ಸೋಮವಾರ, 23 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಅಶ್ವಿನ್ ಮೋಡಿಗೆ ತಲೆಬಾಗಿದ ಬಾಂಗ್ಲಾ: ಚೆನ್ನೈ ಟೆಸ್ಟ್‌ನಲ್ಲಿ ಭಾರಿ ಅಂತರದ ಜಯ

Published : 22 ಸೆಪ್ಟೆಂಬರ್ 2024, 22:38 IST
Last Updated : 22 ಸೆಪ್ಟೆಂಬರ್ 2024, 22:38 IST
ಫಾಲೋ ಮಾಡಿ
Comments

ಚೆನ್ನೈ: ಚೆಪಾಕ್‌ನಲ್ಲಿ ಬಾಂಗ್ಲಾದೇಶ ಎದುರು ನಡೆದ ಟೆಸ್ಟ್ ಪಂದ್ಯದಲ್ಲಿ ಸತತ ಮೂರು ದಿವಸ ಪಾರಮ್ಯ ಮೆರೆದಿದ್ದ ಭಾರತ ತಂಡವು ನಿರೀಕ್ಷೆಯಂತೆ ಸುಲಭ ಜಯಸಾಧಿಸಿತು. 

ತಮ್ಮ ತವರೂರಿನ ಅಂಗಳದಲ್ಲಿ ಬಹುತೇಕ ಕೊನೆಯ ಅಂತರರಾಷ್ಟ್ರೀಯ ಪಂದ್ಯವಾಡಿದ ಆಫ್‌ಸ್ಪಿನ್ –ಆಲ್‌ರೌಂಡರ್ ರವಿಚಂದ್ರನ್ ಅಶ್ವಿನ್ (88ಕ್ಕೆ6) ಅವರು ಪ್ರಜ್ವಲಿಸಿದರು. ಅವರಿಗೆ ರವೀಂದ್ರ ಜಡೇಜ (58ಕ್ಕೆ3) ಉತ್ತಮ ಜೊತೆ ನೀಡಿದರು. ಅವರಿಬ್ಬರ ಜೊತೆಯಾಟದಿಂದಾಗಿ ತಂಡವು 280 ರನ್‌ಗಳಿಂದ ಜಯಿಸಿತು. ಇದರೊಂದಿಗೆ ಎರಡು ಪಂದ್ಯಗಳ ಸರಣಿಯಲ್ಲಿ 1–0 ಮುನ್ನಡೆ ಗಳಿಸಿತು.

515 ರನ್‌ಗಳ ಜಯದ ಗುರಿ ಬೆನ್ನಟ್ಟಿದ್ದ ಪ್ರವಾಸಿ ತಂಡಕ್ಕೆ 62.1 ಓವರ್‌ಗಳಲ್ಲಿ 234 ರನ್‌ ಗಳಿಸಲು ಮಾತ್ರ ಸಾಧ್ಯವಾಯಿತು. ನಾಯಕ ನಜ್ಮುಲ್ ಹುಸೇನ್ ಶಾಂತೊ (82;  127ಎ) ಮತ್ತು ಶಕೀಬ್ ಅಲ್ ಹಸನ್ (25; 56ಎ) ಅವರ ಹೋರಾಟವು ತಂಡದ ಗೆಲುವಿಗೆ ಸಾಕಾಗಲಿಲ್ಲ. ಪಂದ್ಯದ ಮೂರನೇ ದಿನವಾದ ಶನಿವಾರ ಬಾಂಗ್ಲಾ ತಂಡವು 4 ವಿಕೆಟ್‌ಗಳಿಗೆ 158 ರನ್‌ ಗಳಿಸಿತ್ತು.  

ಭಾನುವಾರ ಬೆಳಿಗ್ಗೆ ಆತಿಥೇಯ ತಂಡದ ನಾಯಕ ರೋಹಿತ್ ಅವರು ತಮ್ಮ ವೇಗದ ಬೌಲರ್‌ಗಳಾದ ಮೊಹಮ್ಮದ್ ಸಿರಾಜ್ ಮತ್ತು ಜಸ್‌ಪ್ರೀತ್ ಬೂಮ್ರಾ ಅವರಿಗೆ ಬೌಲಿಂಗ್ ನೀಡಿದರು. ಅವರಿಬ್ಬರೂ ಕ್ರೀಸ್‌ನಲ್ಲಿದ್ದ ಶಾಂತೊ ಮತ್ತು ಶಕೀಬ್ ಅವರನ್ನು ಅಪಾರವಾಗಿ ಕಾಡಿದರು. ಸಿರಾಜ್ ಶಾರ್ಟ್‌, ಫುಲ್‌ ಲೆಂಗ್ತ್ ಎಸೆತಗಳ ನಿಖರ ಪ್ರಯೋಗ ನಡೆಸಿದರು. ಬೂಮ್ರಾ ಎಂದಿನಂತೆ ತಮ್ಮ ಗುಡ್‌ಲೆಂಗ್ತ್ ಎಸೆತಗಳ ಮೂಲಕ ಬ್ಯಾಟರ್‌ಗಳ ಸಾಮರ್ಥ್ಯಕ್ಕೆ ಸವಾಲೆಸೆದರು. 

ಸೋಲು ತಪ್ಪಿಸಿಕೊಳ್ಳುವುದು ಕಷ್ಟ ಎಂಬ ಅರಿವು ಪ್ರವಾಸಿ ಬಳಗದಲ್ಲಿ ಬಹುತೇಕ ಅರ್ಥವಾಗಿತ್ತು. ಆದರೂ ಶಾಂತೊ ಮತ್ತು ಶಕೀಬ್ ಕೊನೆಯ ಹಂತದ ಪ್ರಯತ್ನ ನಡೆಸಿದರು. ಈ ನಡುವೆ ಸಿರಾಜ್ ಮತ್ತು ಶಾಂತೊ ನಡುವೆ ಬಿರುನುಡಿಗಳ ವಿನಿಮಯವೂ ಆದವು. ಆದರೆ ಇದು ಹೆಚ್ಚು ಹೊತ್ತು ನಡೆಯಲಿಲ್ಲ. ಪಾನೀಯದ ಅಲ್ಪವಿರಾಮದ ನಂತರ ಕಣಕ್ಕಿಳಿದ 38 ವರ್ಷದ ಅಶ್ವಿನ್ ಸ್ಪಿನ್ ಮೋಡಿಯ ಮುಂದೆ ಬ್ಯಾಟರ್‌ಗಳು ತಲೆಬಾಗಿದರು. 

ಅಶ್ವಿನ್ ಎಸೆತವನ್ನು ಮುಂದಡಿಯಿಟ್ಟು ಆಡಲು ಯತ್ನಿಸಿದ ಎಡಗೈ ಬ್ಯಾಟರ್ ಶಕೀಬ್ ಬ್ಯಾಕ್‌ವರ್ಡ್ ಶಾರ್ಟ್‌ ಲೆಗ್‌ನಲ್ಲಿದ್ದ  ಯಶಸ್ವಿ ಜೈಸ್ವಾಲ್ ಅವರಿಗೆ ಕ್ಯಾಚ್ ಆದರು. ಇದರೊಂದಿಗೆ (5ಕ್ಕೆ194) ಬಾಂಗ್ಲಾ ತಂಡವು ಸೋಲಿನತ್ತ ವೇಗವಾಗಿ ಸಾಗಿತು. 

ಅಶ್ವಿನ್  ಟೆಸ್ಟ್ ಕ್ರಿಕೆಟ್‌ನಲ್ಲಿ 37ನೇ ಬಾರಿ ಐದು ವಿಕೆಟ್ ಗೊಂಚಲು ಗಳಿಸಿದರು. ಇದರೊಂದಿಗೆ ಲೆಗ್‌ಸ್ಪಿನ್ ದಂತಕಥೆ ಶೇನ್ ವಾರ್ನ್ ಅವರ ದಾಖಲೆಯನ್ನು ಸರಿಗಟ್ಟಿದರು. ನಾಲ್ಕನೇ ಇನಿಂಗ್ಸ್‌ಗಳಲ್ಲಿ ಇದು ಅಶ್ವಿನ್ ಅವರ ಏಳನೇ ಪಂಚಗುಚ್ಛವಾಗಿದೆ. ಈ ಪಟ್ಟಿಯಲ್ಲಿ ಅವರು ಎರಡನೇ ಸ್ಥಾನವನ್ನು ವಾರ್ನ್ ಮತ್ತು ಶ್ರೀಲಂಕಾದ ಮುತ್ತಯ್ಯ ಮುರಳೀಧರನ್ ಅವರೊಂದಿಗೆ ಹಂಚಿಕೊಂಡರು. ರಂಗನಾ ಹೆರಾತ್ (12) ಮೊದಲ ಸ್ಥಾನದಲ್ಲಿದ್ಧಾರೆ.

ಅಶ್ವಿನ್ ಅವರು ಒಂದೇ ಟೆಸ್ಟ್‌ನಲ್ಲಿ ಶತಕ ಮತ್ತು ಐದು ವಿಕೆಟ್ ಸಾಧನೆ ಮಾಡಿದ್ದು ಇದು ನಾಲ್ಕನೇ ಸಲವಾಗಿದೆ. ಇಂಗ್ಲೆಂಡ್‌ನ ಇಯಾನ್ ಬಾಥಮ್ (5) ಮೊದಲ ಸ್ಥಾನದಲ್ಲಿದ್ದಾರೆ. ಚೆನ್ನೈನಲ್ಲಿಯೇ ಅವರು ಈ ಸಾಧನೆಯನ್ನು ಎರಡು ಸಲ ಮಾಡಿದ್ದಾರೆ.  ಈ ಸಂದರ್ಭದಲ್ಲಿ ಅವರ ಮಡದಿ ಮತ್ತು ಇಬ್ಬರು ಹೆಣ್ಣುಮಕ್ಕಳು ಗಣ್ಯರ ಗ್ಯಾಲರಿಯಲ್ಲಿ ಕುಳಿತು ಪಂದ್ಯ ವೀಕ್ಷಿಸಿದರು.

101 ಟೆಸ್ಟ್ ಪಂದ್ಯಗಳನ್ನು ಆಡಿರುವ ಅಶ್ವಿನ್ 10ನೇ ಸಲ ಪಂದ್ಯಶ್ರೇಷ್ಠ ಗೌರವಕ್ಕೆ ಪಾತ್ರರಾದರು. 

ಚೆನ್ನೈನಲ್ಲಿ ಭಾನುವಾರ ಮುಕ್ತಾಯವಾದ ಬಾಂಗ್ಲಾದೇಶ ಎದುರಿನ ಟೆಸ್ಟ್ ಪಂದ್ಯದ ನಂತರ ಭಾರತದ ಆಟಗಾರ ಆರ್. ಅಶ್ವಿನ್ ಅವರು ತಮ್ಮ ಪತ್ನಿ ಹಾಗೂ ಮಕ್ಕಳೊಂದಿಗೆ  –ಪಿಟಿಐ ಚಿತ್ರ
ಚೆನ್ನೈನಲ್ಲಿ ಭಾನುವಾರ ಮುಕ್ತಾಯವಾದ ಬಾಂಗ್ಲಾದೇಶ ಎದುರಿನ ಟೆಸ್ಟ್ ಪಂದ್ಯದ ನಂತರ ಭಾರತದ ಆಟಗಾರ ಆರ್. ಅಶ್ವಿನ್ ಅವರು ತಮ್ಮ ಪತ್ನಿ ಹಾಗೂ ಮಕ್ಕಳೊಂದಿಗೆ  –ಪಿಟಿಐ ಚಿತ್ರ

ಸೋಲುಗಳನ್ನು ಹಿಂದಿಕ್ಕಿದ ಭಾರತ!

ಭಾರತ ತಂಡವು ಬಾಂಗ್ಲಾ ಎದುರಿನ ಸರಣಿಯ ಮೊದಲ ಪಂದ್ಯ ಜಯಿಸುವ ಮೂಲಕ ಟೆಸ್ಟ್ ಕ್ರಿಕೆಟ್‌ನಲ್ಲಿ ಸೋಲುಗಳನ್ನು ಹಿಂದಿಕ್ಕಿತು! ಇದುವರೆಗೆ ಒಟ್ಟು 580 ಟೆಸ್ಟ್‌ಗಳನ್ನು ಆಡಿರುವ ಭಾರತ ತಂಡವು 179ರಲ್ಲಿ ಜಯಿಸಿದೆ. 178 ಪಂದ್ಯಗಳಲ್ಲಿ ಸೋತಿತ್ತು. ಸೋಲುಗಳಿಗಿಂತ ಗೆಲುವುಗಳನ್ನು ಹೆಚ್ಚು ದಾಖಲಿಸಿದ ಸಾಧನೆ ಮಾಡಿತು. ಪಂದ್ಯಗಳು;580 ಜಯ;179 ಸೋಲು;178 ಟೈ;1 ಡ್ರಾ;222 –

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT