ಗುರುವಾರ, 3 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಬೀದರ್ | 'ಹೊಸ ಮಾರುಕಟ್ಟೆ ನಿರ್ಮಾಣಕ್ಕೆ ಯತ್ನ'

ಅಭಿನಂದನಾ ಸಮಾರಂಭದಲ್ಲಿ ಸಂಸದ ಸಾಗರ್ ಖಂಡ್ರೆ ಭರವಸೆ
Published : 3 ಅಕ್ಟೋಬರ್ 2024, 14:06 IST
Last Updated : 3 ಅಕ್ಟೋಬರ್ 2024, 14:06 IST
ಫಾಲೋ ಮಾಡಿ
Comments

ಬೀದರ್: ‘ಬೀದರ್ ನಗರದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ನೂತನ ವಿಶಾಲ ಮಾರುಕಟ್ಟೆ ನಿರ್ಮಾಣಕ್ಕೆ ಪ್ರಯತ್ನಿಸಲಾಗುವುದು’ ಎಂದು ಸಂಸದ ಸಾಗರ್ ಖಂಡ್ರೆ ಭರವಸೆ ನೀಡಿದರು.

ಇಲ್ಲಿಯ ಗಾಂಧಿಗಂಜ್‍ನ ಬಸವೇಶ್ವರ ದೇವಸ್ಥಾನದಲ್ಲಿ ದಿ ಗ್ರೇನ್ ಆ್ಯಂಡ್ ಸೀಡ್ಸ್ ಮರ್ಚಂಟ್ಸ್ ಅಸೋಸಿಯೇಷನ್ ವತಿಯಿಂದ ಈಚೆಗೆ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದಲ್ಲಿ ಅವರು ಮಾತನಾಡಿದರು.

‘ಹೊಸ ಮಾರುಕಟ್ಟೆ ನಿರ್ಮಾಣ ವ್ಯಾಪಾರಿಗಳ ಹಾಗೂ ರೈತರ ಬೇಡಿಕೆಯಾಗಿದೆ. ಇದನ್ನು ಈಡೇರಿಸುವ ದಿಸೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಅವರೊಂದಿಗೆ ಚರ್ಚಿಸಲಾಗುವುದು’ ಎಂದು ತಿಳಿಸಿದರು.

‘ಕಿರಿಯ ವಯಸ್ಸಿನಲ್ಲೇ ನನ್ನನ್ನು ಸಂಸತ್ತಿಗೆ ಆರಿಸಿ ಕಳುಹಿಸಿದ್ದಕ್ಕೆ ಮತದಾರರಿಗೆ ಕೃತಜ್ಞನಾಗಿರುವೆ. ಹಿರಿಯರ ಮಾರ್ಗದರ್ಶನದೊಂದಿಗೆ ಜಿಲ್ಲೆಯ ಅಭಿವೃದ್ಧಿ ಹಾಗೂ ಜನರ ಆಶೋತ್ತರಗಳನ್ನು ಈಡೇರಿಸಲು ಶ್ರಮಿಸುವೆ’ ಎಂದು ಹೇಳಿದರು.

ಇದಕ್ಕೂ ಮುನ್ನ ಮಾತನಾಡಿದ ದಿ ಗ್ರೇನ್ ಆ್ಯಂಡ್ ಸೀಡ್ಸ್ ಮರ್ಚಂಟ್ಸ್‌ ಅಸೋಸಿಯೇಷನ್ ಅಧ್ಯಕ್ಷ ಬಸವರಾಜ ಧನ್ನೂರ, ‘ಹೊಸ ಮಾದರಿಯ ಮಾರುಕಟ್ಟೆ ನಿರ್ಮಾಣದ ಅಗತ್ಯವಿದೆ. ಎಪಿಎಂಸಿ ಮಾರುಕಟ್ಟೆ ಪ್ರಮುಖ ವಾಣಿಜ್ಯ ಕೇಂದ್ರವಾಗಿದ್ದು, ಜಿಲ್ಲೆಯ ಆರ್ಥಿಕತೆಯ ಬೆನ್ನೆಲುಬಾಗಿದೆ. 60 ವರ್ಷಗಳ ಹಿಂದೆ ಆಗಿನ ಅವಶ್ಯಕತೆಗೆ ಅನುಗುಣವಾಗಿ ಮಾರುಕಟ್ಟೆ ನಿರ್ಮಿಸಲಾಗಿತ್ತು. ಇದೀಗ ತೀರಾ ಚಿಕ್ಕದಾಗಿದೆ’ ಎಂದರು.

‘ಸದ್ಯ ಮಾರುಕಟ್ಟೆಗೆ ಕೃಷಿ ಉತ್ಪನ್ನಗಳ ಆವಕ ಹೆಚ್ಚಾಗಿದೆ. ವ್ಯಾಪಾರಿಗಳ ಸಂಖ್ಯೆಯೂ ವೃದ್ಧಿಸಿದೆ. ಎಲ್ಲರ ಅನುಕೂಲಕ್ಕಾಗಿ ವಿಶಾಲವಾದ ಮಾರುಕಟ್ಟೆ ನಿರ್ಮಾಣ ತುರ್ತಾಗಿ ಆಗಬೇಕಿದೆ. ಅಸೋಸಿಯೇಷನ್ ಈ ನಿಟ್ಟಿನಲ್ಲಿ ದಶಕದಿಂದ ಬೇಡಿಕೆ ಮಂಡಿಸುತ್ತಲೇ ಬಂದಿದೆ’ ಎಂದು ಸಂಸದರ ಗಮನ ಸೆಳೆದರು.

ಬಿಡಿಎ ಅಧ್ಯಕ್ಷ ಬಸವರಾಜ ಜಾಬಶೆಟ್ಟಿ, ಎಪಿಎಂಸಿ ಕಾರ್ಯದರ್ಶಿ ಪರಮೇಶ್ವರಿ ಫುಲೇಕರ್, ಕೃಷಿ ಮಾರಾಟ ಇಲಾಖೆಯ ಸಹಾಯಕ ನಿರ್ದೇಶಕ ಶಿವಾನಂದ ಕುಂಬಾರ, ಅಸೋಸಿಯೇಷನ್ ಉಪಾಧ್ಯಕ್ಷ ನಾಗಶೆಟ್ಟೆಪ್ಪ ದಾಡಗಿ, ಕಾರ್ಯದರ್ಶಿ ಭಗವಂತ ಔದತ್‍ಪುರ, ದಾಲ್‌ಮಿಲ್ ಅಸೋಸಿಯೇಷನ್ ಅಧ್ಯಕ್ಷ ಅಶೋಕ ರೇಜಂತಲ್, ಟ್ರಾನ್ಸ್‌ಪೋರ್ಟ್‌ ಅಸೋಸಿಯೇಷನ್ ಅಧ್ಯಕ್ಷ ಸೋಮಶೇಖರ ಪಾಟೀಲ ಗಾದಗಿ, ಕಾರ್ಯದರ್ಶಿ ಶಿವರುದ್ರಪ್ಪ ಗಿರಿ, ರೈಸ್ ಮರ್ಚಂಟ್ಸ್ ಅಸೋಸಿಯೇಷನ್ ಅಧ್ಯಕ್ಷ ಶಂಕರ ಗುನ್ನಳ್ಳಿ, ಕಾರ್ಯದರ್ಶಿ ರಾಜು ಬಗದಲ್, ಫರ್ಟಿಲೈಜರ್ಸ್ ಅಸೋಸಿಯೇಷನ್ ಉಪಾಧ್ಯಕ್ಷ ಕಂಟೆಪ್ಪ ಪಾಟೀಲ ಕನ್ನಳ್ಳಿ, ದಿ ಗ್ರೇನ್ ಅಂಡ್ ಸೀಡ್ಸ್ ಮರ್ಚಂಟ್ಸ್ ಅಸೋಸಿಯೇಷನ್ ಕಾರ್ಯಕಾರಿಣಿ ಸದಸ್ಯರಾದ ರಾಜಕುಮಾರ ಬಿರಾದಾರ ಗುನ್ನಳ್ಳಿ, ಸೋಮನಾಥ ಗಂಗಶೆಟ್ಟಿ, ನಾಗಶೆಟ್ಟೆಪ್ಪ ಕಾರಾಮುಂಗಿ, ಬಂಡೆಪ್ಪ, ಬಾಲಾಜಿ, ಗೋವಿಂದರಾವ್ ನೀಲಮನಳ್ಳಿ, ಪ್ರಭುಶೆಟ್ಟಿ ಮುದ್ದಣ್ಣ, ವಿಶ್ವನಾಥ ಕಾಜಿ, ಹನುಮಾನದಾಸ್ ಅಗರವಾಲ್, ಪ್ರಮುಖರಾದ ಶಾಮರಾವ್ ಸುಲಗುಂಟೆ, ಶ್ಯಾಮಸುಂದರ ಬೋರಾ, ಅಣ್ಣಾರಾವ್ ಮೊಗಶೆಟ್ಟಿ, ನಾಗರಾಜ ನಂದಗಾಂವ್, ದಿಗಂಬರ್ ಪೋಲಾ, ದೀಪಕ್ ಥಮಕೆ, ಪ್ರಕಾಶ ಗೌಡಪ್ಪನೋರ ಇದ್ದರು.

ಕಲಾವಿದ ಶಿವಕುಮಾರ ಪಾಂಚಾಳ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT