ಶನಿವಾರ, 6 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮೊಳಕಾಲ್ಮುರು: ಬುನಾದಿ ಬಿಟ್ಟು ಮೇಲೇಳದ ಬಿಇಒ ಕಚೇರಿ ಕಾಮಗಾರಿ

Published 4 ಜುಲೈ 2024, 6:46 IST
Last Updated 4 ಜುಲೈ 2024, 6:46 IST
ಅಕ್ಷರ ಗಾತ್ರ

ಮೊಳಕಾಲ್ಮುರು: ಇಲ್ಲಿನ ಕ್ಷೇತ್ರ ಮಾದರಿ ಸರ್ಕಾರಿ ಹಿರಿಯ ಬಾಲಕರ ಪ್ರಾಥಮಿಕ ಶಾಲಾ ಆವರಣದಲ್ಲಿ ನಿರ್ಮಿಸುತ್ತಿದ್ದ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಕಟ್ಟಡ ಅನುದಾನ ಕೊರತೆಯಿಂದಾಗಿ ಅರ್ಧಕ್ಕೆ ಸ್ಥಗಿತಗೊಂಡಿದೆ.

ಪ್ರಸ್ತುತ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿರುವ ಶಿಥಿಲ ಕಟ್ಟಡದಲ್ಲಿ ದಶಕಗಳಿಂದ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಕಾರ್ಯ ನಿರ್ವಹಿಸುತ್ತಿದೆ. ಮಳೆ ಬಂದರೆ ಸಾಕು, ಸೋರುವ ಈ ಕಟ್ಟಡಕ್ಕೆ ಹಲವು ಸಲ ತೇಪೆ ಹಚ್ಚುವ ಕೆಲಸ ಮಾಡುತ್ತಾ ಬಳಸಿಕೊಳ್ಳಲಾಗುತ್ತಿದೆ. ಸ್ವಂತ ಕಟ್ಟಡ ನಿರ್ಮಿಸಬೇಕು ಎಂಬ ಮನವಿ ಹಲವು ಸಲ ಬಂದಿದ್ದರೂ ಕಾರ್ಯರೂಪಕ್ಕೆ ಬಂದಿರಲಿಲ್ಲ.

2021– 22ನೇ ಸಾಲಿನಲ್ಲಿ ರಾಜ್ಯ ವಲಯ ಕಾರ್ಯಕ್ರಮ ಅಡಿಯಲ್ಲಿ ಸ್ವಂತ ಕಟ್ಟಡ ನಿರ್ಮಿಸಲು ₹ 1.35 ಕೋಟಿ ಅನುದಾನ ಮಂಜೂರಾಗಿತ್ತು. ಆಗಿನ ಕ್ಷೇತ್ರದ ಶಾಸಕರಾಗಿದ್ದ ಬಿ.ಶ್ರೀರಾಮುಲು ಹೊಸ ಕಟ್ಟಡಕ್ಕೆ ಶಂಕುಸ್ಥಾಪನೆ ಮಾಡಿದ್ದರು. ಒಂದು ವರ್ಷದ ಒಳಗೆ ಕಟ್ಟಡ ಪೂರ್ಣಗೊಳಿಸುವ ಭರವಸೆ ಸಿಕ್ಕಿತ್ತು. ಆದರೆ, 3 ವರ್ಷ ಕಳೆದರೂ ಕಟ್ಟಡ ಬುನಾದಿ ಬಿಟ್ಟು ಮೇಲೆ ಏಳದ ಪರಿಣಾಮ ಬಿಇಒ ಕಚೇರಿ ಕಾರ್ಯಗಳಿಗೆ ತೊಂದರೆಯಾಗುತ್ತಿದೆ ಎಂದು ಸಿಬ್ಬಂದಿ ದೂರುತ್ತಾರೆ. ಕಟ್ಟಡದ ನಿರ್ಮಾಣ ಹೊಣೆಯನ್ನು ಭೂಸೇನಾ ನಿಗಮ (ಕೆಆರ್‌ಐಎಲ್)‌ ವಹಿಸಿಕೊಂಡಿದೆ.

‘ಮೊದಲ ಕಂತಾಗಿ ₹ 40 ಲಕ್ಷ ಬಿಡುಗಡೆಯಾಗಿದ್ದು, ಇದರಲ್ಲಿ ನಿರ್ಮಾಣ ಸ್ಥಳದಲ್ಲಿ ಸ್ವಲ್ಪ ಮಣ್ಣು ಕುಸಿಯುತ್ತಿದ್ದ ಕಾರಣ ಆಳವಾದ ಬುನಾದಿ ಹಾಕುವ ಅನಿವಾರ್ಯತೆ ಬಿದ್ದಿತು. ಪರಿಣಾಮ ಬಿಡುಗಡೆಯಾದ ಅನುದಾನ ಬುನಾದಿ ಮಟ್ಟಕ್ಕೆ ಖರ್ಚಾಗಿದೆ. ನಂತರ ಅನುದಾನ ಬಾರದ ಕಾರಣ ಕಾಮಗಾರಿ ಸ್ಥಗಿತಗೊಂಡಿದೆ’ ಎಂದು ಭೂಸೇನಾ ನಿಗಮದ ಚಳ್ಳಕೆರೆ ಕಚೇರಿ ಎಂಜಿನಿಯರ್‌ ನಟರಾಜ್‌ ಹೇಳಿದರು.

‘ಬಾಕಿ ಹಣ ಬಾರದ ಹೊರತು ನಿರ್ಮಾಣ ಕಾರ್ಯ ಸಾಧ್ಯವಿಲ್ಲ. ಈಚೆಗೆ ಅನುದಾನಕ್ಕೆ ಕೋರಿ ರಾಜ್ಯಮಟ್ಟದ ಕಚೇರಿಗೆ ಹೋಗಿ ಬಂದಿದ್ದೇವೆ. ಅನುದಾನ ಬಿಡುಗಡೆ ಹೊಣೆ ಶಿಕ್ಷಣ ಇಲಾಖೆಗೆ ಸಂಬಂಧಪಟ್ಟಿದ್ದು’ ಎಂದು ಅವರು ತಿಳಿಸಿದರು. 

‘ತಾಲ್ಲೂಕಿನಲ್ಲಿ 150ಕ್ಕೂ ಹೆಚ್ಚು ಶಿಕ್ಷಕರ ಕೊರತೆ ಇದೆ. ಕಾಯಂ ಶಿಕ್ಷಕರು ಇಲ್ಲದ 10ಕ್ಕೂ ಹೆಚ್ಚು ಶಾಲೆಗಳಿವೆ. ಆಂಧ್ರ ಗಡಿಗೆ ಹೊಂದಿಕೊಂಡಿರುವ ಈ ತಾಲ್ಲೂಕಿನಲ್ಲಿ ಸಾಕಷ್ಟು ಶೈಕ್ಷಣಿಕ ಸಮಸ್ಯೆಗಳು ಇವೆ. ಅತಿಥಿ ಶಿಕ್ಷಕರಿಂದ ಬೋಧನಾ ಕಾರ್ಯ ನಡೆಯುತ್ತಿದೆ. ಶಿಕ್ಷಣಕ್ಕೆ ಆದ್ಯತೆ ನೀಡಿ ಎಂದು ವೇದಿಕೆಗಳಲ್ಲಿ ಕೇಳಿ ಬರುವ ಭಾಷಣಗಳು ಬಿಇಒ ಕಚೇರಿ ಕಟ್ಟಡದ ಸ್ಥಿತಿಯನ್ನು ನೋಡಿದರೆ ಅಪಹಾಸ್ಯ ಮೂಡಿಸುತ್ತಿದೆ’ ಎಂದು ಕೆಲ ಶಿಕ್ಷಕರು ಹೇಳುತ್ತಾರೆ.

‘ಈಗಿರುವ ಕಟ್ಟಡ ತುಂಬಾ ಕಿಷ್ಕಿಂಧೆಯಾಗಿದ್ದು, ಮಳೆ ಬಂದರೆ ಕೆಲ ಭಾಗ ಸೋರುತ್ತದೆ. ಇದರಿಂದ ಕಡತಗಳ ಸಂರಕ್ಷಣೆ ಮಾಡುವುದು ಕಷ್ಟವಾಗಿದೆ. ಜತೆಗೆ ಸಿಬ್ಬಂದಿ ಸುಲಲಿತವಾಗಿ ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ. ಸಭೆಗಳನ್ನು ಮಾಡಲು ಸಾರ್ವಜನಿಕರು ಬಂದಲ್ಲಿ ಸಮಸ್ಯೆ ಆಲಿಸಲು ಆಗುತ್ತಿಲ್ಲ. ಹೊಸ ಕಟ್ಟಡ ಸ್ಥಗಿತದ ಬಗ್ಗೆ ಬಾಕಿ ಅನುದಾನ ಬಿಡುಗಡೆಗೆ ಡಿಡಿಪಿಐ ಕಚೇರಿಗೆ ಮನವಿ ಸಲ್ಲಿಸಲಾಗಿದೆ’ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ನಿರ್ಮಲಾದೇವಿ ತಿಳಿಸಿದರು.

ಈ ಕಟ್ಟಡದ ಜತೆಗೆ ದಾವಣಗೆರೆ ಜಿಲ್ಲೆಯ ಚನ್ನಗಿರಿ ಹಾಗೂ ಮಂಡ್ಯ ಜಿಲ್ಲೆ ಪಾಂಡವಪುರದಲ್ಲಿ ಸಹ ಬಿಇಒ ಕಚೇರಿ ನಿರ್ಮಾಣಕ್ಕೆ ಮಂಜೂರಾತಿ ಸಿಕ್ಕಿತ್ತು. ಇದರಲ್ಲಿ ಚನ್ನಗಿರಿ ಕಟ್ಟಡ ಸೇವೆಗೆ ನೀಡಲಾಗಿದೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

ಮಳೆ ಬಂದರೆ ಸೋರುತ್ತಿರುವ ಹಳೇ ಕಟ್ಟಡ ಕಡತಗಳನ್ನು ಸಂರಕ್ಷಣೆ ಮಾಡುವುದೇ ಸವಾಲು ಹಲವು ಬಾರಿಯ ಮನವಿಗೂ ಈಡೇರದ ಬೇಡಿಕೆ
- ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಕಾಮಗಾರಿ ಅರ್ಧಕ್ಕೆ ನಿಂತಿರುವ ವಿಷಯ ಗಮನಕ್ಕೆ ಬಂದಿದೆ. ಯಾವ ಕಾರಣಕ್ಕೆ ಕೆಲಸ ನಿಂತಿದೆ ಎಂಬುದನ್ನು ಪರಿಶೀಲಿಸಿ ಕ್ರಮ ವಹಿಸಲಾಗುವುದು
ಎನ್‌.ವೈ.ಗೋಪಾಲಕೃಷ್ಣ ಶಾಸಕ ಮೊಳಕಾಲ್ಮುರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT