ಭಾನುವಾರ, 22 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಚಾಮರಾಜನಗರ | ಮಳೆ ಕೊರತೆ; ಸೊರಗಿದ ಬೆಳೆ

ಆಕಾಶದತ್ತ ಮುಖ ಮಾಡಿದ ರೈತರು
ಬಾಲಚಂದ್ರ ಎಚ್‌. / ನಾ.ಮಂಜುನಾಥಸ್ವಾಮಿ
Published : 22 ಸೆಪ್ಟೆಂಬರ್ 2024, 6:10 IST
Last Updated : 22 ಸೆಪ್ಟೆಂಬರ್ 2024, 6:10 IST
ಫಾಲೋ ಮಾಡಿ
Comments

ಚಾಮರಾಜನಗರ/ಯಳಂದೂರು: ಸೆಪ್ಟೆಂಬರ್‌ ತಿಂಗಳಲ್ಲಿ ಮಳೆ ಕೈಕೊಟ್ಟಿರುವ ಪರಿಣಾಮ ರಾಗಿ, ಮೆಕ್ಕೆಜೋಳ, ಅವರೆ ಬೆಳೆ ಬಿತ್ತಿರುವ ರೈತರು ಆಕಾಶದತ್ತ ಮುಖ ನೋಡುತ್ತಿದ್ದಾರೆ. ಪ್ರಖರ ಬಿಸಿಲಿಗೆ ಭೂಮಿಯೊಳಗಿನ ತೇವಾಂಶದ ಪಸೆ ಮಾಯವಾಗುತ್ತಿದ್ದು ಬೆಳೆಗಳು ಬಾಡುತ್ತಿವೆ. ಮೂರ್ನಾಲ್ಕು ದಿನಗಳಲ್ಲಿ ಮಳೆ ಬೀಳದಿದ್ದರೆ ಬೆಳೆಗಳು ಒಣಗಿ ಪರಿಸ್ಥಿತಿ ಗಂಭೀರವಾಗಲಿದೆ.

ಜುಲೈನಲ್ಲಿ ಉತ್ತಮ ಮಳೆ ಬಿದ್ದ ಪರಿಣಾಮ ಆಗಸ್ಟ್‌ನಲ್ಲಿ ರೈತರು ಮೆಕ್ಕೆ ಜೋಳ, ಮುಸುಕಿನ ಜೋಳ ಹಾಗೂ ರಾಗಿ ಬಿತ್ತನೆಗೆ ಹೆಚ್ಚಿನ ಒಲವು ತೋರಿದ್ದರು. ಕೃಷಿ ಇಲಾಖೆ ಅಂಕಿ ಅಂಶಗಳ ಪ್ರಕಾರ ಜಿಲ್ಲೆಯಲ್ಲಿ 24,561 ಹೆಕ್ಟೇರ್‌ನಲ್ಲಿ ಮುಸುಕಿನ ಜೋಳ ಬಿತ್ತನೆ ಹಾಗೂ 9,194 ಹೆಕ್ಟೇರ್‌ನಲ್ಲಿ ರಾಗಿ ನಾಟಿ ನಡೆದಿದೆ. ಉತ್ತಮ ಮಳೆಯಾಗಬಹುದು ಎಂಬ ನಿರೀಕ್ಷೆಯೊಂದಿಗೆ ಜೋಳ ರಾಗಿ ಬಿತ್ತಿದ್ದ ರೈತರು ಮಳೆ ಕೈಕೊಟ್ಟಿರುವುದರಿಂದ ಕಂಗಾಲಾಗಿದ್ದಾರೆ.

ರಾಗಿ ನಾಟಿ ಮಾಡಲು ಇನ್ನೂ ಕಾಲಾವಕಾಶ ಇರುವುದರಿಂದ ರೈತರು ಭೂಮಿನು ಹಸನು ಮಾಡಿಕೊಂಡು, ಸಸಿ ಮಡಿ ಮಾಡಿಕೊಂಡು ಮಳೆಗಾಗಿ ಕಾದು ಕುಳಿತಿದ್ದಾರೆ. ಶೀಘ್ರ ಮಳೆ ಬಾರದಿದ್ದರೆ ರಾಗಿ ಬಿತ್ತನೆ ಅವಧಿಯೂ ಮುಗಿಯಲಿದ್ದು ಜಮೀನನ್ನು ಬೀಳು ಬಿಡುವ ಪರಿಸ್ಥಿತಿ ಎದುರಾಗಲಿದೆ ಎಂದು ರೈತರು ಆತಂಕ ವ್ಯಕ್ತಪಡಿಸುತ್ತಾರೆ.

ಕೈಕೊಟ್ಟ ಮಳೆ: ಜೂನ್‌ನಲ್ಲಿ 58 ಮಿ.ಮೀ ವಾಡಿಕೆ ಮಳೆಗೆ ಪ್ರತಿಯಾಗಿ 98 ಮಿ.ಮೀ ಮಳೆ ಬಿದ್ದಿತ್ತು. ಜುಲೈನಲ್ಲಿ 63 ಮಿ.ಮೀ ವಾಡಿಕೆ ಮಳೆಗೆ ಬದಲಾಗಿ 94 ಮಿ.ಮೀ ಮಳೆ ಸುರಿದಿತ್ತು. ಆಗಸ್ಟ್‌ನಲ್ಲಿ 71 ಮಿ.ಮೀಗೆ ಪ್ರತಿಯಾಗಿ 121 ಮಿ.ಮೀ ಮಳೆಯಾಗಿತ್ತು. ಜೂನ್‌ನಿಂದ ಆಗಸ್ಟ್‌ವರೆಗೂ ವಾಡಿಕೆಗಿಂತ ಹೆಚ್ಚಿನ ಪ್ರಮಾಣದಲ್ಲಿ ಸುರಿದಿದ್ದ ಮಳೆ ಸೆಪ್ಟೆಂಬರ್‌ನಲ್ಲಿ ಕೈಕೊಟ್ಟಿದೆ.

ಸೆಪ್ಟೆಂಬರ್‌ನಲ್ಲಿ 68 ಮಿ.ಮೀ ವಾಡಿಕೆ ಮಳೆಗೆ ಪ್ರತಿಯಾಗಿ ಇದುವರೆಗೂ ಬಿದ್ದಿರುವ ಮಳೆಯ ಪ್ರಮಾಣ ಕೇವಲ 10 ಮಿ.ಮೀ ಮಾತ್ರ. ಅಂದರೆ ಜಿಲ್ಲೆಯಲ್ಲಿ ಶೇ 85ರಷ್ಟು ಮಳೆ ಕೊರತೆ ಎದುರಾಗಿದೆ. ಜುಲೈನಲ್ಲಿ ಸುರಿದ ಮಳೆ ನಂಬಿ ಆಗಸ್ಟ್‌, ಸೆಪ್ಟೆಂಬರ್‌ನಲ್ಲಿ ಬಿತ್ತನೆ ಮಾಡಿರುವ ಬಹುತೇಕ ರೈತರಿಗೆ ಸಮಸ್ಯೆಯಾಗಿದೆ. ಬೆಳೆ ಉಳಿಸಿಕೊಳ್ಳಲು ಪರ್ಯಾಯ ಮಾರ್ಗ ಕಾಣದೆ ತಲೆ ಮೇಲೆ ಕೈಹೊತ್ತು ಕುಳಿತಿದ್ದಾರೆ.

ಪ್ರಸ್ತುತ ವಾತಾವರಣ ರೈತರಲ್ಲಿ ಭರವಸೆ ಮೂಡಿಸುತ್ತಿಲ್ಲ. ನೆತ್ತಿ ಸುಡುವಷ್ಟು ಬೀಳುತ್ತಿರುವ ಬಿಸಿಲಿನಿಂದ ಪೈರುಗಳು ಒಣಗಿ ಸೊರಗುತ್ತಿವೆ. ದಿನದಿಂದ ದಿನಕ್ಕೆ ಬೆಳೆಗಳು ಕಳಾಹೀನವಾಗುತ್ತಿದ್ದು ಮಳೆಗಾಗಿ ರೈತರು ಹಪಹಪಿಸುತ್ತಿದ್ದಾರೆ.

ಯಳಂದೂರಿನಲ್ಲಿ ಸಮಸ್ಯೆ ಹೆಚ್ಚು: ಯಳಂದೂರು ತಾಲ್ಲೂಕಿನಲ್ಲಿ ಸಾವಿರಾರು ಹೆಕ್ಟೇರ್ ಪ್ರದೇಶದಲ್ಲಿ ಬೆಳೆದಿರುವ ಬೆಳೆ ಬಾಡುತ್ತಿದ್ದು ರೈತರು ಆತಂಕದಲ್ಲಿದ್ದಾರೆ. ತಾಲ್ಲೂಕಿನ ಬಿತ್ತನೆ ಪ್ರದೇಶ 10,587 ಸಾವಿರ ಹೆಕ್ಟೇರ್ ಇದ್ದು ಇದುವರೆಗೂ 8,280 ಹೆಕ್ಟೇರ್‌ನಲ್ಲಿ ಬಿತ್ತನೆ ನಡೆದಿದ್ದು ಶೇ 78ರಷ್ಟು ಪ್ರಗತಿಯಾಗಿದೆ. ರಾಗಿ, ಮೆಕ್ಕೆಜೋಳ ಬೆಳೆಗಳು ಮೊಳಕೆ ಕಟ್ಟುವ ಹಂತದಲ್ಲಿದ್ದು ಮಳೆ ಕೊರತೆಯಿಂದ ಇಳುವರಿ ಕುಸಿತ ಆತಂಕ ಎದುರಾಗಿದೆ. ಮಳೆಯಾಶ್ರಿತ ಪ್ರದೇಶದಲ್ಲಿ ಬಿತ್ತನೆ ಮಾಡಿದ್ದ ತಾಕುಗಳ ಬಹುತೇಕ ಬೆಳೆ ಒಣಗುತ್ತಿದೆ

ಮೂರು ವಾರಗಳಿಂದ ಮಳೆ ಕಣ್ಮರೆಯಾಗಿದ್ದು ಕಾಯಿಕಟ್ಟುವ ಹಂತದಲ್ಲಿರುವ ಬೆಳೆಗಳಿಗೆ ತೇವಾಂಶ ಕೊರತೆಯಾಗಿದ್ದು ಒಣಗುತ್ತಿವೆ ಎಂದು ಕೃಷಿಕ ಹೊನ್ನೂರು ರಾಜೇಂದ್ರ ಹೇಳಿದರು.

ರಾಗಿ ಜೋಳ ಬೆಳೆ ನಾಶವಾದರೆ ಜನರಿಗೆ ಮಾತ್ರವಲ್ಲ; ಜಾನುವಾರುಗಳಿಗೂ ಮೇವಿನ ಅಭಾವ ಕಾಡಲಿದೆ. ಈ ಅವಧಿಯಲ್ಲಿ ಬೆಳೆಯುತ್ತಿದ್ದ ರಾಗಿ ಮತ್ತು ಮುಸುಕಿನ ಜೋಳ ಮುಂದಿನ 6 ತಿಂಗಳಿಗೆ ಜಾನುವಾರುಗಳಿಗೆ ಮೇವಿಗೆ ಸಾಲುತ್ತಿತ್ತು. ಇದೀಗ ಬೆಳೆಯೂ ಇಲ್ಲದೆ, ಮೇವು ಇಲ್ಲದೆ ಜನ ಜಾನುವಾರುಗಳು ಸಂಕಷ್ಟಕ್ಕೆ ಸಿಲುಕಲಿವೆ ಎನ್ನುತ್ತಾರೆ ಗೌಡಹಳ್ಳಿ ಮಹೇಶ್.

ಮಳೆ ಸುರಿದು 20 ದಿನಗಳು ಕಳೆದಿವೆ ಜುಲೈನಲ್ಲಿ ಬಿತ್ತನೆಯಾಗಿದ್ದ ಬೆಳೆಗೆ ಮಳೆ ಕೊರತೆ ಎದುರಾಗಿದೆ. ಏಳೆಂಟು ದಿನಗಳಲ್ಲಿ ವರ್ಷಧಾರೆ ಸುರಿಯದಿದ್ದಲ್ಲಿ ಸಾವಿರ ಹೆಕ್ಟೇರ್ ಫಸಲು ರೈತರ ಕೈತಪ್ಪಲಿದೆ
ಎ.ವೆಂಕಟರಂಗಶೆಟ್ಟಿ ಕೃಷಿ ಇಲಾಖೆ ತಾಂತ್ರಿಕ ಅಧಿಕಾರಿ

ಮಳೆ ಕೊರತೆ; ಬಿತ್ತನೆಗೆ ಹಿನ್ನಡೆ ಜಿಲ್ಲೆಯಲ್ಲಿ ಪೂರ್ವ ಮುಂಗಾರು ಮಳೆ ಕೊರತೆಯಿಂದ ದ್ವಿದಳ ಧಾನ್ಯಗಳ ಬಿತ್ತನೆ ಪ್ರಮಾಣ ಕುಸಿಯಿತು. ಸೂರ್ಯಕಾಂತಿ ಹತ್ತಿ ಉದ್ದು ಹೆಸರು ಬಿತ್ತನೆ ನಿರೀಕ್ಷಿತ ಪ್ರಮಾಣದಲ್ಲಿ ಬಿತ್ತನೆಯಾಗಲಿಲ್ಲ. ಇದೀಗ ಸೆಪ್ಟೆಂಬರ್‌ನಲ್ಲಿ ಮಳೆ ಕೊರತೆಯಿಂದ ರಾಗಿ ಹಾಗೂ ಹಸಿ ಕಡಲೆ ಬಿತ್ತನೆಗೆ ಹಿನ್ನಡೆಯಾಗಿದೆ. ಬಿತ್ತನೆಯಾಗಿರುವ ರಾಗಿ ಹಾಗೂ ಮುಸುಕಿನ ಜೋಳ ಮಳೆ ಇಲ್ಲದೆ ಒಣಗುತ್ತಿರುವುದು ಗಮನಕ್ಕೆ ಬಂದಿದೆ. ಹನೂರು ತಾಲ್ಲೂಕಿನಲ್ಲಿ ಸಮಸ್ಯೆ ಹೆಚ್ಚಾಗಿದೆ. ಸುಷ್ಮಾ ಕೃಷಿ ಇಲಾಖೆ ಉಪ ನಿರ್ದೇಶಕರು

ಯಾವ ಅವಧಿಯಲ್ಲಿ ಯಾವ ಬೆಳೆ ಜಿಲ್ಲೆಯಲ್ಲಿ ಪೂರ್ವ ಮುಂಗಾರಿನಲ್ಲಿ ಹತ್ತಿ ಸೂರ್ಯಕಾಂತಿ ನೆಲಗಡಲೆ ಎಳ್ಳು ಹರಳು ಹೆಚ್ಚೆಳ್ಳು ಬಿಳಿ ಜೋಳ ಸೇರಿದಂತೆ ದ್ವಿದಳ ಧಾನ್ಯಗಳನ್ನು ಹೆಚ್ಚಾಗಿ ಬೆಳೆಯಲಾಗುತ್ತದೆ. ಮುಂಗಾರಿನಲ್ಲಿ ಮುಸುಕಿನ ಜೋಳ ರಾಗಿ ಭತ್ತ ಕಬ್ಬು ಹಾಗೂ ಹಿಂಗಾರಿನಲ್ಲಿ ಹಸಿ ಕಡಲೆಯನ್ನು ಹೆಚ್ಚಾಗಿ ಬೆಳೆಯಲಾಗುತ್ತದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT