ಸೋಮವಾರ, 7 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಶಿಕ್ಷಕ ಅರುಣ್ ಹೇಳಿಕೆಗೆ ಖಂಡನೆ: ಎಫ್‌ಐಆರ್‌ ಬಲಪಡಿಸುವಂತೆ ಸಮಾನ ಮನಸ್ಕರ ಆಗ್ರಹ

Published : 7 ಅಕ್ಟೋಬರ್ 2024, 5:13 IST
Last Updated : 7 ಅಕ್ಟೋಬರ್ 2024, 5:13 IST
ಫಾಲೋ ಮಾಡಿ
Comments

ಮಂಗಳೂರು: ‘ಕಿನ್ಯದ ಕೇಶವ ಶಿಶು ಮಂದಿರವು ಈಚೆಗೆ ಆಯೋಜಿಸಿದ ನವ ವಿವಾಹಿತರ ಸಮಾವೇಶದಲ್ಲಿ ಶಿಕ್ಷಕ ಅರುಣ್ ಉಳ್ಳಾಲ್‌ ಸಮುದಾಯಗಳ,  ಧಾರ್ಮಿಕ ಅಲ್ಪಸಂಖ್ಯಾತರ ಕುರಿತು ದ್ವೇಷ ಹುಟ್ಟಿಸುವ, ಹಿಂಸೆಗೆ ಪ್ರಚೋದಿಸುವ  ಮಾತುಗಳನ್ನು ಆಡಿದ್ದಾರೆ. ಅವರ ಮಾತುಗಳು ಆಘಾತವನ್ನುಂಟು ಮಾಡಿವೆ’ ಎಂದು ಇಲ್ಲಿನ ಸಮಾನ ಮನಸ್ಕರು ಖಂಡನೆ ವ್ಯಕ್ತಪಡಿಸಿದ್ದಾರೆ.

‘ಅರುಣ್‌ ಮೇಲೆ  ಪೊಲೀಸರು ಸ್ವಯಂಪ್ರೇರಿತ ಮೊಕದ್ದಮೆ ದಾಖಲಿಸಿರುವುದು ಸ್ವಾಗತಾರ್ಹ‌. ಆದರೆ, ಪ್ರಕರಣವನ್ನು ಸಾಮಾಜಿಕ ಜಾಲತಾಣದಲ್ಲಿ ನಡೆದ ಘಟನೆಯೆಂಬಂತೆ ಪರಿಗಣಿಸಿ ಸೆನ್ ಅಪರಾಧ ಠಾಣೆಯಲ್ಲಿ ಮಾಹಿತಿ ತಂತ್ರಜ್ಞಾನ ಕಾಯ್ದೆಯಡಿ ಎಫ್ಐಆರ್ ದಾಖಲಿಸಿರುವುದು ಸಮಂಜಸವಲ್ಲ‌.  ಆರೋಪಿ ಕಾನೂನಿನ ಬಲೆಯಿಂದ ನುಣುಚಿಕೊಳ್ಳಲು ಇದು ಅವಕಾಶ ಒದಗಿಸಬಹುದು. ಮತೀಯ ದ್ವೇಷ ಹಾಗೂ ವಿಭಜನಕಾರಿ ಚಟುವಟಿಕೆಗೆ ಸಂಬಂಧಿಸಿದ ಸೆಕ್ಷನ್‌ಗಳಡಿ ಎಫ್‌ಐಆರ್‌  ಬಲಪಡಿಸಬೇಕು. ಈ ಪ್ರಕರಣವನ್ನು ಉಳ್ಳಾಲ ಠಾಣೆಗೆ ವರ್ಗಾಯಿಸಬೇಕು’ ಎಂದು ಅವರು ಆಗ್ರಹಿಸಿದ್ದಾರೆ.

‘ಅರುಣ್ ಉಳ್ಳಾಲ್‌ಗೆ ಜಿಲ್ಲಾ ಮಟ್ಟದ ರಾಜ್ಯೋತ್ಸವ ಪ್ರಶಸ್ತಿ, ತುಳು ಸಾಹಿತ್ಯ ಅಕಾಡಮಿಯ ಪ್ರಶಸ್ತಿ ದೊರಕಿರುವುದು ಮತ್ತಷ್ಟು ಆಘಾತಕಾರಿ. ಈ ಪ್ರಶಸ್ತಿಗಳನ್ನು ಸರ್ಕಾರ ಕೂಡಲೇ ಹಿಂಪಡೆಯಬೇಕು. ನವ ವಿವಾಹಿತರನ್ನು ಉದ್ದೇಶಿಸಿ ಬಹಿರಂಗವಾಗಿ  ಈ ಮಾತುಗಳನ್ನು ಆಡಿರುವ ಅವರ ವಿರುದ್ಧ ಸರ್ಕಾರ ನ್ಯಾಯೋಚಿತ ಕ್ರಮವನ್ನು ವಿಳಂಬವಿಲ್ಲದೆ ಜರುಗಿಸಬೇಕು’ ಎಂದೂ ಒತ್ತಾಯಿಸಿದ್ದಾರೆ.

‘ವೇದಿಕೆಯಲ್ಲಿದ್ದ ಕಲ್ಲಡ್ಕ ಪ್ರಭಾಕರ ಭಟ್ ಅವರನ್ನು ಉದ್ದೇಶಿಸಿ ಅರುಣ್, ‘ಅಣ್ಣ ಹೇಳಿದಂತೆ‌‌’..‌.. ಎಂದು ಪದೇ ಪದೇ ಉಲ್ಲೇಖಿಸಿದ್ದಾರೆ. ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸಂಘ ಪರಿವಾರದ ಇತರ ನಾಯಕರೂ ಇಂತಹ ದ್ವೇಷದ ಮಾತುಗಳನ್ನಾಡಲು ಪ್ರೇರಣೆ ನೀಡಿದ್ದು ಅವರನ್ನೂ ಈ ಪ್ರಕರಣದಲ್ಲಿ ಆರೋಪಿಗಳನ್ನಾಗಿಸಬೇಕು’ ಎಂದು ಅವರು ಆರೋಪಿಸಿದ್ದಾರೆ.

ವೈದ್ಯ ಡಾ.ಶ್ರೀನಿವಾಸ ಕಕ್ಕಿಲ್ಲಾಯ, ಜನಪದ ತಜ್ಞ ಗಣನಾಥ ಶೆಟ್ಟಿ ಎಕ್ಕಾರು, ನಿವೃತ್ತ ಪ್ರಧ್ಯಾಪಕರಾದ ಪ್ರೊ. ಶಿವರಾಮ ಶೆಟ್ಟಿ, ಪ್ರೊ.ಉದಯ ಇರ್ವತ್ತೂರು, ಎನ್ ಇಸ್ಮಾಯಿಲ್, ಡಿವೈಎಫ್‌ಐ ರಾಜ್ಯ ಘಟಕದ ಅಧ್ಯಕ್ಷ ಮುನೀರ್ ಕಾಟಿಪಳ್ಳ, ದಲಿತ ಮುಖಂಡ ಎಂ.ದೇವದಾಸ್, ಸಾಹಿತಿ ಬಿ.ಎಂ.ರೋಹಿಣಿ, ವಕೀಲರಾದ ಯಶವಂತ ಮರೋಳಿ, ದಿನೇಶ್ ಹೆಗ್ಡೆ ಉಳೆಪಾಡಿ, ಪತ್ರಕರ್ತ ನವೀನ್ ಸೂರಿಂಜೆ, ಸಾಮಾಜಿಕ ಕಾರ್ಯಕರ್ತರಾದ ಶ್ರೀನಿವಾಸ ಕಾರ್ಕಳ, ರಂಗಕರ್ಮಿ ವಾಸುದೇವ ಉಚ್ಚಿಲ, ಪ್ರಭಾಕರ ಕಾಪಿಕಾಡ್, ಎಂ.ಜಿ.ಹೆಗಡೆ, ಕೃಷ್ಣಪ್ಪ ಕೊಂಚಾಡಿ, ಮಂಜುಳಾ ನಾಯಕ್, ಎಂ. ಉಷಾ, ಗುಲಾಬಿ ಬಿಳಿಮಲೆ, ಮನೋಜ್ ವಾಮಂಜೂರು, ಕಲ್ಲೂರು ನಾಗೇಶ್, ಸುನಿಲ್ ಕುಮಾರ್ ಬಜಾಲ್, ಸಂತೋಷ್ ಬಜಾಲ್ ಅವರು ಜಂಟಿ ಹೇಳಿಕೆ ಬಿಡುಗಡೆ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT