ಶನಿವಾರ, 5 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

70ನೇ ವನ್ಯ ಜೀವಿ ಸಪ್ತಾಹ: ಕಾಡಿನ ಜೀವ ಲೋಕ ಅನಾವರಣ!

70ನೇ ವನ್ಯ ಜೀವಿ ಸಪ್ತಾಹಕ್ಕೆ ಚಾಲನೆ: ಪಕ್ಷಿ ವೀಕ್ಷಣೆ, ಸೈಕ್ಲೋಥಾನ್’ ಮೂಲಕ ಜಾಗೃತಿ
ನಾ.ಮಂಜುನಾಥಸ್ವಾಮಿ
Published : 5 ಅಕ್ಟೋಬರ್ 2024, 6:54 IST
Last Updated : 5 ಅಕ್ಟೋಬರ್ 2024, 6:54 IST
ಫಾಲೋ ಮಾಡಿ
Comments

ಯಳಂದೂರು: ಕಾಡು ಆದಿಮ ಸಂಸ್ಕೃತಿಯ ನೆಲೆ, ಮಾನವನ ವಿಕಾಸದ ಸೆಲೆ, ನಾಗರಿಕತೆಯ ಮೂಲ ಬಲೆ, ವನ್ಯಜೀವಿಗಳ ತೊಟ್ಟಿಲು ಹೌದು. ಜೀವ ವಿಕಾಸದ ಹಾದಿಯಲ್ಲಿ ಪ್ರತಿಜೀವಿಗೂ ವೃಕ್ಷ, ಪೊಟರೆ, ಗುಹೆಗಳೆ ಆಸರೆಯಾಗಿದೆ. ಧರೆಯ ಮೇಲಿನ ಜೀವ ಜಗತ್ತಿಗೂ ವಾಯು, ನೀರು, ಹಸಿರು ಉಸಿರಾಗಿ ಪೊರೆಯುತ್ತಿದೆ ಕಾಡು.

ಇಂತಹ ಅಸಂಖ್ಯ ಕೌತುಕಗಳ ಹಾಗೂ ವಿಸ್ಮಯಗಳ ಒಡಲಾಗಿರುವ ಅರಣ್ಯವನ್ನು ಪ್ರಕೃತಿಪ್ರಿಯರಿಗೆ ಮತ್ತಷ್ಟು ಹತ್ತಿರವಾಗಿಸುವ ನಿಟ್ಟಿನಲ್ಲಿ ಬಿಅರ್‌ಟಿ ಹುಲಿ ಸಂರಕ್ಷಿತ ವಲಯದ ವತಿಯಿಂದ 70ನೇ ವನ್ಯಜೀವಿ ಸಪ್ತಾಹದ ಅಂಗವಾಗಿ ಅ.5ರಂದು ಪಕ್ಷಿ ವೀಕ್ಷಣೆ ಕಾರ್ಯಕ್ರಮ ಹಾಗೂ ಅ.6ರಂದು ಸೈಕ್ಲೊಥಾನ್ ಕಾರ್ಯಕ್ರಮ ಆಯೋಜಿಸಿದೆ.

ಬಿಳಿಗಿರಿ ರಂಗನ ಬೆಟ್ಟದ ಅರಣ್ಯ ಇಲಾಖೆಯ ಪ್ರವಾಸಿ ಬಂಗಲೆ, ಕವಲಿಕಟ್ಟೆ ಡ್ಯಾಂ (ಕೆ.ಕೆ ಡ್ಯಾಮ್‌), ಕೊಳ್ಳೇಗಾಲ ವಲಯದ ಗುಂಡಾಲ್ ಜಲಾಶಯದ ಬಳಿ ಪಕ್ಷಿ ವೀಕ್ಷಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಬೆಳಿಗ್ಗೆ 6.30ರಿಂದ 9 ಗಂಟೆಯವರೆಗೆ ನಡೆಯುವ ಪಕ್ಷಿ ವೀಕ್ಷಣೆ ಕಾರ್ಯಕ್ರಮದಲ್ಲಿ ಪರಿಸರ ಪ್ರೇಮಿಗಳು ಭಾಗವಹಿಸಬಹುದು.

ಸೈಕ್ಲೊಥಾನ್‌: ಅ.6ರಂದು ಬೆಳಿಗ್ಗೆ 7.30ಕ್ಕೆ ಕೊಳ್ಳೇಗಾಲ ವಲಯದಲ್ಲಿ 40 ಕಿ.ಮೀ ದೂರದ ಸೈಕ್ಲೊಥಾನ್ ಹಮ್ಮಿಕೊಳ್ಳಲಾಗಿದೆ. ಕೊಳ್ಳೇಗಾಲ ಯಳಂದೂರು ಮಾರ್ಗವಾಗಿ ಸೈಕ್ಲೊಥಾನ್ ನಡೆಯಲಿದ್ದು ಆಸಕ್ತರು ಭಾಗವಹಿಸಿ ಪ್ರಕೃತಿಯ ಸೌಂದರ್ಯ ಸವಿಯಬಹುದು.

‘ಸಹಬಾಳ್ವೆ ಮೂಲಕ ವನ್ಯಜೀವಿ ಸಂರಕ್ಷಣೆ’ ಎಂಬುದು 2024ರ ರಾಷ್ಟ್ರೀಯ ವನ್ಯಜೀವಿ ಸಪ್ತಾಹದ ಧ್ಯೇಯವಾಗಿದೆ. 1952ರಲ್ಲಿ ಭಾರತೀಯ ವನ್ಯಜೀವಿ ಮಂಡಳಿ ಅಸ್ತಿತ್ವಕ್ಕೆ ಬಂದಿದ್ದು, 1957ರಲ್ಲಿ ವನ್ಯಜೀವಿ ಸಪ್ತಾಹಕ್ಕೆ ಚಾಲನೆ ದೊರೆಯಿತು. ದೇಶದಲ್ಲಿ ಅ.2ರಿಂದ 8ರವರೆಗೆ ಜಾಗೃತಿ ಕಾರ್ಯಕ್ರಮಗಳು ನಡೆಯಲಿವೆ.

ಪ್ರಧಾನಿ ಇಂದಿರಾ ಗಾಂಧಿ 1972 ಮತ್ತು 1980ರಲ್ಲಿ ಜಾರಿಗೆ ತಂದ ಅರಣ್ಯ ಕಾಯ್ದೆಗಳು ವನ್ಯಮೃಗಗಳ ಉಳಿವಿಗೆ ಕಾರಣವಾಯಿತು. ದೇಶದಲ್ಲಿ 567 ವನ್ಯಜೀವಿ ಅಭಯಾರಣ್ಯ, 53 ಹುಲಿ ರಕ್ಷಿತ ಪ್ರದೇಶಗಳಿವೆ. ಚಾಮರಾಜನಗರ ಜಿಲ್ಲೆಯ ಯಳಂದೂರು, ಬಂಡೀಪುರ, ಮಹದೇಶ್ವರಬೆಟ್ಟ ಪ್ರಮುಖ ಹುಲಿ ರಕ್ಷಿತಾ ತಾಣಗಳಾಗಿ ಜನ ಮೆಚ್ಚುಗೆ ಗಳಿಸಿದೆ.

ಬಿಆರ್‌ಟಿ ಹುಲಿ ಅಭಯಾರಣ್ಯ 574 ಚ.ಕಿ.ಮೀ. ಪಸರಿಸಿದ್ದು ಪಶ್ಚಿಮ ಮತ್ತು ಪೂರ್ವಘಟ್ಟಗಳ ನಡುವಿನ ಕೊಂಡಿಯಾಗಿದೆ. ಸಹಜವಾಗಿ ಇಲ್ಲಿ ನೂರಾರು ಜೀವ ಪ್ರಭೇದಗಳ ಉಗಮ ಮತ್ತು ವಿಕಾಸಕ್ಕೆ ವೇದಿಕೆಯಾಗಿದೆ. ಅಸಂಖ್ಯ ಕೀಟ, ಪಕ್ಷಿ, ಉರಗಗಳ ತಾಣವಾಗಿ, ಜಲ ಜೀವಿಗಳ ಜೊತೆ ಹುಲಿ, ಆನೆ, ಚಿರತೆಗಳ ಸಂಗಡ ಮೂಲನಿವಾಸಿಗಳ ಸಾಮರಸ್ಯಕ್ಕೂ ಸಾಕ್ಷಿಯಾಗಿದೆ.

‘ಈಚಿನ ದಿನಗಳಲ್ಲಿ ಕಾಡಿನಲ್ಲಿ ಆಹಾರದ ಅಭಾವ, ಅಪೌಷ್ಟಿಕತೆಯ ಕೊರತೆ ಮತ್ತು ಜೀವಾಮೃತದ ಕೊರತೆಯಿಂದ ಚಿರತೆ, ಆನೆಗಳು ಬಳಲುತ್ತಿವೆ. ನಕ್ಷತ್ರ ಆಮೆ, ಮಣ್ಣುಮುಕ್ಕ ಹಾವು ಕಳ್ಳದಂಧೆಯ ಕೆಲ ಪ್ರಕರಣಗಳು ವರದಿಯಾಗುತ್ತಿರುವುದು ಆತಂಕಕ್ಕೆ ಕಾರಣವಾಗುತ್ತಿದೆ. ಸಮಸ್ಯೆಗಳ ಹೊರತಾಗಿಯೂ ಕಾಡಿನ ಸಮೃದ್ಧತೆ ಹೆಚ್ಚಾಗಿದೆ. ಬಲಿ ಪ್ರಾಣಿಗಳ ಹೆಚ್ಚಳದಿಂದ ವ್ಯಾಘ್ರ ಸಂಕುಲಗಳ ನೆಲೆಯೂ ವಿಸ್ತರಿಸಿದೆ’ ಎನ್ನುತ್ತಾರೆ ಅರಣ್ಯ ಇಲಾಖೆ ಅಧಿಕಾರಿಗಳು.

ಕಳ್ಳಬೇಟೆ ದಂಧೆಗಳಿಗೆ ಕಡಿವಾಣ ಬಿದ್ದಿದೆ. ಗಸ್ತುಪಡೆ ಸಕ್ರಿಯವಾಗಿದ್ದು ಬೇಟೆ ಹಾಗೂ ದಂಧೆಕೋರರ ಮೇಲೆ ಹದ್ದಿನ ಕಣ್ಣಿರಿಸಿದ್ದಾರೆ. ಕಾಡಿನಲ್ಲಿ ಅಗ್ನಿ ಆಕಸ್ಮಿಕಗಳ ತಡೆಗೂ ಸಿಬ್ಬಂದಿಗೆ ತರಬೇತಿ ನೀಡಲಾಗಿದೆ. ದಟ್ಟ ಕಾನನದ ನಡುವೆ ಕೆರೆ ನಿರ್ಮಿಸಿ, ಮಳೆ ನೀರು ಸಂಗ್ರಹಕ್ಕೆ ಒತ್ತು ನೀಡಲಾಗಿದೆ. ಹುಲಿ ಕಾಡಿನಲ್ಲಿ ಸಫಾರಿಗೆ ಒತ್ತು ನೀಡಿ ವಿದ್ಯಾರ್ಥಿ ಹಾಗೂ ಪ್ರವಾಸಿಗರಿಗೆ ವನ ಪ್ರಪಂಚದ ಬಗ್ಗೆ ಜಾಗೃತಿ ಮೂಡಿಸಲಾಗುತ್ತದೆ ಎನ್ನುತ್ತಾರೆ ಬಿಆರ್‌ಟಿ ವನ್ಯ ಜೀವಿ ವಲಯದ ಎನ್.ನಾಗೇಂದ್ರನಾಯಕ್.

ಹುಲಿ ಕಾಡಿನ ವಿಸ್ಮಯ

ದಕ್ಷಿಣ ಭಾರತದ ಅತಿ ಶ್ರೇಷ್ಠ ಜೀವಾವಾಸಗಳಲ್ಲಿ ಬಿಳಿಗಿರಿ ರಂಗ ಹಲಿ ಸಂರಕ್ಷಿತ ಅಭಯಾರಣ್ಯ ಮೊದಲ ಸ್ಥಾನ ನೀಡಲಾಗಿದೆ. ವಿವಿಧ ಬಗೆಯ ಕಾಡು ನಮೂನೆಗಳ ನಡುವೆ ಸದಾ ಹಸಿರು ಶುಷ್ಕ ಶೋಲಾ ಬೈಸೆ ಅರಣ್ಯಗಳಿವೆ. 25ಕ್ಕೂ ಹೆಚ್ಚು ಸಸ್ತನಿಗಳು 250 ಪ್ರಭೇದದ ಪಕ್ಷಿ 22 ಸರೀಸೃಪ 11 ಜಾತಿಯ ದ್ವಿಚರಿ 150 ಬಗೆಯ ಚಿಟ್ಟೆ 4 ಬಗೆಯ ಜೇನು ಇಲ್ಲಿನ ಜೀವ ಮಂಡಲದ ಭಾಗವಾಗಿವೆ. ಏಷ್ಯಾ ಮತ್ತು ಯೂರೋಪ್ ಖಂಡದ ಹಕ್ಕಿಗಳ ವಂಶೋದ್ದಾರಕ್ಕೂ ನೆರವಾಗಿದೆ.

ಹವಳದ ಹಾವು
ಹವಳದ ಹಾವು
ಬಿಳಿಗಿರಿ ಕಾಡಿನ ಗಿಡುಗ
ಬಿಳಿಗಿರಿ ಕಾಡಿನ ಗಿಡುಗ
ಆನೆಗಳ ರಾಜ ನಡಿಗೆ
ಆನೆಗಳ ರಾಜ ನಡಿಗೆ
ಕಡವೆ ಸಂಚಾರ
ಕಡವೆ ಸಂಚಾರ
ಕಾಡು ಕುರಿಯ ವಿಸ್ಮಯದ ನೋಟ
ಕಾಡು ಕುರಿಯ ವಿಸ್ಮಯದ ನೋಟ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT