ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಗುಡಿಬಂಡೆ: ಕೆರೆ ಒಡಲು ಬಗೆಯುವ ದಂಧೆಗೆ ಇಲ್ಲ ತಡೆ

ಗುಡಿಬಂಡೆ ತಾಲ್ಲೂಕಿನ ಹಳ್ಳಿಗಳಲ್ಲಿ ವ್ಯಾಪಕವಾದ ಅಕ್ರಮ
Published 24 ಜೂನ್ 2024, 6:04 IST
Last Updated 24 ಜೂನ್ 2024, 6:04 IST
ಅಕ್ಷರ ಗಾತ್ರ

ಗುಡಿಬಂಡೆ: ಆಂಧ್ರದ ಗಡಿಗೆ ಹೊಂದಿಕೊಂಡಿರುವ ಗುಡಿಬಂಡೆ ತಾಲ್ಲೂಕಿಗೆ ಯಾವುದೇ ನದಿ, ನಾಲೆಗಳ ಮೂಲವಿಲ್ಲ. ಇದರಿಂದ ಹಲವಾರು ವರ್ಷಗಳಿಂದ ಬರದ ಛಾಯೆ ಇದೆ.

ತಾಲ್ಲೂಕಿನ ಕೆರೆ ಕುಂಟೆಗಳಲ್ಲಿ ನೀರಿಲ್ಲ. ಬಹುತೇಕ ಕೆರೆಗಳು ಬರಿದಾಗಿವೆ. ಇದನ್ನು ಲಾಭವಾಗಿ ಪರಿವರ್ತಿಸಿಕೊಂಡಿರುವ ಮಣ್ಣು ದಂಧೆಕೋರರು ಕೆರೆಗಳಿಂದ ಎಗ್ಗಿಲ್ಲದೆ ಮಣ್ಣು ತೆಗೆಯುತ್ತಿದ್ದಾರೆ. ಈ ಮಣ್ಣು ತೆಗೆಯುವ ದಂಧೆ ಮುಂದಿನ ದಿನಗಳಲ್ಲಿ ಕೆರೆಗಳಿಗೆ ಅಪಾಯವನ್ನು ತಂದೊಡ್ಡುವ ಸಾಧ್ಯತೆಯೂ ಇದೆ.

ಅಕ್ರಮವಾಗಿ ಮಣ್ಣನ್ನು‌ ಹಗಲು, ರಾತ್ರಿ ಕೆರೆಗಳಿಂದ ತೆಗೆಯುತ್ತಿದ್ದಾರೆ. ಹೀಗೆ ಮಣ್ಣು ತೆಗೆಯುತ್ತಿರುವವರು ಕೆರೆ ಸುತ್ತಲಿನ ರೈತರು ಅಥವಾ ತಮ್ಮ ಹೊಲ ತೋಟಗಳಿಗೆ ಅಗತ್ಯ ಎಂದು ಕೊಂಡೊಯ್ಯುವ ರೈತರೇ ಎಂದು ನೋಡಿದರೆ ಖಂಡಿತವಾಗಿಯೂ ಇಲ್ಲ.

ವಾಣಿಜ್ಯ ಸಂಕೀರ್ಣಗಳ ನಿರ್ಮಾಣಕ್ಕೆ, ಬಡವಾಣೆಗಳನ್ನು ರೂಪಿಸುವಾಗ ಆ ಭೂಮಿಯನ್ನು ಸಮತಟ್ಟು ಮಾಡಲು, ಇಟ್ಟಿಗೆ ಕಾರ್ಖಾನೆಗಳಿಗೆ‌ ಹೀಗೆ ಲಾಭದ ದೃಷ್ಟಿಯಿಂದಲೇ ಕೆರೆ ಮಣ್ಣನ್ನು ಬಗೆಯಲಾಗುತ್ತಿದೆ. ರೈತರ ಹೊಲ, ಗದ್ದೆ ಕೃಷಿ ಜಮೀನುಗಳಿಗೆ ಫಲವತ್ತಾದ ಮಣ್ಣು‌ ಸಿಗದೆ ಪರದಾಡುವ ಸ್ಥಿತಿ ಎದುರಾಗಿದೆ. 

ಕೆರೆಗಳಲ್ಲಿ ಇಂತಿಷ್ಟು ಪ್ರಮಾಣದಲ್ಲಿ ಮಣ್ಣು ತೆಗೆಯಬೇಕು ಎಂದು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಮಾರ್ಗಸೂಚಿಗಳು, ಮಾನದಂಡಗಳನ್ನು ವಿಧಿಸಿದೆ. ಆದರೆ ಮಣ್ಣು ಮಾಫಿಯಾಯದವರು ಇಲಾಖೆಯ ‌ನಿಯಮಾನುಸಾರದಂತೆ ಮಣ್ಣನ್ನು ತೆಗೆಯುತ್ತಿಲ್ಲ. 

ಈ ಹಿಂದೆ ಮರಳು ಮಾಫಿಯಾದಿಂದ ತಾಲ್ಲೂಕಿನ ಬಹುತೇಕ ಕಾಲುವೆ,‌ ಕೆರೆ ಕುಂಟೆಗಳು ಬರಿದಾಗಿದ್ದವು. ಇದರಿಂದ ಈಗ ಮರಳು ಅಪರೂಪವಾಗಿವೆ. ಮಣ್ಣು ತೆಗೆಯುವ ದಂಧೆ ಜೋರಾಗಿದೆ. 

ಸ್ಥಳೀಯ ಗ್ರಾಮ ಪಂಚಾಯಿತಿ, ಗಣಿ ಮತ್ತು ಭೂವಿಜ್ಞಾನ ಇಲಾಖೆ, ನೀರಾವರಿ ಇಲಾಖೆಯಿಂದ ಯಾವುದೇ ಅನುಮತಿ ಪಡೆಯದೆ ಕೆರೆಗಳ ಮಣ್ಣನ್ನು ಅಕ್ರಮವಾಗಿ ಜೆಸಿಬಿ ಯಂತ್ರಗಳನ್ನು ಬಳಸಿ ತೆಗೆಯಲಾಗುತ್ತಿದೆ. ಕೆರೆಗಳಲ್ಲಿ ಬೃಹತ್ ಗುಂಡಿಗಳು ಬಿದ್ದಿವೆ.

ಜಿಲ್ಲಾ ಪಂಚಾಯಿತಿ, ಸಣ್ಣನೀರಾವರಿ ಇಲಾಖೆ ವ್ಯಾಪ್ತಿಯ ಕೆರೆಗಳಲ್ಲಿ ಸರ್ಕಾರಿ ಜಮೀನುಗಳಲ್ಲಿ ನೈಸರ್ಗಿಕವಾಗಿ ತುಂಬಿರುವ ಹೂಳನ್ನು ಪಟ್ಟಣ, ನಗರಗಳಲ್ಲಿ ವಾಸಿಸುತ್ತಿರುವ ರಾಜಕಾರಣಿಗಳ ಒಡೆತನ ವಾಣಿಜ್ಯ ಸಂಕೀರ್ಣಗಳ ನಿರ್ಮಾಣಕ್ಕೆ, ಬಡಾವಣೆಗಳ ನಿರ್ಮಾಣ, ಸಮತಟ್ಟು, ಇಟ್ಟಿಗೆ ಕಾರ್ಖಾನೆಗಳಿಗೆ‌ ವಿವಿಧ ವಾಣಿಜ್ಯ ಉದ್ದೇಶಗಳಿಗೆ ‌ರಾಜಾರೋಷವಾಗಿ ಸಾಗಾಣಿಕೆ ಮಾಡಲಾಗುತ್ತಿದೆ.

ಮಣ್ಣಿನ ಸಾಗಾಟವನ್ನು ಕೆಲವರು ದಂಧೆಯನ್ನಾಗಿಯೇ ಮಾಡಿಕೊಂಡಿದ್ದಾರೆ. ರಾಜಕೀಯ ಪ್ರಭಾವ ಬಳಸಿ ನೈಸರ್ಗಿಕ ಸಂಪತ್ತನ್ನು ಲೂಟಿ ಮಾಡುತ್ತಿದ್ದಾರೆ. ಕೆರೆಗಳನ್ನು ಒತ್ತುವರಿ ಮಾಡಿಕೊಂಡು ಕೆರೆ ಅಂಗಳದ ಗಡಿ ಗುರುತುಗಳನ್ನು ನಾಶಪಡಿಸಿದ್ದಾರೆ ಎಂದು ಜನರು ಆರೋಪಿಸುವರು.

ಸರ್ಕಾರದ ಆಸ್ತಿ ರಕ್ಷಣೆ ಮಾಡುವ ತಾಲ್ಲೂಕು ಆಡಳಿತ ಕೆರೆಗಳ ಮಣ್ಣು ತೆಗೆಯಲು ಜಾರಿಯಲ್ಲಿರುವ ಕಾಯ್ದೆಯನ್ನು ಕಟ್ಟುನಿಟ್ಟಾಗಿ ಪಾಲಿಸದ ಕಾರಣ ಗುಡಿಬಂಡೆ ಪಟ್ಟಣ, ಮಾಚಹಳ್ಳಿ, ಹಂಪಸಂದ್ರ, ಕಡೇಹಳ್ಳಿ, ನಿಲುಗುಂಬ, ಗರುಡಚಾರ್ಲಹಳ್ಳಿ ಕೊಂಡರೆಡ್ಡಹಳ್ಳಿ, ಪುಲೀಸಾನವೊಡ್ಡು, ಯರ್ರಹಳ್ಳಿ, ಎಲ್ಲೋಡು, ಬೆಣ್ಣೆಪರ್ತಿ, ಬೀಚಗಾನಹಳ್ಳಿ ಮತ್ತಿತರ ಭಾಗಗಳಲ್ಲಿನ ಕೆರೆಗಳಲ್ಲಿ ಮಣ್ಣು ತೆಗೆಯುವ ದಂಧೆ ಅವ್ಯಾಹತವಾಗಿದೆ. ಪರಿಣಾಮ‌ ಸರ್ಕಾರಿ ಕೆರೆ ಕುಂಟೆಗಳಲ್ಲಿ ಮಣ್ಣುಮಾಯವಾಗುತ್ತಿದೆ ಎಂದು ರೈತ ಮುಖಂಡ ಬಿ.ಸಿ.ಕೃಷ್ಣಪ್ಪ, ರಾಮಾಂಜಿ, ನರಸಿಹಮೂರ್ತಿ, ಗಂಗಪ್ಪ, ರಮೇಶ ಆಕ್ರೋಶ ವ್ಯಕ್ತಪಡಿಸಿದರು.

ಕೆರೆಯ ಮಣ್ಣು ಬಳಸಿ ಜಮೀನು ಸಮತಟ್ಟು
ಕೆರೆಯ ಮಣ್ಣು ಬಳಸಿ ಜಮೀನು ಸಮತಟ್ಟು

ಮೇಲಾಧಿಕಾರಿಗಳ ಗಮನಕ್ಕೆ ತಂದು ಕಾನೂನು ಕ್ರಮ

ತಾಲ್ಲೂಕಿನಲ್ಲಿ ಪ್ರಕೃತಿ ನೈಸರ್ಗಿಕ ಸಂಪತ್ತಾದ ಬೆಟ್ಟಗುಡ್ಡಗಳ ಬಳಕೆ ಮಾಡಿಕೊಂಡು ಕಲ್ಲುಗಣಿಕಾರಿಕೆ ಭೂಮಾಪಿಯಾಗಳು ಅಕ್ರಮವಾಗಿ ಕೆರೆಗಳಲ್ಲಿ ಮಣ್ಣು ತೆಗೆದೆ ಅಂತರ್ಜಲ ಕುಸಿತಕ್ಕೆ ಕಾರಣವಾಗಿದ್ದು ಇದಕ್ಕೆ ಎಲ್ಲಾ ಕಾರಣ ಮುಖ್ಯವಾಗಿ ಜನಪ್ರತಿನಿಧಿಗಳ ನಿರ್ಲಕ್ಷತೆಯಿಂದ ಅಧಿಕಾರಿಗಳು ಶಾಮೀಲಾಗಿ ಸಂಪತ್ತು ಹಾಳಾಗಲು ಕಾರಣವಾಗಿದೆ ಎಂದು ‌ಭಾರತೀಯ ಕಿಸಾನ್ ಸಂಘದ ಸದಸ್ಯ ಕಡೇಹಳ್ಳಿ ಅನಂದಪ್ಪ ತಿಳಿಸಿದರು. ಗುಡಿಬಂಡೆ ತಾಲ್ಲೂಕಿನಲ್ಲಿ ಸಣ್ಣ ನೀರಾವರಿ ಇಲಾಖೆಗೆ ಸೇರಿದ 11 ಕೆರೆಗಳಿದ್ದು ಇಲಾಖೆತಿಯಿಂದ ಮಣ್ಣು ಸಾಗಾಣಿಕೆ ಮಾಡಲು ಯಾವುದೇ ಅನುಮತಿ ಪಡೆದಿಲ್ಲ. ಈಗ ಸಾರ್ವಜನಿಕರಿಂದ ಆಕ್ಷೇಪಣೆಗಳು ಬರುತ್ತಿರುವುದರಿಂದ ಮೇಲಾಧಿಕಾರಿಗಳ ಗಮನಕ್ಕೆ ತಂದು ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಇ ಸುನೀಲ್ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT