ಭಾನುವಾರ, 7 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಲೋಪವಾಗಿದೆ ಹೊರತು ಆರ್ಥಿಕ ನಷ್ಟವಿಲ್ಲ: ಬಾಬುವಾಲಿ

ಹಣದ ಅವ್ಯವಹಾರ ನಡೆದಿಲ್ಲ; ಮಾಜಿ ಎಂಎಲ್‌ಸಿ ಆರೋಪ ಸುಳ್ಳು–ಬಾಬುವಾಲಿ
Published 4 ಜುಲೈ 2024, 15:11 IST
Last Updated 4 ಜುಲೈ 2024, 15:11 IST
ಅಕ್ಷರ ಗಾತ್ರ

ಬೀದರ್‌: ‘ಬೀದರ್‌ ನಗರಾಭಿವೃದ್ಧಿ ಪ್ರಾಧಿಕಾರಕ್ಕೆ (ಬಿಡಿಎ) ನಾನು ಅಧ್ಯಕ್ಷನಾಗಿದ್ದ ಅವಧಿಯಲ್ಲಿ ಕಾನೂನಿನ ಪ್ರಕಾರ ಕೆಲವು ಲೋಪದೋಷಗಳಾಗಿವೆ ಹೊರತು ಯಾವುದೇ ರೀತಿಯ ಆರ್ಥಿಕ ನಷ್ಟವಾಗಿಲ್ಲ. ಇದನ್ನು ತನಿಖಾ ತಂಡಗಳೇ ಸ್ಪಷ್ಟಪಡಿಸಿವೆ’ ಎಂದು ಬಿಡಿಎ ಮಾಜಿ ಅಧ್ಯಕ್ಷ ಬಾಬುವಾಲಿ ಸ್ಪಷ್ಟಪಡಿಸಿದ್ದಾರೆ.

‘ಬಾಬುವಾಲಿ ಅವರ ಅವಧಿಯಲ್ಲಿ ಅವ್ಯವಹಾರ ನಡೆದಿದ್ದು, ಅವರ ವಿರುದ್ಧ ಕ್ರಿಮಿನಲ್‌ ಪ್ರಕರಣ ದಾಖಲಿಸಿ, ಬಂಧಿಸಬೇಕು’ ಎಂದು ವಿಧಾನ ಪರಿಷತ್‌ ಮಾಜಿ ಸದಸ್ಯ ಅರವಿಂದಕುಮಾರ ಅರಳಿ ಅವರು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಒತ್ತಾಯಿಸಿದ್ದರು. ಅದರ ಬೆನ್ನಲ್ಲೇ ಗುರುವಾರ ಮಾಧ್ಯಮಗಳಿಗೆ ಬಾಬುವಾಲಿ ಪತ್ರಿಕಾ ಹೇಳಿಕೆ ಬಿಡುಗಡೆಗೊಳಿಸಿ ಅರಳಿ ಅವರು ಮಾಡಿರುವ ಆರೋಪಗಳು ಸುಳ್ಳೆಂದು ಸ್ಪಷ್ಟೀಕರಣ ನೀಡಿದ್ದಾರೆ.

‘ಅವ್ಯವಹಾರದ ಆರೋಪಗಳಿಗೆ ಸಂಬಂಧಿಸಿದಂತೆ ಕಲಬುರಗಿ ಪ್ರಾದೇಶಿಕ ಆಯುಕ್ತರು, ನಗರ ಮತ್ತು ಗ್ರಾಮಾಂತರ ಯೋಜನೆ ಇಲಾಖೆ ಹಾಗೂ ಲೋಕಾಯುಕ್ತ ತನಿಖಾ ತಂಡಗಳು ತನಿಖೆ ನಡೆಸಿ ವರದಿ ಸಲ್ಲಿಸಿವೆ. ಅದರ ಪ್ರಕಾರ, ಕಾನೂನಿನ ಲೋಪದೋಷಗಳಾಗಿವೆ ಹೊರತು ಪ್ರಾಧಿಕಾರಕ್ಕೆ ಯಾವುದೇ ಆರ್ಥಿಕ ನಷ್ಟವಾಗಿದೆ ಎಂದು ತಿಳಿಸಿಲ್ಲ. ನಾನು ಅಧ್ಯಕ್ಷನಿದ್ದಾಗ  ಯಾವುದೇ ಹಣದ ಅವ್ಯವಹಾರವಾಗಲಿ ಅಥವಾ ಯಾವುದೇ ಕಾನೂನು ಬಾಹಿರ ಚಟುವಟಿಕೆ ನಡೆದಿಲ್ಲ. ನಾನು ಅದರಲ್ಲಿ ಭಾಗಿಯಾಗಿಲ್ಲ’ ಎಂದು ತಿಳಿಸಿದ್ದಾರೆ.

‌‌‘ಅರವಿಂದಕುಮಾರ ಅರಳಿ ಅವರು ನನ್ನ ವಿರುದ್ಧ ವೈಯಕ್ತಿಕ ದ್ವೇಷ ಸಾಧಿಸುತ್ತಿದ್ದಾರೆ. ಇವರು ಕಾಂಗ್ರೆಸ್ ಪಕ್ಷದವರಾಗಿದ್ದು, ಕಾಂಗ್ರೆಸ್ ಸರ್ಕಾರದಲ್ಲಿ ಅಧಿಕಾರ ದುರುಪಯೋಗ ಪಡಿಸಿಕೊಂಡು ಅಧಿಕಾರಿಗಳ ಮೇಲೆ ಒತ್ತಡ ಹೇರಿ, ನನ್ನೊಂದಿಗೆ ವೈಯಕ್ತಿಕ ದ್ವೇಷ ಮಾಡುತ್ತಿದ್ದಾರೆ. ಕ್ರಿಮಿನಲ್ ಮೊಕದ್ದಮೆ ಹೂಡುವಂತೆ ಒತ್ತಡ ಹೇರುತ್ತಿದ್ದಾರೆ. ನಾನು ಬೀದರ್‌ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷನಾಗಿ ಅಧಿಕಾರ ಸ್ವೀಕರಿಸಿದ ಸಮಯದಲ್ಲಿ ₹3 ಕೋಟಿ ಹಣವಿತ್ತು. ನನ್ನ ಅಧಿಕಾರದ ಅವಧಿ ಕೊನೆಗೊಂಡ ಸಂದರ್ಭದಲ್ಲಿ ಪ್ರಾಧಿಕಾರದ ಖಾತೆಯಲ್ಲಿ ₹‌‌‌23 ಕೋಟಿ ಹಣವಿತ್ತು’ ಎಂದು ನೆನಪಿಸಿದ್ದಾರೆ. 

‌‘ಬೀದರ್‌ ನಗರಾಭಿವೃದ್ಧಿ ಪ್ರಾಧಿಕಾರದ ಎಲ್ಲ ತೀರ್ಮಾನಗಳನ್ನು ಸಭೆಯಲ್ಲಿ ಚರ್ಚಿಸಿ ತೆಗೆದುಕೊಳ್ಳಲಾಗಿದೆ. ಅಂದಿನ ಸಭೆಯ ಸದಸ್ಯರಾಗಿದ್ದ ಹಾಲಿ ಪೌರಾಡಳಿತ ಸಚಿವ ರಹೀಂ ಖಾನ್, ಮಾಜಿ ಸಭಾಪತಿ ರಘುನಾಥರಾವ್‌ ಮಲ್ಕಾಪುರೆ, ಸ್ವತಃ ಅರವಿಂದಕುಮಾರ ಅರಳಿ ಅವರು ಎಲ್ಲ ಕಡತಗಳಿಗೆ ಸಹಿ ಹಾಕಿದ್ದಾರೆ’ ಎಂದು ತಿಳಿಸಿದ್ದಾರೆ.

‘ಎಲ್ಲ ಇಲಾಖೆಗಳ ಉನ್ನತ ಅಧಿಕಾರಿಗಳು, ಬೀದರ್‌ ನಗರಾಭಿವೃದ್ಧಿ ಪ್ರಾಧಿಕಾರದ ಸದಸ್ಯರಾಗಿದ್ದು ಅವರ ಸಮ್ಮುಖದಲ್ಲಿಯೇ ತೀರ್ಮಾನಿಸಿ ಎಲ್ಲರ ಸಹಮತದೊಂದಿಗೆ ಸಹಿ ಹಾಕಲಾಗಿದೆ. ಅರವಿಂದಕುಮಾರ ಅರಳಿಯವರು ಎರಡ್ಮೂರು  ಸಭೆಗಳನ್ನು ಹೊರತುಪಡಿಸಿದರೆ ಉಳಿದ ಎಲ್ಲ ಸಭೆಯ ನಡಾವಳಿಯ ಕಡತಗಳಿಗೆ ಸಹಿ ಹಾಕಿದ್ದಾರೆ. ಬಿಎಸ್‍ವೈ ಬಡಾವಣೆಯ ಎಲ್ಲ ನಿವೇಶನಗಳನ್ನು ಲಾಟರಿ ಮೂಲಕ ಹರಾಜು ಮಾಡಿದ ಮೊದಲ ಕೀರ್ತಿ ಬೀದರ್‌ ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ಸಲ್ಲುತ್ತದೆ. ಪಾರದರ್ಶಕವಾಗಿ ನಿವೇಶನ ಹಂಚಿಕೆ ಮಾಡಲಾಗಿದೆ ಎಂದು ಲೋಕಾಯುಕ್ತ ವರದಿ ಸಲ್ಲಿಸಿದೆ’ ಎಂದು ತಿಳಿಸಿದ್ದಾರೆ. 

‘ಸೈಟ್‌ ಕೊಡಲು ನಿರಾಕರಿಸಿದ್ದಕ್ಕೆ ದ್ವೇಷ’

‘ವಿಧಾನ ಪರಿಷತ್‌ ಮಾಜಿ ಸದಸ್ಯ ಅರವಿಂದಕುಮಾರ ಅರಳಿ ಅವರು ಉದ್ಯಾನಕ್ಕೆ ಸೇರಿದ ಜಾಗದಲ್ಲಿ ಒಂದು ಸೈಟ್ ಕೊಡುವಂತೆ ನನಗೆ ಕೇಳಿದ್ದರು. ಉದ್ಯಾನಕ್ಕೆ ಸೇರಿದ ಜಾಗದಲ್ಲಿ ಸೈಟ್ ನೀಡುವುದು ಅಕ್ರಮವಾಗುತ್ತದೆ. ಅದನ್ನು ಕೊಡಲು ಬರುವುದಿಲ್ಲ ಎಂದು ನಾನು ಹೇಳಿರುವುದಕ್ಕೆ ನನ್ನ ವಿರುದ್ಧ ವೈಯಕ್ತಿಕ ದ್ವೇಷ ಸಾಧಿಸುತ್ತಿದ್ದಾರೆ. ಇದು ಎಲ್ಲರಿಗೂ ಗೊತ್ತಿರುವ ವಿಷಯ’ ಎಂದು ಬಾಬುವಾಲಿ ಆರೋಪಿಸಿದ್ದಾರೆ. ‘ನಾನು ಯಾವುದೇ ರೀತಿಯ ಕಾನೂನು ಹೋರಾಟಕ್ಕೆ ಸಿದ್ದನಿದ್ದೇನೆ. ಅರಳಿ ಕಿರುಕುಳ ಕೊಡುವ ಕ್ರಿಮಿನಲ್ ಮನೋಭಾವ ಹೊಂದಿರುವ ವ್ಯಕ್ತಿ. ಎಲ್ಲ ಅಧಿಕಾರಿಗಳಿಗೆ ಕಿರುಕುಳ ನೀಡುವುದೇ ಒಂದು ಅಭ್ಯಾಸವಾಗಿದೆ. ವಿಶೇಷವಾಗಿ ನನ್ನ ಅಧಿಕಾರದ ಅವಧಿಯಲ್ಲಿ ಅಧಿಕಾರಿಗಳಿಗೆ ಕಿರುಕುಳ ನೀಡಿದ್ದಾರೆ. ಇವರು ಮಾಡಿರುವ ಅಕ್ರಮಗಳನ್ನು ಶೀಘ್ರದಲ್ಲೇ ಬಯಲಿಗೆಳೆಯುತ್ತೇನೆ’ ಎಂದು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT