ಶನಿವಾರ, 5 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ತೆಂಗು ಬೆಳೆ ವಿಸ್ತರಣೆಗೆ ಇಲಾಖೆ ನೆರವು

ಅರಕಲಗೂಡು ತಾಲ್ಲೂಕಿನಲ್ಲಿ ಬೆಳವಣಿಗೆ ಕಾಣುತ್ತಿರುವ ತೆಂಗು ಬೆಳೆ ಪ್ರದೇಶ
ಜಿ. ಚಂದ್ರಶೇಖರ್
Published : 6 ಜುಲೈ 2024, 7:14 IST
Last Updated : 6 ಜುಲೈ 2024, 7:14 IST
ಫಾಲೋ ಮಾಡಿ
Comments

ಅರಕಲಗೂಡು: ತಾಲ್ಲೂಕಿನಲ್ಲಿ ಪ್ರಮುಖ ವಾಣಿಜ್ಯ ಬೆಳೆಗಳಾದ ತಂಬಾಕು ಹಾಗೂ ಆಲೂಗಡ್ಡೆಗೆ  ಪರ್ಯಾಯವಾಗಿ ತೆಂಗು ಬೆಳೆ ಅಭಿವೃದ್ಧಿಗೆ ತೋಟಗಾರಿಕೆ ಇಲಾಖೆ ಮುಂದಾಗಿದ್ದು, ರೈತರ ಆರ್ಥಿಕ ಮಟ್ಟ ಸುಧಾರಣೆಗೆ ಸಹಕಾರಿಯಾಗುವ ಆಶಾಭಾವನೆ ಮೂಡಿಸಿದೆ.

ಅರೆಮಲೆನಾಡು ಪ್ರದೇಶವಾದ ತಾಲ್ಲೂಕಿನಲ್ಲಿ ರೈತರು ಹೆಚ್ಚಿನದಾಗಿ ತಂಬಾಕು, ಆಲೂಗಡ್ಡೆ, ಮುಸುಕಿನ ಜೋಳ ಮತ್ತು  ಶುಂಠಿ ಬೆಳೆಗೆ ಮಾರು ಹೋಗಿದ್ದಾರೆ. ಸದ್ಯಕ್ಕೆ ತಾಲ್ಲೂಕಿನಲ್ಲಿ 12 ಸಾವಿರ ಹೆಕ್ಟೇರ್ ಪ್ರದೇಶದಲ್ಲಷ್ಟೇ ತೋಟಗಾರಿಕೆ ಬೆಳೆ ಇದೆ. ಇದರಲ್ಲಿ ಆರು ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಅಡಿಕೆ ಹಾಗೂ ಮೂರು ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ತೆಂಗು ಬೆಳೆಯಲಾಗುತ್ತಿದೆ.

ಆಲೂಗಡ್ಡೆಯಲ್ಲಿ ರೈತರು ಕೈಸುಟ್ಟುಕೊಳ್ಳುತ್ತಿರುವ ಪರಿಣಾಮ ಹಾಗೂ ತಂಬಾಕು ನಿಷೇಧಿತ ಬೆಳೆಯಾಗುವ ಸಾಧ್ಯತೆ ಇರುವ ಕಾರಣ ಅನ್ನದಾತರಿಗೆ ಆಗುತ್ತಿರುವ ಆರ್ಥಿಕ ನಷ್ಟ ಸರಿದೂಗಿಸಿ, ಆದಾಯ ದ್ವಿಗುಣಗೊಳಿಸಲು ಸಹಕಾರಿಯಾಗಲಿದೆ ಎನ್ನುವ ಉದ್ದೇಶದಿಂದ ತೋಟಗಾರಿಕೆ ಇಲಾಖೆ  ಪರ್ಯಾಯವಾಗಿ ತೆಂಗು ಬೆಳೆ ಪ್ರದೇಶ ಅಭಿವೃದ್ಧಿ ಪಡಿಸಲು ಆದ್ಯತೆ ನೀಡಿದೆ.

ತೆಂಗು ಬೆಳೆಯು ಕರ್ನಾಟಕದ ಅರಸೀಕೆರೆ, ಚನ್ನರಾಯಪಟ್ಟಣ, ತಿಪಟೂರು, ತುಮಕೂರು ಭಾಗದಲ್ಲಿ ಸಾಂಪ್ರದಾಯಿಕ ಬೆಳೆಯಾಗಿ ಬೆಳೆಯಲಾಗುತ್ತಿದೆ. ತಾಲ್ಲೂಕು ಸಹ ತೆಂಗು ಬೆಳೆಗೆ ಸೂಕ್ತ ಪ್ರದೇಶ ಹೊಂದಿದ್ದು, ಆರಂಭಿಕ ಹಂತದಲ್ಲಿ ದೊಡ್ಡಮಗ್ಗೆ ಹೋಬಳಿ ಭಾಗದ 250 ಹೆಕ್ಟೇರ್‌ನಲ್ಲಿ ಬೆಳೆ ಅಭಿವೃದ್ಧಿ ಪಡಿಸಲು ಒತ್ತು ನೀಡಲಾಗಿದೆ.

ಈ ನಿಟ್ಟಿನಲ್ಲಿ ಹೆಚ್ಚಿನ ಗಮನ ಹರಿಸಿರುವ ಶಾಸಕ ಎ. ಮಂಜು, ಅರಸೀಕೆರೆ, ಚನ್ನರಾಯಪಟ್ಟಣ ತಾಲ್ಲೂಕಿಗೆ ಮಾತ್ರ ಸೀಮಿತವಾಗಿದ್ದ ಸವಲತ್ತುಗಳನ್ನು ಇದೇ ಮೊದಲ ಬಾರಿಗೆ ತಾಲ್ಲೂಕಿಗೆ ತರುವಲ್ಲಿ ಶ್ರಮಿಸಿದ್ದಾರೆ. ಕೇಂದ್ರ ಸರ್ಕಾರದ ತೆಂಗು ಬೆಳೆ ಅಭಿವೃದ್ಧಿ ಮಂಡಳಿ ವತಿಯಿಂದ ಕೊಡಮಾಡುವ ₹ 44 ಲಕ್ಷ ಮೌಲ್ಯದ ವಿವಿಧ ಪೋಷಕಾಂಶಗಳು ಹಾಗೂ ಪರಿಕರಗಳನ್ನು ದೊಡ್ಡಮಗ್ಗೆ ಹೋಬಳಿಯ 8 ಗ್ರಾಮ ಪಂಚಾಯಿತಿ ವ್ಯಾಪ್ತಿಯ 440 ಫಲಾನುಭವಿಗಳಿಗೆ ವಿತರಿಸಲಾಗಿದ್ದು, ಬೆಳೆಗಾರರ ಸಂತಸ ಇಮ್ಮಡಿಗೊಳಿಸಿದೆ.

ತಾಲ್ಲೂಕಿನಲ್ಲಿ ಬದಲಾದ ವಾತಾವರಣದಿಂದಾಗಿ ಮಳೆ ಪ್ರಮಾಣ ಕಡಿಮೆ ಆಗುತ್ತಿದೆ. ತೋಟಗಾರಿಕೆ ಇಲಾಖೆ ಮಾಹಿತಿ ಪ್ರಕಾರ ಐದು ವರ್ಷಗಳಿಂದ ರೈತರು 300ರಿಂದ 400 ಹೆಕ್ಟೇರ್ ಪ್ರದೇಶದಲ್ಲಿ ತೆಂಗು ಬೆಳೆ ಪ್ರದೇಶ ವಿಸ್ತರಿಸಿದ್ದಾರೆ. ಇದರಿಂದ ಈ ಭಾಗದ ರೈತರು ಸಹ ತೆಂಗು ಬೆಳೆಯತ್ತ ಒಲವು ಹೊಂದಿರುವುದು ಕಂಡುಬಂದಿದೆ.

ಇತ್ತೀಚಿನ ವರ್ಷಗಳಲ್ಲಿ ಕೊಳವೆಬಾವಿಗಳ ಸಂಖ್ಯೆ ಹೆಚ್ಚಿದ್ದು, ತೆಂಗು ಬೆಳೆಗೆ ನೀರುಣಿಸಲು ಸಹಕಾರಿಯಾಗಿದೆ. ಉದ್ಯೋಗ ಖಾತರಿ ಯೋಜನೆಯಡಿ ಇಲಾಖೆ ಬೆಳೆಗಾರರಿಗೆ ಸಹಾಯಧನ ಒದಗಿಸುತ್ತಿರುವುದು, ಬೆಳೆ ವಿಸ್ತೀರ್ಣಕ್ಕೆ ಮತ್ತಷ್ಟು ಪುಷ್ಟಿ ನೀಡಿದಂತಾಗಿದೆ.

ಮಳೆಯಾಶ್ರಿತ ತೆಂಗು ಬೆಳೆಯಲ್ಲಿ ಪೋಷಕಾಂಶಗಳ ಸಮಸ್ಯೆ ನಿವಾರಣೆಯೂ ತಲೆನೋವಾಗಿದೆ. ಹೀಗಾಗಿ ತೆಂಗು ಅಭಿವೃದ್ಧಿ ಮಂಡಳಿಯಿಂದ ರೈತರ ತಾಕಿನಲ್ಲಿ ಮಂಚೂಣಿ ಪ್ರಾತ್ಯಕ್ಷಿಕೆ ಯೋಜನೆಯಡಿ ಎಲ್ಲ ರೀತಿಯ ಪೋಷಕಾಂಶಗಳನ್ನು ಒದಗಿಸಲಾಗುತ್ತಿದೆ. ಮುಖ್ಯವಾಗಿ ಸಮಗ್ರ ಪೋಷಕಾಂಶಗಳ ನಿರ್ವಹಣೆಗೆ ಒತ್ತು ನೀಡಿದ್ದು, ಬೇವಿನ ಹಿಂಡಿ, ಸಾರಜನಕ, ರಂಜಕ, ಮೆಗ್ನಿಷಿಯಂ, ಸಲ್ಫೇಟ್, ಲಘು ಪೋಷಕಾಂಶಗಳನ್ನು ಒಳಗೊಂಡಿದೆ.

ಇದರಿಂದ ಗಿಡಗಳಿಗೆ ಯಾವುದೇ ಪೋಷಕಾಂಶಗಳ ಕೊರತೆ ಕಾಡದಂತೆ ಸ್ವಾಭಾವಿಕವಾಗಿ ಇಳುವರಿ ಹೆಚ್ಚಿಸಲು ಸಾಧ್ಯವಾಗುತ್ತದೆ. ಹಸಿರೆಲೆ ಗೊಬ್ಬರದ ಬೀಜ ವಿತರಿಸಿ, ಬೆಳೆ ಪ್ರದೇಶದಲ್ಲಿ ಸಾವಯವ ವೃದ್ಧಿಸಿ ಮಣ್ಣಿನ ಫಲವತ್ತತೆ ಕಾಪಾಡಿಕೊಳ್ಳುವಂತೆ ಬೆಳೆಗಾರರಿಗೆ ನೆರವಾಗುತ್ತಿರುವುದು ತೆಂಗು ಬೆಳೆ ವಿಸ್ತರಣೆಗೆ ಪೂರಕವಾಗಿ ಪರಿಣಮಿಸಿದೆ ಎನ್ನುತ್ತಾರೆ ಬೆಳೆಗಾರರು.

ಸೀಬಳ್ಳಿ ಯೋಗಣ್ಣ
ಸೀಬಳ್ಳಿ ಯೋಗಣ್ಣ
ಡಿ.ರಾಜೇಶ್
ಡಿ.ರಾಜೇಶ್
ಎ.ಮಂಜು
ಎ.ಮಂಜು

ರೈತರ ಆರ್ಥಿಕ ಭವಿಷ್ಯದ ದೃಷ್ಟಿಯಿಂದ ತೆಂಗು ಬೆಳೆಯಲು ಒತ್ತು ನೀಡಬೇಕು. ತೆಂಗು ಅಭಿವೃದ್ಧಿ ಮಂಡಳಿ ಸೌಲಭ್ಯಗಳನ್ನು ಬೆಳೆಗಾರರಿಗೆ ತಲುಪಿಸಲು ಕ್ರಮ ಕೈಗೊಳ್ಳಲಾಗಿದೆ.

-ಎ. ಮಂಜು ಶಾಸಕ

ಮಲೇಷ್ಯಾದಿಂದ ತಾಳೆ ಎಣ್ಣೆ ಅಮದು ಮಾಡಿಕೊಳ್ಳುವ ಬದಲು ಇಲ್ಲಿಯೇ ಹೆಚ್ಚು ತೆಂಗು ಎಣ್ಣೆ ಉತ್ಪಾದಿಸಿ ರಫ್ತು ಮಾಡಬೇಕು. ಮುಖ್ಯವಾಗಿ ಬೆಂಬಲ ಬೆಲೆ ಹೆಚ್ಚಿಸಬೇಕು.

-ಸೀಬಳ್ಳಿ ಯೋಗಣ್ಣ ತಾಲ್ಲೂಕು ರೈತ ಸಂಘದ ಅಧ್ಯಕ್ಷ

‘ತೆಂಗು ಬೆಳೆ ಸೂಕ್ತ’ ತೆಂಗು ರೈತರ ಕೈ ಹಿಡಿಯಲಿದೆ. ಹೀಗಾಗಿ ಅಡಿಕೆ ಬೆಳೆಗೆ ಮಾರು ಹೋಗುವುದಕ್ಕಿಂತ ತೆಂಗು ಬೆಳೆ ಬೆಳೆಯುವುದು ಸೂಕ್ತ ಎಂದು ತೋಟಗಾರಿಕೆ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಡಿ.ರಾಜೇಶ್ ತಿಳಿಸಿದ್ದಾರೆ. ಕರಾವಳಿಗೆ ಸೀಮಿತವಾಗಿದ್ದ ಅಡಿಕೆ ಐದು ವರ್ಷಗಳಿಂದ ಬಯಲು ಸೀಮೆಯನ್ನು ವ್ಯಾಪ್ತಿಸುತ್ತಿರುವುದು ಆತಂಕಕಾರಿ ಬೆಳವಣಿಗೆ. ಅಡಿಕೆ ಆಹಾರದ ಬೆಳೆ ಅಲ್ಲ. ಅಡಿಕೆ ಇಳುವರಿ ಹೆಚ್ಚಿದರೆ ಮಾರುಕಟ್ಟೆ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿ ಬೆಲೆ ನಷ್ಟ ಅನುಭವಿಸುವ ಸಾಧ್ಯತೆ ಅಲ್ಲಗಳೆಯುವಂತಿಲ್ಲ ಎಂದು ಹೇಳಿದ್ದಾರೆ. ಮಿಶ್ರಬೆಳೆಗೆಯಾಗಿ ಕಾಳುಮೆಣಸು ಜಾಯಿಕಾಯಿ ಕೋಕೋ ಸಾಂಬಾರ ಪದಾರ್ಥಗಳನ್ನು ಬೆಳೆಯಬೇಕು. ಒಂದೇ ಬೆಳೆಗೆ ಅಂಟಿಕೊಳ್ಳದೆ ರೈತರು ಆರ್ಥಿಕ ಅಭಿವೃದ್ಧಿ ಹಾಗೂ ಆರೋಗ್ಯದ ದೃಷ್ಟಿಯಿಂದ ತೆಂಗು ಬೆಳೆಯುವುದು ಸೂಕ್ತ. ಈ ನಿಟ್ಟಿನಲ್ಲಿ ರೈತರನ್ನು ಉತ್ತೇಜಿಸಲಾಗುತ್ತಿದೆ ಎಂದು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT