ಭಾನುವಾರ, 6 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಯೋಗ ಕಲಿಕೆಗೆ ಮಾದರಿ ಚೊಕ್ಕಹಳ್ಳಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ

Published : 6 ಅಕ್ಟೋಬರ್ 2024, 6:08 IST
Last Updated : 6 ಅಕ್ಟೋಬರ್ 2024, 6:08 IST
ಫಾಲೋ ಮಾಡಿ
Comments

ಎಂ.ರಾಮಕೃಷ್ಣಪ್ಪ

ಚಿಂತಾಮಣಿ: ತಾಲ್ಲೂಕಿನ ಅಂಬಾಜಿದುರ್ಗ ಹೋಬಳಿಯ ಕೋನಪ್ಪಲ್ಲಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚೊಕ್ಕಹಳ್ಳಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯು ಮಕ್ಕಳ ಯೋಗಾಭ್ಯಾಸದಿಂದ ಗಮನಸೆಳೆಯುತ್ತಿದೆ. ನಗರಕ್ಕೆ ಸಮೀಪವಿರುವ ಚೊಕ್ಕಹಳ್ಳಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಹಲವಾರು ಸಮಸ್ಯೆಗಳ ನಡುವೆಯೂ ಪ್ರಗತಿಯ ಹಾದಿಯಲ್ಲಿ ಮುನ್ನಡೆಯುತ್ತಿದೆ.

ಚೊಕ್ಕಹಳ್ಳಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯು ಗ್ರಾಮ ಪಂಚಾಯಿತಿ, ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಹಾಗೂ ಗ್ರಾಮಸ್ಥರ ಸಹಕಾರದಿಂದ ಮುನ್ನಡೆಯುತ್ತಿದೆ. 1 ರಿಂದ 5ನೇ ತರಗತಿವರೆಗೆ 23 ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ. ಇಬ್ಬರು ಶಿಕ್ಷಕರು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಒಂದನೇ ತರಗತಿಯಿಂದ 5ನೇ ತರಗತಿಯವರೆಗೆ ಎಲ್ಲ ಮಕ್ಕಳು ಯೋಗಾಭ್ಯಾಸ ಕಲಿಯುತ್ತಿರುವುದು ಈ ಶಾಲೆಯ ಹೆಗ್ಗಳಿಕೆಯಾಗಿದೆ.

ಶಿಕ್ಷಕ ಶ್ರೀನಿವಾಸರೆಡ್ಡಿ ಯೋಗಾಭ್ಯಾಸ ಕಲಿಕೆಯ ರೂವಾರಿ. ಸ್ವತಃ ಯೋಗ ಶಿಕ್ಷಕರಾಗಿರುವ ಶ್ರೀನಿವಾಸರೆಡ್ಡಿ ಪ್ರತಿ ಶನಿವಾರ ಬೆಳಗ್ಗೆ 8ರಿಂದ 9.30ರವರೆಗೆ ಯೋಗಾಭ್ಯಾಸ ಮಾಡಿಸುತ್ತಾರೆ. ನಂತರ ಬಿಸಿಯೂಟ ಸೇವನೆ ಮಾಡಿಸಿ ಪಾಠ ಪ್ರವಚನ ಆರಂಭವಾಗುತ್ತವೆ. ಶಾಲೆಯ ಎಲ್ಲ ಮಕ್ಕಳು ಉತ್ಸಾಹದಿಂದ ಯೋಗಾಭ್ಯಾಸದಲ್ಲಿ ಭಾಗವಹಿಸುತ್ತಾರೆ. ಯೋಗಾಭ್ಯಾಸಕ್ಕಾಗಿಯೇ ವಿದ್ಯಾರ್ಥಿಗಳಿಗೆ ವಿಶೇಷ ಸಮವಸ್ತ್ರವನ್ನು ದಾನಿಗಳ ನೆರವಿನಿಂದ ನೀಡಲಾಗಿದೆ.

ಸ್ವಾತಂತ್ರ್ಯ ದಿನಾಚರಣೆ, ಗಣರಾಜ್ಯ ದಿನ ಮತ್ತಿತರ ವಿಶೇಷ ಕಾರ್ಯಕ್ರಮಗಳಲ್ಲಿ ಮಕ್ಕಳು ಸಾಂಸ್ಕೃತಿಕ ಚಟುವಟಿಕೆಯಾಗಿ ಯೋಗಾಭ್ಯಾಸ ಮಾಡುತ್ತಾರೆ.

ಚಕ್ರಾಸನ, ಉಪವಿಷ್ಠಕೋನಾಸನ, ಸರ್ವಾಂಗಾಸನ ಮತ್ತಿತರ ಆಸನಗಳನ್ನು ಮಾಡುವ ಮೂಲಕ ಪುಟ್ಟ ಮಕ್ಕಳು ಮಿಂಚುತ್ತಾರೆ.

ಶಾಲೆಯ ಆವರಣದಲ್ಲಿ ಹಾಗೂ ಸುತ್ತಮುತ್ತಲು ಸ್ವಚ್ಛತೆಗೆ ಆದ್ಯತೆ ನೀಡಿ ಸ್ವಚ್ಛ ಶಾಲೆಯನ್ನಾಗಿ ರೂಪಿಸಲಾಗಿದೆ. ಮಕ್ಕಳಿಗೆ ಪ್ರತಿನಿತ್ಯ ಪರಿಸರ ಮತ್ತು ನೀರಿನ ಮಹತ್ವದ ಕುರಿತು ಜಾಗೃತಿ ಮೂಡಿಸಲಾಗುತ್ತದೆ. ಮಕ್ಕಳಿಗೆ ಶಾಲಾ ಹಂತದಲ್ಲಿ ಪರಿಸರ ಮತ್ತು ನೀರಿನ ಮಹತ್ವದ ಅರಿವು ಮೂಡಿಸಿದರೆ ಅದು ಅವರಲ್ಲಿ ಶಾಶ್ವತವಾಗಿರುತ್ತದೆ ಎನ್ನುವುದು ಶಿಕ್ಷಕರ ಅಭಿಪ್ರಾಯ.

ಶಾಲೆಯಲ್ಲಿ ಶೌಚಾಲಯ, ಕುಡಿಯುವ ನೀರಿನ ಸೌಲಭ್ಯವಿದೆ. ಶಾಲೆಯ ಆವರಣದಲ್ಲಿ ಉತ್ತಮ ಫಸಲು ನೀಡುವ ಮಾವಿನ ಮರಗಳನ್ನು ಬೆಳೆಸಲಾಗಿದೆ. ದಾನಿಗಳು ಟಿ.ವಿ, ಲ್ಯಾಪ್‌ಟಾಪ್‌ನ್ನು ಕೊಡುಗೆ ನೀಡಿದ್ದಾರೆ. ದೂರದರ್ಶನದಲ್ಲಿ ಪ್ರಸಾರವಾಗುವ ಶೈಕ್ಷಣಿಕ ಕಾರ್ಯಕ್ರಮಗಳನ್ನು ಮಕ್ಕಳಿಗೆ ತೋರಿಸಲಾಗುತ್ತದೆ.

ಶಾಲೆಯಲ್ಲಿ ಎಲ್ಲ ರಾಷ್ಟ್ರೀಯ ಹಬ್ಬಗಳನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಮಕ್ಕಳಿಗೆ ವಿವಿಧ ಸ್ಪರ್ಧೆ ಆಯೋಜಿಸಲಾಗುತ್ತದೆ. ವಿಜೇತರಿಗೆ ಗ್ರಾಮಸ್ಥರು ಬಹುಮಾನದ ವ್ಯವಸ್ಥೆ ಮಾಡುತ್ತಾರೆ ಎಂದು ಮುಖ್ಯ ಶಿಕ್ಷಕ ಸಿ.ಶ್ರೀನಿವಾಸ್ ಮಾಹಿತಿ ನೀಡಿದರು.

ಶಾಲೆಯಲ್ಲಿ 2 ಕೊಠಡಿಗಳಿದ್ದು, ಇನ್ನೂ 2 ಕೊಠಡಿಗಳ ಮತ್ತು ಆಟದ ಮೈದಾನದ ಅಗತ್ಯವಿದೆ. ಶಾಲೆಯ ಸುತ್ತಲೂ ಕಾಂಪೌಂಡ್ ನಿರ್ಮಾಣ ಆಗಬೇಕಿದೆ. ಮಕ್ಕಳಿಗೆ ಕುಳಿತುಕೊಳ್ಳಲು ಡೆಸ್ಕ್, ಜ್ಞಾನಾರ್ಜನೆಗಾಗಿ ಪ್ರಾಜೆಕ್ಟರ್ ಬೇಕಾಗಿದೆ. ಕಟ್ಟಡಕ್ಕೆ ಸುಣ್ಣಬಣ್ಣ ಬಳಿಸುವ ಅಗತ್ಯವಿದೆ.

ನಮ್ಮೂರ ಶಾಲೆಯಲ್ಲಿ ನಲಿ-ಕಲಿ ಹೆಚ್ಚಿನ ಖುಷಿ ಕೊಡುತ್ತದೆ. ಶಿಕ್ಷಕರು ಯೋಗ ಕಲಿಸುವುದು ಆಸಕ್ತಿದಾಯಕವಾಗಿದೆ. ಪ್ರತಿನಿತ್ಯ ಶಾಲೆಗೆ ಹೋಗುವುದು ಹೊರೆಯಾಗುವುದಿಲ್ಲ ಖುಷಿ ಕೊಡುತ್ತದೆ
ಯಶ್ವಂತ್ ಕುಮಾರ್ ವಿದ್ಯಾರ್ಥಿ
ಸರ್ಕಾರಿ ಶಾಲೆ ಖಾಸಗಿ ಶಾಲೆಯಂತೆ ಉತ್ತಮವಾಗಿ ನಡೆಯುತ್ತಿದೆ. ಮಕ್ಕಳಿಗೆ ಶಿಸ್ತುಬದ್ಧವಾಗಿ ಪಾಠ ನಡವಳಿಕೆಗಳ ಮೂಲಕ ಕಲಿಸುತ್ತಿದ್ದಾರೆ. ಶಾಲೆಯಲ್ಲಿ ಟಿ.ವಿ ಕಂಪ್ಯೂಟರ್ ಮೂಲಕವೂ ಕಲಿಯುತ್ತಿದ್ದೇವೆ
ಸಂಜನಾ ವಿದ್ಯಾರ್ಥಿನಿ
ಶಾಲಾ ಎಸ್‌ಡಿಎಂಸಿ ಸಹ ಶಿಕ್ಷಕಿ ಹಾಗೂ ಗ್ರಾಮಸ್ಥರ ಸಹಕಾರದಿಂದ ಶಾಲೆ ಪ್ರಗತಿಪಥದಲ್ಲಿ ನಡೆಯುತ್ತಿದೆ. ಶಾಲೆಗೆ ಅನುಕೂಲ ಒದಗಿಸಲು ದಾನಿಗಳು ಮುಂದೆ ಬಂದರೆ ಶಾಲೆ ಮತ್ತಷ್ಟು ಪ್ರಗತಿಯಾಗುತ್ತದೆ
ಸಿ.ಶ್ರೀನಿವಾಸ್ ಮುಖ್ಯ ಶಿಕ್ಷಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT