ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ನಮ್ಮ ಕ್ಲಿನಿಕ್: ವೈದ್ಯರೂ ಇಲ್ಲ, ರೋಗಿಗಳೂ ಇಲ್ಲ!

ಶುಶ್ರೂಷಕರಿಂದಲೇ ರೋಗಿಗಳಿಗೆ ವಿವಿಧ ಚಿಕಿತ್ಸೆ *ಪ್ರಾರಂಭವಾಗದ ಯೋಗಾಭ್ಯಾಸ
Published 25 ಮೇ 2023, 23:53 IST
Last Updated 25 ಮೇ 2023, 23:53 IST
ಅಕ್ಷರ ಗಾತ್ರ

ಬೆಂಗಳೂರು: ಜನರ ಸಮಗ್ರ ಆರೋಗ್ಯ ವೃದ್ಧಿಗೆ ವಾರ್ಡ್‌ ಮಟ್ಟದಲ್ಲಿ ಪ್ರಾರಂಭಿಸಲಾದ ನಮ್ಮ ಕ್ಲಿನಿಕ್‌ಗಳಲ್ಲಿ ವೈದ್ಯರ ಅನುಪಸ್ಥಿತಿ ಕಾಡುತ್ತಿದ್ದು, ಶುಶ್ರೂಷಕರೇ ಚಿಕಿತ್ಸೆ ನೀಡುತ್ತಿದ್ದಾರೆ. ಇದು ಗುಣಮಟ್ಟದ ವೈದ್ಯಕೀಯ ಸೇವೆಗೆ ತೊಡಕಾಗಿದೆ. 

ನಗರದಲ್ಲಿ ಸದ್ಯ 224 ನಮ್ಮ ಕ್ಲಿನಿಕ್‌ಗಳು ಕಾರ್ಯನಿರ್ವಹಿಸುತ್ತಿವೆ. ಇವುಗಳಲ್ಲಿ 108 ಕ್ಲಿನಿಕ್‌ಗಳಿಗೆ ಮೊದಲ ಹಂತದಲ್ಲಿ ಕಳೆದ ಫೆಬ್ರವರಿ ತಿಂಗಳಲ್ಲಿ ಚಾಲನೆ ನೀಡಲಾಗಿತ್ತು. ಇನ್ನುಳಿದ ಕ್ಲಿನಿಕ್‌ಗಳು ತದನಂತರ ಕಾರ್ಯಾರಂಭಿಸಿದ್ದವು. ‘ಚುನಾವಣೆ ಕಾರಣ ಆತುರದಲ್ಲಿ ಈ ಕ್ಲಿನಿಕ್‌ಗಳಿಗೆ ಸರ್ಕಾರ ಚಾಲನೆ ನೀಡಿದೆ’ ಎಂದು ಪ್ರತಿಪಕ್ಷಗಳು ಆ ವೇಳೆ ಆರೋಪಿಸಿದ್ದವು. ಈ ಕ್ಲಿನಿಕ್‌ಗಳು ಬೆಳಿಗ್ಗೆ 9.30ರಿಂದ ಸಂಜೆ 4.30ರವರೆಗೆ ಕಾರ್ಯನಿರ್ವಹಿಸುತ್ತಿವೆ. ಜ್ವರದಂತಹ ಸಾಮಾನ್ಯ ಅನಾರೋಗ್ಯ ಸಮಸ್ಯೆಗಳಿಗೆ ಚಿಕಿತ್ಸೆ ಒದಗಿಸುವ ಜತೆಗೆ ರಕ್ತ ಸೇರಿ ವಿವಿಧ ಪರೀಕ್ಷೆಗಳನ್ನೂ ಇಲ್ಲಿ ನಡೆಸಲಾಗುತ್ತಿದೆ. ಆದರೆ, ಬಹುತೇಕ ಕ್ಲಿನಿಕ್‌ಗಳಲ್ಲಿ ಪ್ರತಿನಿತ್ಯ ಭೇಟಿ ನೀಡುವ ರೋಗಿಗಳ ಸಂಖ್ಯೆ ಎರಡಂಕಿ ತಲುಪುತ್ತಿಲ್ಲ.

ಪ್ರತಿ ವಾರ್ಡ್‌ಗೆ ಒಂದರಂತೆ ಒಟ್ಟು 243 ನಮ್ಮ ಕ್ಲಿನಿಕ್‌ಗಳನ್ನು ಸ್ಥಾಪಿಸಲು ಬಿಬಿಎಂಪಿ ಕಾರ್ಯಯೋಜನೆ ರೂಪಿಸಿತ್ತು. ನಗರದ ಎಲ್ಲಾ ವಿಧಾನಸಭೆ ಕ್ಷೇತ್ರದಲ್ಲಿ ಈ ಕ್ಲಿನಿಕ್‌ಗಳನ್ನು ಸ್ಥಾಪಿಸಲಾಗಿದೆ. ಚಾಮರಾಜಪೇಟೆ, ಪದ್ಮನಾಭನಗರ, ಬಸವನಗುಡಿ, ಶಿವಾಜಿನಗರ, ಚಿಕ್ಕಪೇಟೆ, ಜಯನಗರ, ಮಹದೇವಪುರ, ಯಲಹಂಕ ಸೇರಿ ಬಹುತೇಕ ಕಡೆ ಮುಖ್ಯ ರಸ್ತೆಗಳ ಅಕ್ಕಪಕ್ಕದಲ್ಲಿ ಈ ಕ್ಲಿನಿಕ್‌ಗಳಿಲ್ಲ. ಸಂದಿ ಮೂಲೆಗಳಲ್ಲಿ ಬಿಬಿಎಂಪಿ ಕಟ್ಟಡದಲ್ಲಿ ಸ್ಥಳಾವಕಾಶ ನೀಡಲಾಗಿದೆ. ಇದರಿಂದಾಗಿ ಸ್ಥಳೀಯ ನಿವಾಸಿಗಳಿಗೇ ಕ್ಲಿನಿಕ್‌ ಇರುವ ಬಗ್ಗೆ ಮಾಹಿತಿ ಇಲ್ಲವಾಗಿದೆ.

ಗಾಂಧಿಬಜಾರ್‌ನಲ್ಲಿ ನಮ್ಮ ಕ್ಲಿನಿಕ್‌ ನಡೆಯುತ್ತಿರುವ ಕಟ್ಟಡ 48 ವರ್ಷಗಳ ಹಿಂದಿನದಾಗಿದೆ. ಸುತ್ತಮುತ್ತಲೂ ಕಟ್ಟಡ ಆವರಿಸಿಕೊಂಡಿರುವುದರಿಂದ ಕ್ಲಿನಿಕ್ ಮರೆಯಾಗಿದೆ. ಇದರಿಂದಾಗಿ ಅಲ್ಲಿಗೆ ಜನ ಬರುತ್ತಿಲ್ಲ. ಚಲವಾದಿಪಾಳ್ಯದಲ್ಲಿ ಕ್ಲಿನಿಕ್ ಮುಂದೆಯೇ ಕಸದ ರಾಶಿ ಹಾಕಲಾಗಿದೆ. ಇದರಿಂದಾಗಿ ಚಿಕಿತ್ಸಾ ಕೇಂದ್ರದ ಹೊರಗಡೆಯೇ ಜನರು ಮೂಗು ಮುಚ್ಚಿಕೊಂಡು ಸಾಗಬೇಕಾದ ಪರಿಸ್ಥಿತಿ ಇದೆ. ಕ್ಲಿನಿಕ್‌ಗಳ ಒಳಗಡೆ ಸ್ವಚ್ಛತೆಗೆ ಆದ್ಯತೆ ನೀಡಲಾಗಿದ್ದು, ಆಸನ ವ್ಯವಸ್ಥೆಯನ್ನೂ ಸೂಕ್ತವಾಗಿ ಕಲ್ಪಿಸಲಾಗಿದೆ. 

ನಮ್ಮ ಕ್ಲಿನಿಕ್‌ಗಳಲ್ಲಿ ತಲಾ ಒಬ್ಬರು ವ್ಯೆದ್ಯಾಧಿಕಾರಿ, ಶುಶ್ರೂಷಕರು, ಪ್ರಯೋಗಶಾಲಾ ತಂತ್ರಜ್ಞರು, ಡಿ-ದರ್ಜೆ ನೌಕರರು ಕಾರ್ಯನಿರ್ವಹಿಸಬೇಕಿದೆ. ಆದರೆ, ಕೆಲವೆಡೆ ಶುಶ್ರೂಷಕರೊಬ್ಬರೇ ಎಲ್ಲಾ ಕೆಲಸಗಳನ್ನು ಮಾಡಬೇಕಾದ ಸ್ಥಿತಿ ನಿರ್ಮಾಣವಾಗಿದೆ. 

ಶೌಚಾಲಯ ಸಮಸ್ಯೆ: ನಮ್ಮ ಕ್ಲಿನಿಕ್‌ಗಳು ಸೋಮವಾರದಿಂದ ಶನಿವಾರದವರೆಗೆ ಕಾರ್ಯನಿರ್ವಹಿಸುತ್ತಿವೆ. ಸಾವಿರ ಚದರ ಅಡಿ ವಿಸ್ತೀರ್ಣದಲ್ಲಿ ನಿರೀಕ್ಷಣಾ ಸ್ಥಳ, ಹೊರ ರೋಗಿಗಳ ತಪಾಸಣೆ ಕೊಠಡಿ, ಚುಚ್ಚು ಮದ್ದು ನೀಡುವ ಕೊಠಡಿ, ಪ್ರಯೋಗಶಾಲೆ, ಯೋಗ, ಔಷಧ ದಾಸ್ತಾನು ಮತ್ತು ವಿತರಣಾ ಕೊಠಡಿ, ಆಡಳಿತ ಕಚೇರಿ ಸೇರಿ ವಿವಿಧ ಕೊಠಡಿಗಳು ಇರಬೇಕಿದೆ. ಆದರೆ, ಹಲವೆಡೆ ಯೋಗ ಸ್ಥಳ ಸೇರಿ ವಿವಿಧ ಕೊಠಡಿಗಳಿಲ್ಲ. ಆಸ್ಪತ್ರೆ ಸಿಬ್ಬಂದಿ, ಮಹಿಳಾ ಮತ್ತು ಪುರುಷ ರೋಗಿಗಳಿಗೆ ಪ್ರತ್ಯೇಕ ಶೌಚಾಲಯ ವ್ಯವಸ್ಥೆಯನ್ನೂ ಕಲ್ಪಿಸಿಲ್ಲ. 

‘ರೋಗಿಗಳಿಗೆ ಚಿಕಿತ್ಸೆಯ ಜತೆಗೆ ಉಚಿತವಾಗಿ ಔಷಧವನ್ನೂ ಒದಗಿಸಲಾಗುತ್ತದೆ. ಮಧುಮೇಹದಂತಹ ದೀರ್ಘಾವಧಿ ಸಮಸ್ಯೆಗಳಿಗೂ ಮಾತ್ರೆಗಳನ್ನು ನೀಡಲಾಗುತ್ತದೆ. ಮಾಹಿತಿ ಕೊರತೆಯಿಂದ ರೋಗಿಗಳು ಕ್ಲಿನಿಕ್‌ಗಳಿಗೆ ಬರುತ್ತಿಲ್ಲ. ರೋಗಿಗಳು ಹೆಚ್ಚಿನ ಸಂಖ್ಯೆಯಲ್ಲಿ ಬಂದಲ್ಲಿ ಇನ್ನಷ್ಟು ಸೌಲಭ್ಯ ಹಾಗೂ ಸ್ಥಳಾವಕಾಶ ಕೇಳಬಹುದು’ ಎಂದು ಬೆಂಗಳೂರು ದಕ್ಷಿಣದಲ್ಲಿರುವ ನಮ್ಮ ಕ್ಲಿನಿಕ್‌ನ ವೈದ್ಯರೊಬ್ಬರು ಬೇಸರ ವ್ಯಕ್ತಪಡಿಸಿದರು. 

‘ನಮ್ಮ ಕ್ಲಿನಿಕ್‌ಗಳ ಪರಿಕಲ್ಪನೆ ಉತ್ತಮವಾಗಿದ್ದರೂ ಜನರನ್ನು ತಲುಪಲು ಸಾಧ್ಯವಾಗುತ್ತಿಲ್ಲ. ಮುಖ್ಯ ರಸ್ತೆಗಳು, ಉದ್ಯಾನಗಳ ಅಕ್ಕಪಕ್ಕ ಸ್ಥಾಪಿಸಿದಲ್ಲಿ ಜನರು ಬರುತ್ತಿದ್ದರು. ವೃದ್ಧರು ಮಾತ್ರ ವಿವಿಧ ಮಾತ್ರೆಗಳಿಗೆ ಭೇಟಿ ನೀಡುತ್ತಿದ್ದಾರೆ’ ಎಂದು ಚಾಮರಾಜಪೇಟೆಯ ನಮ್ಮ ಕ್ಲಿನಿಕ್‌ನ ಶುಶ್ರೂಷಕರೊಬ್ಬರು ತಿಳಿಸಿದರು. 

‘ನಮ್ಮ ಕ್ಲಿನಿಕ್‌ಗಳಲ್ಲಿ ಮಧುಮೇಹ ಸೇರಿ ವಿವಿಧ ಸಮಸ್ಯೆಗಳಿಗೆ ಮಾತ್ರೆಗಳು ನಿಯಮಿತವಾಗಿ ದೊರೆಯುತ್ತಿಲ್ಲ. ವೈದ್ಯರು ಕೂಡ ವಾರದ ಬಹುತೇಕ ದಿನ ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸುತ್ತಿಲ್ಲ’ ಎಂದು ವಿಜಯನಗರದ ಸಂಗಮೇಶ್ ಬೇಸರ ವ್ಯಕ್ತಪಡಿಸಿದರು.

ಬನಶಂಕರಿಯ ಕಾಮಾಕ್ಯದಲ್ಲಿರುವ ನಮ್ಮ ಕ್ಲಿನಿಕ್‌ನಲ್ಲಿ ವೈದ್ಯಾಧಿಕಾರಿ ರಜೆಯ ಮೇಲೆ ತೆರಳಿರುವುದು –ಪ್ರಜಾವಾಣಿ ಚಿತ್ರ/ ಪ್ರಶಾಂತ್ ಎಚ್.ಜಿ.
ಬನಶಂಕರಿಯ ಕಾಮಾಕ್ಯದಲ್ಲಿರುವ ನಮ್ಮ ಕ್ಲಿನಿಕ್‌ನಲ್ಲಿ ವೈದ್ಯಾಧಿಕಾರಿ ರಜೆಯ ಮೇಲೆ ತೆರಳಿರುವುದು –ಪ್ರಜಾವಾಣಿ ಚಿತ್ರ/ ಪ್ರಶಾಂತ್ ಎಚ್.ಜಿ.
ಹೊರವರ್ತುಲ ರಸ್ತೆಯ ಹೊಸಕೆರೆಹಳ್ಳಿಯಲ್ಲಿ ಇರುವ ನಮ್ಮ ಕ್ಲಿನಿಕ್‌ನಲ್ಲಿ ವೈದ್ಯರು ಹಾಗು ಸಿಬ್ಬಂದಿ ರೋಗಿಗಳ ನಿರೀಕ್ಷೆಯಲ್ಲಿ ಕುಳಿತಿರುವುದು. –ಪ್ರಜಾವಾಣಿ ಚಿತ್ರ/ ಪ್ರಶಾಂತ್ ಎಚ್.ಜಿ. 
ಹೊರವರ್ತುಲ ರಸ್ತೆಯ ಹೊಸಕೆರೆಹಳ್ಳಿಯಲ್ಲಿ ಇರುವ ನಮ್ಮ ಕ್ಲಿನಿಕ್‌ನಲ್ಲಿ ವೈದ್ಯರು ಹಾಗು ಸಿಬ್ಬಂದಿ ರೋಗಿಗಳ ನಿರೀಕ್ಷೆಯಲ್ಲಿ ಕುಳಿತಿರುವುದು. –ಪ್ರಜಾವಾಣಿ ಚಿತ್ರ/ ಪ್ರಶಾಂತ್ ಎಚ್.ಜಿ. 
ಕಾರುಣ್ಯಾ ಸುರೇಶ್
ಕಾರುಣ್ಯಾ ಸುರೇಶ್
ಪಾರ್ವತಮ್ಮ ಎಚ್.
ಪಾರ್ವತಮ್ಮ ಎಚ್.
ಗೋವಿಂದರಾವ್‌ ಸೂರ್ಯವಂಶಿ
ಗೋವಿಂದರಾವ್‌ ಸೂರ್ಯವಂಶಿ
ಡಾ.ಕೆ.ವಿ ತ್ರಿಲೋಕ ಚಂದ್ರ
ಡಾ.ಕೆ.ವಿ ತ್ರಿಲೋಕ ಚಂದ್ರ

ತಜ್ಞ ವೈದ್ಯರ ಕೊರತೆಯಿಂದ ನಮ್ಮ ಕ್ಲಿನಿಕ್‌ಗಳಲ್ಲಿ ಗುಣಮಟ್ಟದ ವೈದ್ಯಕೀಯ ಸೌಲಭ್ಯ ದೊರೆಯುತ್ತಿಲ್ಲ. ಈ ಕ್ಲಿನಿಕ್‌ಗಳ ಬಲವರ್ಧನೆಗೆ ಬಿಬಿಎಂಪಿ ಆದ್ಯತೆ ನೀಡಬೇಕು.

-ಕಾರುಣ್ಯಾ ಸುರೇಶ್ ಹೆಬ್ಬಾಳ

ನಮ್ಮ ಕ್ಲಿನಿಕ್‌ಗಳಲ್ಲಿ ಮಧುಮೇಹ ಸೇರಿ ವಿವಿಧ ಸಮಸ್ಯೆಗಳಿಗೆ ಮಾತ್ರೆಗಳು ಸರಿಯಾಗಿ ಸಿಗುತ್ತಿಲ್ಲ. ಈ ಬಗ್ಗೆ ಕ್ರಮವಹಿಸಿ ಬಡ–ಮಧ್ಯಮ ವರ್ಗದವರಿಗೆ ಸೂಕ್ತ ಚಿಕಿತ್ಸೆ ಒದಗಿಸಬೇಕು.

-ಪಾರ್ವತಮ್ಮ ಎಚ್. ವಿನಾಯಕನಗರ

ನಮ್ಮ ಕ್ಲಿನಿಕ್‌ಗಳಿಗೆ ಅಗತ್ಯ ಮೂಲಸೌಕರ್ಯವನ್ನು ಒದಗಿಸಬೇಕು. ವೈದ್ಯರ ಗೈರು ಹಾಜರಿಯಲ್ಲಿ ಇನ್ನೊಬ್ಬರು ವೈದ್ಯರು ಇರುವಂತೆ ನೋಡಿಕೊಳ್ಳಬೇಕು. ಯೋಗಾಭ್ಯಾಸ ಪ್ರಾರಂಭಿಸಬೇಕು.

-ಗೋವಿಂದರಾವ್‌ ಸೂರ್ಯವಂಶಿ ವಿಕಾಸನಗರ

ರಜೆ ಮೇಲೆ ತೆರಳುತ್ತಿರುವ ವೈದ್ಯರು

ನಮ್ಮ ಕ್ಲಿನಿಕ್‌ಗಳಿಗೆ ತಲಾ ಒಬ್ಬರು ವೈದ್ಯರನ್ನು ಒಂದು ವರ್ಷಕ್ಕೆ ಗುತ್ತಿಗೆ ಆಧಾರದಲ್ಲಿ ನೇಮಿಸಿಕೊಳ್ಳಲಾಗಿದೆ. ಈ ಕ್ಲಿನಿಕ್‌ಗಳಲ್ಲಿನ ವೈದ್ಯರು ವಿವಿಧ ಕಾರಣಗಳಿಗೆ ರಜೆ ಹಾಕಿದರೆ ಶುಶ್ರೂಷಕರೇ ವೈದ್ಯಕೀಯ ಸೇವೆ ಒದಗಿಸಬೇಕಾಗ ಪರಿಸ್ಥಿತಿ ನಿರ್ಮಾಣವಾಗಿದೆ. ಎಂಬಿಬಿಎಸ್ ಮುಗಿಸಿದ ವೈದ್ಯಾಧಿಕಾರಿಗೆ ₹ 47250 ವೇತನ ನಿಗದಿಪಡಿಸಲಾಗಿದೆ. ಎಂಬಿಬಿಎಸ್‌ ಮುಗಿಸಿದವರು ಸ್ನಾತಕೋತ್ತರ ಪದವಿ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳ ಸಿದ್ಧತೆಗಾಗಿ ರಜೆ ಪಡೆದುಕೊಳ್ಳುತ್ತಿದ್ದಾರೆ. ಅವರು ಕರ್ತವ್ಯಕ್ಕೆ ಬಾರದ ದಿನಗಳಲ್ಲಿ ಶುಶ್ರೂಷಕರು ಪರೀಕ್ಷೆ ನಡೆಸಿ ಮಾತ್ರೆಗಳನ್ನು ನೀಡುತ್ತಿದ್ದಾರೆ.  ‘ಯುಪಿಎಸ್‌ಸಿ ಪರೀಕ್ಷೆಗೆ ವೈದ್ಯರು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಆದ್ದರಿಂದ ಅವರು ರಜೆ ಹಾಕಿದ್ದಾರೆ. ಕ್ಲಿನಿಕ್‌ಗೆ ಬಂದವರಿಗೆ ನಾವೇ ಪರೀಕ್ಷೆ ಮಾಡಿ ಮಾತ್ರೆ ವಿತರಿಸುತ್ತೇವೆ. ಪ್ರಯೋಗಾಲಯದ ಸಿಬ್ಬಂದಿ ದ್ವಿಚಕ್ರ ವಾಹನದಿಂದ ಬಿದ್ದು ಗಾಯಗೊಂಡಿದ್ದಾರೆ. ಎರಡು ತಿಂಗಳಿಂದ ಅವರು ರಜೆಯಲ್ಲಿದ್ದು ನಾವೇ ರಕ್ತ ಸೇರಿ ವಿವಿಧ ಪರೀಕ್ಷೆ ಮಾಡುತ್ತೇವೆ’ ಎಂದು ಚಿಕ್ಕಪೇಟೆ ವಿಧಾನಸಭೆ ಕ್ಷೇತ್ರದ ವ್ಯಾಪ್ತಿಯಲ್ಲಿರುವ ನಮ್ಮ ಕ್ಲಿನಿಕ್‌ನ ಶುಶ್ರೂಷಕರೊಬ್ಬರು ತಿಳಿಸಿದರು. 

ಶುಶ್ರೂಷಕರ ಅಸಮಾಧಾನ

ನಮ್ಮ ಕ್ಲಿನಿಕ್‌ಗಳಲ್ಲಿ ಶುಶ್ರೂಷಕ ಹುದ್ದೆಗೆ ಬಿಎಸ್‌ಸಿ ನರ್ಸಿಂಗ್‌ನಲ್ಲಿ ಡಿಪ್ಲೊಮಾ ಮಾಡಿದವರನ್ನು ನೇಮಿಸಿಕೊಳ್ಳಲಾಗಿದೆ. ವೈದ್ಯರ ಗೈರು ಹಾಜರಿಯಲ್ಲಿ ಶುಶ್ರೂಷಕರೇ ತಪಾಸಣೆ ನಡೆಸುತ್ತಿದ್ದಾರೆ. ಗರ್ಭಿಣಿಯರಿಗೆ ಸೂಕ್ತ ಆರೈಕೆ ಮಾಡಿ ಮಾರ್ಗದರ್ಶನ ಮಾಡುತ್ತಿದ್ದಾರೆ. ಅವರಿಗೆ ₹ 15750 ನಿಗದಿಪಡಿಸಲಾಗಿದೆ.  ವೇತನದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿರುವ ಶುಶ್ರೂಷಕರು ‘ಅನಿವಾರ್ಯ ಕಾರಣಗಳಿಂದ ಈ ಉದ್ಯೋಗವನ್ನು ಆ‌ಯ್ಕೆ ಮಾಡಿಕೊಂಡಿದ್ದೇವೆ. ಇಷ್ಟು ವೇತನದಲ್ಲಿ ಜೀವನ ನಿರ್ವಹಣೆ ಕಷ್ಟವಾಗಿದೆ. ಮಾತ್ರೆಗಳು ಇಲ್ಲದಿದ್ದಲ್ಲಿ ರೋಗಿಗಳು ನಮ್ಮ ಮೇಲೆ ಆಕ್ರೋಶ ವ್ಯಕ್ತಪಡಿಸುತ್ತಾರೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.   

ಪ್ರಾರಂಭವಾಗದ ಯೋಗ ಕೇಂದ್ರ

ನಮ್ಮ ಕ್ಲಿನಿಕ್‌ಗಳು ಪ್ರಾರಂಭವಾಗಿ ಕೆಲ ತಿಂಗಳು ಕಳೆದರೂ ಯೋಗಾಭ್ಯಾಸ ಪ್ರಾರಂಭವಾಗಿಲ್ಲ. ಕೆಲ ನಮ್ಮ ಕ್ಲಿನಿಕ್‌ಗಳಲ್ಲಿ ಯೋಗ ಕೊಠಡಿಗೆ ಬೀಗ ಹಾಕಲಾಗಿದೆ. ಇನ್ನೂ ಕೆಲವೆಡೆ ಸ್ಥಳಾವಕಾಶವನ್ನೇ ಗುರುತಿಸಿಲ್ಲ. ಇದರಿಂದಾಗಿ ಯೋಗಾಭ್ಯಾಸ ಪ್ರಾರಂಭಿಸುವ ಬಗ್ಗೆ ಕ್ಲಿನಿಕ್‌ಗಳ ವೈದ್ಯರಿಗೇ ಖಚಿತತೆ ಇಲ್ಲವಾಗಿದೆ. ಯೋಗ ಶಿಕ್ಷಕರ ನೇಮಕಾತಿಯೂ ನಡೆದಿಲ್ಲ. 

ಆರೋಗ್ಯ ಸೇವೆಗಳ ಪ್ಯಾಕೇಜ್

ನಮ್ಮ ಕ್ಲಿನಿಕ್‌ಗಳಲ್ಲಿ ಒಟ್ಟು 12 ಆರೋಗ್ಯ ಸೇವೆಗಳ ಪ್ಯಾಕೇಜ್ ಇಲ್ಲಿ ಲಭ್ಯವಿದ್ದು ಗರ್ಭಿಣಿ ಮತ್ತು ಜನನ ಸಮಯದ ಆರೈಕೆ ನವಜಾತ ಮತ್ತು ಶಿಶುವಿನ ಸಮಗ್ರ ಆರೋಗ್ಯ ರಕ್ಷಣೆ ಬಾಲ್ಯ ಮತ್ತು ಹದಿಹರೆಯದವರ ಸಮಗ್ರ ಆರೋಗ್ಯ ಸೇವೆಗಳು ಸಾರ್ವತ್ರಿಕ ಲಸಿಕಾಕರಣ ಸೇವೆಗಳು ಕುಟುಂಬ ಕಲ್ಯಾಣ ಗರ್ಭನಿರೋಧಕ ಸೇವೆಗಳು ಮತ್ತು ಇತರ ಸಂತಾನೋತ್ಪತ್ತಿ ಆರೋಗ್ಯ ಸೇವೆಗಳು ಇಲ್ಲಿ ಒದಗಿಸುವುದಾಗಿ ಸರ್ಕಾರ ಆದೇಶ ಹೊರಡಿಸಿತ್ತು. ಸಾಂಕ್ರಾಮಿಕ ರೋಗಗಳ ನಿರ್ವಹಣೆ ಸಾಮಾನ್ಯ ಮತ್ತು ಸಣ್ಣ ಪ್ರಮಾಣದ ಕಾಯಿಲೆಗಳಿಗೆ ಹೊರ ರೋಗಿ ಸೇವೆ ಸಾಂಕ್ರಾಮಿಕ ಮತ್ತು ಸಾಂಕ್ರಾಮಿಕವಲ್ಲದ ರೋಗಗಳ ತಪಾಸಣೆ ಬಾಯಿ ಆರೋಗ್ಯ ಸೇವೆಗಳು ನೇತ್ರ ಹಾಗೂ ಕಿವಿ ಮೂಗು ಗಂಟಲು ಆರೋಗ್ಯ ಆರೈಕೆ ಮಾನಸಿಕ ಆರೋಗ್ಯ ಸೇವೆ ವೃದ್ಧಾಪ್ಯ ಆರೈಕೆ ತುರ್ತು ವ್ಯೆದ್ಯಕೀಯ ಸೇವೆ ಪ್ರಯೋಗ ಶಾಲಾ ಸೇವೆ ಟೆಲಿ ಸಮಾಲೋಚನೆ ಸೇವೆ ಕ್ಷೇಮ ಚಟುವಟಿಕೆ ಹಾಗೂ ಉಚಿತ ರೆಫರಲ್ ಸೇವೆಗಳನ್ನೂ ಒದಗಿಸಲಾಗುತ್ತದೆ ಎಂದು ತಿಳಿಸಲಾಗಿತ್ತು. 

ನಮ್ಮ ಕ್ಲಿನಿಕ್ 19 ಕಡೆ ಬಾಕಿ

ನಗರದಲ್ಲಿ 224 ನಮ್ಮ ಕ್ಲಿನಿಕ್‌ಗಳಿದ್ದು ಇನ್ನೂ 19 ಕ್ಲಿನಿಕ್‌ಗಳು ಆರಂಭವಾಗಬೇಕಿದೆ. ವೆಬ್‌ಸೈಟ್‌ನಲ್ಲಿ 109 ಕ್ಲಿನಿಕ್‌ಗಳ ಮಾಹಿತಿಯನ್ನು ಅಪ್‌ಡೇಟ್ ಮಾಡಲಾಗಿದ್ದು ಬಾಕಿ ಕ್ಲಿನಿಕ್‌ಗಳ ಪಟ್ಟಿಯನ್ನು ಕೂಡಲೇ ಅಪ್‌ಡೇಟ್ ಮಾಡಲಾಗುವುದು. ಇನ್ನುಳಿದ ಕ್ಲಿನಿಕ್‌ಗಳನ್ನು ತೆರೆಯಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಔಷಧ ಕೊರತೆ ರೀತಿಯ ದೂರುಗಳಿಲ್ಲ. ಎಲ್ಲಾ ಕ್ಲಿನಿಕ್‌ಗಳಿಗೂ ಔಷಧ ಪೂರೈಕೆಯಾಗಿದೆ. ಸ್ನಾತಕೋತ್ತರ ಅಭ್ಯಾಸ ಮಾಡುತ್ತಿರುವ ವೈದ್ಯಕೀಯ ವಿದ್ಯಾರ್ಥಿಗಳನ್ನು ಪಾಳಿ ಆಧಾರದಲ್ಲಿ ನೇಮಕ ಮಾಡಿಕೊಳ್ಳಲಾಗುತ್ತಿದೆ. ವೈದ್ಯರು ಸೇರಿ ಸಿಬ್ಬಂದಿ ಕೊರತೆ ಇಲ್ಲ.  ।ಡಾ.ಕೆ.ವಿ. ತ್ರಿಲೋಕಚಂದ್ರ ಬಿಬಿಎಂಪಿ ವಿಶೇಷ ಆಯುಕ್ತ (ಆರೋಗ್ಯ)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT