ಗುರುವಾರ, 3 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮುಂಡರಗಿ | ವೀರಭದ್ರೇಶ್ವರ ಪಲ್ಲಕ್ಕಿ ಉತ್ಸವ: ಮನಸೆಳೆದ ನಂದಿಕೋಲು ಕುಣಿತ

Published : 3 ಅಕ್ಟೋಬರ್ 2024, 14:07 IST
Last Updated : 3 ಅಕ್ಟೋಬರ್ 2024, 14:07 IST
ಫಾಲೋ ಮಾಡಿ
Comments

ಮುಂಡರಗಿ: ಮಹಾನವಮಿ ಅಮಾವಾಸ್ಯೆಯ ಅಂಗವಗಿ ತಾಲ್ಲೂಕಿನ ಸಿಂಗಟಾಲೂರ ಗ್ರಾಮದಲ್ಲಿ ಬುಧವಾರ ರಾತ್ರಿ ವೀರಭದ್ರೇಶ್ವರನ ಪಲ್ಲಕ್ಕಿ ಉತ್ಸವ ಅದ್ದೂರಿಯಾಗಿ ನಡೆಯಿತು.

ಬುಧವಾರ ಸಂಜೆ 5 ಗಂಟೆಯಿಂದ ಗುರುವಾರ ಬೆಳಗಿನ ಜಾವ 5 ಗಂಟೆಯವರೆಗೆ ಉತ್ಸವ ಜರುಗಿತು. ಗ್ರಾಮದ ಎಲ್ಲ ಬೀದಿಗಳನ್ನು ತೋರಣಗಳಿಂದ ಅಲಂಕರಿಸಲಾಗಿತ್ತು. ಮಹಿಳೆಯರು ಮನೆಯ ಅಂಗಳದಲ್ಲಿ ರಂಗೋಲಿ ಬಿಡಿಸಿ ಪಲ್ಲಕ್ಕಿಗೆ ಸ್ವಾಗತ ಕೋರಿದರು.

ಮಹಿಳೆಯರು ವೀರಭದ್ರೇಶ್ವರನಿಗೆ ಹಣ್ಣು, ಕಾಯಿ, ಹೂವು ಅರ್ಪಿಸಿದರು. ಕೆಲವು ಮಹಿಳೆಯರು ಪಲ್ಲಕ್ಕಿಯ ಕೆಳಗೆ ನುಸುಳಿ ಹರಕೆ ತೀರಿಸಿದರು. ಗ್ರಾಮಸ್ಥರು ವೀರಭದ್ರೇಶ್ವರನ ಪಲ್ಲಕ್ಕಿಯ ಮೇಲೆ ಹೂಮಳೆಗರೆದರು. ಸಮ್ಮಾಳ, ಭಾಜಾ, ಭಜಂತ್ರಿ ಹಾಗೂ ಇಪ್ಪತ್ತಕ್ಕೂ ಹೆಚ್ಚು ನಂದಿಕೋಲುಗಳ ಕುಣಿತವು ನೋಡುಗರನ್ನು ಮಂತ್ರಮುಗ್ಧಗೊಳಿಸಿದವು.

ಪ್ರತಿ ವರ್ಷ ಮಹಾನವಮಿ ಅಮವಾಸೆಯ ಮುನ್ನಾದಿನ ಸಿಂಗಟಾಲೂರ ಗ್ರಾಮಸ್ಥರು ಈರಣ್ಣನ ಗುಡ್ಡದಿಂದ ಪಲ್ಲಕ್ಕಿಯಲ್ಲಿ ವೀರಭದ್ರೇಶ್ವರನನ್ನು ಗ್ರಾಮಕ್ಕೆ ಕರೆತರುತ್ತಾರೆ. ಎರಡು ದಿನ ವೀರಭದ್ರೇಶ್ವರ ಗ್ರಾಮದಲ್ಲಿ ವಾಸ್ಯವ್ಯ ಹೂಡುತ್ತಾನೆ.

ಚಿಣ್ಣರ ನಂದಿಕೊಲು ಕುಣಿತ: ವೀರಭದ್ರೇಶ್ವರನು ಗ್ರಾಮಕ್ಕೆ ಆಗಮಿಸಿದೊಡನೆ ಗ್ರಾಮದ ಸಣ್ಣ, ಪುಟ್ಟ ಮಕ್ಕಳೆಲ್ಲ ಸಂಭ್ರಮಿಸುತ್ತಾರೆ. ಗ್ರಾಮದಲ್ಲಿ ನಡೆಯುವ ವೀರಭದ್ರೇಶ್ವರನ ಪಲ್ಲಕ್ಕಿ ಉತ್ಸವದಲ್ಲಿ ಕುಣಿದು ಕುಪ್ಪಳಿಸುತ್ತಾರೆ.

ಗ್ರಾಮದ ಯುವಕರೆಲ್ಲ ಹಿತ್ತಾಳೆಯಿಂದ ನಿರ್ಮಿಸಿದ ಉದ್ದನೆಯ ನಂದಿಕೋಲುಗಳನ್ನು ಹೊತ್ತು ಸಮ್ಮಾಳದ ಲಯಕ್ಕೆ ತಕ್ಕಂತೆ ಕುಣಿಯುತ್ತಾರೆ. ಅದೇ ಮಾದರಿಯಲ್ಲಿ ಮಕ್ಕಳು ಖಾಲಿ ಪ್ಲಾಸ್ಟಿಕ್ ಬಾಟಲಿ ಸಂಗ್ರಹಿಸಿ ಅವುಗಳನ್ನು ಉದ್ದನೆಯ ಕೋಲಿಗೆ ಹಾಕಿ ನಂದಿಕೋಲುಗಳನ್ನಾಗಿ ಮಾಡಿಕೊಳ್ಳುತ್ತಾರೆ. ಮೆರವಣಿಗೆಯ ಬದಿಯಲ್ಲಿ ಮಕ್ಕಳು ಯುವಕರಂತೆ ಸಮ್ಮಾಳದ ಲಯಕ್ಕೆ ತಕ್ಕಂತೆ ಕುಣಿಯುತ್ತಾರೆ. ಮಕ್ಕಳ ನಂದಿಕೋಲು ಕುಣಿತ ನೋಡುಗರ ಮನಗೆಲ್ಲುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT