ಮಂಗಳವಾರ, 17 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಧರ್ಮಪುರ: ಅವ್ಯವಸ್ಥೆಯ ಆಗರವಾದ ನಾಡ ಕಚೇರಿ

ವಿ. ವೀರಣ್ಣ ಧರ್ಮಪುರ
Published : 12 ಸೆಪ್ಟೆಂಬರ್ 2024, 5:53 IST
Last Updated : 12 ಸೆಪ್ಟೆಂಬರ್ 2024, 5:53 IST
ಫಾಲೋ ಮಾಡಿ
Comments

ಧರ್ಮಪುರ: ರಾಜ್ಯದ ಗಡಿಯಲ್ಲಿರುವ ಧರ್ಮಪುರ ಹೋಬಳಿ ವ್ಯಾಪ್ತಿಯಲ್ಲಿ ಅಭಿವೃದ್ಧಿ ಮರೀಚಿಕೆಯಾಗಿದೆ. ಇಲ್ಲಿನ ನಾಡಕಚೇರಿ ಕಟ್ಟಡ ಹಾಳಾಗಿದ್ದು, ಚಾವಣಿಯ ಸಿಮೆಂಟ್‌ ಉದುರುತ್ತಿದೆ.

ನಾಡ ಕಚೇರಿ ಕಟ್ಟಡದಲ್ಲಿ 7 ಕೊಠಡಿಗಳಿವೆ. ಉಪ ತಹಶೀಲ್ದಾರ್‌ ಕೊಠಡಿ, ಕಂಪ್ಯೂಟರ್, ಗ್ರಾಮ ಲೆಕ್ಕಾಧಿಕಾರಿ, ದಾಖಲೆ ಕೊಠಡಿ, ರಾಜಸ್ವ ನಿರೀಕ್ಷಕರ ಕೊಠಡಿ ಸೇರಿದಂತೆ ಎಲ್ಲಾ ಕೊಠಡಿಗಳೂ ಸೋರುತ್ತಿವೆ. ಗೋಡೆಗಳು ಬಿರುಕು ಬಿಟ್ಟಿವೆ. ಚಾವಣಿಯ ಸಿಮೆಂಟ್ ಉದುರಿ ಬೀಳುತ್ತಿದ್ದು, ನೌಕರರು ಜೀವ ಕೈಯಲ್ಲಿ ಹಿಡಿದು ಕೆಲಸ ಮಾಡುವಂತಾಗಿದೆ.

ಮಳೆ ಬಂತೆಂದರೆ ಇಲ್ಲಿನ ಕಾಗದ, ದಾಖಲೆ ಪತ್ರಗಳು ನೆನೆಯುತ್ತವೆ. ಕಂಪ್ಯೂಟರ್ ಕೊಠಡಿಯ ಚಾವಣಿಯ ಸಿಮೆಂಟ್‌ ಚೂರು ಈಚೆಗೆ ಕಂಪ್ಯೂಟರ್ ಆಪರೇಟರ್ ತಲೆಯ ಮೇಲೆ ಬಿದ್ದಿದ್ದು, ಅವರು ಗಾಯಗೊಂಡಿದ್ದರು.

‘ಈಚೆಗೆ ಸಿಮೆಂಟ್‌ ಚೂರು ತಲೆಯ ಮೇಲೆ ಬಿದ್ದಾಗಿನಿಂದ ಕೊಠಡಿಯಲ್ಲಿ ಕೆಲಸ ಮಾಡಲು ಭಯವಾಗುತ್ತದೆ. ಮೇಲಧಿಕಾರಿಗಳು ಕ್ರಮ ಕೈಗೊಳ್ಳಬೇಕು’ ಎಂದು ಕಂಪ್ಯೂಟರ್ ಆಪರೇಟರ್ ಟಿ. ಸೃಜನ್ ಆತಂಕದಿಂದಲೇ ಹೇಳಿದರು.

ದಾಖಲೆ ಕೊಠಿಯ ಚಾವಣಿ ಹಾಳಾಗಿರುವುದರಿಂದ ಮಳೆ ಬಂದಾಗ ಮಳೆಯ ನೀರು ಸೋರಿ ಸಂಗ್ರಹಿಸಿರುವ ಹಳೆಯ ಕಾಗದ, ಪತ್ರಗಳು ಹಾಳಾಗುತ್ತಿವೆ ಎಂದು ಗ್ರಾಮ ಸಹಾಯಕಿ ನಿರ್ಮಲಾ ‘ಪ್ರಜಾವಾಣಿ’ ಎದುರು ಬೇಸರಿಸಿದರು.

ನಾಡ ಕಚೇರಿ ಕಟ್ಟಡದ ಎದುರು ಮಳೆಯ ನೀರು ಸಂಗ್ರಹವಾಗಿ ಸಾರ್ವಜನಿಕರು ನಿಂತ ನೀರಿನಲ್ಲಿಯೇ ಸಾಗುತ್ತ ಕಚೇರಿಗೆ ಹೋಗಬೇಕು. ಇದರಿಂದ ಸೊಳ್ಳೆಗಳು ಹಾವಳಿ ಹೆಚ್ಚಿದೆ. ಹಂದಿಗಳ ವಾಸಸ್ಥಾನವಾಗಿ ಆವರಣ ಮಾರ್ಪಟ್ಟಿದೆ. ಸೊಳ್ಳೆಗಳ ಕಾಟದಿಂದ ಕಚೇರಿಯಲ್ಲಿ ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಹೆಸರು ಬಹಿರಂಗ ಪಡಿಸಲು ಇಚ್ಚಿಸದ ಸಿಬ್ಬಂದಿಯೊಬ್ಬರು ಹೇಳಿದರು.

ಶೌಚಾಲಯ ಮರೀಚಿಕೆ:

ಕಚೇರಿಯಲ್ಲಿ 10 ಜನ ಮಹಿಳಾ ಸಿಬ್ಬಂದಿ ಸೇರಿದಂತೆ 20 ನೌಕರರು ಕೆಲಸ ಮಾಡುತ್ತಾರೆ. ಆದರೆ, ಇವರಿಗೆ ಶೌಚಾಲಯ ಸೌಲಭ್ಯ ಮರೀಚಿಕೆಯಾಗಿದೆ. ನಾಲ್ಕೈದು ವರ್ಷಗಳಿಂದ ಇವರಿಗೆ ಬಯಲು ಬಹಿರ್ದೆಸೆಯೇ ಅನಿವಾರ್ಯವಾಗಿದೆ.

‘ಗ್ರಾಮ ಬೆಳೆದಂತೆ ರಸ್ತೆ ಪಕ್ಕದಲ್ಲಿ ಗೂಡಂಗಡಿಗಳು ವಿಪರೀತವಾಗಿ ತಲೆ ಎತ್ತಿವೆ. ಇದರಿಂದ ನಾವು ಬಹಿರ್ದೆಸೆಗೆ ಬಯಲಿಗೆ ಹೋಗಲು ಪರದಾಡುವಂತಾಗಿದೆ. ನಾಲ್ಕೈದು ವರ್ಷಗಳಿಂದ ಪಕ್ಕದಲ್ಲಿಯೇ ಇದ್ದ ಪ್ರವಾಸಿ ಮಂದಿರಲ್ಲಿದ್ದ ಶೌಚಾಲಯಕ್ಕೆ ಹೋಗುತ್ತಿದ್ದೆವು. ಒಂದು ವರ್ಷದಿಂದ ಅದಕ್ಕೂ ಬಾಗಿಲು ಹಾಕಿರುವುದರಿಂದ ನಮ್ಮ ಪರಿಸ್ಥಿತಿ ಹೇಳತೀರದು’ ಎಂದು ಮಹಿಳಾ ಸಿಬ್ಬಂದಿ ನೊಂದು ನುಡಿದರು.

ನಿತ್ಯ ಆಸ್ಪತ್ರೆ, ನಾಡ ಕಚೇರಿ, ಗ್ರಾಮ ಪಂಚಾಯಿತಿ ಮತ್ತಿತರ ಇಲಾಖೆಯ ಕೆಲಸಗಳಿಗೆ ಬರುವ ಪುರುಷ ಮತ್ತು ಮಹಿಳಾ ನಾಗರಿಕರಿಗೆ ಧರ್ಮಪುರದಲ್ಲಿರುವ ಸಾರ್ವಜನಿಕ ಶೌಚಾಲಯದ ನಾಮಫಲಕ ಕಾಣಸಿಗುತ್ತದೆ. ಆದರೆ ಸೇವೆಗೆ ಮಾತ್ರ ಇಲ್ಲ.

ಇನ್ನು ಧರ್ಮಪುರ ಮಾರ್ಗವಾಗಿ ನಿತ್ಯ ರಾತ್ರಿ 2ರಿಂದ ಬೆಂಗಳೂರು ಮತ್ತಿತರ ಕಡೆ ಪ್ರಯಾಣಿಸಲು ಸರ್ಕಾರಿ ಮತ್ತು ಖಾಸಗಿ ಬಸ್‌ಗಳ ಸೌಲಭ್ಯವಿದೆ. ಆದರೆ, ಇಲ್ಲಿ ಪ್ರಯಾಣಿಕರಿಗೆ ಬಸ್ ನಿಲ್ದಾಣ ಸೇರಿದಂತೆ ಕನಿಷ್ಠ ಸೌಲಭ್ಯಗಳು ಇಲ್ಲ. ಇದರಿಂದ ಪ್ರಯಾಣಿಕರು ಪರದಾಡುವಂತಾಗಿದೆ.

‘ಧರ್ಮಪುರ 10,000 ಜನಸಂಖ್ಯೆ ಹೊಂದಿದೆ. ಮಜಿರೆ ಗ್ರಾಮಗಳಾದ ಅರಳೀಕೆರೆ, ಕೃಷ್ಣಾಪುರ ಮತ್ತು ಅವಳಿ ಗ್ರಾಮಗಳಾದ ಶ್ರವಣಗೆರೆ ಹಾಗೂ ಪಿ.ಡಿ.ಕೋಟೆ ಹೊಂದಿಕೊಂಡಿದ್ದು ಗ್ರಾಮ ಸಾಕಷ್ಟು ಬೆಳೆದಿದೆ. ಅದಕ್ಕಾಗಿ ಆಡಳಿತದ ಹಿತದೃಷ್ಟಿಯಿಂದ ಧರ್ಮಪುರವನ್ನು ಪಟ್ಟಣ ಪಂಚಾಯಿತಿಯನ್ನಾಗಿ ಮೇಲ್ದರ್ಜೆಗೇರಿಸಬೇಕು. ಆ ಮೂಲಕ ಇಲ್ಲಿ ಅಭಿವೃದ್ಧಿ ಕಾರ್ಯಗಳು ಸಾಕಾರಗೊಳ್ಳಬೇಕು. ಈ ಬಗ್ಗೆ ಜನಪ್ರತಿನಿಧಿಗಳು ಗಮನ ಹರಿಸಬೇಕು’ ಎಂದು ಟಿ.ರಂಗಸ್ವಾಮಿ ಆಗ್ರಹಿಸಿದರು.

ನಾಡ ಕಚೇರಿಯಲ್ಲಿ ಶೌಚಾಲಯ ಇಲ್ಲದಿರುವ ಬಗ್ಗೆ ಮತ್ತು ಚಾವಣಿ ಬಿರುಕು ಬಿಟ್ಟ ಬಗ್ಗೆ ಮೇಲಅಧಿಕಾರಿಗಳ ಗಮನಕ್ಕೆ ತರಲಾಗಿದೆ. ತುರ್ತಾಗಿ ದುರಸ್ತಿ ಮಾಡುವ ಆಶ್ವಾಸನೆ ಸಿಕ್ಕಿದೆ
ಆರ್. ಮಂಜಪ್ಪ ಉಪ ತಹಶೀಲ್ದಾರ್ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT