ಸೋಮವಾರ, 1 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಉಪ್ಪಿನಂಗಡಿ: ಬಂದಾರು– ಬಿಸಿನೀರಿನ ಚಿಲುಮೆಗೆ ಮತ್ತೆ ಜೀವ

ದಶಕದಿಂದ ವಿಜ್ಞಾನಿಗಳ ತಂಡ ಅಧ್ಯಯನ
Published 29 ಜೂನ್ 2024, 20:33 IST
Last Updated 29 ಜೂನ್ 2024, 20:33 IST
ಅಕ್ಷರ ಗಾತ್ರ

ಉಪ್ಪಿನಂಗಡಿ (ದಕ್ಷಿಣ ಕನ್ನಡ): ಎರಡು ವರ್ಷಗಳಿಂದ ಬೇಸಿಗೆಯಲ್ಲಿ ಬತ್ತಿ ಹೋಗುತ್ತಿದ್ದ, ಬೆಳ್ತಂಗಡಿ ತಾಲ್ಲೂಕಿನ ಬಂದಾರು ಗ್ರಾಮದ ಬಟ್ಲಡ್ಕದ ಖಾಸಗಿ ಜಮೀನಿನಲ್ಲಿರುವ ಬಿಸಿ ನೀರಿನ ಚಿಲುಮೆ ಈ ಬಾರಿಯ ಮಳೆಗಾಲದಲ್ಲಿ ಬಂಡೆಗಳ ನಡುವಿನಿಂದ ಹರಿಯಲಾರಂಭಿಸಿದೆ.

ಗ್ರಾಮದ ಅಂಕರಮಜಲಿನ ಬಟ್ಲಡ್ಕದ ಮುಳುಗು ಪರಿಣತ ಮುಹಮ್ಮದ್ ಬಂದಾರು ಅವರಿಗೆ ಸೇರಿದ ಜಾಗದಲ್ಲಿ ಈ ಚಿಲುಮೆ ಇದೆ. ಬಿಸಿನೀರು ಬೀಳುವ ಜಾಗದಲ್ಲಿ ಆಯತಾಕಾರವಾಗಿ ಕಲ್ಲು ಜೋಡಿಸಿ ಕೆರೆಯಂತೆ ಮಾಡಲಾಗಿದೆ. ಇದು 12 ಅಡಿ ಉದ್ದ, 7 ಅಡಿ ಅಗಲ, 5 ಅಡಿ ಆಳವಿದೆ. ಕಲ್ಲುಗಳ ಸಂದಿನಿಂದ ಅರ್ಧ ಇಂಚಿನಷ್ಟು ಬಿಸಿನೀರು ಬಂದು ಇದಕ್ಕೆ ಬೀಳುತ್ತದೆ. ಕೆರೆಯ ಕೆಳಗೆ ತಗ್ಗು ಪ್ರದೇಶದಲ್ಲಿ ಗದ್ದೆಯಿದೆ. ಸುಮಾರು 100 ಮೀ ದೂರದಲ್ಲಿ ನೇತ್ರಾವತಿ ನದಿ ಹರಿಯುತ್ತಿದೆ.

‘ಈ ಬಿಸಿ ನೀರಿನ ಚಿಲುಮೆ ತಾತನ ಕಾಲದಿಂದಲೂ ಹೀಗೆ ಇದೆ. ಸುಮಾರು 500 ವರ್ಷಕ್ಕಿಂತಲೂ ಹಳೆಯದು. ನಾನು ಕಂಡಂತೆ ವರ್ಷವಿಡೀ ಇದು ಬತ್ತುತ್ತಿರಲಿಲ್ಲ. ನದಿ ಬೇಸಿಗೆಯಲ್ಲಿ ಬತ್ತಿದರೂ, ಇದರಲ್ಲಿ 24 ಗಂಟೆಯೂ ಬಿಸಿನೀರು ಬಂಡೆಗಳ ಎಡೆಯಿಂದ ಬಂದು ಇದಕ್ಕೆ ಬೀಳುತ್ತಿತ್ತು’ ಎಂದು ಮುಹಮ್ಮದ್ ಬಂದಾರು ಸ್ಮರಿಸಿದರು. 

ಈಗ ಎರಡು ವರ್ಷದಿಂದ ಬೇಸಿಗೆಯಲ್ಲಿ ಬತ್ತುತ್ತಿದೆ. ಕೆರೆ ಬದಿಯ ಬಂಡೆಗಳಿಗೆ ಬಣ್ಣ ಹಚ್ಚಿದ್ದು, ಬಿಸಿ ನೀರು ಬರುವೆಡೆ ಪೈಪ್‌ ಇರಿಸಿದ್ದು ಬಿಟ್ಟರೆ ಮೂಲ ಸ್ವರೂಪವನ್ನು ನಾವು ಬದಲಿಸಿಲ್ಲ. 10 ವರ್ಷಗಳಿಂದ ವಿಜ್ಞಾನಿಗಳ ತಂಡವೊಂದು ಇಲ್ಲಿಗೆ ಬಂದು ಅಧ್ಯಯನ ನಡೆಸುತ್ತಿದೆ. ಮೊದಲು ಚೆನ್ನೈನಿಂದ ಬರುತ್ತಿದ್ದರು. ಈಗ ಕೇರಳದ ತಿರುವನಂತಪುರದಿಂದ ಕೇಂದ್ರ ಸರ್ಕಾರದ ಭೂ ವಿಜ್ಞಾನ ಸಚಿವಾಲಯದ ವಿಜ್ಞಾನಿಗಳ ತಂಡವೊಂದು ಆರು ತಿಂಗಳಿಗೊಮ್ಮೆ ಇಲ್ಲಿಗೆ ಭೇಟಿ ನೀಡಿ ಅಧ್ಯಯನ ನಡೆಸುತ್ತಿದ್ದಾರೆ.

41.4 ಡಿಗ್ರಿ ಸೆಲ್ಸಿಯಸ್‌: ‘ನಿತ್ಯ ಬೆಳಿಗ್ಗೆ ಮತ್ತು ಸಂಜೆ ನಾನು ಈ ನೀರಿನ ತಾಪಮಾನ ಪರೀಕ್ಷಿಸಿ ವರದಿ ಕಳುಹಿಸಬೇಕಿದ್ದು, ಅದಕ್ಕಾಗಿ ನನಗೆ ಥರ್ಮಾಮೀಟರ್‌ ನೀಡಿದ್ದಾರೆ. ನನಗೆ ಗೊತ್ತಿರುವಂತೆ ಈ ನೀರಿನ ತಾಪಮಾನ 36.6 ಡಿಗ್ರಿ ಸೆಲ್ಸಿಯಸ್‌ಗೂ ಹೋಗುತ್ತಿತ್ತು. ಜೂನ್‌ 27ರ ಬೆಳಿಗ್ಗೆ 41.4 ಡಿಗ್ರಿ ಇತ್ತು. ಸುತ್ತಲಿನ ವಾತಾವರಣ ತಂಪಿದ್ದಾಗ ಈ ನೀರು ಬಿಸಿ ಇರುತ್ತದೆ. ಮಳೆಗಾಲದಲ್ಲಿ ಬಂಡೆಗಳ ಮಧ್ಯದಿಂದ ಬರುವ ನೀರಿನ ಪ್ರಮಾಣವೂ ಸ್ವಲ್ಪ ಜಾಸ್ತಿ ಇರುತ್ತದೆ. ಇಲ್ಲಿಗೆ ಬರುವ ವಿಜ್ಞಾನಿಗಳ ತಂಡ ನೀರು ಬಿಸಿಯಾಗಲು ನಿಖರ ಕಾರಣ ಹೇಳದಿದ್ದರೂ, ಭೂಮಿಯ ಒಳಗೆ ಈ ನೀರು ಇನ್ನಷ್ಟು ಬಿಸಿ ಇರುತ್ತದೆ. ಅದು ಹೊರಗೆ ಬಂದಂತೆ ಅದರ ತಾಪಮಾನ ಕಡಿಮೆಯಾಗುತ್ತದೆ ಎನ್ನುತ್ತಾರೆ. ಅಲ್ಲದೆ, ಈ ಬಿಸಿನೀರ ಚಿಲುಮೆ ಈಗ ದಕ್ಷಿಣ ಭಾರತದ ಏಕೈಕ ಚಿಲುಮೆಯಾಗಿದೆ ಎಂದು ವಿಜ್ಞಾನಿಗಳ ತಂಡ ತಿಳಿಸಿದೆ’ ಎಂದು ಮುಹಮ್ಮದ್ ತಿಳಿಸಿದರು.

‘ಈ ಜಾಗ ಬಿಟ್ಟುಕೊಡಿ. ಅಭಿವೃದ್ಧಿ ಮಾಡುತ್ತೇವೆ ಎಂದು ಸರ್ಕಾರ ಕೇಳಿತ್ತು. ಆದರೆ, ಜಾಗ ಬಿಟ್ಟು ಕೊಡುವುದಿಲ್ಲ. ಅಭಿವೃದ್ಧಿ ನಡೆಸಲು ನನ್ನ ಆಕ್ಷೇಪವಿಲ್ಲ’ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT