ಶನಿವಾರ, 28 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮಾವನ ಮನೆಗೆ ತೆರಳಲು 112ಕ್ಕೆ ಕರೆ ಮಾಡಿ ಪೊಲೀಸ್ ವಾಹನ ಕರೆಸಿಕೊಂಡ!

Published : 28 ಸೆಪ್ಟೆಂಬರ್ 2024, 20:07 IST
Last Updated : 28 ಸೆಪ್ಟೆಂಬರ್ 2024, 20:07 IST
ಫಾಲೋ ಮಾಡಿ
Comments

ಕೊಟ್ಟಿಗೆಹಾರ (ಚಿಕ್ಕಮಗಳೂರು): ಇಲ್ಲಿಗೆ ಸಮೀಪದ ತರುವೆ ಗ್ರಾಮದ ವ್ಯಕ್ತಿಯೊಬ್ಬರು ತನ್ನ ಮಾವನ ಮನೆಗೆ ತೆರಳಲು ಪೊಲೀಸ್ ಸಹಾಯವಾಣಿ 112ಕ್ಕೆ ಕರೆ ಮಾಡಿ ಪೊಲೀಸ್ ವಾಹನವನ್ನು ಕರೆಸಿಕೊಂಡಿದ್ದಾರೆ.

ಮಾವನ ಮನೆಯಲ್ಲಿ ಹಮ್ಮಿಕೊಂಡಿದ್ದ ಪಿತೃಪಕ್ಷದ ಕಾರ್ಯಕ್ರಮದ ಊಟಕ್ಕೆ ತೆರಳಲು ಅಶೋಕ ಎಂಬುವರು ಸಹಾಯವಾಣಿಗೆ ಕರೆ ಮಾಡಿ ಪೊಲೀಸ್ ವಾಹನವನ್ನು ತರಿಸಿಕೊಂಡವರು.

ಬಣಕಲ್ ಸಮೀಪದ ಫಲ್ಗುಣಿಯಲ್ಲಿರುವ ಮಾವನ ಮನೆಗೆ ತೆರಳಲು ಕೊಟ್ಟಿಗೆಹಾರದಲ್ಲಿ ಯಾವುದೇ ವಾಹನ ಸಿಕ್ಕಿರಲಿಲ್ಲ. ಧಾರಾಕಾರವಾಗಿ ಮಳೆಯೂ ಸುರಿಯುತ್ತಿದ್ದರಿಂದ ವಾಹನಗಳ ಓಡಾಟವೂ ಕಡಿಮೆ ಇತ್ತು. ಕಾದು ಸುಸ್ತಾದ ಅಶೋಕ್‌, ಪೊಲೀಸ್ ಸಹಾಯವಾಣಿಗೆ ಕರೆ ಮಾಡಿ ‘ಮನೆಯಲ್ಲಿ ತುಂಬಾ ಗಲಾಟೆಯಾಗುತ್ತಿದೆ’ ಎಂದು ಹೇಳಿ ಪೊಲೀಸ್ ವಾಹನವನ್ನು ಕರೆಸಿಕೊಂಡಿದ್ದಾರೆ. ಕೂಡಲೇ ಕೊಟ್ಟಿಗೆಹಾರಕ್ಕೆ ಬಂದ ಪೊಲೀಸರು ಅಶೋಕ ಅವರನ್ನು ಕಂಡು, ‘ಏನು ಗಲಾಟೆ, ಮನೆಗೆ ಹೋಗೋಣ ಬನ್ನಿ’ ಎಂದು ಹೇಳಿದ್ದಾರೆ.

ಈ ವೇಳೆ ಅಶೋಕ್‌, ‘ಏನೂ ಗಲಾಟೆ ಇಲ್ಲ ಸರ್. ಮಾವನ ಮನೆಯಲ್ಲಿ ಕಾರ್ಯಕ್ರಮ ಇದೆ. ಯಾವುದೇ ವಾಹನ ಆ ಕಡೆ ಹೋಗುತ್ತಿಲ್ಲ. ನೀವು ಬಂದಿದ್ದು ಒಳ್ಳೆಯದಾಯಿತು. ನನ್ನನ್ನು ಫಲ್ಗುಣಿ ವರೆಗೆ ಬಿಟ್ಟುಬಿಡಿ’ ಎಂದು ಪೊಲೀಸರಿಗೆ ಮನವಿ ಮಾಡಿದ್ದಾರೆ. ಅಶೋಕ್‌ ಮಾತು ಕೇಳಿ ಅಚ್ಚರಿಗೊಂಡ ಪೊಲೀಸರು ಅವರಿಗೆ ಬುದ್ಧಿ ಹೇಳಿದ್ದಾರೆ.

‘ಸರ್ಕಾರದ ವಾಹನ ಇರುವುದು ಸ್ವಂತದ ಬಳಕೆಗೆ ಅಲ್ಲ. ಇನ್ನೊಮ್ಮೆ ಈ ರೀತಿ ಕರೆ ಮಾಡಿದರೆ ನಿನ್ನ ಮೇಲೆ ಪ್ರಕರಣ ದಾಖಲಿಸಲಾಗುತ್ತದೆ’ ಎಂದು ಎಚ್ಚರಿಸಿದ್ದಾರೆ.

ಬಳಿಕ ಚಾರ್ಮಾಡಿ ಕಡೆಯಿಂದ ಬಂದ ಲಾರಿಯೊಂದನ್ನು ನಿಲ್ಲಿಸಿ, ಅಶೋಕ್ ಅವರನ್ನು ಪೊಲೀಸರು ಫಲ್ಗುಣಿಗೆ ಕಳುಹಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT