ಭಾನುವಾರ, 6 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಷೇರು ವಹಿವಾಟಿನಲ್ಲಿ ನಷ್ಟ: ನದಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ ಯುವಕನ ರಕ್ಷಣೆ

Published : 8 ಜುಲೈ 2024, 10:11 IST
Last Updated : 8 ಜುಲೈ 2024, 10:11 IST
ಫಾಲೋ ಮಾಡಿ
Comments

ಉಪ್ಪಿನಂಗಡಿ: ಕಡಬ ತಾಲ್ಲೂಕು ಕೋಡಿಂಬಾಳ ಗ್ರಾಮದ ಪುಳಿಕ್ಕುಕ್ಕು ಎಂಬಲ್ಲಿ ಕುಮಾರಧಾರ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿ, ಪೊದೆಯಲ್ಲಿ ಸಿಲುಕಿಕೊಂಡಿದ್ದ ಯುವಕನನ್ನು ಅಗ್ನಿಶಾಮಕ ದಳ ಮತ್ತು ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಸೋಮವಾರ ರಕ್ಷಿಸಿದರು.

ರಕ್ಷಣೆ ಮಾಡಲಾದ ಯುವಕ‌ನನ್ನು ಆಂಧ್ರ ಪ್ರದೇಶದ ಮಡಕಸಿರ ನಿವಾಸಿ ರವಿ ಕುಮಾರ್ ಎಂದು ಗುರುತಿಸಲಾಗಿದೆ. ಚಿಕಿತ್ಸೆಗಾಗಿ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಹಲವು ವರ್ಷಗಳಿಂದ ಆತ ಬೆಂಗಳೂರು ಮಾರತಹಳ್ಳಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ಎಂಬ ಮಾಹಿತಿ ಲಭ್ಯವಾಗಿದೆ.

ನದಿಗೆ ಹಾರಲು ಕಾರಣವೇನು?:

ಷೇರು ಮಾರುಕಟ್ಟೆಯಲ್ಲಿ ಹಣ ಹೂಡಿಕೆ ಮಾಡಿದ್ದ ಯುವಕ ಅದರಲ್ಲಿ ನಷ್ಟ ಅನುಭವಿಸಿದ್ದ. ಹೀಗಾಗಿ ಸುಮಾರು ₹ 2 ಲಕ್ಷದಷ್ಟು ಸಾಲ ಮಾಡಿರುವುದಾಗಿ ಪೊಲೀಸರ ವಿಚಾರಣೆ ವೇಳೆ ಯುವಕ ಮಾಹಿತಿ ನೀಡಿದ್ದಾನೆ.

ಇದರಿಂದ ನೊಂದ ಈತ ಬೆಂಗಳೂರಿನಿಂದ ಕುಕ್ಕೆ ಸುಬ್ರಹ್ಮಣ್ಯಕ್ಕೆ ಆಗಮಿಸಿ ದೇವರ ದರ್ಶನ ಮುಗಿಸಿ ಕಡಬ-ಪಂಜ ರಸ್ತೆಯ ಪುಳಿಕುಕ್ಕು ಎಂಬಲ್ಲಿಗೆ ಬಂದಿದ್ದ. ಸೋಮವಾರ ಮುಂಜಾನೆ 5ರ ಸುಮಾರಿಗೆ ಬ್ಯಾಗನ್ನು ಬಸ್ ನಿಲ್ದಾಣದಲ್ಲೇ ಇರಿಸಿ ತನ್ನ ಕೈಯನ್ನು ಯಾವುದೋ ಆಯುಧನಿಂದ ತುಂಡರಿಸಿಕೊಂಡು ನದಿಗೆ ಹಾರಿರುವುದಾಗಿ ಪೊಲೀಸರಿಗೆ ತಿಳಿಸಿದ್ದಾನೆ.

ತುಂಬಿ ಹರಿಯುತ್ತಿದ್ದ ಕುಮಾರಧಾರ ನದಿಗೆ ಹಾರಿದ ಬಳಿಕ ಅದೃಷ್ಟವಶಾತ್ ಪೊದೆಯೊಂದರಲ್ಲಿ ಸಿಲುಕ್ಕಿದ್ದ. ಬಳಿಕ ರಕ್ಷಣೆಗಾಗಿ ಕೂಗಾಡಿದ್ದ. ಹೀಗಾಗಿ ಸ್ಥಳೀಯರು ಇಲಾಖೆಗೆ ಮಾಹಿತಿ ರವಾನಿಸಿದ್ದರು. ಕೂಡಲೇ ಘಟನಾ ಸ್ಥಳಕ್ಕೆ ಬಂದ ಅಗ್ನಿಶಾಮಕ ದಳ, ಪೊಲೀಸರು, ವಿಪತ್ತು ನಿರ್ವಹಣಾ ತಂಡದ ಸದಸ್ಯರು ಜಂಟಿ ಕಾರ್ಯಾಚರಣೆ ಮೂಲಕ ಆತನನ್ನು ನೀರಿನಿಂದ ಮೇಲಕ್ಕೆತ್ತಿದರು.

ಆತನಲ್ಲಿದ್ದ ಮೊಬೈಲ್ ಪೋನ್ ತುಂಬಿ ಹರಿಯುವ ನದಿಯಲ್ಲಿ ನಾಪತ್ತೆಯಾಗಿದೆ. ಈತನ ಪ್ಯಾಂಟ್ ಕಿಸೆಯಲ್ಲಿ ಹತ್ತು ಸಾವಿರ ರೂಪಾಯಿ ಪತ್ತೆಯಾಗಿದೆ ಎಂದು ತಿಳಿದು ಬಂದಿದೆ. ಕೈಗೆ ಗಂಭೀರ ಸ್ವರೂಪದ ಗಾಯವಾದ ಕಾರಣ ಕಡಬ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಪುತ್ತೂರು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT