ಗುರುವಾರ, 10 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಹಾಸನ | ಪಿಎಂ ಆವಾಸ್‌ ಯೋಜನೆ: 921 ಮನೆ ಮಂಜೂರು

ಅರಕಲಗೂಡಿನಲ್ಲಿ ಸಂಭ್ರಮ ಪಂಚಾಯಿತಿ ದಸರಾ ಉದ್ಘಾಟಿಸಿದ ಶಾಸಕ ಎ.ಮಂಜು
Published : 10 ಅಕ್ಟೋಬರ್ 2024, 13:28 IST
Last Updated : 10 ಅಕ್ಟೋಬರ್ 2024, 13:28 IST
ಫಾಲೋ ಮಾಡಿ
Comments

ಅರಕಲಗೂಡು: ಪ್ರಧಾನ ಮಂತ್ರಿ ವಸತಿ ಯೋಜನೆಯಡಿ ತಾಲ್ಲೂಕಿಗೆ 921 ಮನೆಗಳು ಮಂಜೂರಾಗಿದ್ದು, ಇದರ ವಿತರಣೆಗೆ ಕ್ರಮ ಕೈಗೊಳ್ಳಲಾಗಿದೆ ಎಂದು ಶಾಸಕ ಎ.ಮಂಜು ಹೇಳಿದರು.

ಅರಕಲಗೂಡು ದಸರಾ ಉತ್ಸವದ ಪ್ರಯುಕ್ತ ಪಟ್ಟಣದ ಗಣಪತಿ ಕೊತ್ತಲು ಉದ್ಯಾನದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಸಹಯೋಗದಲ್ಲಿ ಗುರುವಾರ ಏರ್ಪಡಿಸಿದ್ದ ಪಂಚಾಯಿತಿ ದಸರಾ ಉದ್ಘಾಟಿಸಿ ಅವರು ಮಾತನಾಡಿದರು.

ಮೂರು ವರ್ಷಗಳ ಬಳಿಕ ತಾಲ್ಲೂಕಿಗೆ ಈ ಯೋಜನೆಯಡಿ ಮನೆಗಳು ಮಂಜೂರಾಗಿದ್ದು, ನಿಗದಿತ ಪಟ್ಟಿಯಂತೆ ಮನೆಗಳ ವಿತರಣೆ ನಡೆಯಲಿದೆ. ಮಳೆ ಹಾನಿಯಿಂದ ಸಂಪೂರ್ಣ ಮನೆ ಕಳೆದುಕೊಂಡವರಿಗೆ ಸರ್ಕಾರ ₹1.30 ಲಕ್ಷ ಧನಸಹಾಯ ನೀಡಲಿದೆ. ಇದರ ಜತೆಗೆ ವಸತಿ ಯೋಜನೆಯಡಿ ಮನೆ ನೀಡಲು ಗ್ರಾಮ ಪಂಚಾಯಿತಿ ಕ್ರಮ ಕೈಗೊಳ್ಳಬೇಕು ಎಂದರು.

ಸರ್ಕಾರಿ ಕೆಲಸ, ಸೇವೆ ಮಾಡಲು ದೊರೆತ ಅವಕಾಶ ಎಂದು ತಿಳಿದು ಜನರ ಕೆಲಸವನ್ನು ಪ್ರೀತಿಯಿಂದ ಮಾಡಿಕೊಡುವ ಮನೋಭಾವವನ್ನು ಪಂಚಾಯತ್ ರಾಜ್ ಇಲಾಖೆ ನೌಕರರು ಬೆಳೆಸಿಕೊಳ್ಳಬೇಕು. ಗ್ರಾಮೀಣ ಪ್ರದೇಶದ ರೈತಾಪಿ ಜನರು ಹಲವು ಸಂಕಷ್ಟಗಳನ್ನು ಎದುರಿಸುತ್ತಿದ್ದಾರೆ. ಪ್ರೀತಿ, ವಿಶ್ವಾಸದಿಂದ ಕಂಡು ಅವರ ಕೆಲಸವನ್ನು ತ್ವರಿತವಾಗಿ ಮಾಡಿಕೊಟ್ಟಾಗ ಅವರ ಹಾರೈಕೆಯ ನುಡಿ ನಿಮಗೆ ಶ್ರೇಯಸ್ಸನ್ನು ನೀಡುತ್ತದೆ. ಗ್ರಾಮ ಪಂಚಾಯಿತಿಗಳಲ್ಲಿ ಇ–ಸ್ವತ್ತು ನೀಡಲು ಸತಾಯಿಸುವ ಹಲವು ದೂರುಗಳು ಕೇಳಿಬರುತ್ತಿದೆ. ಇದಕ್ಕೆ ಅವಕಾಶ ನೀಡದಂತೆ ಕಾರ್ಯ ನಿರ್ವಹಿಸುವಂತೆ ಸೂಚಿಸಿದರು.

ಚಿಲುಮೆ ಮಠದ ಮಠಾಧೀಶ, ದಸರಾ ಉತ್ಸವ ಸಮಿತಿ ಅಧ್ಯಕ್ಷ ಜಯದೇವ ಸ್ವಾಮೀಜಿ ಆಶೀರ್ವಚನ ನೀಡಿದರು. ವಸತಿ ಯೋಜನೆಯ ಫಲಾನುಭವಿಗಳಿಗೆ ಮಂಜೂರಾತಿ ಪತ್ರ ವಿತರಿಸಲಾಯಿತು. ಪಟ್ಟಣ ಪಂಚಾಯಿತಿ ಉಪಾಧ್ಯಕ್ಷ ಸುಬಾನ್ ಷರೀಫ್‌, ದೊಡ್ಡಮಗ್ಗೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಕೊಡಕಳ್ಳಿ ಆಶೋಕ್, ಮುಖಂಡರಾದ ಮುತ್ತಿಗೆ ರಾಜೇಗೌಡ, ಮಗ್ಗೆ ರಾಜೇಗೌಡ, ದಸರಾ ಸಮಿತಿಯ ರವಿಕುಮಾರ್, ಗೋಪಾಲ್, ಭಾಸ್ಕರ್, ಮುತಾಹಿರ್ ಪಾಷಾ ಉಪಸ್ಥಿತರಿದ್ದರು.

ಸಿಬ್ಬಂದಿ ಕೊರತೆ ನಡುವೆಯೂ ಇಲಾಖೆ ನೌಕರರು ಜನರಿಗೆ ಸ್ಪಂದಿಸಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಪಂಚಾಯಿತಿ ನೌಕರರು ಪ್ರತಿಭಟನೆ ನಡೆಸುತ್ತಿದ್ದು ಬೇಡಿಕೆ ಕುರಿತು ಶಾಸಕರು ಸರ್ಕಾರದ ಗಮನ ಸೆಳೆಯಬೇಕು.
ಡಿ.ಡಿ. ಪ್ರಕಾಶ್ ತಾ.ಪಂ. ಕಾರ್ಯನಿರ್ವಹಣಾಧಿಕಾರಿ

ಆಯುಧ ಪೂಜೆ ಇಂದು

ಆಯುಧ ಪೂಜೆ ಪ್ರಯುಕ್ತ ಪಟ್ಟಣದಲ್ಲಿ ಶುಕ್ರವಾರ ಸರ್ಕಾರಿ ವಾಹನಗಳಿಗೆ ಸಾಮೂಹಿಕ ಪೂಜೆ ನಡೆಯಲಿದೆ. ಪಟ್ಟಣ ಪಂಚಾಯಿತಿ ಕಚೇರಿ ಆವರಣದಲ್ಲಿ ಬೆಳಿಗ್ಗೆ 10 ಕ್ಕೆ ನಡೆಯುವ ಕಾರ್ಯಕ್ರಮದಲ್ಲಿ ವಿವಿಧ ಮಠಾಧೀಶರು ಶಾಸಕ ಎ. ಮಂಜು ಪಟ್ಟಣ ಪಂಚಾಯಿತಿ ಅಧ್ಯಕ್ಷ ಎಸ್.ಎಸ್. ಪ್ರದೀಪ್ ಕುಮಾರ್ ಉಪಾಧ್ಯಕ್ಷ ಸುಬಾನ್ ಷರೀಫ್‌ ತಹಶೀಲ್ದಾರ್ ಕೆ.ಸಿ. ಸೌಮ್ಯ ಭಾಗವಹಿಸುವರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT