ಶನಿವಾರ, 21 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮನುಷ್ಯನ ದುರಾಸೆಗೆ ಪ್ರಕೃತಿ ನಾಶ

ಭಾರತ್ ಸ್ಕೌಟ್ಸ್–ಗೈಡ್ಸ್ ಜಿಲ್ಲಾ ಮುಖ್ಯ ಆಯುಕ್ತ ಶಂಕರಪ್ಪ ಕಳವಳ
Published : 14 ಸೆಪ್ಟೆಂಬರ್ 2020, 10:50 IST
ಫಾಲೋ ಮಾಡಿ
Comments

ಕೋಲಾರ: ‘ಮನುಷ್ಯನ ದುರಾಸೆಯ ಫಲವಾಗಿ ಪ್ರಕೃತಿ ನಾಶವಾಗುತ್ತಿದೆ. ಭೂಮಿ, ಅರಣ್ಯ ಹಾಗೂ ಜಲ ಸಂಪತ್ತಿನ ನಾಶದಿಂದ ಪ್ರಾಕೃತಿಕ ಅಸಮತೋಲನ ಹೆಚ್ಚುತ್ತಿದೆ’ ಎಂದು ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಮುಖ್ಯ ಆಯುಕ್ತ ಕೆ.ವಿ.ಶಂಕರಪ್ಪ ಕಳವಳ ವ್ಯಕ್ತಪಡಿಸಿದರು.

ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆ ಸಂಸ್ಥೆ, ರೋಟರಿ ಕೋಲಾರ ನಂದಿನಿ ಹಾಗೂ ರೋಟರಿ ಗ್ರೇಟರ್ ಜಯನಗರ ಸಂಸ್ಥೆ ಸಹಯೋಗದಲ್ಲಿ ಇಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಕೋಟಿ ನಾಟಿ ಕಾರ್ಯಕ್ರಮದಲ್ಲಿ ರೈತರಿಗೆ ತೆಂಗಿನ ಸಸಿ ವಿತರಿಸಿ ಮಾತನಾಡಿದರು.

‘ಜಿಲ್ಲೆಯಲ್ಲಿ ಅರಣ್ಯ ನಾಶದಿಂದ ಮಳೆ ಪ್ರಮಾಣ ಕಡಿಮೆಯಾಗಿದೆ. ಮರಗಳ ನಾಶದಿಂದ ಸಕಾಲಕ್ಕೆ ಮಳೆಯಾಗುತ್ತಿಲ್ಲ. ಇದರಿಂದ ಬರ ಪರಿಸ್ಥಿತಿ ಎದುರಾಗಿದ್ದು, ರೈತರು ಕೃಷಿಯಿಂದ ದೂರ ಸರಿಯುತ್ತಿದ್ದಾರೆ. ಅರಣ್ಯ ಪ್ರದೇಶದ ಒತ್ತುವರಿ ವಿಷಾದಕರ’ ಬೇಸರ ವ್ಯಕ್ತಪಡಿಸಿದರು.

‘ಪರಿಸರ ನಾಶಕ್ಕೆ ಅವಕಾಶ ನೀಡದೆ ಹೆಚ್ಚಾಗಿ ಗಿಡ ಮರ ಬೆಳೆಸಿ ಪರಿಸರ ಸಮತೋಲನ ಕಾಪಾಡಬೇಕು. ರಸ್ತೆ ಇಕ್ಕೆಲದಲ್ಲಿ, ಗೋಮಾಳ ಸೇರಿದಂತೆ ಸರ್ಕಾರಿ ಜಮೀನುಗಳಲ್ಲಿ ಗಿಡ ನಾಟಿ ಮಾಡಬೇಕು. ಅರಣ್ಯ ಸಂಪತ್ತು ವೃದ್ಧಿಯಾದರೆ ಉತ್ತಮ ಮಳೆಯಾಗುತ್ತದೆ. ಸ್ಕೌಟ್ಸ್–ಗೈಡ್ಸ್ ಮತ್ತು ರೋಟರಿ ಸಂಸ್ಥೆ ಸದಸ್ಯರು ಪರಿಸರ ಸಂರಕ್ಷಣೆ ಬಗ್ಗೆ ಜನರಿಗೆ ಜಾಗೃತಿ ಮೂಡಿಸಬೇಕು’ ಎಂದು ಸಲಹೆ ನೀಡಿದರು.

ದೇಶದ ಬೆನ್ನೆಲುಬು: ‘ರೈತರು ಸರ್ಕಾರದ ಸವಲತ್ತು ಸದ್ಬಳಕೆ ಮಾಡಿಕೊಂಡು ಸ್ವಾವಲಂಬಿಗಳಾಗಬೇಕು. ಆಧುನಿಕ ಕೃಷಿ ಪದ್ಧತಿ ಅನುಸರಿಸಿ ಗುಣಮಟ್ಟದ ಆಹಾರ ಪದಾರ್ಥ ಉತ್ಪಾದಿಸಬೇಕು. ರೈತರು ನೆಮ್ಮದಿಯಿಂದ ಜೀವಿಸಿದರೆ ದೇಶ ಅಭಿವೃದ್ಧಿಯಾಗುತ್ತದೆ. ಆಹಾರ ಪದಾರ್ಥ ವ್ಯರ್ಥ ಮಾಡಬಾರದು’ ಎಂದು ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆ ಜಿಲ್ಲಾ ಅಧ್ಯಕ್ಷ ಬಿಸಪ್ಪಗೌಡ ಕಿವಿಮಾತು ಹೇಳಿದರು.

‘ರೈತರು ದೇಶದ ಬೆನ್ನಲುಬು. ರೈತರು ಬೆಳೆದ ಕೃಷಿ ಉತ್ಪನ್ನಗಳಿಗೆ ಉತ್ತಮ ಬೆಲೆ ಸಿಗಬೇಕು. ರೈತರು ಬೆಲೆ ನಿರೀಕ್ಷಿಸದೆ ಉತ್ತಮ ಫಸಲು ಬಂದರೆ ಸಾಕೆಂದು ಬೆವರನ್ನು ಸುರಿಸುತ್ತಾರೆ. ಈ ನಿಸ್ವಾರ್ಥ ಮನೋಭಾವದ ರೈತ ಸಮುದಾಯಕ್ಕೆ ಎಲ್ಲರ ಸಹಕಾರ ಮತ್ತು ಮಾರ್ಗದರ್ಶನ ಅಗತ್ಯ’ ಎಂದು ಕೋಟಿ ನಾಟಿ ಯೋಜನೆ ನಿರ್ದೇಶಕ ಪ್ರಕಾಶ್ ಅಭಿಪ್ರಾಯಪಟ್ಟರು.

ಸ್ಕೌಟ್ಸ್‌ ಮತ್ತು ಗೈಡ್ಸ್‌ ಸಂಸ್ಥೆ ಜಿಲ್ಲಾ ಕಾರ್ಯದರ್ಶಿ ವಿ.ಬಾಬು, ಪದಾಧಿಕಾರಿಗಳಾದ ಕೆ.ಆರ್.ಜಯಶ್ರೀ, ಸುರೇಶ್, ಶ್ರೀನಾಥ್, ಚೌಡೇಶ್ವರಿ, ಶಶಿಕುಮಾರ್, ಶ್ರೀನಿವಾಸಮೂರ್ತಿ, ಬಾಲಕೃಷ್ಣ ಪಾಲ್ಗೊಂಡರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT