ಭಾನುವಾರ, 22 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಆರ್‌ಎಸ್‌ಎಸ್‌ನಿಂದ ಲಿಂಗಾಯತರಲ್ಲಿಯೇ ಒಡಕು ಮೂಡಿಸುವ ಹುನ್ನಾರ: ಜಾಮದಾರ ಆರೋಪ

ಜಾಗತಿಕ ಲಿಂಗಾಯತ ಮಹಾಸಭಾದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಡಾ. ಎಸ್‌.ಎಂ.ಜಾಮದಾರ ಆರೋಪ
Published : 22 ಸೆಪ್ಟೆಂಬರ್ 2024, 15:11 IST
Last Updated : 22 ಸೆಪ್ಟೆಂಬರ್ 2024, 15:11 IST
ಫಾಲೋ ಮಾಡಿ
Comments

ಗದಗ: ‘ಬಸವ ತತ್ವ ಒಪ್ಪದ ರಾಷ್ಟ್ರೀಯ ಸ್ವಯಂ ಸೇವಕ ಸಂಘದವರು ಲಿಂಗಾಯತರಲ್ಲಿಯೇ ಒಡಕು ಮೂಡಿಸುವ ಹುನ್ನಾರ ನಡೆಸಿದ್ದಾರೆ. ಇದಕ್ಕೆ ‘ವಚನ ದರ್ಶನ’ ಕೃತಿ ಒಂದು ನಿರ್ದಶನ’ ಎಂದು ಜಾಗತಿಕ ಲಿಂಗಾಯತ ಮಹಾಸಭಾದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಡಾ. ಎಸ್‌.ಎಂ.ಜಾಮದಾರ ಆರೋಪಿಸಿದರು.

‘ಬಸವ ತತ್ವ ಒಪ್ಪದವರಿಂದ, ಮೂಲ ಆಶಯಕ್ಕೆ ಧಕ್ಕೆ ಬರುವಂತಿರುವ ‘ವಚನ ದರ್ಶನ’ ಬರೆಸುವ ಅಗತ್ಯ ಈಗೇನಿತ್ತು? ಇದು ಚುನಾವಣೆ ಕಾಲವಲ್ಲ, ಚಳವಳಿಯೂ ನಡೆಯುತ್ತಿಲ್ಲ. ಇದೆಲ್ಲವೂ ಲಿಂಗಾಯತರಲ್ಲಿ, ಬಸವನಿಷ್ಠರಲ್ಲಿ ಗೊಂದಲ ಮೂಡಿಸುವ, ಪ್ರಚೋದಿಸುವ ಕೆಲಸ’ ಎಂದು ಭಾನುವಾರ ಸುದ್ದಿಗಾರರಿಗೆ ತಿಳಿಸಿದರು.

‘ಗದುಗಿನವರೇ ಆದ ಸದಾಶಿವಾನಂದ ಸ್ವಾಮೀಜಿ ‘ವಚನ ದರ್ಶನ’ ಕೃತಿ ಸಂಪಾದಿಸಿದ್ದಾರೆ. ಆದರೆ, ಈ ಕೃತಿ ಶರಣರ ಮೂಲ ಆಶಯಕ್ಕೆ ಧಕ್ಕೆ ತರುವಂತಹದಾಗಿದ್ದು, ಅವರು ಲಿಂಗಾಯತ ತತ್ವದ ಇತಿಹಾಸದ ಬೇರನ್ನು ಅಲುಗಾಡಿಸುವ ಕೆಲಸ ಮಾಡಿದ್ದಾರೆ. ಹಿಂದುತ್ವ ಎಂಬುದು ರಾಷ್ಟ್ರದ ಸಂಕೇತವೇ ಹೊರತು; ಧರ್ಮದ ಸಂಕೇತವಲ್ಲ’ ಎಂದು ಹೇಳಿದರು.

‘ಈ ಪುಸ್ತಕವನ್ನು ಆರ್‌ಎಸ್‌ಎಸ್ ಪ್ರಕಾಶನ ಮಾಡಿದ್ದು ಏಕೆ? ಅಷ್ಟೇ ಅಲ್ಲ, ಈ ಪುಸ್ತಕ ಬೆಂಗಳೂರು, ವಿಜಯಪುರ, ಹಾವೇರಿ, ರಾಣೆಬೆನ್ನೂರು, ಕಲಬುರಗಿ, ಬೆಳಗಾವಿ ಸೇರಿ ಒಂಬತ್ತು ಸ್ಥಳಗಳಲ್ಲಿ ಬಿಡುಗಡೆ ಮಾಡಿದ್ದಾರೆ. ಬೆಂಗಳೂರಿನಲ್ಲಿ ನಡೆದ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ರಾಜ್ಯದವರೇ ಆದ ಹೊಸಬಾಳೆ ಸೇರಿ ನಾಗಪುರದಿಂದ ಮೂವರು ಬಂದಿದ್ದರು’ ಎಂದು ದೂರಿದರು.

‘ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಶಂಕರಾನಂದ ಭಾರತಿ ಸ್ವಾಮೀಜಿ ‘ವಚನಗಳನ್ನು ಯಾರೂ ಬರೆದಿಲ್ಲ, 237 ಶರಣರ ಅಸ್ತಿತ್ವವೇ ಇಲ್ಲ. ವಚನ ಚಳವಳಿ ನಡೆದಿಲ್ಲ, ಕಲ್ಯಾಣ ಕ್ರಾಂತಿ ಆಗಿಲ್ಲ ಎಂಬ ಹೇಳಿಕೆಯಿಂದ ನೋವಾಗಿದ್ದು, ಇದನ್ನು ಮಹಾಸಭಾ ತೀವ್ರವಾಗಿ ಖಂಡಿಸಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT