ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಶಿಡ್ಲಘಟ್ಟ: ಹಳ್ಳಿ ವಿದ್ಯಾರ್ಥಿಗಳಿಗೆ ಶಾಲೆ ‘ದೂರ’

Published 29 ಜೂನ್ 2024, 6:19 IST
Last Updated 29 ಜೂನ್ 2024, 6:19 IST
ಅಕ್ಷರ ಗಾತ್ರ

ಶಿಡ್ಲಘಟ್ಟ: ‘ನಾವು ಪ್ರತಿದಿನ ಶಾಲೆಗೆ ನಾಲ್ಕು ಕಿ.ಮೀ ದೂರದಿಂದ ನಡೆದು ಬರುತ್ತೇವೆ ಮತ್ತು ನಡೆದುಕೊಂಡೆ ಹೋಗುತ್ತೇವೆ. ನಮಗೆ ಯಾವುದೇ ರೀತಿ ವಾಹನ ಸೌಕರ್ಯ ಇಲ್ಲ’ ಎನ್ನುವ ಮರಿಹಳ್ಳಿ ಮಕ್ಕಳನ್ನು ಕಂಡಾಗ ಶಿಕ್ಷಣ ವ್ಯವಸ್ಥೆಯು ಹಳ್ಳಿ ಮಕ್ಕಳಿಗೆ ಸಾಕಷ್ಟು ದೂರದಲ್ಲಿರುವುದು ಗೋಚರವಾಗುತ್ತದೆ.

ತಾಲ್ಲೂಕಿನ ಪಲಿಚೆರ್ಲು ಸರ್ಕಾರಿ ಪ್ರೌಢಶಾಲೆಯಲ್ಲಿ ಒಂಬತ್ತು ಮತ್ತು ಹತ್ತನೇ ತರಗತಿಯಲ್ಲಿ 67 ಮಂದಿ ವಿದ್ಯಾರ್ಥಿಗಳಿರದ್ದಾರೆ. ನಾಲ್ವರು ಶಿಕ್ಷಕರಿದ್ದಾರೆ. ಈ ಶಾಲೆಗೆ ಸುತ್ತಲಿನ ಆರು ಕಿ.ಮೀ ಫಾಸಲೆಯಿಂದ ಮಕ್ಕಳು ಕಲಿಯಲು ಬರುತ್ತಾರೆ. ಈ ಹಳ್ಳಿ ಮಕ್ಕಳು ಶಾಲೆಗೆ ನಡೆದೇ ಬರಬೇಕು.

ಸರ್ಕಾರ ಶಿಕ್ಷಣ ಉತ್ತೇಜಿಸಲು ಮಕ್ಕಳಿಗೆ ಹತ್ತಿರವಾಗಲು ನಾನಾ ಸವಲತ್ತು ನೀಡುತ್ತಿದ್ದರೂ ಹಳ್ಳಿ ಭಾಗದಲ್ಲಿ ಸಾಕ್ಷರತೆ ಹೆಚ್ಚಾಗದಿರಲು ಈ ರೀತಿಯ ‘ದೂರ‘ ಶಿಕ್ಷಣ ಕಾರಣವಾಗಿದೆ. ಬೆಳೆದ ಹೆಣ್ಣು ಮಕ್ಕಳು ಈ ರೀತಿಯ ಕಾಡುದಾರಿಗಳಲ್ಲಿ ನಡೆದು ಬರಲು ಮನೆಗಳಲ್ಲಿ ಒಪ್ಪದೆ ಹಲವರ ಶಿಕ್ಷಣ ಕುಂಠಿತವಾಗುತ್ತಿದೆ. ಮಳೆ, ಚಳಿ, ಗಾಳಿ, ಬಿಸಿಲೆನ್ನದೆ ನಡೆಯುವ ತ್ರಾಸದಿಂದ ಹಲವರ ವಿದ್ಯಾಭ್ಯಾಸ ನಿಲ್ಲುತ್ತಿದೆ.

ಈ ಪ್ರೌಢಶಾಲೆಯಲ್ಲಿ ಮಕ್ಕಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಕುಂಠಿತವಾಗಲು ಮಕ್ಕಳಿಗೆ ‘ದೂರ‘ದಲ್ಲಿರುವ ಶೈಕ್ಷಣಿಕ ವ್ಯವಸ್ಥೆ ಕಾರಣವಾಗಿದೆ.

ಈಗಾಗಲೇ ತಾಲ್ಲೂಕಿನ ಗೌಡನಹಳ್ಳಿ ಸರ್ಕಾರಿ ಶಾಲೆ ದಾನಿಗಳ ನೆರವಿನಿಂದ ಬಸ್ ಹೊಂದಿದೆ. ಸುತ್ತಮುತ್ತಲಿನ ಹಳ್ಳಿಗಳಿಂದ ಮಕ್ಕಳನ್ನು ಕರೆದುಕೊಂಡು ಬರುವ ಮೂಲಕ ಮಕ್ಕಳ ಸಂಖ್ಯೆ ಹೆಚ್ಚಿಸಿಕೊಂಡಿದೆ. ಪಲಿಚೆರ್ಲು ಶಾಲೆಗೂ ಈ ಸೌಕರ್ಯ ಸಿಕ್ಕರೆ ಇನ್ನಷ್ಟು ಮಕ್ಕಳ ಸಂಖ್ಯೆ ಹೆಚ್ಚಳವಾಗಲಿದೆ.

ಪಲಿಚೆರ್ಲು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 100 ಮಂದಿ ವಿದ್ಯಾರ್ಥಿಗಳಿದ್ದಾರೆ. ಇಲ್ಲಿಗೆ ಕೂಡ ಸುತ್ತಮುತ್ತಲಿನ ನಾಲ್ಕಾರು ಹಳ್ಳಿಗಳಿಂದ ವಿದ್ಯಾರ್ಥಿಗಳು ನಡೆದುಕೊಂಡು ಬರಬೇಕು. ಸುಬ್ಬರಾಯನಹಳ್ಳಿ, ಈಗ್ಲೆಟ್ಟಹಳ್ಳಿ, ಬೈರಗಾನಹಳ್ಳಿ, ತಿಮ್ಮಸಂದ್ರ, ಬಳೇಹೊಸಹಳ್ಳಿ, ಮರಿಹಳ್ಳಿ, ಮುಮ್ಮನಹಳ್ಳಿ ಮುಂತಾದ ದೂರದ ಹಳ್ಳಿಗಳಿಂದ ಮಕ್ಕಳು ಈ ಶಾಲೆಗೆ ಬರುತ್ತಾರೆ.

ಹಳ್ಳಿ ಮಕ್ಕಳ ಶಿಕ್ಷಣಕ್ಕೆ ಒತ್ತು

ಹಳ್ಳಿ ಮಕ್ಕಳು ಪ್ರತಿಭೆಯುಳ್ಳವರು. ಅವರಿಗೆ ಶಾಲೆಯಲ್ಲಿ ಶಿಕ್ಷಣವೂ ಸೇರಿದಂತೆ ಎಲ್ಲ ಸವಲತ್ತು ಸಿಗುತ್ತವೆಯಾದರೂ ಅವರು ದೂರದಿಂದ ಬರಬೇಕೆಂಬ ಕಾರಣದಿಂದ ಶಾಲೆಗೆ ತಪ್ಪಿಸಿಕೊಳ್ಳುವುದು, ಬಾರದಿರುವುದು ಮತ್ತು ಓದನ್ನು ನಿಲ್ಲಿಸುವುದೂ ಆಗುತ್ತಿದೆ. ಇದಕ್ಕೆ ಪರಿಹಾರ ಸಿಕ್ಕರೆ ಈ ಭಾಗದ ಶೈಕ್ಷಣಿಕ ಪ್ರಗತಿ ಆಗುತ್ತದೆ.

ರೂಪ, ಶಿಕ್ಷಕಿ

ಬಸ್‌ ವ್ಯವಸ್ಥೆ ಕಲ್ಪಿಸಿ

ಪ್ರತಿದಿನ  ಸುಮಾರು ನಾಲ್ಕು ಕಿ.ಮೀ ದೂರ ಕಾಡದಾರಿಯಲ್ಲಿ ಶಾಲೆಗೆ ನಡೆದುಕೊಂಡು ಹೋಗಬೇಕು. ಮಳೆಯಿರಲಿ, ಬಿಸಿಲಿರಲಿ ಓದಬೇಕೆಂಬ ಹಂಬಲದಿಂದ ನಡೆಯುತ್ತೇವೆ. ನಮಗೆ ಬಸ್ ವ್ಯವಸ್ಥೆ ಮಾಡಿಕೊಟ್ಟರೆ ಅನುಕೂಲವಾಗುತ್ತದೆ.

ತ್ರಿಷಾ ಮತ್ತುಅರುಣ್ ಕುಮಾರ್, ವಿದ್ಯಾರ್ಥಿಗಳು

ದೂರದ ನಡಿಗೆ

ಪಲಿಚೆರ್ಲು ಸರ್ಕಾರಿ ಪ್ರೌಢಶಾಲೆಗೆ ವಿವಿಧ ಹಳ್ಳಿಗಳಿಂದ ಬರುವ ವಿದ್ಯಾರ್ಥಿಗಳು

l ಮರಿಹಳ್ಳಿ 4 ಕಿ.ಮೀ 15

l ಮುಮ್ಮನಹಳ್ಳಿ 4 ಕಿ.ಮೀ 5

l ತೋಕಲಹಳ್ಳಿ 6 ಕಿ.ಮೀ 3

l ಸೋಮನಹಳ್ಳಿ 2 ಕಿ.ಮೀ 8

l ಕನ್ನಪ್ಪನಹಳ್ಳಿ 4 ಕಿ.ಮೀ 18

ಪಲಿಚೆರ್ಲು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ವಿವಿಧ ಹಳ್ಳಿಗಳಿಂದ ಬರುವ ವಿದ್ಯಾರ್ಥಿಗಳು

l ಮರಿಹಳ್ಳಿ 4 ಕಿ.ಮೀ 20

l ಮುಮ್ಮನಹಳ್ಳಿ 4 ಕಿ.ಮೀ 5

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT