ಶನಿವಾರ, 5 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಬಸವಕಲ್ಯಾಣ | ತಿಂಗಳಾದರೂ ಪರಿಹಾರವಿಲ್ಲ, ಬಿತ್ತನೆ ಆಗಿಲ್ಲ

ಖೇರ್ಡಾ(ಕೆ), ಕೊಹಿನೂರವಾಡಿ ಗ್ರಾಮಗಳ ನೂರಾರು ಎಕರೆ ಜಮೀನು ಬರಡು
ಮಾಣಿಕ ಆರ್.ಭುರೆ
Published : 6 ಜುಲೈ 2024, 6:05 IST
Last Updated : 6 ಜುಲೈ 2024, 6:05 IST
ಫಾಲೋ ಮಾಡಿ
Comments

ಬಸವಕಲ್ಯಾಣ: ತಾಲ್ಲೂಕಿನ ಖೇರ್ಡಾ(ಕೆ) ಮತ್ತು ಕೊಹಿನೂರವಾಡಿ ಗ್ರಾಮಗಳ ಜಮೀನುಗಳಲ್ಲಿ ಅತಿವೃಷ್ಟಿ ಹಾಗೂ ಕೆರೆ ಒಡೆದಿದ್ದರಿಂದ ಆಗಿರುವ ನಷ್ಟಕ್ಕೆ ತಿಂಗಳಾದರೂ ಪರಿಹಾರ ದೊರಕದ ಕಾರಣ ರೈತರು ಕಷ್ಟ ಅನುಭವಿಸುತ್ತಿದ್ದಾರೆ.

ಮುಂಗಾರು ಮಳೆ ಸಮಯಕ್ಕೆ ಸರಿಯಾಗಿ ಸುರಿದಿದೆ ಎಂದು ರೈತರು ಖುಷಿಗೊಂಡಿದ್ದರು. ಆದರೆ ಮರುದಿನವೇ ಧಾರಾಕಾರ ಮಳೆಗೆ ಕೊಹಿನೂರ ಹಾಗೂ ಅಟ್ಟೂರ್ ಕೆರೆಗಳು ಒಡೆದು ನೂರಾರು ಎಕರೆಯಲ್ಲಿನ ಫಲವತ್ತಾದ ಮಣ್ಣು ಕೊಚ್ಚಿಕೊಂಡು ಹೋಯಿತು. ಕೆಲ ರೈತರು ಬಿತ್ತನೆಗಾಗಿ ಬೀಜ ಮತ್ತು ಗೊಬ್ಬರ ಮನೆಗೆ ತಂದಿಟ್ಟಿದ್ದರು. ಆದರೆ ಜಮೀನುಗಳಲ್ಲಿನ ವಾರಗಟ್ಟಲೇ ನೀರು ಸಂಗ್ರಹಗೊಂಡಿತು. ಅಲ್ಲದೆ ಎಲ್ಲೆಲ್ಲೂ ಬರೀ ಕಲ್ಲುಗಳೇ ಎದ್ದು ನಿಂತಿದ್ದರಿಂದ ಅನೇಕರು ಬಿತ್ತನೆ ಕೈಗೊಳ್ಳಲಿಲ್ಲ.

ಕೊಹಿನೂರ ಕೆರೆ ಒಡೆದಿದ್ದರಿಂದ ಗಂಡೂರಿ ನಾಲೆ ಉಕ್ಕಿ ಹರಿದ ಪರಿಣಾಮವಾಗಿ ಹೆಚ್ಚಿನ ಹಾನಿಯಾಗಿದೆ. ನೀರಿನ ರಭಸಕ್ಕೆ ಕೊಹಿನೂರವಾಡಿ ಮತ್ತು ಖೇರ್ಡಾ(ಕೆ) ಗ್ರಾಮಗಳ ಜಮೀನುಗಳ (ಬಂಧಾರಿ) ಬದುಗಳು ಸಹ ಕಾಣದಷ್ಟು ಮಣ್ಣು ನಾಲೆಯ ಪಾಲಾಯಿತು.

‘ಮಳೆ ರಾತ್ರಿ ಬಂದಿದ್ದರಿಂದ ಜಮೀನುಗಳಷ್ಟೇ ಹಾಳಾಗಿವೆ. ಬೆಳಗಿನಲ್ಲಿ ಬಂದಿದ್ದರೆ ಜೀವಹಾನಿ ಆಗುತ್ತಿತ್ತು. ಕೆಲ ಸೇತುವೆ ಮತ್ತು ರಸ್ತೆಗೆ ಹಾನಿ ಆಗಿತ್ತು. ಅದನ್ನು ಸರಿಪಡಿಸಲಾಗಿದೆ. ಆದರೆ ಕೃಷಿಕರಿಗೆ ಮಾತ್ರ ಹಣ ನೀಡಿಲ್ಲ. ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಶಾಸಕರು ಮತ್ತು ಸಂಸದರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಹೀಗಿದ್ದರೂ ಇದುವರೆಗೆ ನ್ಯಾಯ ಸಿಕ್ಕಿಲ್ಲ’ ಎಂದು ಖೇರ್ಡಾ (ಕೆ) ಗ್ರಾಮ ಪಂಚಾಯಿತಿ ಸದಸ್ಯ ರವೀಂದ್ರ ರಾಯಾಜಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

‘ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ತಕ್ಷಣದಲ್ಲಿ ಸ್ಥಳಕ್ಕೆ ಬಂದಿದ್ದರಿಂದ ಕೆಲ ದಿನಗಳಲ್ಲಿಯೇ ಪರಿಹಾರ ದೊರಕಬಹುದು. ಹೊಲಗಳ ಸುಧಾರಣೆಗೆ ಮತ್ತು ಬಿತ್ತನೆ ಕೈಗೊಳ್ಳುವುದಕ್ಕೆ ಸರ್ಕಾರದ ಹಣದಿಂದ ಅನುಕೂಲ ಆಗಬಹುದು ಎಂದು ನಿರೀಕ್ಷಿಸಲಾಗಿತ್ತು. ಭರವಸೆಗೆ ತಕ್ಕಂತೆ ಯಾರೂ ನಡೆದುಕೊಂಡಿಲ್ಲ. ಆದ್ದರಿಂದ ರೈತರು ಕಂಗಾಲಾಗಿದ್ದಾರೆ’ ಎಂದು ಕೊಹಿನೂರವಾಡಿ ರೈತ ಮಧುಕರ ಘೋಡಕೆ ಹೇಳಿದ್ದಾರೆ.

‘ಅತಿವೃಷ್ಟಿಯಿಂದ ಹಾನಿಯಾದ ಎಲ್ಲ ಗ್ರಾಮಗಳಲ್ಲಿ ಸಮೀಕ್ಷೆ ನಡೆಸಲಾಗಿದೆ. ಇನ್ನೂ ಕೆಲವೆಡೆಯ ವರದಿ ಬರಬೇಕಾಗಿದೆ. ಅದಾದ ನಂತರದಲ್ಲಿ ಜಿಲ್ಲಾಧಿಕಾರಿಗಳಿಗೆ ತಿಳಿಸಿ ಪರಿಹಾರ ಬಿಡುಗಡೆಗೆ ಕ್ರಮ ಕೈಗೊಳ್ಳಲಾಗುವುದು’ ಎಂದು ತಹಶೀಲ್ದಾರ್ ಶಾಂತಗೌಡ ಬಿರಾದಾರ ತಿಳಿಸಿದ್ದಾರೆ.

ಮಧುಕರ ಘೋಡಕೆ
ಮಧುಕರ ಘೋಡಕೆ
ರವೀಂದ್ರ ರಾಯಾಜಿ
ರವೀಂದ್ರ ರಾಯಾಜಿ
ಶಾಂತಗೌಡ ಬಿರಾದಾರ
ಶಾಂತಗೌಡ ಬಿರಾದಾರ

ಕೆರೆ ಒಡೆದಿದ್ದರಿಂದ ಸಂಭವಿಸಿದ ನಷ್ಟ ಜಿಲ್ಲಾಧಿಕಾರಿ, ಜನಪ್ರತಿನಿಧಿಗಳು ಭೇಟಿ ಗಂಡೂರಿ ನಾಲೆ ಪಕ್ಕದ ಜಮೀನಿನಲ್ಲಿ ಹಾನಿ

ಮಳೆ ಹಾನಿಯಿಂದ ರೈತರಿಗೆ ಅಪಾರ ನಷ್ಟವಾಗಿದ್ದು ಯಾವುದೇ ಬೆಳೆ ಬೆಳೆಯದಂತೆ ಜಮೀನು ಬರಡಾಗಿದೆ. ಆದ್ದರಿಂದ ಶಾಶ್ವತ ಪರಿಹಾರ ದೊರಕಿಸಬೇಕು.

–ಮಧುಕರ ಘೋಡಕೆ ರೈತ ಕೊಹಿನೂರ ವಾಡಿ

ಈಗಾಗಲೇ ಸಮೀಕ್ಷೆ ನಡೆದಿದೆ. ಅದರ ಪ್ರಕಾರ ಖೇರ್ಡಾ(ಕೆ) ವ್ಯಾಪ್ತಿಯ 80 ಎಕರೆಗೂ ಅಧಿಕ ಜಮೀನಿನಲ್ಲಿ ಹಾನಿ ಆಗಿದ್ದು ಶೀಘ್ರ ಪರಿಹಾರ ನೀಡಬೇಕು.

–ರವೀಂದ್ರ ರಾಯಾಜಿ ಗ್ರಾ.ಪಂ.ಸದಸ್ಯ

ಯಾವುದೇ ರೈತರಿಗೆ ಅನ್ಯಾಯ ಆಗದಂತೆ ವಿವಿಧ ಇಲಾಖೆಗಳಿಂದ ಜಂಟಿ ಸಮೀಕ್ಷೆ ನಡೆದಿದೆ. ಶೀಘ್ರದಲ್ಲಿ ವರದಿಯನ್ನು ಜಿಲ್ಲಾಧಿಕಾರಿಗಳಿಗೆ ಸಲ್ಲಿಸಲಾಗುತ್ತದೆ.

–ಶಾಂತಗೌಡ ಬಿರಾದಾರ ತಹಶೀಲ್ದಾರ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT