ಭಾನುವಾರ, 22 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕಾವೇರಿ ಆರತಿ: ಸರ್ಕಾರಕ್ಕೆ ಶೀಘ್ರ ಅಧ್ಯಯನ ವರದಿ‌

Published : 22 ಸೆಪ್ಟೆಂಬರ್ 2024, 21:17 IST
Last Updated : 22 ಸೆಪ್ಟೆಂಬರ್ 2024, 21:17 IST
ಫಾಲೋ ಮಾಡಿ
Comments

ಕೆ.ಎಸ್.ಸುನಿಲ್

ವಾರಾಣಸಿ(ಉತ್ತರ ಪ್ರದೇಶ): ಗಂಗಾ ಆರತಿ ಮಾದರಿಯಲ್ಲಿ ರಾಜ್ಯದಲ್ಲೂ ಕಾವೇರಿ ಆರತಿ ನಡೆಸಲು ನಿರ್ಧರಿಸಿರುವ ಕರ್ನಾಟಕ ರಾಜ್ಯ ಸರ್ಕಾರ, ಕಾವೇರಿ ಆರತಿ ಅಧ್ಯಯನ ಸಮಿತಿ ನಿಯೋಗವು ಹರಿದ್ವಾರ ಮತ್ತು ವಾರಾಣಸಿಯಲ್ಲಿ ಮೂರು ದಿನಗಳ ಪ್ರವಾಸ ನಡೆಸಿ ಭಾನುವಾರ ರಾಜ್ಯಕ್ಕೆ ವಾಪಸ್‌ ಆಯಿತು.

ಹರಿದ್ವಾರ, ವಾರಾಣಸಿಯಲ್ಲಿ ಗಂಗಾ ಆರತಿ ಕಾರ್ಯಕ್ರಮ ವೀಕ್ಷಿಸಿದ ನಿಯೋಗದ ಸದಸ್ಯರು, ಸ್ಥಳೀಯ ಅಧಿಕಾರಿಗಳು ಹಾಗೂ ಗಂಗಾ ಸೇವಾ ಸಮಿತಿ ಪದಾಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿ ಮಾಹಿತಿ ಸಂಗ್ರಹಿಸಿದರು. ಪೂಜಾ ವಿಧಿ ವಿಧಾನಗಳ ಪ್ರಕ್ರಿಯೆಗಳನ್ನು ಪರಿಶೀಲಿಸಿದರು. ಭಾನುವಾರ ಕಾಶಿ ವಿಶ್ವನಾಥ ದೇವರ ದರ್ಶನ ಪಡೆದು, ಸ್ಥಳೀಯ ಅಧಿಕಾರಿಗಳ ಜತೆ ಸಭೆ ನಡೆಸಿದರು.

ಕರ್ನಾಟಕಕ್ಕೆ ಹಿಂದಿರುಗುವ ಮುನ್ನ ವಾರಾಣಸಿಯಲ್ಲಿ‌ ಸುದ್ದಿಗಾರರ ಜತೆ ಮಾತನಾಡಿದ ಕಾವೇರಿ ಆರತಿ ಅಧ್ಯಯನ ಸಮಿತಿ ಅಧ್ಯಕ್ಷ ಚಲುವರಾಯಸ್ವಾಮಿ ಅವರು, ‘ಗಂಗಾ ಆರತಿ ಮತ್ತು ಕಾವೇರಿ ಆರತಿ ಕುರಿತು ಸೋಮವಾರ ಅಥವಾ ಮಂಗಳವಾರ ರಾಜ್ಯ‌ ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು. ಹೆಚ್ಚಿನ ಅಧ್ಯಯನಕ್ಕಾಗಿ ಮತ್ತೊಮ್ಮೆ ಅಧಿಕಾರಿಗಳ ತಂಡವನ್ನು ವಾರಾಣಸಿ‌ ಮತ್ತು ಹರಿದ್ವಾರಕ್ಕೆ ಕಳುಹಿಸಲಾಗುವುದು. ಬಳಿಕ, ಪರಿಷ್ಕೃತ ವರದಿಯನ್ನು ಸರ್ಕಾರಕ್ಕೆ ನೀಡಲಾಗುವುದು’ ಎಂದು ತಿಳಿಸಿದರು.

’ಹರಿದ್ವಾರದಲ್ಲಿ ಸಹಕಾರ ಕಾಯ್ದೆ ಅಡಿ ನೋಂದಣಿಯಾಗಿರುವ ಗಂಗಾ ಮಹಾಸಭಾದಿಂದ ಗಂಗಾ ಆರತಿ ನಡೆಸಲಾಗುತ್ತಿದೆ. ಇದಕ್ಕೆ ಸರ್ಕಾರದ ಅನುದಾನವಿಲ್ಲ. ಆದರೆ, ನಮ್ಮಲ್ಲಿ ಸರ್ಕಾರವೇ ನಡೆಸಲು ಮುಂದಾಗಿರುವುದರಿಂದ ಭವಿಷ್ಯದಲ್ಲಿ ಯಾವುದೇ ಪಕ್ಷಗಳು ಅಧಿಕಾರಕ್ಕೆ ಬಂದರೂ ಕಾವೇರಿ ಆರತಿ ಮುಂದುವರಿಸುವಂತೆ ಕಾರ್ಯಕ್ರಮ ರೂಪಿಸಲಾಗುವುದು’ ಎಂದು ತಿಳಿಸಿದರು.

‘ಕಾವೇರಿ ಆರತಿ ಕಾರ್ಯಕ್ರಮವನ್ನು ವ್ಯವಸ್ಥಿತವಾಗಿ ಅನುಷ್ಠಾನಗೊಳಿಸಲು ಸಾಕಷ್ಟು ಸಮಯ ಬೇಕು. ಆದರೆ, ಉಪ ಮುಖ್ಯಮಂತ್ರಿ ಸಚಿವ ಡಿ.ಕೆ.ಶಿವಕುಮಾರ್ ಅವರು ಮೈಸೂರು ದಸರಾ ಸಂದರ್ಭದಲ್ಲಿ ಕಾವೇರಿ ಆರತಿ ಆರಂಭಿಸಲು ಇಚ್ಛಿಸಿದ್ದಾರೆ. ದಸರಾ ವೇಳೆಗೆ ಕಾವೇರಿ ಆರತಿ ಆರಂಭಿಸುವುದಾದರೆ ಹರಿದ್ವಾರ ಅಥವಾ ವಾರಾಣಸಿಯಿಂದಲೇ ಸಾಧು ಸಂತರನ್ನು ಆಹ್ವಾನಿಸಿ ಅವರಿಂದ ಸಾಂಕೇತಿಕವಾಗಿ ಕಾರ್ಯಕ್ರಮ ನಡೆಸಲಾಗುವುದು. ಜತೆಗೆ, ನಮ್ಮ ಸ್ಥಳೀಯರಿಗೆ ವಾರಾಣಸಿ /ಹರಿದ್ವಾರ ತಂಡದಿಂದ ತರಬೇತಿ ಕೊಡಿಸಲಾಗುವುದು’ ಎಂದರು.

ಕೊಡಗಿನ ಭಾಗಮಂಡಲ, ಮಂಡ್ಯದ ಕೆಆರ್‌ಎಸ್ ಜಲಾಶಯ ಹಾಗೂ ಶ್ರೀರಂಗಪಟ್ಟಣದಲ್ಲಿ ಕಾವೇರಿ ಆರತಿ ನಡೆಸುವಂತೆ ಒತ್ತಾಯಗಳು ಕೇಳಿ ಬಂದಿವೆ. ಈಗಾಗಲೇ ಕೆಆರ್‌ಎಸ್ ಬೃಂದಾವನವನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ಅಭಿವೃದ್ಧಿ ಪಡಿಸಲಾಗುತ್ತಿದ್ದು, ಇಲ್ಲೇ ಕಾರ್ಯಕ್ರಮ ನಡೆಸಿದರೆ ಹೇಗೆ ಎಂಬ ಚಿಂತನೆಯೂ ನಡೆದಿದೆ’ ಎಂದು ಹೇಳಿದರು.

’ಕಾವೇರಿ ಆರತಿ ಆರಂಭದಿಂದ ಈಗಿರುವ ನದಿ ನೀರು ಹಂಚಿಕೆ ವಿವಾದಕ್ಕೆ ಮುಕ್ತಿ ಸಿಗಬಹುದು ಎಂಬ ನಂಬಿಕೆ, ವಿಶ್ವಾಸ ಇದೆ’ ಎಂದು ಅವರು ಹೇಳಿದರು.

ಕಾವೇರಿ ಆರತಿಯಿಂದ  ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಕೋಟ್ಯಂತರ ಜನರ ಬದುಕು ಕಟ್ಟಿಕೊಳ್ಳಲು ಸಹಾಯ ಆಗಲಿದೆ. 
ದಿನೇಶ್ ಗೂಳಿಗೌಡ ವಿಧಾನ ಪರಿಷತ್ ಸದಸ್ಯ

ಕಾವೇರಿ ಆರತಿಗೆ ಸಾಧು‌ ಗೀತೆ

‘ಕಾವೇರಿ ಆರತಿ ಕಾರ್ಯಕ್ರಮಕ್ಕೆ ಹಾಡೊಂದನ್ನು ಸಿದ್ಧಪಡಿಸುವ ಜವಾಬ್ದಾರಿಯನ್ನು ರಾಜ್ಯ ಸರ್ಕಾರ ನನಗೆ ನೀಡಿದೆ. ಆರತಿ ವೇಳೆ ನಿರಂತರ ಎರಡು ತಾಸು ಜನರು ಒಂದೆಡೆ ಕುಳಿತು ಕೇಳುವಂತಹ ಗೀತೆ ರಚಿಸಿ ಸಂಗೀತ ಸಂಯೋಜನೆ ಮಾಡಲಾಗುವುದು’ ಎಂದು ನಿಯೋಗದಲ್ಲಿದ್ದ ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಸಾಧುಕೋಕಿಲ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT