ಗವಿಪುರದಲ್ಲಿರುವ ಗವಿಗಂಗಾಧರೇಶ್ವರ ದೇವಸ್ಥಾನದಲ್ಲಿ ಭಕ್ತಾದಿಗಳು ನೂಕುನುಗ್ಗಲಿನಲ್ಲಿಯೇ ದೇವರ ದರ್ಶನ ಪಡೆದರು –
ಮತ್ತಿಕೆರೆ ಮೈದಾನದಲ್ಲಿ ರಾಮಮಂದಿರದ ಜತೆಗೆ ರಾಮ ಹಾಗೂ ಶಿವನ ಬೃಹತ್ ಪ್ರತಿಕೃತಿಯನ್ನು ಭಕ್ತಾದಿಗಳು ಕಣ್ತುಂಬಿಕೊಂಡರು – ಪ್ರಜಾವಾಣಿ ಚಿತ್ರ/ ಬಿ.ಕೆ. ಜನಾರ್ದನ್
ಮಲ್ಲೇಶ್ವರದಲ್ಲಿರುವ ಕಾಡು ಮಲ್ಲೇಶ್ವರ ದೇವಸ್ಥಾನದಲ್ಲಿ ಮಲ್ಲಿಕಾರ್ಜುನ ಸ್ವಾಮಿಗೆ ಶಿವರಾತ್ರಿ ಅಂಗವಾಗಿ ವಿಶೇಷ ಅಲಂಕಾರ ಮಾಡಲಾಗಿತ್ತು –ಪ್ರಜಾವಾಣಿ ಚಿತ್ರ/ ಎಂ.ಎಸ್.ಮಂಜುನಾಥ್
ಕಲಾಸಿಪಾಳ್ಯದಲ್ಲಿರುವ ಜಲಕಂಠೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಜಲಕಂಠೇಶ್ವರನಿಗೆ ಮಂಜುಗಡ್ಡೆಯಿಂದ ವಿಶೇಷ ಅಲಂಕಾರ ಮಾಡಲಾಗಿತ್ತು - ಪ್ರಜಾವಾಣಿ ಚಿತ್ರ
ಸಂಗೀತ–ನೃತ್ಯದ ಮೆರಗು
ಜಾಗರಣೆ ಪ್ರಯುಕ್ತ ವಿವಿಧ ಸಂಘ ಸಂಸ್ಥೆಗಳು ಹಾಗೂ ದೇವಾಲಯಗಳು ಶುಕ್ರವಾರ ಸಂಜೆಯಿಂದ ಶನಿವಾರ ಬೆಳಿಗ್ಗೆ ತನಕ ಲಕ್ಷ ದೀಪೋತ್ಸವ ನಾಟಕೋತ್ಸವ ಸಂಗೀತ–ನೃತ್ಯ ಕಾರ್ಯಕ್ರಮಗಳನ್ನು ಏರ್ಪಡಿಸಿದ್ದವು. ನಂಜನಗೂಡು ಶ್ರೀಕಂಠೇಶ್ವರ ಸೇವಾ ಸಂಘವು ಮಲ್ಲೇಶ್ವರದ ಶ್ರೀಕಂಠೇಶ್ವರ ಭವನದಲ್ಲಿ ಭಜನಾ ಕಾರ್ಯಕ್ರಮ ಹಮ್ಮಿಕೊಂಡಿತ್ತು. ಗುರುಕುಮಾರ ಪಂಚಾಕ್ಷರೇಶ್ವರ ಸಂಗೀತ ಕಲಾ ವೇದಿಯು ಹೆಸರುಘಟ್ಟ ರಸ್ತೆಯ ಚಿಮಿಣಿ ಹಿಲ್ಸ್‌ನಲ್ಲಿ ಶಿವರಾತ್ರಿ ಸ್ವರ ಸಂಭ್ರಮ ಕಾರ್ಯಕ್ರಮ ನಡೆಸಿತು. ಸೃಷ್ಟಿ ಸೆಂಟರ್ ಆಫ್ ಪರ್ಫಾಮಿಂಗ್ ಆರ್ಟ್ಸ್ ಆ್ಯಂಡ್ ಇನ್‌ಸ್ಟಿಟ್ಯೂಟ್ ಆಫ್ ಡಾನ್ಸ್ ಥೆರೆಪಿಯಿಂದ ಚಾಮರಾಜಪೇಟೆಯಲ್ಲಿರುವ ಶೃಂಗೇರಿ ಶಂಕರ ಮಠದಲ್ಲಿ ರಾತ್ರಿಯಿಡೀ ಸಂಗೀತ–ನೃತ್ಯ ಕಾರ್ಯಕ್ರಮಗಳನ್ನು ನಡೆಸಲಾಯಿತು. ಸಿರೂರು ಪಾರ್ಕ್ ಆಟದ ಮೈದಾನದಲ್ಲಿ ‘ಜಾಣಜಾಣೆಯರ ನಗೆಜಾಗರಣೆ’ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ರಂಗಸೇತುವೆ ಟ್ರಸ್ಟ್ ವತಿಯಿಂದ ಶ್ರೀಗಂಧ ಕಾವಲಿನ ಪೂರ್ಣಚಂದ್ರ ತೇಜಸ್ವಿ ರಂಗಮಂದಿರದಲ್ಲಿ ‘ವರಭ್ರಷ್ಠ’ ಪೌರಾಣಿಕ ನಾಟಕ ಪ್ರದರ್ಶಿಸಲಾಯಿತು. ಕಾಡುಮಲ್ಲೇಶ್ವರ ಗೆಳೆಯರ ಬಳಗದಿಂದ ಮಲ್ಲೇಶ್ವರದ ಕಾಡುಮಲ್ಲೇಶ್ವರ ಬಯಲು ರಂಗಮಂಟಪದಲ್ಲಿ ತಡರಾತ್ರಿವರೆಗೂ ಸಂಗೀತ–ನೃತ್ಯ ಕಾರ್ಯಕ್ರಮಗಳು ನಡೆದವು.
ರಾತ್ರಿಯಿಡೀ ‘ಕಾವ್ಯ ಶಿವರಾತ್ರಿ’
ಜನಸಂಸ್ಕೃತಿ ಪ್ರತಿಷ್ಠಾನ ಕಾವ್ಯ ಮಂಡಲ ಹಾಗೂ ಡಾ.ಬಾಬು ಜಗಜೀವನರಾಮ್ ಅಧ್ಯಯನ ಮತ್ತು ಸಂಶೋಧನಾ ಸಂಸ್ಥೆ ಜಂಟಿಯಾಗಿ ಬೆಂಗಳೂರು ವಿಶ್ವವಿದ್ಯಾಲಯದ ಜ್ಞಾನಭಾರತಿ ಆವರಣದಲ್ಲಿ ಕಾವ್ಯ ಶಿವರಾತ್ರಿ ಆಯೋಜಿಸಿತ್ತು. ಅಹೋರಾತ್ರಿ ಕಾವ್ಯ ಗಾಯನ ನಡೆಯಿತು. ಅದಾದ ಮೇಲೆ ಮಂಟೇಸ್ವಾಮಿ ಮತ್ತು ಮಲೆಮಹದೇಶ್ವರ ಮಹಾಕಾವ್ಯಗಳ ಗಾಯನ ‘ಮಿಸಸ್ ಅಂಬೇಡ್ಕರ್’ ನಾಟಕ ಪ್ರದರ್ಶನ ನಡೆಯಿತು.