ಸೋಮವಾರ, 16 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಬೋಳಿಯಾರ್‌: ಚೂರಿ ಇರಿತ ಪ್ರಕರಣ: ಮತ್ತೆ ಏಳು ಮಂದಿ ಬಂಧನ

ಬಂಧಿತರ ಸಂಖ್ಯೆ 11ಕ್ಕೆ ಏರಿಕೆ
Published : 12 ಜೂನ್ 2024, 14:56 IST
Last Updated : 12 ಜೂನ್ 2024, 14:56 IST
ಫಾಲೋ ಮಾಡಿ
Comments

ಮುಡಿಪು (ದಕ್ಷಿಣ ಕನ್ನಡ): ಬಿಜೆಪಿಯ ಇಬ್ಬರು ಕಾರ್ಯಕರ್ತರಿಗೆ ಉಳ್ಳಾಲ ತಾಲ್ಲೂಕಿನ ಬೋಳಿಯಾರ್‌ನಲ್ಲಿ ಚೂರಿ ಇರಿದ ಪ್ರಕರಣ ಸಂಬಂಧ ಏಳು ಮಂದಿ ಆರೋಪಿಗಳನ್ನು ಪೊಲೀಸರು ಬುಧವಾರ ಬಂಧಿಸಿದ್ದಾರೆ.

‘ಬೋಳಿಯಾರ್‌ ನಿವಾಸಿಗಳಾದ ತಾಜುದ್ದೀನ್‌ ಅಲಿಯಾಸ್‌ ಸಿದ್ದಿಕ್‌, ಸರ್ವಾನ್‌, ಮುಬಾರಕ್‌, ಅಶ್ರಫ್‌, ತಲ್ಲತ್‌, ಕೋಳಿ ಇರ್ಷಾದ್, ಮತ್ತು ಇಮ್ರಾನ್‌ ಸೇರಿದಂತೆ ಒಟ್ಟು ಏಳು ಮಂದಿಯನ್ನು ವಶಕ್ಕೆ ಪಡೆಯಲಾಗಿದೆ. ಈ ಪ್ರಕರಣದಲ್ಲಿ ಬಂಧಿತರ ಸಂಖ್ಯೆ 13ಕ್ಕೆ ಏರಿದೆ. ಇನ್ನಷ್ಟು ಆರೋಪಿಗಳ ಬಂಧನಕ್ಕೆ ಕ್ರಮವಹಿಸಲಾಗಿದೆ’ ಎಂದು ಮಂಗಳೂರು ನಗರ ಪೊಲೀಸ್‌ ಕಮಿಷನರ್‌ ಅನುಪಮ್‌ ಅಗರ್ವಾಲ್ ‌ತಿಳಿಸಿದ್ದಾರೆ.

ಬೋಳಿಯಾರ್‌ ನಿವಾಸಿಗಳಾದ ಮೊಹಮ್ಮದ್ ಶಾಕಿರ್, ಅಬ್ದುಲ್ ರಜಾಕ್‌, ಅಬೂಬಕರ್ ಸಿದ್ಧಿಕ್‌, ಸವದ್‌, ಮೋನು ಅಲಿಯಾಸ್‌ ಹಫೀಜ್‌ ಹಾಗೂ ಅಬೂಬಕರ್‌ ಅವರನ್ನು ಪೊಲೀಸರು ಈ ಹಿಂದೆಯೇ ಬಂಧಿಸಿದ್ದರು.

ಕೇಂದ್ರದಲ್ಲಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಸತತ ಮೂರನೇ ಸಲ ಅಧಿಕಾರಕ್ಕೆ ಬಂದಿ‌ದ್ದಕ್ಕೆ ಬೋಳಿಯಾರ್‌ನಲ್ಲಿ ವಿಜಯೋತ್ಸವ ಮೆರವಣಿಗೆಯನ್ನು ಭಾನುವಾರ ರಾತ್ರಿ ಏರ್ಪಡಿಸಲಾಗಿತ್ತು. ಮೆರವಣಿಗೆಯಲ್ಲಿ ಸಾಗಿದವರು ಅಲ್ಲಿನ ಮೊಹಿಯುದ್ದೀನ್‌ ಜುಮ್ಮಾ ಮಸೀದಿ ಎದುರು ಪ್ರಚೋದನಕಾರಿ ಘೋಷಣೆಗಳನ್ನು ಕೂಗಿದ್ದರು. ಮೆರವಣಿಗೆ ಬಳಿಕ ಧರ್ಮನಗರದ ಹರೀಶ್, ನಂದನ್ ಕುಮಾರ್ ಅವರಿಗೆ ಮುಸ್ಲಿಂ ಯುವಕರ ತಂಡ ಬೋಳಿಯಾರ್‌ನ ಸಮಾಧಾನ್‌ ಬಾರ್ ಮುಂಭಾಗದಲ್ಲಿ ಚೂರಿಯಿಂದ ಇರಿದಿತ್ತು. ಕಿಶನ್ ಕುಮಾರ್ ಎಂಬುವರ ಮೇಲೂ ಹಲ್ಲೆ ನಡೆಸಿತ್ತು. ಗಾಯಗೊಂಡಿದ್ದ ಹರೀಶ್ ಹಾಗೂ ನಂದ ಕುಮಾರ್ ದೇರಳಕಟ್ಟೆಯ ಕೆ.ಎಸ್ ಹೆಗ್ಡೆ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದಾರೆ.

ವಿಜಯೋತ್ಸವದ ಸಂದರ್ಭದಲ್ಲಿ ಮಸೀದಿಯ ಮುಂದೆ ಪ್ರಚೋದನಕಾರಿ ಘೋಷಣೆ ಕೂಗಿದ ಕುರಿತು ಮಸೀದಿ ಆಡಳಿತ ಸಮಿತಿಯ ಅಧ್ಯಕ್ಷರು ದೂರು ನೀಡಿದ್ದು, ಬಿಜೆಪಿ ಕಾರ್ಯಕರ್ತರಾದ ಸುರೇಶ್, ವಿನಯ್ , ಸುಭಾಷ್, ರಂಜಿತ್, ಧನಂಜಯ ಎಂಬವರ ವಿರುದ್ದವೂ ಪ್ರಕರಣ ದಾಖಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT