ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮೊಳಕಾಲ್ಮುರು: ಕೊಚ್ಚೆ, ದುರ್ವಾಸನೆ ನಡುವೆಯೇ ವಹಿವಾಟು

ಶೆಡ್‌ಗಳು ಇಲ್ಲದೇ ಸಮಸ್ಯೆ l ಸಂತೆ ಮೈದಾನದಲ್ಲಿ ಸೌಲಭ್ಯ ಕಲ್ಪಿಸಲು ಆಗ್ರಹ
Published 13 ಜೂನ್ 2024, 6:50 IST
Last Updated 13 ಜೂನ್ 2024, 6:50 IST
ಅಕ್ಷರ ಗಾತ್ರ

ಮೊಳಕಾಲ್ಮುರು: ಬೇಕಾಬಿಟ್ಟಿಯಾಗಿ ನಿಂತಿರುವ ಕೊಚ್ಚೆ ನೀರು, ಸಹಿಸಲಾಗದಷ್ಟು ದುರ್ವಾಸನೆ, ಸೊಳ್ಳೆ, ನೊಣಗಳ ಕಾಟ, ಕೆಸರಿನಲ್ಲಿ ಸಿಕ್ಕಿ ಹಾಕಿಕೊಳ್ಳುವ ವಾಹನಗಳ... ಇಂತಹ ಪರಿಸ್ಥಿತಿಯ ನಡುವೆ ತರಕಾರಿ ಎಲ್ಲಿ ಇಟ್ಟುಕೊಂಡು ಮಾರಾಟ ಮಾಡಬೇಕು ಎಂಬ ವ್ಯಾಪಾರಿಗಳ ಪ್ರಶ್ನೆ.

ಇದು ಕಾಣಸಿಕ್ಕಿದ್ದು ಬುಧವಾರ ಇಲ್ಲಿ ನಡೆದ ವಾರದ ಸಂತೆ ಮೈದಾನದಲ್ಲಿ. ಹಲವು ವರ್ಷಗಳಿಂದ ಹಾನಗಲ್-‌ ರಾಯದುರ್ಗ ಮುಖ್ಯರಸ್ತೆಯಲ್ಲಿ ನಡೆಯುತ್ತಿದ್ದ ವಾರದ ಸಂತೆಯನ್ನು 5 ತಿಂಗಳ ಹಿಂದೆ ತಾಲ್ಲೂಕು ಆಡಳಿತ, ಪಟ್ಟಣ ಪಂಚಾಯಿತಿಯು ಏಕಾಏಕಿ ಕೃಷಿ ಇಲಾಖೆ ಸಮೀಪದ ಗೋಮಾಳ ಪ್ರದೇಶಕ್ಕೆ ಸ್ಥಳಾಂತರ ಮಾಡಿತು. ಸ್ವಲ್ಪ ಮಟ್ಟಿಗೆ ನೆಲಸಮತಟ್ಟು ಮಾಡಿದ್ದು ಬಿಟ್ಟರೆ ಯಾವ ಸೌಕರ್ಯಗಳನ್ನೂ ಕಲ್ಪಿಸಿಲ್ಲ. ಕೊನೇಪಕ್ಷ ಸಂಪರ್ಕ ರಸ್ತೆಯನ್ನು ಸಹ ಸುಸಜ್ಜಿತವಾಗಿ ಮಾಡಿಕೊಟ್ಟಿಲ್ಲ ಎಂಬುದು ವ್ಯಾಪಾರಿಗಳು ಆರೋಪಿಸುತ್ತಾರೆ.

‘ಕೆಲ ದಿನಗಳಿಂದ ಬೀಳುತ್ತಿರುವ ಮಳೆಗೆ ಸಂತೆ ಮೈದಾನವು ಕೊಚ್ಚೆ ಗುಂಡಿಯಾಗಿ ಪರಿಣಮಿಸಿದೆ. ಆವರಣದಲ್ಲಿ ಬೇಕಾಬಿಟ್ಟಿಯಾಗಿ ನೀರು ನಿಂತುಕೊಂಡು ಸೊಳ್ಳೆ, ನೊಣ ಉತ್ಪತ್ತಿ ತಾಣವಾಗಿದೆ. ವ್ಯಾಪಾರಿಗಳು ಕೂರಲು ಸ್ಥಳವಿಲ್ಲದಂತಾಗಿದೆ. ಕೆಸರಿನಲ್ಲಿ ತರಕಾರಿ ಹಾಕಿಕೊಂಡು ಮಳೆಯಲ್ಲಿ ನೆನೆಯುತ್ತಾ ವ್ಯಾಪಾರ ಮಾಡಬೇಕಿದೆ. ಇಂತಹ ಸ್ಥಿತಿಯಲ್ಲಿ ಗ್ರಾಹಕರು ಸಹ ಬರುತ್ತಿಲ್ಲ. ಇದರಿಂದ ತಂದಿರುವ ತರಕಾರಿ ಉಳಿದು ನಷ್ಟವಾಗುತ್ತಿದೆ’
ಎಂದು ವ್ಯಾಪಾರಿ ಪಾರ್ವತಮ್ಮ ದೂರಿದರು.

‘ಈಗಿನ ಸಂತೇ ಮೈದಾನದಲ್ಲಿ ಕೂರಲು ಕಟ್ಟೆ ವ್ಯವಸ್ಥೆ, ನೆರಳಿನ ವ್ಯವಸ್ಥೆ, ರಸ್ತೆ ನಿರ್ಮಾಣ, ಚರಂಡಿ ಸೇರಿದಂತೆ ಯಾವುದೇ ಸೌಲಭವಿಲ್ಲ. ಆದರೂ ಪಟ್ಟಣ ಪಂಚಾಯಿತಿ ಜಕಾತಿ ವಸೂಲಿ ಮಾತ್ರ ಕಡ್ಡಾಯವಾಗಿ ಮಾಡುತ್ತಿದೆ. ಈಗಿನ ಸ್ಥಿತಿಯಲ್ಲಿ ಇಲ್ಲಿ ವ್ಯಾಪಾರ ಮಾಡಲು ಸಾಧ್ಯವಿಲ್ಲ. ₹40,000-₹60,000 ಬಂಡವಾಳ ಹಾಕಿ ನಷ್ಟಕ್ಕೀಡಾಗುತ್ತಿದ್ದೇವೆ. ಸೌಲಭ್ಯ ಕಲ್ಪಿಸಿದ ನಂತರ ಇಲ್ಲಿ ವ್ಯಾಪಾರ ಮಾಡುತ್ತೇವೆ, ಮುಂದಿನ ವಾರದಿಂದ ಹಳೆ ಸ್ಥಳದಲ್ಲಿ ವ್ಯಾಪಾರ ಮಾಡುತ್ತೇವೆ’ ಎಂದು ವ್ಯಾಪಾರಿ ಪ್ಯಾರಿ ಎಚ್ಚರಿಸಿದರು.

‘ಮೂಗು ಮುಚ್ಚಿಕೊಂಡು ಓಡಾಡುವ ಸ್ಥಳದಲ್ಲಿ ತಿನ್ನುವ ಹಣ್ಣು ತರಕಾರಿ ಇಟ್ಟುಕೊಂಡಲ್ಲಿ ಯಾರಿಗೆ ತಾನೆ ಕೊಳ್ಳಲು ಮನಸ್ಸು ಬರುತ್ತದೆ? ಹೆಸರಿಗೆ ಮಾತ್ರ ತಾಲ್ಲೂಕು ಕೇಂದ್ರದ ವಾರದ ಸಂತೆ, ಇಲ್ಲಿನ ಅವ್ಯವಸ್ಥೆ ನೋಡಿದಲ್ಲಿ ಈ ಸಂತೆಗೆ ವ್ಯಾಪಾರ ಮಾಡಲು ಬರುವುದೇ ಬೇಡ ಎನ್ನುವಂತಾಗಿದೆ. ಹೀಗೇ ಮುಂದುವರಿದಲ್ಲಿ ಮುಂದಿನ ದಿನಗಳಲ್ಲಿ ವ್ಯಾಪಾರಕ್ಕೆ ಬರುವುದಿಲ್ಲ‘ ಎಂದು ವ್ಯಾಪಾರಿ ಜ್ಯೋತಿ ದೂರಿದರು.

‘ನಗರೋತ್ಥಾನ ಯೋಜನೆಯಲ್ಲಿ ಸಂತೆ ಮೈದಾನ ಅಭಿವೃದ್ಧಿಯನ್ನು ಸೇರಿಸುವಂತೆ ಶಾಸಕ ಎನ್.ವೈ. ಗೋಪಾಲಕೃಷ್ಣ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಅನುದಾನ ಮಂಜೂರಾದ ತಕ್ಷಣ ಕ್ರಿಯಾಯೋಜನೆ ರೂಪಿಸಿ ಕಾಮಗಾರಿ ಆರಂಭವಾಗಲಿದೆ. ನೆರಳು, ಕುಡಿಯುವ ನೀರು, ಶೌಚಾಲಯ, ರಸ್ತೆ, ಚರಂಡಿ ಎಲ್ಲದಕ್ಕೂ ಇದರಲ್ಲಿ ಅವಕಾಶ ಕಲ್ಪಿಸಲು ಶಾಸಕ ಎನ್‌ ವೈಜಿ ಸೂಚಿಸಿದ್ದಾರೆ’ ಎಂದು ಪಟ್ಣಣ ಪಂಚಾಯಿತಿ ನಾಮ ನಿರ್ದೇಶಿತ ಸಮಸ್ಯ ಜಿ. ಪ್ರಕಾಶ್‌ ತಿಳಿಸಿದರು.

ಕೆಸರಿನ ನಡುವೆಯೇ ವ್ಯಾಪಾರ ಚಟುವಟಿಕೆ ನಡೆಯುತ್ತಿರುವ ಮೊಳಕಾಲ್ಮುರಿನ ವಾರದ ಸಂತೆಮೈದಾನದ ದೃಶ್ಯ
ಕೆಸರಿನ ನಡುವೆಯೇ ವ್ಯಾಪಾರ ಚಟುವಟಿಕೆ ನಡೆಯುತ್ತಿರುವ ಮೊಳಕಾಲ್ಮುರಿನ ವಾರದ ಸಂತೆಮೈದಾನದ ದೃಶ್ಯ
₹ 1 ಕೋಟಿ ಅನುದಾನ ಮಂಜೂರು
‘ನಗರೋತ್ಥಾನ ಯೋಜನೆ ಅಡಿ ಮೈದಾನದಲ್ಲಿ ಸೌಲಭ್ಯ ಕಲ್ಪಿಸಲು ₹ 1 ಕೋಟಿ ಅನುದಾನ ಮಂಜೂರಾಗಿದೆ. ನೀತಿಸಂಹಿತೆ ಇದ್ದ ಕಾರಣ ವಿಳಂಬವಾಗಿದ್ದು ಸಮಿತಿ ಸಭೆ ನಂತರ ಅನುದಾನ ಮಂಜೂರಾಗಲಿದೆ’ ಎಂದು ಪಟ್ಟಣ ಪಂಚಾಯಿತಿ ಸದಸ್ಯ ಎಸ್‌.ಖಾದರ್‌ ಹೇಳಿದರು.  ‘ಅನುದಾನ ಶೀಘ್ರ ಮಂಜೂರು ಮಾಡಿಸಿ ಕಾಮಗಾರಿ ಆರಂಭಿಸಬೇಕು. ಬುಧವಾರ ಆವರಣದಲ್ಲಿ ಕೂರಲು ಆಗದೇ ವ್ಯಾಪಾರಿಗಳು ರಸ್ತೆಬದಿಯಲ್ಲಿ ವಹಿವಾಟು ಮಾಡಿದರು. ಇದು ಮಳೆಗಾಲ ಆರಂಭವಾಗಿದ್ದು ತುರ್ತು ಕ್ರಮ ಕೈಗೊಳ್ಳುವ ಅಗತ್ಯವಿದೆ’ ಎಂದು ರೈತಸಂಘದ ಅಧ್ಯಕ್ ಮರ್ಲಹಳ್ಳಿ ರವಿಕುಮಾರ್‌ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT