ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಬಂಟ್ವಾಳ: ವಿದ್ಯಾರ್ಥಿಗಳ ಶುಲ್ಕ ಪಾವತಿಸುವ ಉಪನ್ಯಾಸರು

ಕಾಮಾಜೆ: ಸರ್ಕಾರಿ ಪ್ರಥಮ ದರ್ಜೆ ಕಾಲೇಜು ವಿದ್ಯಾರ್ಥಿಗಳ ಆಕರ್ಷಣೆಗೆ ವಿಭಿನ್ನ ಪ್ರಯತ್ನ
Published 14 ಜೂನ್ 2024, 7:51 IST
Last Updated 14 ಜೂನ್ 2024, 7:51 IST
ಅಕ್ಷರ ಗಾತ್ರ

ಬಂಟ್ವಾಳ: ಇಲ್ಲಿನ ಬಿ.ಸಿ.ರೋಡು ಸಮೀಪದ ಕಾಮಾಜೆಯಲ್ಲಿ ಸುಮಾರು 4.9 ಎಕರೆಯ ಪ್ರಕೃತಿಯ ಸೊಬಗಿನ ಸರ್ಕಾರಿ ಜಮೀನಿನಲ್ಲಿ ವಿಶಾಲವಾದ ಆಟದ ಮೈದಾನ. ಸುಂದರ ಮತ್ತು ಸುಸಜ್ಜಿತ ಬಹುಮಹಡಿ ಕಟ್ಟಡ, ಒಳಗೆ ಕಂಪ್ಯೂಟರ್ ಲ್ಯಾಬ್, ನಿರಂತರ ಕುಡಿಯುವ ನೀರು ಪೂರೈಕೆ, ಸುಸಜ್ಜಿತ ಶೌಚಾಲಯ, ವಿದ್ಯಾರ್ಥಿಗಳ ಪ್ರತಿಭೆ ಅನಾವರಣಗೊಳಿಸಲು ಸೂಕ್ತ ವೇದಿಕೆ ಸಹಿತ ಸಭಾಂಗಣ. ಜತೆಗೆ ಅಚ್ಚುಕಟ್ಟಾದ ಗ್ರಂಥಾಲಯ...

ಇದು ಬಿ.ಸಿ.ರೋಡು ನಗರಕ್ಕೆ ಸಮೀಪದಲ್ಲೇ ಇರುವ, ನ್ಯಾಕ್ ತಂಡದಿಂದ ಬಿ+ ಮಾನ್ಯತೆ ಗಳಿಸಿರುವ ಬಿ.ಸಿ.ರೋಡು ಕಾಮಾಜೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಚಿತ್ರಣ. ಬಡತನದ ನಡುವೆಯೂ ಮಂಗಳೂರು ಮಹಾನಗರದ ಕಾಲೇಜಿನ ಕಡೆಗೆ ಆಕರ್ಷಿತರಾಗುತ್ತಿರುವ ಇಲ್ಲಿನ ಗ್ರಾಮೀಣ ವಿದ್ಯಾರ್ಥಿಗಳನ್ನು ಆಕರ್ಷಿಸಲು ಪ್ರಾಂಶುಪಾಲರು ಸಹಿತ ಅನುಭವಿ ಉಪನ್ಯಾಸಕರ ತಂಡ ಹರಸಾಹಸ ಪಡುತ್ತಿದೆ. ಕೆಲವು ಉಪನ್ಯಾಸಕರು ತೀರಾ ಬಡ ಕುಟುಂಬದ ವಿದ್ಯಾರ್ಥಿಗಳ ಶೈಕ್ಷಣಿಕ ಶುಲ್ಕ ಭರಿಸುವ ಮೂಲಕ ಗಮನ ಸೆಳೆದಿದ್ದಾರೆ. ಇಲ್ಲಿನ ಉಪನ್ಯಾಸಕಿಯೊಬ್ಬರು ಅವರ ಕಾರಿನ ಗಾಜಿನಲ್ಲಿ ಕಾಲೇಜಿನ ಮಾಹಿತಿಯನ್ನೂ ಹಾಕಿಕೊಂಡಿದ್ದಾರೆ.

2007ರಲ್ಲಿ ಅಂದಿನ ಶಾಸಕ ಕೆ.ಪದ್ಮನಾಭ ಕೊಟ್ಟಾರಿ ಅವರ ಪರಿಶ್ರಮದಲ್ಲಿ ಮಂಜೂರಾಗಿ ಬಿ.ಸಿ.ರೋಡಿನ ಖಾಸಗಿ ಕಟ್ಟಡದಲ್ಲಿ ಆರಂಭಗೊಂಡ ಈ ಕಾಲೇಜಿಗೆ ಬಿ.ಸಿ.ರೋಡು ಪೇಟೆಯಿಂದ ಎರಡೂವರೆ ಕಿ.ಮೀ. ದೂರದಲ್ಲಿ ಸೂಕ್ತ ಜಮೀನು ಸಹಿತ ಸುಸಜ್ಜಿತ ಕಟ್ಟಡ ನಿರ್ಮಿಸುವಲ್ಲಿ ಮಾಜಿ ಸಚಿವ ಬಿ.ರಮಾನಾಥ ರೈ, ಸಚಿವರಾಗಿದ್ದ ಡಾ.ವಿ.ಎಸ್.ಆಚಾರ್ಯ ಅವರ ಕೊಡುಗೆಯೂ ಇದೆ. ಕಳೆದ ವರ್ಷ ₹ 85ಲಕ್ಷ ವೆಚ್ಚದಲ್ಲಿ ಸುಸಜ್ಜಿತ ಗ್ರಂಥಾಲಯ ಕಟ್ಟಡ ನಿರ್ಮಿಸುವ ಮೂಲಕ ಶಾಸಕ ರಾಜೇಶ ನಾಯ್ಕ್ ಉಳಿಪಾಡಿಗುತ್ತು ಕಾಲೇಜಿನ ಬೆಳವಣಿಗೆಗೆ ಒತ್ತು ನೀಡಿದ್ದಾರೆ ಎನ್ನುತ್ತಾರೆ ಮಕ್ಕಳ ಪೋಷಕರು.

ಬಿ.ಎ., ಬಿ.ಕಾಂ. ಮತ್ತು ಎಂ.ಕಾಂ ಪದವಿ ನೀಡುತ್ತಿರುವ ಈ ಕಾಲೇಜಿನಲ್ಲಿ ಪ್ರತಿ ವರ್ಷ ಶೇ 85ರಿಂದ ಶೇ 100 ಫಲಿತಾಂಶ ದಾಖಲಾಗುತ್ತಿದೆ. ಇಲ್ಲಿ ಸುಮಾರು 100 ವಿದ್ಯಾರ್ಥಿಗಳು ಅಧ್ಯಯನ ಮಾಡುತ್ತಿದ್ದಾರೆ.

ಕಲಿಕೆಗೆ ಪೂರಕವಾದ ವಾತಾವರಣದಲ್ಲಿರುವ ಈ ಕಾಲೇಜಿನತ್ತ ವಿದ್ಯಾರ್ಥಿಗಳನ್ನು ಸೆಳೆಯಲು ಉಪನ್ಯಾಸಕರ ತಂಡ ಹರ ಸಾಹಸ ಪಡುತ್ತಿದೆ. ಬೆಳಿಗ್ಗೆ ಮತ್ತು ಸಂಜೆ ಸರ್ಕಾರಿ ಬಸ್ ಸೌಲಭ್ಯವೂ ಇದೆ. ವಿದ್ಯಾರ್ಥಿನಿಯರಿಗೆ ಉಚಿತ ಶಿಕ್ಷಣ ಮತ್ತು ತೀರಾ ಬಡ ಕುಟುಂಬದ ವಿದ್ಯಾರ್ಥಿಗಳ ಶುಲ್ಕವನ್ನು ಉಪನ್ಯಾಸಕರೇ ಭರಿಸುತ್ತಿದ್ದಾರೆ. 10 ಮಂದಿ ಗೌರವ ಉಪನ್ಯಾಸಕರಿದ್ದು, ಇತಿಹಾಸ ಉಪನ್ಯಾಸಕ ಹುದ್ದೆ ಸೇರಿದಂತೆ ಎರಡು ಕ್ಲರ್ಕ್‌, ಮೇಲ್ವಿಚಾರಕ ಹುದ್ದೆ ಖಾಲಿ ಇದೆ.

ತಾರತಮ್ಯ ಆರೋಪ: ವಿದ್ಯಾರ್ಥಿಗಳ ಕೊರತೆ ನೆಪದಲ್ಲಿ ಇಲ್ಲಿನ ಗ್ರಂಥಪಾಲಕಿ ಮತ್ತು ದೈಹಿಕ ಶಿಕ್ಷಣ ನಿರ್ದೇಶಕರನ್ನು ಮಂಗಳೂರಿನ ಒಂದೇ ಸರ್ಕಾರಿ ಕಾಲೇಜಿಗೆ ಎರಡು ಹುದ್ದೆ ಸೃಷ್ಟಿಸಿ ವರ್ಗಾವಣೆ ಮಾಡಿ ಗ್ರಾಮೀಣ ವಿದ್ಯಾರ್ಥಿಗಳ ಬಗ್ಗೆ ಸರ್ಕಾರ ತಾರತಮ್ಯ ನೀತಿ ಅನುಸರಿಸುತ್ತಿದೆ ಎಂಬ ಆರೋಪವೂ ಕೇಳಿ ಬಂದಿದೆ.

ಅಕ್ಷರ ದಾಸೋಹ: ಇಲ್ಲಿನ ಲೊರೆಟ್ಟೊ ಮಾತಾ ಚರ್ಚ್‌ ವ್ಯಾಪ್ತಿಯ ವಿನ್ಸೆಂಟ್ ಡಿಪೌಲ್ ಸೊಸೈಟಿ ಅಧ್ಯಕ್ಷ ಫೆಲಿಕ್ಸ್ ಡಿಸೋಜ ಅವರು ಪ್ರತಿ ತಿಂಗಳು 50 ಕೆಜಿ ಅಕ್ಕಿ ಮತ್ತು ಒಂದು ವಾರಕ್ಕೆ ಸಾಕಾಗುವಷ್ಟು ಉಚಿತ ತರಕಾರಿ ನೀಡುವ ಮೂಲಕ ಮಧ್ಯಾಹ್ನದ ಬಿಸಿಯೂಟಕ್ಕೆ ನಿರಂತರವಾಗಿ ಸಹಕರಿಸುತ್ತಿದ್ದಾರೆ. ಶೈಕ್ಷಣಿಕ ಶುಲ್ಕ ಪಾವತಿಸಲು ಸಾಧ್ಯವಾಗದ ವಿದ್ಯಾರ್ಥಿಗಳ ಶುಲ್ಕ ಭರಿಸಲೂ ಸಿದ್ಧನಿದ್ದೇನೆ ಎಂದು ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ಎಲ್ಲ ವಿದ್ಯಾರ್ಥಿಗಳಿಗೂ ಸರ್ಕಾರಿ ಮತ್ತು ಸರ್ಕಾರೇತರ ಸಂಸ್ಥೆಗಳಿಂದ ಪ್ರತಿ ವರ್ಷ ವಿದ್ಯಾರ್ಥಿವೇತನ ದೊರಕಿಸಿ ಕೊಡುವ ಉಚಿತ ಪ್ರಯತ್ನ ನಿವೃತ್ತ ಶಿಕ್ಷಕ ನಾರಾಯಣ ನಾಯ್ಕ್ ಅವರಿಂದ ನಡೆಯುತ್ತಿದೆ ಎಂದು ಕಾಲೇಜಿನ ಪ್ರಾಂಶುಪಾಲ ಪ್ರಕಾಶ್ಚಂದ್ರ ಶಿಶಿಲ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT