ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ನೆಲಮಂಗಲ: ಹಿತಚಿಂತನ ಟ್ರಸ್ಟ್‌ನಿಂದ ‘ಔಷಧ ಕ್ರೋಡೀಕರಣ’ ಡಬ್ಬಿ !

Published 25 ಜೂನ್ 2024, 20:42 IST
Last Updated 25 ಜೂನ್ 2024, 20:42 IST
ಅಕ್ಷರ ಗಾತ್ರ

ನೆಲಮಂಗಲ: ‘ಕರುಣೆಯ ಗೋಡೆ’ಯ ಮೂಲಕ ವಿಭಿನ್ನ ಸಮಾಜಸೇವೆ ಪ್ರಾರಂಭಿಸಿದ್ದ ಹಿತಚಿಂತನ ಚಾರಿಟಬಲ್‌ ಟ್ರಸ್ಟ್‌, ಅದರ ಮುಂದುವರಿದ ಭಾಗವಾಗಿ ‘ಔಷಧ ಕ್ರೋಡೀಕರಣ‘ದ ಡಬ್ಬಿಯನ್ನು ಪ್ರಾರಂಭಿಸಿದೆ.

ಸಾರ್ವಜನಿಕರು ಬಳಸಿ ಉಳಿದ ಔಷಧಗಳನ್ನು ಈ ಡಬ್ಬಿಯಲ್ಲಿ ಹಾಕಬಹುದು. ಹೀಗೆ ಸಂಗ್ರಹವಾದ ಔಷಧಗಳನ್ನು ಪರಿಷ್ಕರಿಸಿ ವೈದ್ಯರ ಸಲಹೆ ಮೇರೆಗೆ ಅನಾಥಾಶ್ರಮ, ವೃದ್ಧಾಶ್ರಮ, ಸರ್ಕಾರಿ ಆಸ್ಪತ್ರೆ, ಶಾಲೆಗಳಲ್ಲಿ ವಿತರಿಸಲಾಗುತ್ತಿದೆ.

ಪಟ್ಟಣದ ಬಿನ್ನಮಂಗಲ ಬಸ್‌ನಿಲ್ದಾಣದಲ್ಲಿರುವ ಟ್ರಸ್ಟ್‌ನ ‘ಕರುಣೆ ಗೋಡೆ’ಗೆ ಹೊಂದಿಕೊಂಡಿರುವಂತೆ ಅಂಚೆಪೆಟ್ಟಿಗೆ ರೀತಿಯಲ್ಲಿ ‘ಔಷಧೀಯ ಕೋಡ್ರೀಕರಣ’ದ ಡಬ್ಬಿಯನ್ನು ಇಡಲಾಗಿದೆ. ಔಷಧಗಳು ದುರ್ಬಳಕೆಯಾಗಬಾರದೆಂಬ ಕಾರಣಕ್ಕೆ, ಆ ಡಬ್ಬಿಗೆ ಬೀಗ ಹಾಕಲಾಗಿದೆ.

‘ಪ್ರತಿ ದಿನ ನಮ್ಮ ವಿಸಿಎನ್‌ಆರ್‌ ಆಸ್ಪತ್ರೆಯ ಸಿಬ್ಬಂದಿ ಡಬ್ಬಿಯಿಂದ ಔಷಧಗಳನ್ನು ಸಂಗ್ರಹಿಸುತ್ತಾರೆ. ಸಂಗ್ರಹವಾದ ಔಷಧಗಳನ್ನು ಪರಿಷ್ಕರಿಸಿ, ವೈದ್ಯರ ಸಲಹೆ ಮೇರೆಗೆ ಅಗತ್ಯವಿರುವವರಿಗೆ ವಿತರಿಸಲಾಗುವುದು’ ಎಂದು ಟ್ರಸ್ಟ್‌ನ ಅಧ್ಯಕ್ಷ ವಿ. ರಾಮಸ್ವಾಮಿ ತಿಳಿಸಿದರು. 

ಔಷಧಗಳ ಹೆಸರು ಹಾಗೂ ಔಷಧದ ಬಳಕೆಯ ಅವಧಿ (Expiry Date) ಕಾಣುವಂತಹ ಔಷಧಗಳನ್ನು ‘ಔಷಧ ಕ್ರೋಢೀಕರಣ’ ಡಬ್ಬಿಯಲ್ಲಿ ಹಾಕಬಹುದು. ‘ಔಷಧಗಳಷ್ಟೇ ಅಲ್ಲದೆ ಅಂಗವಿಕಲರು ಬಳಸುವ ಸಾಧನಗಳು, ಬೆನ್ನು, ಕೈ, ಕುತ್ತಿಗೆಗೆ ಹಾಕಿಕೊಳ್ಳುವ ಬೆಲ್ಟ್‌.. ಇಂಥ ಯಾವುದೇ ಉಪಯೋಗ ಯೋಗ್ಯ ಸಾಮಗ್ರಿಗಳನ್ನು ಡಬ್ಬಿಯಲ್ಲಿ ಹಾಕಬಹುದು. ಡಬ್ಬಿಯಲ್ಲಿ ಹಾಕಲು ಸಾಧ್ಯವಿಲ್ಲದ್ದನ್ನು, ಅಲ್ಲೇ ಎದುರಿಗಿರುವ ನಮ್ಮ ಭದ್ರತಾ ಸಿಬ್ಬಂದಿಗೆ ಹಸ್ತಾಂತರಿಸಿದರೆ ಸಾಕು. ನಮ್ಮ ಈ  ಪ್ರಯತ್ನದ ಯಶಸ್ವಿಗೆ ಸಹಕರಿಸುವಂತೆ ಅವರು ಮನವಿ ಮಾಡಿದ್ದಾರೆ.

ಕಳೆದ ವರ್ಷದ ಅಕ್ಟೋಬರ್‌ನಲ್ಲಿ ಇದೇ  ಜಾಗದಲ್ಲಿ ‘ಅಗತ್ಯವಿಲ್ಲದಿದ್ದರೆ ಇಲ್ಲಿ ಇಡಿ, ಅಗತ್ಯವಿದ್ದರೆ ತಗೆದುಕೊಳ್ಳಿʼ ಎಂಬ ಧ್ಯೇಯ ವಾಕ್ಯದೊಂದಿಗೆ ‘ಕರುಣೆಯ ಗೋಡೆ’ ಎಂಬ ಕಪಾಟನ್ನು ಟ್ರಸ್ಟ್‌ ಸ್ಥಾಪಿಸಿದೆ. ಸಾರ್ವಜನಿಕರು ತಮಗೆ ಅಗತ್ಯವಿಲ್ಲದ ವಸ್ತುಗಳನ್ನು ಇಲ್ಲಿ ತಂದು ಇಡುತ್ತಿದ್ದಾರೆ. ಅಗತ್ಯವಿರುವವರು ಅವುಗಳನ್ನು ಬಳಸಿಕೊಳ್ಳುತ್ತಿದ್ದಾರೆ.

‘ಕರುಣೆ ಗೋಡೆ‘ಗೆ ಸಾರ್ವಜನಿಕರಿಂದ ದೊರೆತ ಉತ್ತಮ ಪ್ರತಿಕ್ರಿಯೆಯಿಂದ ಪ್ರೇರಿತರಾದ ವಿ.ರಾಮಸ್ವಾಮಿ, ‘ಔಷಧ ಕ್ರೋಡೀಕರಣ’ ಡಬ್ಬಿ ಸ್ಥಾಪನೆಗೆ ಮುಂದಾದರು.

ವಿ.ರಾಮಸ್ವಾಮಿ
ವಿ.ರಾಮಸ್ವಾಮಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT