ಭಾನುವಾರ, 22 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಹಾವೇರಿ | ಲಾಕ್‌ಡೌನ್‌ಗೆ ಜಿಲ್ಲೆಯಾದ್ಯಂತ ಉತ್ತಮ ಪ್ರತಿಕ್ರಿಯೆ

Published : 19 ಜುಲೈ 2020, 14:32 IST
ಫಾಲೋ ಮಾಡಿ
Comments

ಹಾವೇರಿ:ರಾಜ್ಯ ಸರ್ಕಾರ ಕೊರೊನಾ ಸೋಂಕು ನಿಯಂತ್ರಿಸಲು ಜಾರಿಗೊಳಿಸಿರುವ ‘ಭಾನುವಾರದ ಲಾಕ್ ಡೌನ್'ಗೆ ಜಿಲ್ಲೆ ಸಂಪೂರ್ಣ ಸ್ತಬ್ಧವಾಗಿದ್ದು, ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು.

ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಕೋವಿಡ್‌ ಪ್ರಕರಣಗಳು ಏರುತ್ತಿದ್ದು, 400ರ ಗಡಿ ದಾಟಿರುವುದು ಜನರ ಆತಂಕವನ್ನು ಹೆಚ್ಚಿಸಿದೆ. ಹೀಗಾಗಿ ಜನರು ಮನೆಯಲ್ಲೇ ಇರುವ ಮೂಲಕ ಲಾಕ್‌ಡೌನ್‌ಗೆ ಬೆಂಬಲ ನೀಡಿದರು.

ನಗರದ ಪ್ರಮುಖ ವೃತ್ತ, ಸಂಪರ್ಕ ಕಲ್ಪಿಸುವ ರಸ್ತೆಗಳಲ್ಲಿ ಪೊಲೀಸರು ಬಿಗಿ ಬಂದೋಬಸ್ತ್‌ ಒದಗಿಸಿದ್ದರು. ಹೊಸಮನಿ ಸಿದ್ದಪ್ಪ ವೃತ್ತ, ಜೆ.ಎಚ್‌.ಪಟೇಲ್‌ ಸರ್ಕಲ್‌, ಅಂಬೇಡ್ಕರ್‌ ವೃತ್ತ, ಗಾಂಧಿ ವೃತ್ತ, ಸುಭಾಷ್‌ ಸರ್ಕಲ್‌ಗಳು ಸೇರಿದಂತೆ ವಿವಿಧೆಡೆ ಪೊಲೀಸ್‌ ಸಿಬ್ಬಂದಿ ಕರ್ತವ್ಯದಲ್ಲಿ ನಿರತರಾಗಿದ್ದರು.

ಎಪಿಎಂಸಿ ಯಾರ್ಡ್‌,ಲಾಲ್‌ ಬಹುದ್ದೂರ್‌ಶಾಸ್ತ್ರಿ ತರಕಾರಿ ಮಾರುಕಟ್ಟೆ ಮತ್ತು ಜಾನುವಾರು ಮಾರುಕಟ್ಟೆಯಲ್ಲಿ ವ್ಯಾಪಾರ–ವಹಿವಾಟು ಸಂಪೂರ್ಣ ಬಂದ್‌ ಆಗಿತ್ತು. ನಗರದ ಎಂ.ಜಿ.ರಸ್ತೆ, ಹಳೇ ಪಿ.ಬಿ.ರಸ್ತೆ, ಕಾಗಿನೆಲೆ ರಸ್ತೆ, ಗುತ್ತಲ ರಸ್ತೆ, ಹಾನಗಲ್‌ ರಸ್ತೆಗಳಲ್ಲಿ ಬೆರಳೆಣಿಕೆ ವಾಹನಗಳು ಸಂಚರಿಸಿದವು.

ಬಸ್‌ ನಿಲ್ದಾಣದಲ್ಲಿ ಜನರಿಲ್ಲದೆ ಬಿಕೋ ಎನ್ನುತ್ತಿತ್ತು. ಸ್ಟುಡಿಯೊ, ಮೊಬೈಲ್‌ ಫೋನ್‌, ಕಿರಾಣಿ, ಬಟ್ಟೆ, ಕಬ್ಬಿಣ, ಪ್ಲಾಸ್ಟಿಕ್‌, ಸಿಮೆಂಟ್‌ ಅಂಗಡಿಗಳು ಸೇರಿದಂತೆ ವ್ಯಾಪಾರಿ ಮಳಿಗೆಗಳ ಬಾಗಿಲುಗಳು ಮುಚ್ಚಿದ್ದವು.ಪ್ರಮುಖ ರಸ್ತೆ ಹಾಗೂ ವೃತ್ತಗಳು ಜನರ ಸಂಚಾರವಿಲ್ಲದೆ ಬಿಕೋ ಎನ್ನುತ್ತಿದ್ದವು.

ಸಾರಿಗೆ ಮತ್ತು ಖಾಸಗಿ ಬಸ್, ಆಟೊ, ಟ್ಯಾಕ್ಸಿಗಳು ರಸ್ತೆಗಿಳಿಯಲಿಲ್ಲ. ಕೋವಿಡ್ ತುರ್ತು ಸೇವೆಯಲ್ಲಿ ತೊಡಗಿದ್ದ ಸಿಬ್ಬಂದಿ ವಾಹನಗಳನ್ನು ಹೊರತುಪಡಿಸಿ ಇತರೆ ವಾಹನಗಳಿಗೆ ಪೊಲೀಸರು ನಿರ್ಬಂಧ ವಿಧಿಸಿದ್ದರು. ಪೊಲೀಸರ ಕಣ್ತಪ್ಪಿಸಿ ತಿರುಗಾಡುತ್ತಿದ್ದ ಬೈಕ್‌ ಸವಾರರು ಮತ್ತು ಕಾರುಗಳನ್ನು ತಡೆದು ಪೊಲೀಸರು ದಂಡ ವಿಧಿಸಿದರು.

ತರಕಾರಿ, ಹಾಲು ಮತ್ತು ಔಷಧ ಮಳಿಗೆಗಳು ಹಾಗೂ ಆಸ್ಪತ್ರೆಗಳು ತೆರೆದಿದ್ದವು. ಭಾನುವಾರವೂ ತೆರೆದಿದ್ದ ಎಟಿಎಂ ಕೇಂದ್ರಗಳಲ್ಲಿ ಜನರು ಹಣ ಡ್ರಾ ಮಾಡಿದರು. ಮಾಂಸದಂಗಡಿಗಳು ತೆರೆದಿದ್ದು, ಗ್ರಾಹಕರು ಪಾರ್ಸಲ್‌ ತೆಗೆದುಕೊಂಡು ಹೋದರು. ಇನ್ನೂ ಕೆಲವರು ಅಂಗಡಿಯ ಪಕ್ಕದಲ್ಲೇ ಕುಳಿತು ಊಟ ಮಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT