‘ರಾತ್ರಿ ಸಂಚರಿಸಬೇಕಾದ ರೈಲುಗಳು ಕೆಲವೊಮ್ಮೆ ಹಗಲೇ ಬಂದು ನಿಂತಿರುತ್ತವೆ. ಇದು ಕೂಡ ಸಮಸ್ಯೆಗೆ ಕಾರಣವಾಗಿದೆ. ಮೈಸೂರು, ಮಂಗಳೂರು, ಹುಬ್ಬಳ್ಳಿ ಸೇರಿದಂತೆ ವಿವಿಧೆಡೆ ಜಮೀನು ಸ್ವಾಧೀನಪಡಿ ಸಿ ಕೊಂಡು ಪ್ರತ್ಯೇಕ ಟರ್ಮಿನಲ್ ಮಾಡುವ ಮೂಲಕ ಸಮಸ್ಯೆ ಪರಿಹರಿಸಲು ಸಾಧ್ಯವಿದೆ. ಆದರೆ, ಬೆಂಗಳೂರಿನಲ್ಲಿ ಜಮೀನು ಸಿಗುವುದೇ ಸಮಸ್ಯೆ’ ಎಂದು ವಿವರಿಸಿದರು.
ಬೆಂಗಳೂರಿನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ನಿಲ್ದಾಣ
‘ರೈಲು ಸುಮ್ಮನೆ ನಿಲ್ಲಿಸಬೇಡಿ’
‘ರೈಲ್ವೆಯವರು ಏಕತಾನತೆಯನ್ನು ಮೀರಿ ಚಿಂತನೆ ನಡೆಸಿದರೆ ಪ್ಲ್ಯಾಟ್‌ಫಾರ್ಮ್ ಕೊರತೆಗೆ ಪರಿಹಾರ ಕಂಡುಕೊಳ್ಳಬಹುದು’ ಎಂಬುದು ಸಿಟಿಜನ್ಸ್ ಫಾರ್ ಸಿಟಿಜನ್ಸ್ ಸಂಸ್ಥಾಪಕ ರಾಜಕುಮಾರ್ ದುಗರ್ ಅವರ ಅಭಿಪ್ರಾಯವಾಗಿದೆ. ರಾತ್ರಿ ದೂರದ ಊರಿಗೆ ಹೊರಡಬೇಕಿರುವ ರೈಲುಗಳು ಹಗಲು ಪೂರ್ತಿ ನಿಲ್ದಾಣದಲ್ಲಿ ನಿಂತಿರುತ್ತವೆ. ರೈಲು ಸ್ವಚ್ಛತೆ, ಇಂಧನ ತುಂಬಿಸಲು ಕೆಲವು ಗಂಟೆಗಳು ಬೇಕಾಗುತ್ತವೆ. ಉಳಿದ ಸಮಯದಲ್ಲಿ ಆ ರೈಲುಗಳನ್ನು ಚಿಕ್ಕಬಳ್ಳಾಪುರ, ಬಂಗಾರಪೇಟೆ ಹೀಗೆ ನಾಲ್ಕೈದು ಗಂಟೆಗಳಲ್ಲಿ ಹೋಗಿ ಬರಬಹುದಾದ ಸ್ಥಳಗಳಿಗೆ ಸಂಚರಿಸುವಂತೆ ಮಾಡಿ’ ಎಂದರು. ‘ನಮ್ಮ ಮೆಟ್ರೊ’ದಲ್ಲಿ ಅಲ್ಲಲ್ಲಿ ಒಂದು ರೈಲು ನಿಲ್ಲುವಷ್ಟು ಸಣ್ಣ ಟ್ರ್ಯಾಕ್‌ಗಳನ್ನು ಹಾಕಿರುತ್ತಾರೆ. ಎತ್ತರದ ಮಾರ್ಗಗಳಲ್ಲಿ ಇದನ್ನು ಕಾಣಬಹುದು. ರೈಲ್ವೆ ಹಳಿಗಳ ಪಕ್ಕ ದಲ್ಲಿ ರೈಲ್ವೆಯವರ ಜಮೀನು ಇದೆ. ಅಲ್ಲಲ್ಲಿ ಒಂದೊಂದು ರೈಲುಗಳು ನಿಲ್ಲುವಂತೆ ಪಕ್ಕ ದಲ್ಲಿ ಹಳಿ ನಿರ್ಮಿಸುವ ಮೂಲಕವೂ ಸಮಸ್ಯೆ ನಿವಾರಿಸಬಹುದು ಎಂದು ದುಗರ್ ತಿಳಿಸಿದರು.
‘ಎಲ್ಲ ಹಳಿಗಳನ್ನು ಒಂದೇ ಎತ್ತರಕ್ಕೆ ತನ್ನಿ’
ಕೆಎಸ್‌ಆರ್‌ನಲ್ಲಿ 10 ಪ್ಲ್ಯಾಟ್‌ಫಾರ್ಮ್ ಗಳಿದ್ದರೂ ಎಲ್ಲ ರೈಲುಗಳು ಎಲ್ಲ ಪ್ಲ್ಯಾಟ್‌ಫಾರ್ಮ್‌ಗಳಿಗೆ ಪ್ರವೇಶಿಸಲು ಸಾಧ್ಯವಿಲ್ಲ. ಯಶವಂತಪುರ ಕಡೆಯಿಂದ ಬರುವ ರೈಲುಗಳು 8,9 ಮತ್ತು 10ನೇ ಪ್ಲ್ಯಾಟ್‌ಫಾರ್ಮ್‌ಗಳಿಗೆ ಮಾತ್ರ ಹೋಗಬಹುದು. ಮೈಸೂರು ಕಡೆಯ ರೈಲುಗಳು 5ರಿಂದ 10 ಪ್ಲ್ಯಾಟ್‌ಫಾರ್ಮ್, ಕಂಟೋನ್ಮೆಂಟ್ ಕಡೆಯಿಂದ ಬರುವ ರೈಲುಗಳು 1ರಿಂದ 7 ಪ್ಲ್ಯಾಟ್‌ಫಾರ್ಮ್‌ಗಳಿಗೆ ಬರಬಹುದು. ಕೆಲವು ಹಳಿಗಳು ಎತ್ತರದಲ್ಲಿ ಇನ್ನು ಕೆಲವು ತಗ್ಗಿನಲ್ಲಿ ಇರುವುದರಿಂದ ‘ಇಂಟರ್‌ಚೇಂಜ್‘ ಸಾಧ್ಯವಾಗುತ್ತಿಲ್ಲ. ಇದನ್ನು ಸರಿಪಡಿಸಬೇಕು. ಕೆಲವು ಪ್ಲ್ಯಾಟ್‌ಫಾರ್ಮ್‌ಗಳ ಉದ್ದವೂ ಕಡಿಮೆ ಇರುತ್ತದೆ. 24 ಬೋಗಿಗಳನ್ನು ಹೊಂದಿರುವ ಕಾಚಿಗುಡ ಎಕ್ಸ್‌ಪ್ರೆಸ್ 5ನೇ ಪ್ಲ್ಯಾಟ್‌ಫಾರ್ಮ್‌ಗೇ ಬರಬೇಕು. ಬೇರೆ ಪ್ಲ್ಯಾಟ್‌ಫಾರ್ಮ್‌ಗೆ ಬಂದರೆ ಹಿಂದಿನ ಬೋಗಿಗಳು ಸ್ಟೇಷನ್‌ನಿಂದ ಹೊರಗುಳಿಯಬೇಕಾಗುತ್ತದೆ. ‘ವೈಜ್ಞಾನಿಕವಾಗಿ ಮರು ನಿರ್ಮಾಣ ಮಾಡಿದರೆ ಪ್ಲ್ಯಾಟ್‌ಫಾರ್ಮ್ ಕೊರತೆ ತಗ್ಗಿಸಬಹುದು’ ಎನ್ನುತ್ತಾರೆ ರೈಲ್ವೆ ಹೋರಾಟಗಾರ ಕೆ.ಎನ್. ಕೃಷ್ಣ ಪ್ರಸಾದ್.
ಸ್ಯಾಟಲೈಟ್ ಸ್ಟೇಷನ್ ಪರಿಹಾರ
‘ರೈಲುಗಳು ನಗರಕ್ಕೆ ಪ್ರವೇಶಿಸುವ ಬದಲು ಹೊರ ವಲಯದಲ್ಲಿಯೇ ನಿಂತು ಅಲ್ಲಿಂದಲೇ ಮುಂದಕ್ಕೆ ಹೋಗುವಂತೆ ಮಾಡಲು ಸ್ಯಾಟಲೈಟ್ ನಿಲ್ದಾಣಗಳನ್ನು ಮಾಡುವುದರಿಂದ ಪರಿಹಾರ ಕಂಡುಕೊಳ್ಳಬಹುದು. ಆದರೆ, ಇದು ದುಬಾರಿ ವೆಚ್ಚದ ಯೋಜನೆಯಾಗಿದೆ’ ಎಂದು ನೈರುತ್ಯ ರೈಲ್ವೆ ಸಿಪಿಆರ್‌ಒ ಮಂಜುನಾಥ್ ಕನಮಡಿ ತಿಳಿಸಿದರು.
ನಿಲ್ದಾಣಗಳಿಗೆ ಪ್ರವೇಶಿಸುವ ಮೊದಲು 10 ನಿಮಿಷದಿಂದ ಅರ್ಧ ಗಂಟೆವರೆಗೆ ಹೊರಗೆ ಕಾಯುತ್ತಾ ನಿಂತಾಗ ಪ್ಲ್ಯಾಟ್‌ಫಾರ್ಮ್ ಕೊರತೆಯಿಂದ ನಿಂತಿದೆ ಎಂದು ಪ್ರಯಾಣಿಕರು ಭಾವಿಸುತ್ತಾರೆ. ಅದು ಪೂರ್ತಿ ನಿಜವಲ್ಲ. ಕೆಲವು ಸಂದರ್ಭದಲ್ಲಿ ಪ್ಲ್ಯಾಟ್‌ಫಾರ್ಮ್ ಕೊರತೆ ಇರುತ್ತದೆ. ಉಳಿದ ಸಮಯದಲ್ಲಿ ಇನ್ನೊಂದು ರೈಲು ಹೋಗಲು ಸಿಗ್ನಲ್ ನೀಡಲಾಗಿರುತ್ತದೆ ಎಂದು ವಿವರಿಸಿದರು.