ಗುರುವಾರ, 19 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಕೆಎಸ್‌ಆರ್‌ಟಿಸಿ ಬಸ್‌ ಸೌಕರ್ಯ

ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷೆ ಪುಷ್ಪಾ ಅಮರನಾಥ್ ಭರವಸೆ
Published : 18 ಸೆಪ್ಟೆಂಬರ್ 2024, 15:59 IST
Last Updated : 18 ಸೆಪ್ಟೆಂಬರ್ 2024, 15:59 IST
ಫಾಲೋ ಮಾಡಿ
Comments

ಮಂಗಳೂರು: ‘ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೆಎಸ್‌ಆರ್‌ಟಿಸಿ ಬಸ್‌ ಸೇವೆ ಕಡಿಮೆ ಇರುವಲ್ಲಿ ಮಹಿಳೆಯರಿಗೆ ಶಕ್ತಿ ಯೋಜನೆ ಪ್ರಯೋಜನ ಸಿಗುತ್ತಿಲ್ಲ. ಮುಖ್ಯಮಂತ್ರಿ ಹಾಗೂ ಸಾರಿಗೆ ಸಚಿವರ ಜೊತೆ ಚರ್ಚಿಸಿ ಇಂತಹ ಪ್ರದೇಶಗಳಿಗೂ ಕೆಎಸ್‌ಆರ್‌ಟಿಸಿ ಬಸ್‌ ಸೌಕರ್ಯ ಒದಗಿಸಲು ಪ್ರಯತ್ನ ಮಾಡುತ್ತೇವೆ’ ಎಂದು ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷೆ ಪುಷ್ಪಾ ಅಮರನಾಥ್ ಭರವಸೆ ನೀಡಿದರು.

ಇಲ್ಲಿ ಗ್ಯಾರಂಟಿ ಯೋಜನೆಗಳ ಅನುಷ್ಠಾನದ ಬಗ್ಗೆ ಅಧಿಕಾರಿಗಳ ಜೊತೆ ಸಭೆ ನಡೆಸಿದ ಅವರು ಬಳಿಕ ಸುದ್ದಿಗೋಷ್ಠಿಯಲ್ಲಿ ಬುಧವಾರ ಮಾತನಾಡಿದರು.

‘ಜಿಲ್ಲೆಯಲ್ಲಿ ಕೆಎಸ್‌ಆರ್‌ಟಿಸಿ ಬಸ್‌ಗಳು 427 ಮಾರ್ಗಗಳಲ್ಲಿ ಒಟ್ಟು 2,786 ಟ್ರಿಪ್ ನಡೆಸುತ್ತಿವೆ.  ಸರ್ಕಾರಿ ಬಸ್‌ ಸೌಕರ್ಯವಿರುವಲ್ಲೂ ಮಂಗಳೂರು ವಿಭಾಗಕ್ಕೆ ಹೆಚ್ಚುವರಿಯಾಗಿ 88 ಬಸ್ 450 ಸಿಬ್ಬಂದಿ ಹಾಗೂ ಪುತ್ತೂರು ವಿಭಾಗಕ್ಕೆ 459 ಸಿಬ್ಬಂದಿ ಹಾಗೂ ಹೆಚ್ಚುವರಿ 90 ಬಸ್‌ ಅಗತ್ಯವಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಬಗ್ಗೆಯೂ ಸಚಿವರ ಜೊತೆ ಚರ್ಚಿಸುತ್ತೇನೆ’ ಎಂದರು. 

‘ಗೃಹಲಕ್ಷ್ಮೀ ಯೋಜನೆಯಡಿ ಜಿಲ್ಲೆಗೆ 4,03,333 ಗುರಿ ನಿಗದಿಪಡಿಸಲಾಗಿತ್ತು. 3,69,292 ಫಲಾನುಭವಿಗಳಿದ್ದಾರೆ (ಶೇ 92). ಇದರಪ್ರಯೋಜನ ಪಡೆಯದ ಉಳಿದ ಶೇ 8ರಷ್ಟು ಮಹಿಳೆಯರನ್ನು ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿಯ ಸದಸ್ಯರು ಖುದ್ದು ಭೇಟಿಯಾಗಲಿದ್ದಾರೆ. ಗ್ರಾಮ ಪಂಚಾಯಿತಿ ಅಧಿಕಾರಿಗಳು ಅಡೆತಡೆಗಳನ್ನು ನಿವಾರಿಸಿ, ಅವರಿಗೂ ಯೋಜನೆಯ ಪ್ರಯೋಜನ ಒದಗಿಸಲು ಕ್ರಮವಹಿಸಲಿದ್ದಾರೆ’ ಎಂದರು. 

‘4,189 ಮಂದಿ ಬ್ಯಾಂಕ್‌ ಖಾತೆಗೆ ಆಧಾರ್ ಸಂಖ್ಯೆ ಜೋಡಿಸದ ಕಾರಣ ಈ ಯೋಜನೆಯಿಂದ ವಂಚಿತರಾಗಿದ್ದಾರೆ. ಕುಟುಂಬದ ಸದಸ್ಯರು ಆದಾಯ ತೆರಿಗೆ ಪಾವತಿಸುತ್ತಿರುವ ಕಾರಣಕ್ಕೆ 5,297 ಮಂದಿ ಹಾಗೂ ಜಿಎಸ್‌ಟಿ ಪಾವತಿಯ ಕಾರಣಕ್ಕೆ 3,227 ಮಂದಿ ಈ ಸವಲತ್ತು ಪಡೆಯಲಾಗುತ್ತಿಲ್ಲ. ಇವರಲ್ಲಿ ಕೆಲವರು ಈಗ ಜಿಎಸ್‌ಟಿ/ ಆದಾಯ ತೆರಿಗೆ ಪಾವತಿಸುತ್ತಿಲ್ಲ. ಈ ಬಗ್ಗೆ ಸರ್ಕಾರದ ಮಟ್ಟದಲ್ಲಿ ಪರಿಶೀಲಿಸಿ ಅವರಿಗೂ ಸವಲತ್ತು ನೀಡಲು ಪ್ರಯತ್ನಿಸುತ್ತೇವೆ’ ಎಂದರು.  

‘ಯುವನಿಧಿ ಯೋಜನೆಯಡಿ ಜಿಲ್ಲೆಯಲ್ಲಿ 4,023 ಮಂದಿ ನೊಂದಾಯಿಸಿದ್ದು, 3328 ಮಂದಿಗೆ ಸವಲತ್ತು ಸಿಗುತ್ತಿದೆ. ಜುಲೈನಲ್ಲಿ ₹ 2.02 ಕೋಟಿ ಫಲಾನುಭವಿಗಳ ಖಾತೆಗೆ ಜಮೆಯಾಗಿದೆ’ ಎಂದರು.  

‘ಗ್ಯಾರಂಟಿ ಯೋಜನೆಗಳ ಅನುಷ್ಠಾನದಲ್ಲಿ ದಕ್ಷಿಣ ಕನ್ನಡದ ಗುರಿ ಸಾಧನೆ ಉತ್ತಮವಾಗಿದೆ. ಯುವನಿಧಿಯಂತಹ ಯೋಜನೆಗೆ ಇನ್ನಷ್ಟು ತಿಳಿವಳಿಕೆ ನೀಡಬೇಕಿದೆ. ದಸರಾ ನವರಾತ್ರಿ ಹಬ್ಬದ ಸಂದರ್ಭದಲ್ಲಿ ಗ್ಯಾರಂಟಿ ಯೋಜನೆಗಳ ಬಗ್ಗೆ  ಪ್ರಚಾರ ನೀಡಲು ಸೂಚಿಸಿದ್ದೇನೆ’ ಎಂದರು.

ದಕ್ಷಿಣ ಕನ್ನಡ ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಭರತ್ ಮುಂಡೋಡಿ, ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಎಂ.ಪಿ., ಸಮಿತಿಯ ಸದಸ್ಯ ಕಾರ್ಯದರ್ಶಿ ಡಾ.ಕೆ.ಆನಂದ್‌ ಹಾಗೂ ಜಿಲ್ಲಾ ಪಂಚಾಯಿತಿ ಮುಖ್ಯ ಯೋಜನಾ ಅಧಿಕಾರಿ ಸಂಧ್ಯಾ ಕೆ.ಎಸ್‌. ಭಾಗವಹಿಸಿದ್ದರು. 

‘ಗ್ಯಾರಂಟಿ ನಿಲ್ಲಿಸಿ ಎಂದವರೇ ಸೋಮಾರಿಗಳು’

‘ಗ್ಯಾರಂಟಿ ಯೋಜನೆಯನ್ನು ಬಿಟ್ಟಿ ಭಾಗ್ಯ ಎಂದು ಹಿಯಾಳಿಸಿ ಅದನ್ನು ನಿಲ್ಲಿಸಿ ಎನ್ನುತ್ತಿರುವವರೇ ಸೊಮಾರಿಗಳೇ ಹೊರತು ಈ ಯೋಜನೆಯ ಫಲಾನುಭವಿಗಳಲ್ಲ. ಬಡವರಿಗೆ ವರದಾನವಾಗಿರುವ ಈ ಕಾರ್ಯಕ್ರಮಗಳನ್ನು ಯಾವುದೇ ಕಾರಣಕ್ಕೂ ನಿಲ್ಲಿಸಬಾರದು’ ಎಂದು ಗ್ಯಾರಂಟಿ ಫಲಾನುಭವಿ ಭಾರತಿ ಬೋಳಾರ ಒತ್ತಾಯಿಸಿದರು.

ಪುಷ್ಪಾ ಅಮರನಾಥ್‌‌  ಜೊತೆಗಿನ ಸಂವಾದದಲ್ಲಿ ಮಾತನಾಡಿದ ಅವರು ‘ತಂದೆ ತಾಯಿ ದುಡಿದ ಹಣದಲ್ಲಿ ಶೋಕಿ ಮಾಡುವ ಕೆಲವರು ಇಂತಹ ಮಾತು ಆಡುತ್ತಾರೆ. ಅವರಿಗೆ ಸಂಸಾರವನ್ನು ನಿಭಾಯಿಸುವ ಕಷ್ಟ ಗೊತ್ತಿಲ್ಲ. ಗ್ಯಾರಂಟಿಗಳ ಪ್ರಯೋಜನ ಪಡೆದ ಕೆಲವರು ಈ ಯೋಜನೆಯನ್ನು ಟೀಕಿಸುತ್ತಿದ್ದು ಅವರಿಗೆ ನಾಚಿಕೆಯಾಗಬೇಕು’ ಎಂದರು.

‘ಈ ಯೋಜನೆಯಿಂದಾಗಿ ಕೆಲವು ಬಡ ಕುಟುಂಬಗಳು ವರ್ಷಕ್ಕೆ ₹ 1 ಲಕ್ಷಕ್ಕೂ ಹೆಚ್ಚು ಪ್ರಯೋಜನ ಪಡೆಯುತ್ತಿವೆ. ಹೊಟ್ಟೆಯುರಿಯಿಂದ ಯಾರು ಏನೇ ಅಪಪ್ರಚಾರ ಮಾಡಿದರೂ ನಮ್ಮ ಸರ್ಕಾರ ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸದು’ ಎಂದು ಪುಷ್ಪಾ ಅಮರನಾಥ್ ತಿಳಿಸಿದರು.  

ಫಲಾನುಭವಿಗಳ ಅಭಿಪ್ರಾಯಗಳು

ನಾನು ಸಿಂಗಲ್‌ ಪೇರೆಂಟ್. ಖಾಸಗಿ ಕೆಲಸ ಮಾಡಿ ಇಬ್ಬರು ಮಕ್ಕಳನ್ನು ಓದಿಸುತ್ತಿದ್ದೇನೆ.  ಗೃಹಲಕ್ಷ್ಮಿ ಯೋಜನೆಯಿಂದಾಗಿ ಈ ವರ್ಷ ಸಾಲ ಮಾಡದೆಯೇ ಮಕ್ಕಳ ಶಾಲಾ ಶುಲ್ಕ ಕಟ್ಟಿದೆ.
–ಗಾಯತ್ರಿ ಬಂಟ್ವಾಳ
ನಾನು ಅವಿವಾಹಿತೆ. ಅಣ್ಣಂದಿರ ಜೊತೆ ಇದ್ದೇನೆ.‌ ನನ್ನ ಔಷಧಕ್ಕೂ ಬೇರೆಯವರಿಗೆ ಕೈಚಾಚಬೇಕಿತ್ತು. ಗೃಹಲಕ್ಷ್ಮೀ ಯೋಜನೆಯಿಂದ ಆ ಮುಜುಗರ ತಪ್ಪಿದೆ.
–ಲೀಲಾ, ಮೂಲ್ಕಿ
ನನಗೆ ಮೂವರು ಹೆಣ್ಣು ಮಕ್ಕಳು. ಅವರಲ್ಲೊಬ್ಬಳು ಬುದ್ಧಿಮಾಂದ್ಯೆ. ಅವಳ ಔಷಧಕ್ಕೆ ಹಣ ಹೊಂದಿಸಲು ಕಷ್ಟವಾಗುತ್ತಿತ್ತು. ಪ್ರತಿ ತಿಂಗಳು ಗೃಹಲಕ್ಷ್ಮೀಯಡಿ ₹ 2000 ಸಿಗುತ್ತಿದೆ ಗೃಹಜ್ಯೋತಿಯಿಂದ  ₹ 500 ಉಳಿಯುತ್ತಿದೆ.
–ಲಲಿತಾ, ಮೂಡುಬಿದಿರೆ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT