ಭಾನುವಾರ, 6 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಶಿಡ್ಲಘಟ್ಟ: ದಸರಾ ವೈಭವ ಬಿಂಬಿಸುವ ಗೊಂಬೆ ಲೋಕ

Published : 6 ಅಕ್ಟೋಬರ್ 2024, 6:10 IST
Last Updated : 6 ಅಕ್ಟೋಬರ್ 2024, 6:10 IST
ಫಾಲೋ ಮಾಡಿ
Comments

ಶಿಡ್ಲಘಟ್ಟ: ದಸರಾ ಬಂತೆಂದರೆ ಗೊಂಬೆ ಕೂರಿಸುವ ಸಂಭ್ರಮ, ಅಟ್ಟವೇರಿರುವ ಗೊಂಬೆ ತೆಗೆಯುವ ಉತ್ಸಾಹ, ಆ ಬೊಂಬೆಗಳಿಗೆ ಉಡುಗೆ ತೊಡಿಸಿ ಮಾಡುವ ಶೃಂಗಾರ, ಹಂತ ಹಂತವಾಗಿ ಬೊಂಬೆ ಜೋಡಿಸುವ ಸಡಗರ.

ದಸರಾ ಹಬ್ಬದ ಸಂದರ್ಭದಲ್ಲಿ ಮೈಸೂರಿನ ಅರಮನೆ ಸಂಪ್ರದಾಯವನ್ನು ಅನುಸರಿಸಿ ಸಾಮಾಜಿಕ ಹಾಗೂ ಸಾಂಸ್ಕೃತಿಕ ಪರಂಪರೆ ಬಿಂಬಿಸಲು ಗೊಂಬೆಹಬ್ಬವನ್ನು ತಾಲ್ಲೂಕಿನಲ್ಲಿಯೂ ಹಲವಾರು ಮಂದಿ ಆಚರಿಸುತ್ತಾರೆ.

ತಾಲ್ಲೂಕಿನ ಮೇಲೂರಿನ ಗ್ರಾಮ ಪಂಚಾಯಿತಿ ಸದಸ್ಯ ಎಂ.ಕೆ.ರವಿ ಪ್ರಸಾದ್ ಅವರ ಮನೆಯಲ್ಲಿ ಪುರಾಣ ಕಥೆಗಳನ್ನು ಪುನ: ಸೃಷ್ಟಿಸುವ ರೀತಿಯಲ್ಲಿ, ದಸರಾ ಗೊಂಬೆಗಳ ಮೂಲಕ ನಮ್ಮ ನಾಡಿನ ಜನಪದ, ಸಾಂಸ್ಕೃತಿಕ ಅನನ್ಯತೆಯನ್ನು ಸಾರುತ್ತಾರೆ.

ವಿಶೇಷವೆಂದರೆ ಇವರ ಮನೆಯಲ್ಲಿನ ಈ ದಸರಾ ಗೊಂಬೆ ಹಬ್ಬಕ್ಕೆ ಮೂರು ತಲೆಮಾರುಗಳ ನಂಟು ಇರುವುದು ಮತ್ತಷ್ಟು ಸಂಭ್ರಮಕ್ಕೆ ಕಾರಣವಾಗಿದೆ. ವೈವಿಧ್ಯಮಯ ಗೊಂಬೆ, ಅವನ್ನು ಜೋಡಿಸಿಟ್ಟ ರೀತಿ ಆಕರ್ಷಕವಾಗಿದೆ.

ಪಟ್ಟದ ಗೊಂಬೆ, ಅಮ್ಮನವರ ಮೂರ್ತಿ, ಬೆಣಚುಕಲ್ಲಿನ ಗಣಪತಿ, ದಶಾವತಾರ, 30 ವರ್ಷಗಳ ಹಿಂದಿನ ರಾಮ ಮತ್ತು ಕೃಷ್ಣರ ಅಪರೂಪದ ಮೂರ್ತಿಗಳು, ಶೆಟ್ಟಪ್ಪ ಶೆಟ್ಟಮ್ಮ, ಅಂಗಡಿಗೆ ದಿನಸಿ ತರುವ ಗಾಡಿ, ಹಣ್ಣು ತರುವವರು, ಈಶ್ವರನ ಅಭಿಷೇಕಕ್ಕೆ ಗಣಪತಿಯ ವಾದ್ಯಗೋಷ್ಠಿ, ರಾಮ ಗುಹನೊಂದಿಗೆ ವನವಾಸಕ್ಕೆ ತೆರಳುದ ದೃಶ್ಯ, ಶಬರಿ ರಾಮನಿಗೆ ಹಣ್ಣು ತಿನ್ನಿಸುವುದು, ರಾಮನ ತೊಡೆಯ ಮೇಲೆ ಮಲಗಿದ ಲಕ್ಷ್ಮಣ, ಸಂಜೀವಿನಿ ತರುತ್ತಿರುವ ಹನುಮಂತ, ಬೆಣ್ಣೆ ಕದಿಯುವ ಕೃಷ್ಣ, ಗೊಪಿಕಾ ಸ್ತ್ರೀಯರ ಜತೆ ಆಡುತ್ತಿರುವ ಕೃಷ್ಣ, ಮದುವೆ, ಹೆಣ್ಣಿನ ದೈನಂದಿನ ಕಾಯಕ, ಒಂಟೆ, ಕುದುರೆ, ಚನ್ನಪಟ್ಟಣದ ಬೊಂಬೆ, ವಿವಿಧ ದೇಶವಾಸಿಗಳ ದಿರಿಸುಗಳು, ಯೋಧರು, ಬುಡಕಟ್ಟು ಜನರು, ಮೈಸೂರು ಅರಮನೆ, ಬದರಿನಾಥ, ಕೇದಾರನಾಥ, ಜಟಾಯು ಮತ್ತು ಶ್ರೀರಾಮರ ಮಿಲನ … ಹೀಗೆ ಗೊಂಬೆಗಳನ್ನು ವಿಶಿಷ್ಟವಾಗಿ ಜೋಡಿಸಿದ್ದಾರೆ.

ಮೂರು ತಲೆಮಾರಿನ ನಂಟನ್ನು ಹೊಂದಿರುವ ಗೊಂಬೆ ಹಬ್ಬವನ್ನು ಆಚರಿಸುತ್ತಿರುವ ಅಶ್ವತ್ಥಮ್ಮ, ‘ತಮ್ಮ ಮನೆಯ ಹೆಣ್ಣುಮಕ್ಕಳೆಲ್ಲರೂ ಸೇರಿ ಗೊಂಬೆ ಜೋಡಿಸಿಟ್ಟಿದ್ದಾರೆ. ಮನೆಗೆ ಬಂದವರಿಗೆ ಹಬ್ಬದ ಸಿಹಿ ತಿಂಡಿ ನೀಡುತ್ತಾರೆ’ಎಂದು ಹೇಳಿದರು.

‘ದಸರಾ ಹಬ್ಬದ ಸಂದರ್ಭದಲ್ಲಿ ಮನೆಯಲ್ಲಿ ಸುಮಾರು 38 ವರ್ಷಗಳಿಂದಲ್ಲೂ ಗೊಂಬೆಗಳನ್ನಿಡುವ ಸಂಪ್ರದಾಯವಿದೆ. ನಮ್ಮಜ್ಜಿ ಗೊಂಬೆ ಇಡುವುದನ್ನು ನಮಗೆ ಕಲಿಸಿಕೊಟ್ಟರು. ಮಕ್ಕಳು ಜತೆಗೂಡುತ್ತಾರೆ. ಎಲ್ಲರೂ ಕಲೆತು ಗೊಂಬೆಗಳನ್ನು ಜೋಡಿಸುವ ಸಂಭ್ರಮ ಸದಾ ನೆನಪಿನಲ್ಲಿ ಉಳಿಯುತ್ತದೆ’ ಎಂದು ಎಂ.ಕೆ.ರವಿಪ್ರಸಾದ್‌ ಹೇಳಿದರು.

ನಾಡಿನ ಕಲೆ, ಸಾಹಿತ್ಯ, ಸಂಸ್ಕೃತಿ ಹಾಗೂ ಪುರಾಣದ ಪರಿಚಯವನ್ನು ಗೊಂಬೆಗಳ ಮೂಲಕ ಮಾಡಿಕೊಡುವ ಪ್ರಯತ್ನ ಎನ್ನುತ್ತಾರೆ ಗೃಹಿಣಿ ದಿವ್ಯಾ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT