ಶನಿವಾರ, 5 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಬೆಂಗಳೂರು: ನಗರದ ವಿವಿಧೆಡೆ ಬಿರುಸಿನ ಮಳೆ

Published : 5 ಅಕ್ಟೋಬರ್ 2024, 18:40 IST
Last Updated : 5 ಅಕ್ಟೋಬರ್ 2024, 18:40 IST
ಫಾಲೋ ಮಾಡಿ
Comments

ಬೆಂಗಳೂರು: ನಗರದ ವಿವಿಧ ಪ್ರದೇಶಗಳಲ್ಲಿ ಶನಿವಾರ ರಾತ್ರಿ ಮಳೆ ಸುರಿದು, ಕೆಲವೆಡೆ ರಸ್ತೆಗಳು, ಅಂಡರ್‌ಪಾಸ್‌ಗಳು ಜಲಾವೃತಗೊಂಡಿದ್ದು ವಾಹನ ಸವಾರರು ಪರದಾಡುವಂತಾಯಿತು. ಹಲವು ಕಡೆಗಳಲ್ಲಿ ಮರಗಳು ಮುರಿದು ಬಿದ್ದಿದ್ದರಿಂದ ಸಂಚಾರಕ್ಕೆ ತೊಡಕುಂಟಾಯಿತು.

ತುಂತುರು ಮಳೆಯಿಂದ ಆರಂಭವಾಗಿ, ರಾತ್ರಿ 8ರ ಸುಮಾರಿಗೆ ಬಿರುಸಾಗಿ ಮಳೆ ಸುರಿಯಿತು. ವಿಜಯನಗರ, ರಾಜಾಜಿನಗರ, ಯಶವಂತಪುರ, ಮಲ್ಲೇಶ್ವರ, ಮೆಜೆಸ್ಟಿಕ್, ಹೆಬ್ಬಾಳ ಸುತ್ತಮುತ್ತ ಬಿರುಸಿನ ಮಳೆಯಾಯಿತು. ಹಳೇ ಮದ್ರಾಸ್ ರಸ್ತೆ, ವೀರಸಂದ್ರ ಜಂಕ್ಷನ್‌ನಲ್ಲಿ ರಸ್ತೆಯಲ್ಲಿ ಮಳೆ ನೀರು ನಿಂತು ಸಂಚಾರ ದಟ್ಟಣೆ ಉಂಟಾಯಿತು. ನೀರಿನಲ್ಲೇ ಹೆಬ್ಬಗೋಡಿ ಕಡೆಗೆ ವಾಹನಗಳು ನಿಧಾನಗತಿಯಲ್ಲಿ ಚಲಿಸುತ್ತಿದ್ದವು.

ಎಚ್‌.ಎಸ್‌.ಆರ್‌. ಲೇಔಟ್‌, ಚೋಳೂರು ಪಾಳ್ಯ, ಮಲ್ಲೇಶ್ವರ 8ನೇ ಮುಖ್ಯರಸ್ತೆ, ಜಯನಗರ, ಜೀವನ್‌ಬಿಮಾ ನಗರಗಳಲ್ಲಿ ಮರಗಳು ಮುರಿದು ಬಿದ್ದಿವೆ.

ಹಂಪಿನಗರ ವ್ಯಾಪ್ತಿಯಲ್ಲಿ 9 ಸೆಂ.ಮೀ, ಬಸವೇಶ್ವರನಗರ, ನಾಗಪುರ ವ್ಯಾಪ್ತಿಯಲ್ಲಿ 8 ಸೆಂ.ಮೀಗೂ ಅಧಿಕ ಮಳೆಯಾಯಿತು. ಮಾರುತಿನಗರ, ರಾಜಾಜಿನಗರ, ನಂದಿನಿಲೇಔಟ್‌ ಸುತ್ತಮುತ್ತ ಸುಮಾರು 5.50 ಸೆಂ.ಮೀ, ಎಚ್‌.ಎ.ಎಲ್‌ ವಿಮಾನ ನಿಲ್ದಾಣ ಮತ್ತು ನಾಯಂಡಹಳ್ಳಿ ವ್ಯಾಪ್ತಿಯಲ್ಲಿ 4 ಸೆಂ.ಮೀ ಮಳೆಯಾಯಿತು.

ದೊರೆಸಾನಿಪಾಳ್ಯ, ಮಾರತ್ತಹಳ್ಳಿ, ಕಾಟನ್‌ಪೇಟೆ, ಆರ್‌ಆರ್‌.ನಗರ ವಿ.ನಾಗೇನಹಳ್ಳಿ, ಚಾಮರಾಜಪೇಟೆಯಲ್ಲಿ 2 ರಿಂದ 3 ಸೆಂ.ಮೀ.ನಷ್ಟು ಮಳೆಯಾದ ವರದಿಯಾಗಿದೆ.

ಆನೇಕಲ್‌ನಲ್ಲಿ ಮಳೆ 

ಆನೇಕಲ್: ತಾಲ್ಲೂಕಿನಾದ್ಯಂತ ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆ ಶನಿವಾರವು ಮುಂದುವರೆದು ರಸ್ತೆಗಳಲ್ಲಿ ನೀರು ತುಂಬಿಕೊಂಡ ಸಂಚರಿಸಲು ವಾಹನ ಸವಾರರು ಪರದಾಡಿದರು. ರಾಷ್ಟ್ರೀಯ ಹೆದ್ದಾರಿಯಲ್ಲಿ ನೀರು ಹರಿದಿದ್ದರಿಂದ ರಸ್ತೆಯಲ್ಲಿ ದ್ವಿಚಕ್ರ ವಾಹನ ಸಂಚಾರ ಅಸ್ತವ್ಯಸ್ಥವಾಗಿದ್ದು ಎರಡು ತಾಸಿಗೂ ಹೆಚ್ಚು ಕಾಲ ಸಾರ್ವಜನಿಕರು ಪರದಾಡುವಂತಾಯಿತು. ಮಳೆಯ ನಡುವೆಯೇ ಐಟಿ ಬಿಟಿ ಉದ್ಯೋಗಿಗಳು ತಮ್ಮ ಕಂಪನಿಗಳತ್ತ ಸಾಗುತ್ತಿದ್ದರು.  ರಾಷ್ಟ್ರೀಯ ಹೆದ್ದಾರಿ–44ರ ಎಲೆಕ್ಟ್ರಾನಿಕ್‌ಸಿಟಿ ವೀರಸಂದ್ರ ಚಂದಾಪುರ ಅತ್ತಿಬೆಲೆಗಳಲ್ಲಿ ರಸ್ತೆಯಲ್ಲಿ ನೀರು ಹರಿಯಿತು. ವೀರಸಂದ್ರದಲ್ಲಿ ರಸ್ತೆಯಲ್ಲಿ ನೀರು ಹರಿದಿದ್ದರಿಂದ ದ್ವಿಚಕ್ರ ವಾಹನಗಳನ್ನು ತಳ್ಳುತ್ತಾ ರಸ್ತೆಬದಿಗೆ ಸಾಗುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT