ಅಂತ್ಯಕ್ರಿಯೆಯಲ್ಲಿ ಧನ್ಯತೆ ಕಂಡ ಮಂಜುನಾಥ್

ಚಿತ್ರದುರ್ಗ: ‘ಶವಸಂಸ್ಕಾರಕ್ಕೆ ಪೂರ್ವಜರು ವಿಧಿವಿಧಾನ ರೂಪಿಸಿದ್ದಾರೆ. ದುಃಖದ ಮಡುವಿನಲ್ಲಿ ಸಿಲುಕಿದ ಕುಟುಂಬ ಗೌರವಯುತ ಅಂತ್ಯಕ್ರಿಯೆ ಬಯಸುತ್ತದೆ. ಇಂತಹ ನಂಬಿಕೆಯನ್ನೇ ಕೋವಿಡ್ ಬುಡಮೇಲು ಮಾಡಿಬಿಟ್ಟಿತು. ವ್ಯಕ್ತಿಯನ್ನು ಕಳೆದುಕೊಂಡ ಕುಟುಂಬದ ಭಾವನೆಗೆ ಧಕ್ಕೆಯಾಗದ ರೀತಿಯಲ್ಲಿ ಅಂತ್ಯಕ್ರಿಯೆ ನೆರವೇರಿಸುವುದು ನಿಜಕ್ಕೂ ಸವಾಲಾಗಿತ್ತು...’

ಕೋವಿಡ್ನಿಂದ ಮೃತಪಟ್ಟವರ ಶವಸಂಸ್ಕಾರ ಮಾಡಿದ ಇ.ಮಂಜುನಾಥ ಅವರ ಮಾತಿನಲ್ಲಿ ದುಗುಡವಿತ್ತು. ಜೀವಭಯದ ನಡುವೆ ಹಲವು ಶವಗಳ ಅಂತ್ಯಕ್ರಿಯೆ ನೆರವೇರಿಸಿದ ಧನ್ಯತೆಯೂ ಇಣುಕುತ್ತಿತ್ತು. ಕೋವಿಡ್ ಕಾರ್ಯವನ್ನು ಯೋಧರಂತೆ ಕಾರ್ಯನಿರ್ವಹಿಸಿದ ತೃಪ್ತಿ ಕೂಡ ಕಾಣುತ್ತಿತ್ತು.

ಜೆ.ಜೆ.ಹಟ್ಟಿಯ ಮಂಜುನಾಥ್ 29ರ ಹರೆಯದ ಯುವಕ. ಪತ್ನಿ, ಇಬ್ಬರು ಮಕ್ಕಳು ಹಾಗೂ ಪೋಷಕರ ತುಂಬು ಸಂಸಾರ. ಏಳನೇ ತರಗತಿವರೆಗೆ ವ್ಯಾಸಂಗ ಮಾಡಿ ಪೌರಕಾರ್ಮಿಕರಾಗಿ ನಗರಸಭೆ ಸೇರಿದರು. ಕೊರೊನಾ ಸೋಂಕಿನ ಭೀತಿಯ ನಡುವೆ ಧೈರ್ಯದಿಂದ ಬೀದಿಗೆ ಇಳಿದರು. ಕೋವಿಡ್ನಿಂದ ಮೃತಪಟ್ಟವರ ಅಂತ್ಯಕ್ರಿಯೆಯಲ್ಲಿ ಕೊಂಚ ಅಳುಕಿಲ್ಲದೆ ತೊಡಗಿಸಿಕೊಂಡರು.

‘ಆಸ್ಪತ್ರೆ ಸಿಬ್ಬಂದಿ ದೂರವಾಣಿ ಕರೆ ಮಾಡಿ ಮೃತರ ಬಗ್ಗೆ ಮಾಹಿತಿ ನೀಡುತ್ತಿದ್ದರು. ಆದೇಶ ಬರುತ್ತಿದ್ದಂತೆ ಸ್ಮಶಾನಕ್ಕೆ ತೆರಳಿ ಕುಣಿ ಸಿದ್ಧ ಮಾಡುತ್ತಿದ್ದೆವು. ಪಿಪಿಇ ಕಿಟ್ ಧರಿಸಿ ಶವಸಂಸ್ಕಾರಕ್ಕೆ ಸಿದ್ಧರಾಗುತ್ತಿದ್ದೆವು. ಆಸ್ಪತ್ರೆಯ ‘ಡಿ’ ಗ್ರೂಪ್ ಸಿಬ್ಬಂದಿ ಕೈಜೋಡಿಸುತ್ತಿದ್ದರು. ಮೃತರ ಸಂಬಂಧಿಕರು ದೂರದಿಂದ ನೋಡುತ್ತಿದ್ದರು. ಜಾಗರೂಕತೆಯಿಂದ ಶವವನ್ನು ಕುಣಿಗೆ ಇಳಿಸುತ್ತಿದ್ದೆವು’ ಎಂದರು ಮಂಜುನಾಥ್.

ಆರಂಭದಲ್ಲಿ ಇವರ ಕುಟುಂಬದಲ್ಲಿಯೂ ಆತಂಕ ಮೂಡಿತ್ತು. ಕೆಲಸ ಬಿಡುವಂತೆ ಒತ್ತಡ ಬಂದಿತ್ತು. ಕುಟುಂಬದ ಸದಸ್ಯರ ಮನವೊಲಿಸಿ ಮುನ್ನೆಚ್ಚರಿಕೆಗೆ ಒತ್ತು ನೀಡಿದ್ದರು. ಮನೆಗೆ ತೆರಳಿದ ಬಳಿಕ ಬಟ್ಟೆಗಳನ್ನು ಬಿಸಿನೀರಿನಲ್ಲಿ ಇಟ್ಟು, ತೊಳೆಯುತ್ತಿದ್ದರು. ಸ್ನಾನ ಮುಗಿಸಿದ ಬಳಿಕವೇ ಮನೆ ಪ್ರವೇಶಿಸುತ್ತಿದ್ದರು.

ಸ್ವಚ್ಛತೆಗೆ ಶ್ರಮಿಸಿದ ರವಿಕುಮಾರ್

ಚಿತ್ರದುರ್ಗ: ಕೋವಿಡ್ ನಿಯಂತ್ರಣಕ್ಕಾಗಿ ಆರಂಭದ ದಿನಗಳಲ್ಲಿ ಸ್ವಚ್ಛತೆಗೆ ಹೆಚ್ಚು ಆದ್ಯತೆ ನೀಡಲಾಯಿತು. ನಗರ ವ್ಯಾಪ್ತಿಯ ಕ್ವಾರಂಟೈನ್ ಕೇಂದ್ರ ಸ್ವಚ್ಛಗೊಳಿಸುವ ಕೆಲಸದಲ್ಲಿ ಪ್ರಮುಖ ಪಾತ್ರ ವಹಿಸಿದ ನಗರಸಭೆ ಪೌರಕಾರ್ಮಿಕ ರವಿಕುಮಾರ್ ಸೇವೆ ಅನನ್ಯ.

ಇವರಿಗೆ 28 ವರ್ಷ. ತಂದೆ-ತಾಯಿ ಇಬ್ಬರನ್ನೂ ಚಿಕ್ಕ ವಯಸ್ಸಿನಲ್ಲೇ ಕಳೆದುಕೊಂಡ ಇವರು ಓದಿದ್ದು ಐದನೇ ತರಗತಿ. ಶಿಕ್ಷಣ ಮುಂದುವರಿಸಲು ಆರ್ಥಿಕ ಸಮಸ್ಯೆ ಅಡ್ಡಿಯಾಯಿತು. ಕುಟುಂಬದ ಜವಾಬ್ದಾರಿ ನಿರ್ವಹಿಸಲು 2009ರಲ್ಲಿ ಅನಿವಾರ್ಯವಾಗಿ ಪೌರಕಾರ್ಮಿಕ ಕೆಲಸ ಸೇರಿದರು.

‘ಎಂತಹ ಕೆಲಸಕ್ಕೆ ಸೇರಿಕೊಂಡೆ’ ಎಂದು ಬೇಸರ ಉಂಟಾಗಿತ್ತು. ಆದರೆ, ಒಪ್ಪೊತ್ತಿನ ಊಟಕ್ಕೆ ಬೇರೆ ದಾರಿ ಇರಲಿಲ್ಲ. ನಗರದ ಸೌಂದರ್ಯ ಕಾಪಾಡುವಲ್ಲಿ ಪೌರಕಾರ್ಮಿಕರ ಪಾತ್ರ ಎಷ್ಟೆಂಬುದನ್ನು ಹಂತ ಹಂತವಾಗಿ ಅರಿತ ನಂತರ ಈ ಕೆಲಸದ ಬಗ್ಗೆ ಹೆಮ್ಮೆ ಪಡತೊಡಗಿದೆ’ ಎನ್ನುತ್ತಾರೆ ರವಿಕುಮಾರ್.

12 ವರ್ಷಗಳ ವೃತ್ತಿಯ ಅನುಭವ ಹೊಂದಿರುವ ಇವರು ನಗರಸಭೆ ವಹಿಸುವ ಯಾವುದೇ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿರ್ವಹಿಸುತ್ತಿದ್ದರು. ಇದನ್ನು ಮನಗಂಡು ಕ್ವಾರಂಟೈನ್ ಕೇಂದ್ರ ಹಾಗೂ ಆಸ್ಪತ್ರೆಯ ಹೊರಭಾಗದ ಸ್ವಚ್ಛತೆಗಾಗಿ ಮೂರು ತಿಂಗಳ ಅವಧಿಗೆ ಇವರನ್ನು ನಗರಸಭೆ ನಿಯೋಜಿಸಿತು. ಈ ಕೆಲಸವನ್ನು ರವಿಕುಮಾರ್ ಪ್ರಾಮಾಣಿಕವಾಗಿ ಮಾಡಿದ್ದಾರೆ.

ಕೋವಿಡ್ ಭೀತಿಯ ನಡುವೆಯೂ ಕ್ವಾರಂಟೈನ್ ಕೇಂದ್ರಗಳನ್ನು ಸಂಪೂರ್ಣ ಸ್ಯಾನಿಟೈಸ್ ಮಾಡಿದ್ದಾರೆ. ಕೋವಿಡ್ ಆಸ್ಪತ್ರೆಯ ಹೊರಭಾಗದಲ್ಲೂ ಸ್ಯಾನಿಟೈಸ್ ಮಾಡುವಲ್ಲಿ ಶ್ರಮಿಸಿದ್ದಾರೆ. ಮೊದಲಿದ್ದ ಭಯ ಕ್ರಮೇಣ ಕಡಿಮೆಯಾಗಿ ಮೇ ತಿಂಗಳಿಂದ ಜುಲೈ ಅಂತ್ಯದವರೆಗೂ ನೀಡಿದ್ದ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸಿದ್ದಾರೆ.

ನಗರದ ತ್ಯಾಜ್ಯ ವಿಲೇವಾರಿಗಾಗಿ ಬೆಳಿಗ್ಗೆ 6ರಿಂದ ಮಧ್ಯಾಹ್ನ 12ರ ವರೆಗೂ ರಸ್ತೆಗಿಳಿಯುವ ಪೌರಕಾರ್ಮಿಕರು ನಮ್ಮ ನಡುವಿನ ಅಪರೂಪದ ಸಾಧಕರ ಸಾಲಿನಲ್ಲಿ ನಿಂತಿದ್ದಾರೆ.

ಕೊರೊನಾ ವಾರಿಯರ್ ನರ್ಸ್ ಸೌಮ್ಯಾ

ಚಿತ್ರದುರ್ಗ: ಕೊರೊನಾ ಸೋಂಕಿತರನ್ನು ಗುಣಪಡಿಸುವಲ್ಲಿ ಪ್ರಾಮಾಣಿಕವಾಗಿ ಶ್ರಮಿಸಿದ ಜಿಲ್ಲಾ ಆಸ್ಪತ್ರೆಯ ಸ್ಟಾಫ್ ನರ್ಸ್ ಜಿ.ಎ.ಸೌಮ್ಯಾ ಅಪರೂಪದ ಸಾಧಕಿ.

ಚಿತ್ರದುರ್ಗ ತಾಲ್ಲೂಕಿನ ಕೊಡಗವಳ್ಳಿ ಗ್ರಾಮದಲ್ಲಿ ಜನಿಸಿದ ಇವರಿಗೆ 25 ವರ್ಷ. ತಂದೆ ಅಣ್ಣೇಶ್, ತಾಯಿ ಪ್ರೇಮಾ. ಜಿಲ್ಲಾ ಆಸ್ಪತ್ರೆಯ ಸರ್ಕಾರಿ ಶುಶ್ರೂಷಕರ ತರಬೇತಿ ಶಾಲೆಯಲ್ಲಿ ಜಿಎನ್ಎಂ ಮುಗಿಸಿದ್ದಾರೆ. ಕುಟುಂಬದಲ್ಲಿನ ಆರ್ಥಿಕ ತೊಂದರೆಯಿಂದಾಗಿ ಕೋವಿಡ್ ಕರ್ತವ್ಯಕ್ಕೆ ಸೇರಿಕೊಂಡಿದ್ದಾರೆ. ಸೇವೆ ಜತೆಗೆ ಬಿಎಸ್ಸಿ ನರ್ಸಿಂಗ್ ಪದವಿ ವ್ಯಾಸಂಗವನ್ನೂ ಮುಂದುವರಿಸಿದ್ದಾರೆ.

ಜಿಲ್ಲಾ ಕೋವಿಡ್–19 ಆಸ್ಪತ್ರೆಗೆ ಕರ್ತವ್ಯಕ್ಕೆ ನಿಯೋಜಿಸಿದಾಗ ಸೋಂಕಿತರನ್ನು ಗುಣಪಡಿಸುವ ಮೊದಲ ತಂಡದಲ್ಲಿ ಇವರೂ ಇದ್ದರು. ಪಿಪಿಇ ಕಿಟ್ ಧರಿಸಿದ್ದರೂ ಮೊದಲೆರಡು ದಿನ ತುಂಬಾ ಭೀತಿಗೆ ಒಳಗಾಗಿದ್ದರು. ಆನಂತರ ನಿರ್ಭೀತಿಯಿಂದ ಕಾರ್ಯ ನಿರ್ವಹಿಸಿದ್ದಾರೆ.

ಕೊರೊನಾ ಸೋಂಕಿತರನ್ನು ಗುಣಪಡಿಸುವಲ್ಲಿ ವೈದ್ಯರ ಜತೆ ಪಾಳಿ ಪದ್ಧತಿಯಲ್ಲಿ ಶ್ರಮಿಸಿದ್ದಾರೆ. ಎರಡು–ಮೂರು ಬ್ಯಾಚ್ಗಳಲ್ಲಿ ಕೆಲಸ ಮಾಡಿ, ಆರೋಗ್ಯ ಇಲಾಖೆಯ ಮೆಚ್ಚುಗೆಗೂ ಪಾತ್ರರಾಗಿದ್ದಾರೆ. ಆತಂಕ ಬಿಟ್ಟು ಯುದ್ಧದ ರೀತಿಯಲ್ಲಿ ಹೋರಾಡಿದ ಇವರ ಸೇವೆ ಪರಿಗಣಿಸಿ ಜಿಲ್ಲಾಡಳಿತ ‘ಕೊರೊನಾ ವಾರಿಯರ್’ ಎಂಬ ಬಿರುದು ನೀಡಿದೆ.

‘ಪಿಪಿಇ ಕಿಟ್ ಧರಿಸಿ ಕೆಲಸ ಮಾಡುವುದು ಸುಲಭದ ಮಾತಾಗಿರಲಿಲ್ಲ. ಪ್ರತಿ 6 ಗಂಟೆಗೊಮ್ಮೆ ಪಾಳಿ ಪದ್ಧತಿಯಲ್ಲಿ ಕಾರ್ಯನಿರ್ವಹಿಸಿದ್ದೇನೆ. ರಾತ್ರಿ ಕೆಲಸಕ್ಕೆ ನಿಯೋಜನೆಗೊಂಡು 12 ಗಂಟೆ ಕೆಲಸ ಮಾಡಿದೆ. ಸೋಂಕಿತರಿಗೆ ವೈದ್ಯರು ಸೂಚಿಸಿದ ಮಾತ್ರೆಗಳನ್ನು ಸಮಯಕ್ಕೆ ಸರಿಯಾಗಿ ನೀಡಿ ಉಪಚರಿಸಿದೆ’ ಎನ್ನುತ್ತಾರೆ ಸೌಮ್ಯಾ.

ಸೋಂಕು ಕಾಣಿಸಿಕೊಂಡ ಆರಂಭದ ಮೂರು ತಿಂಗಳು ಸೌಮ್ಯಾ ಮನೆ ನೋಡಿದ್ದು ಅಪರೂಪ. ಕ್ವಾರಂಟೈನ್ ಅವಧಿ ಮುಗಿಸಿ, ಮತ್ತೆ ಕೆಲಸ ಮಾಡಿದ್ದಾರೆ.

ಕೋವಿಡ್ ಸಮರ್ಥವಾಗಿ ನಿಭಾಯಿಸಿದ ಡಾ.ಪ್ರಕಾಶ್

ಚಿತ್ರದುರ್ಗ: ‘ಕೋವಿಡ್–19’ ಸಾಂಕ್ರಾಮಿಕ ರೋಗಕ್ಕೆ ಆರಂಭದ ದಿನಗಳಲ್ಲಿ ಹೆದರದೇ ಇರುವವರು ತುಂಬಾ ವಿರಳ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲೂ ಸೋಂಕಿತರನ್ನು ಗುಣಪಡಿಸುವಲ್ಲಿ ಶ್ರಮಿಸಿದ ಡಾ.ಪ್ರಕಾಶ್ ಶ್ರಮಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.

ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲ್ಲೂಕಿನ ರುದ್ರಾಪುರ ಇವರ ಸ್ವಗ್ರಾಮ. ಚಿತ್ರದುರ್ಗ ತಾಲ್ಲೂಕಿನ ಡಿ.ಮೆದಿಕೇರಿಪುರದಲ್ಲಿ ಬೆಳೆದಿದ್ದಾರೆ. ಕುಟುಂಬ ಸದಸ್ಯರ ಒತ್ತಾಯ ಎಂಬಿಬಿಎಸ್ ಕಾಲೇಜು ಮೆಟ್ಟಿಲೇರುವಂತೆ ಮಾಡಿತು. 1993ರಲ್ಲಿ ಸರ್ಕಾರಿ ವೈದ್ಯರಾಗಿ ವೈದ್ಯಕೀಯ ಕ್ಷೇತ್ರಕ್ಕೆ ಪದಾರ್ಪಣೆ ಮಾಡಿದರು. ಮೂತ್ರಪಿಂಡವಿಜ್ಞಾನದಲ್ಲಿ ತಜ್ಞವೈದ್ಯರಾಗಿ ಫೆಲೋಶಿಪ್ ಕೂಡ ಪಡೆದಿದ್ದಾರೆ.

ಕೊರೊನಾ ಯಾವ ರೀತಿಯ ಸೋಂಕು ಎಂಬ ಕುರಿತು ವೈದ್ಯರ ಬಳಿಯೂ ಮಾಹಿತಿ ಇರಲಿಲ್ಲ. ಆದರೂ ಡಾ.ಪ್ರಕಾಶ್ ಜಿಲ್ಲಾ ಕೋವಿಡ್ ಆಸ್ಪತ್ರೆಗೆ ನಿಯೋಜನೆಗೊಂಡರು. ವೈದ್ಯ ವೃತ್ತಿಯಲ್ಲಿರುವ ಕಾರಣ ಹಿಂಜರಿಯದೇ ಧೈರ್ಯ ತಂದುಕೊಂಡು ಚಿಕಿತ್ಸೆ ನೀಡಲು ಮುಂದಾದರು. ಜಿಲ್ಲಾ ಆಸ್ಪತ್ರೆಯ ಇತರೆ ವೈದ್ಯರು ನೀಡಿದ ಪ್ರೋತ್ಸಾಹದಿಂದಾಗಿ ತಂಡವನ್ನು ಮುನ್ನಡೆಸಿದರು. ಕ್ರಮೇಣ ಕೋವಿಡ್ಗೆ ಅಂಜದೆ, ಧೈರ್ಯವಾಗಿ ಪರಿಸ್ಥಿತಿ ನಿಭಾಯಿಸುವಲ್ಲಿ ಸಫಲರಾದರು.

‘ಜಿಲ್ಲಾ ಕೋವಿಡ್ ಆಸ್ಪತ್ರೆಗೆ ದಾಖಲಾದ ಸಾವಿರಾರು ಸೋಂಕಿತರ ಪೈಕಿ ಸುಮಾರು 400 ರೋಗಿಗಳು ಐಸಿಯುನಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಅದರಲ್ಲಿ 35ಕ್ಕೂ ಹೆಚ್ಚು ರೋಗಿಗಳು ತೀವ್ರ ಉಸಿರಾಟದ ಸಮಸ್ಯೆಗೆ ಸಿಲುಕಿ, ಚಿಂತಾಜನಕ ಸ್ಥಿತಿಯಲ್ಲಿದ್ದರು. ಕೊನೆಯ ಹಂತದವರೆಗೂ ನೀಡಿದ ಚಿಕಿತ್ಸೆ ಹಾಗೂ ಮಾರ್ಗದರ್ಶನದಿಂದ ಬಹುತೇಕರು ಗುಣಮುಖರಾಗಿ ಹೊರಬಂದರು’ ಎನ್ನುತ್ತಾರೆ ಡಾ.ಪ್ರಕಾಶ್.

ಜಿಲ್ಲಾಡಳಿತದಿಂದ ಕೊರೊನಾ ವಾರಿಯರ್, ರಾಜ್ಯೋತ್ಸವ ಪ್ರಶಸ್ತಿಗೂ ಭಾಜನರಾಗಿದ್ದಾರೆ. ಕೋವಿಡ್ ವಿರುದ್ಧ ಸೈನಿಕರಂತೆ ಯುದ್ಧೋಪಾದಿಯಲ್ಲಿ ಶ್ರಮಿಸಿದ ಇವರು ಕೊರೊನಾ ವಾರಿಯರ್ ಆಗಿ ಹೊರಹೊಮ್ಮಿದ್ದಾರೆ.

ವಾರಕ್ಕೊಮ್ಮೆ ಮನೆ ಸೇರುತ್ತಿದ್ದ ಬಸವರೆಡ್ಡಿ

ಚಿತ್ರದುರ್ಗ: ಪೊಲೀಸರ ಬಗೆಗೆ ಸಮಾಜದಲ್ಲಿ ಪ್ರೀತಿಗಿಂತ ಭಯವೇ ಹೆಚ್ಚು. ಆದರೆ, ಹೊಳಲ್ಕೆರೆ ಪೊಲೀಸ್ ಠಾಣೆಯ ಹೆಡ್ಕಾನ್ಸ್ಟೆಬಲ್ ವೈ.ವಿ.ಬಸವರೆಡ್ಡಿ ವಿಚಾರದಲ್ಲಿ ಈ ಮಾತು ಸುಳ್ಳಾಗಿದೆ. ಕೋವಿಡ್ ಕುರಿತು ಜಾಗೃತಿ ಮೂಡಿಸಲು ಅವರು ಶ್ರಮಿಸಿದ ಪರಿ ನೋಡಿದರೆ ಇದು ದಿಟವಾಗುತ್ತದೆ.

ಬಸವರೆಡ್ಡಿ ಅವರು ಮೊಳಕಾಲ್ಮುರು ತಾಲ್ಲೂಕಿನ ದೇವಸಮುದ್ರ ಗ್ರಾಮದವರು. ಪದವಿ ಶಿಕ್ಷಣದ ಬಳಿಕ ಪೊಲೀಸ್ ಇಲಾಖೆ ಸೇರಿದ ಇವರಿಗೆ 18 ವರ್ಷಗಳ ಸೇವಾನುಭವ ಇದೆ. ಚಿತ್ರದುರ್ಗ ಗ್ರಾಮಾಂತರ ಠಾಣೆ ಹಾಗೂ ಭರಮಸಾಗರ ಪೊಲೀಸ್ ಠಾಣೆಯಲ್ಲಿಯೂ ಇವರು ಕಾರ್ಯನಿರ್ವಹಿಸಿದ್ದಾರೆ.

ಕೋವಿಡ್ ನಿಯಂತ್ರಣಕ್ಕೆ ಲಾಕ್ಡೌನ್ ಘೋಷಣೆಯಾದ ಬಳಿಕ ಬಸವರೆಡ್ಡಿ ಅವರು ಕೊರೊನಾ ಜಾಗೃತಿಗೆ ಮುಂದಾದರು. ಕಾನ್ಸ್ಟೆಬಲ್ ಮನೋಹರ ಅವರೊಂದಿಗೆ ದ್ವಿಚಕ್ರ ವಾಹನದಲ್ಲಿ ಊರೂರು ಸುತ್ತಿದರು. ಬೈಕಿಗೆ ಕಟ್ಟಿಕೊಂಡ ಮೈಕಿನಲ್ಲಿ ಅರಿವು ಮೂಡಿಸಿದ ರೀತಿ ಕಂಡ ಪೊಲೀಸ್ ಮಹಾನಿರ್ದೇಶಕರು ಪ್ರಶಸ್ತಿ ನೀಡಿ ಗೌರವಿಸಿದ್ದಾರೆ.

‘ದಾವಣಗೆರೆ ತಾಲ್ಲೂಕಿನ ಕೊಡಗನೂರಿನಲ್ಲಿ ಕುಟುಂಬ ನೆಲೆಸಿದೆ. ಲಾಕ್ಡೌನ್ ಸಂದರ್ಭದಲ್ಲಿ ಊರಿಗೆ ಸಂಚರಿಸಲು ಸಾಧ್ಯವಾಗಲಿಲ್ಲ. ಹಲವಾರು ದಿನ ಠಾಣೆಯಲ್ಲೇ ವಾಸ್ತವ್ಯ ಹೂಡಿದ್ದೆ. ಕರ್ತವ್ಯ ಇಲ್ಲದಿದ್ದರೂ ಜಾಗೃತಿಗೆ ತೆರಳುತ್ತಿದ್ದೆ’ ಎನ್ನುತ್ತಾರೆ ಬಸವರೆಡ್ಡಿ.

ದ್ವಿಚಕ್ರ ವಾಹನದಲ್ಲಿ ಹೊಳಲ್ಕೆರೆ ಪಟ್ಟಣ ಸುತ್ತುತ್ತಿದ್ದ ಇವರು ಮನೆಯ ಒಳಗೆ ಇರುವಂತೆ ಜನರಿಗೆ ತಿಳಿವಳಿಕೆ ನೀಡಿದರು. ಶುಶ್ರೂಷಕಿಯರಿಗೆ ತೊಂದರೆ ಉಂಟಾಗದಂತೆ ಬೊಮ್ಮನಕಟ್ಟೆ, ಗುಡ್ಡದ ಸಾಂತೇನಹಳ್ಳಿಯ ಜನರಿಗೆ ಅರಿವು ಮೂಡಿಸಿದರು. ವಾರಕ್ಕೆ ಒಮ್ಮೆ ಮಾತ್ರ ಮನೆಗೆ ತೆರಳುತ್ತಿದ್ದರು.

‘ಸೋಂಕಿನ ತೀವ್ರತೆಯ ಬಗ್ಗೆ ಜನರಿಗೆ ಅರಿವು ಮೂಡಿಸಿದೆ. ಇಂತಹ ಕಾರ್ಯದಲ್ಲಿ ನನಗೂ ಸೋಂಕು ತಗುಲಿತು. ಠಾಣೆಯ ಹಲವರು ಕೋವಿಡ್ ಸಂಕಷ್ಟ ಎದುರಿಸಿದೆವು. ಕುಟುಂಬದ ಸದಸ್ಯರು ಸಾಕಷ್ಟು ಬೆಂಬಲ ನೀಡಿದರು’ ಎನ್ನುತ್ತಾರೆ ಬಸವರೆಡ್ಡಿ.

[ವರದಿ: ಜಿ.ಬಿ. ನಾಗರಾಜ್, ಕೆ.ಎಸ್. ಪ್ರಣವ್ ಕುಮಾರ್]

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.