಕಲಾಗುತ್ತಿದೆ. ದೊಡ್ಡ ಜಾನುವಾರುಗೆ ₹600 ಕರುಗಳಿಗೆ ₹300ರಂತೆ ದಂಡ ವಿಧಿಸಲಾಗುತ್ತಿದೆ’ ಎಂದು ಮಾಹಿತಿ ನೀಡಿದರು.

ಜನ ಏನಂತಾರೆ ?

ಸಂಜಯನಗರ ಮುಖ್ಯರಸ್ತೆಯ ಗೆದ್ದಲಹಳ್ಳಿಯಿಂದ ಅಶ್ವತ್ಥನಗರದ ಮುಖ್ಯ ರಸ್ತೆಯಲ್ಲಿ ಬೀಡಾಡಿ ದಿನಗಳ ಹಾವಳಿ ವಿಪರೀತವಾಗಿದೆ. ‌ಪ್ರತಿನಿತ್ಯ ಸಾರ್ವಜನಿಕರು ಸೇರಿದಂತೆ ಶಾಲಾ ಮಕ್ಕಳು ಕಿರಿಕಿರಿ ಅನುಭವಿಸುವಂತಾಗಿದೆ. ಇವುಗಳನ್ನು ನಿಯಂತ್ರಿಸಲು ಬಿಬಿಎಂಪಿ ಕ್ರಮ ಕೈಗೊಳ್ಳಬೇಕು. ಹನುಮಂತಯ್ಯ ಎಂ. ಗೆದ್ದಲಹಳ್ಳಿ ಬಳ್ಳಾರಿ ಮುಖ್ಯರಸ್ತೆಯಲ್ಲಿ ರಾಸುಗಳು ಸಂಚಾರಕ್ಕೆ ಅಡ್ಡಿಪಡಿಸುತ್ತಿವೆ. ದನಗಳ ನಿಯಂತ್ರಣಕ್ಕೆ ಮಾಲೀಕರಿಗೆ ದಂಡ ಹಾಕಬೇಕು. ಆಗ ಸಂಚಾರ ಸಮಸ್ಯೆಗೆ ಪರಿಹಾರ ಸಿಗಲಿದೆ. ಪತ್ತಂಗಿ ಎಸ್ ಮುರಳಿ ಕುಮಾರಸ್ವಾಮಿ ಬಡಾವಣೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT