ಭಾನುವಾರ, 6 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮುಳಬಾಗಿಲು: ರಕ್ಷಣೆ ಇಲ್ಲದೆ ಅನಾಥ ಉಳಿದಿರುವ ವೀರಗಲ್ಲು

ಹೊಯ್ಸಳರು, ಗಂಗರು, ಚಾಲುಕ್ಯರ ಕಾಲದ ವೀರಗಲ್ಲು, ಮಾಸ್ತಿಗಲ್ಲು
ಕೆ.ತ್ಯಾಗರಾಜಪ್ಪ ಕೊತ್ತೂರು
Published : 6 ಅಕ್ಟೋಬರ್ 2024, 6:14 IST
Last Updated : 6 ಅಕ್ಟೋಬರ್ 2024, 6:14 IST
ಫಾಲೋ ಮಾಡಿ
Comments

ಮುಳಬಾಗಿಲು: ರಾಜ್ಯದ ಆಂಧ್ರಪ್ರದೇಶದ ಗಡಿ ಅಂಚಿನ ಗ್ರಾಮಗಳ ಹೊರವಲಯದಲ್ಲಿ ಪ್ರಾಚೀನ ಶಾಸನಗಳು ಹಾಗೂ ವೀರಗಲ್ಲುಗಳು ಯಾವುದೇ ರಕ್ಷಣೆ ಇಲ್ಲದೆ ನೂರಾರು ವರ್ಷಗಳಿಂದಲೂ ಅನಾಥವಾಗಿ ಉಳಿದಿವೆ.

ತಾಲ್ಲೂಕಿನ ಕೆಲವು ಭಾಗಗಳನ್ನು ಹೊಯ್ಸಳರು, ಗಂಗರು, ಚಾಲುಕ್ಯರು ಹೀಗೆ ನಾನಾ ರಾಜ ವಂಶಗಳು ಆಳ್ವಿಕೆ ನಡೆಸಿದ್ದವು. ಅನೇಕ ರಾಜ ಮನೆತನಗಳ ಇತಿಹಾಸ ಸಾರುವ ಶಾಸನ, ವೀರಗಲ್ಲು, ಮಾಸ್ತಿ ಕಲ್ಲುಗಳು ನಂಗಲಿ, ಬಂಗವಾದಿ, ಉಪ್ಪರಹಳ್ಳಿ, ಮಲ್ಲೆಕುಪ್ಪ, ಇರಗಮುತ್ತನಹಳ್ಳಿ, ಬ್ಯಾಟನೂರು, ಉಪ್ಪರಹಳ್ಳಿ, ತಿಪ್ಪದೊಡ್ಡಿ, ಬಂಡ ಉಪ್ಪರಹಳ್ಳಿ, ಗುಡಿಪಲ್ಲಿ, ಬೈರಕೂರು, ನಂಗಲಿ ಕೆರೆ ಅಚ್ಚುಕಟ್ಟು ಪ್ರದೇಶ ಮುಂತಾದ ಕಡೆ ಕಾಣಸಿಗುತ್ತವೆ.

ನಂಗಲಿ ಪ್ರಾಂತ್ಯವನ್ನು ಗಂಗರು, ಹೊಯ್ಸಳರು ಆಳ್ವಿಕೆ ಮಾಡಿದ್ದರು. ನಂಗಲಿ ಪ್ರವೇಶ ದ್ವಾರದಲ್ಲಿ ಹೊಯ್ಸಳರ ಹೆಬ್ಬಾಗಿಲು ಎಂಬ ನಾಮಫಲಕ ಹಾಕಲಾಗಿತ್ತು. 10 ವರ್ಷಗಳ ಹಿಂದೆ ರಾಷ್ಟ್ರೀಯ ಹೆದ್ದಾರಿ ವಿಸ್ತರಣೆ ಸಮಯದಲ್ಲಿ ನಾಮಫಲಕ ‌ತೆಗೆಯಲಾಗಿತ್ತು. ಆದರೆ, ಇದುವರೆಗೂ ಹಾಕಿಲ್ಲ. 

ಮಲ್ಲೆಕುಪ್ಪ ಗ್ರಾಮದಲ್ಲಿ ವೀರಮರಣ ಹೊಂದಿದ ನೆನಪಿಗಾಗಿ ವೀರಗಲ್ಲುಗಳು ಇವೆ. ನಂಗಲಿ ಹಳೆ ಮದ್ರಾಸ್ ರಸ್ತೆಯ ಬಳಿ ಹಲವು ವೀರಕಲ್ಲುಗಳು ಅನಾಥವಾಗಿ ಉಳಿದಿವೆ. ಹೆಬ್ಬಣಿ ಬಳಿಯ ಬಂಗವಾದಿ ಗ್ರಾಮದ ವೃತ್ತದಲ್ಲಿರುವ ವೀರಗಲ್ಲುಗಳು ಕೂಡ ರಕ್ಷಣೆ ಇಲ್ಲದೆ ಅನಾಥವಾಗಿವೆ.

ಮುಷ್ಟೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಉಪ್ಪರಹಳ್ಳಿ ಹಾಗೂ ಬ್ಯಾಟನೂರು ಕಡೆ ಕೆಲವು ವೀರಗಲ್ಲುಗಳನ್ನು ದೇವರೆಂದು ನಾಟಿ ಮಾಡಿ ಹಬ್ಬದ ಸಮಯಗಳಲ್ಲಿ ಪೂಜಿಸಲಾಗುತ್ತದೆ. ಗುಡಿಪಲ್ಲಿ  ಚೌಡೇಶ್ವರಿ ದೇವಾಲಯದ ಮುಂಭಾಗದಲ್ಲಿ ವೀರಗಲ್ಲು ದೇವಾಲಯದ ಮುಂದೆ ಪ್ರತಿಷ್ಠಾಪನೆ ಮಾಡಿ ಸದಾ ಜನರು ಪೂಜಿಸುತ್ತಿದ್ದಾರೆ.

ಗತಿಸಿದ ರಾಜರ ಇತಿಹಾಸ ಹೇಳುವ ವೀರಗಲ್ಲುಗಳಿಂದ ಗತಕಾಲದ ಜೀವನ ಪದ್ಧತಿ, ಆಡಳಿತ ಹಾಗೂ ಸಾಮಾಜಿಕ ವ್ಯವಸ್ಥೆ ಅರಿಯಬಹುದು. ವೀರಗಲ್ಲುಗಳು ಹಾಗೂ ಶಾಸನಗಳನ್ನು ಸಂಬಂಧಿಸಿದ ಪ್ರಾಚ್ಯ ವಸ್ತು ಪುರಾತತ್ವ ಮತ್ತು ಪರಂಪರೆ ಇಲಾಖೆ ಸಂರಕ್ಷಿಸಿದರೆ ಇತಿಹಾಸ ಮುಂದಿನ ಪೀಳಿಗೆಗೆ ಪರಿಚಯಿಸಲು ಹಾಗೂ ಸಂಶೋಧನಾರ್ಥಿಗಳಿಗೆ ನೆರವಾಗುತ್ತದೆ ಎಂದು ಇತಿಹಾಸ ತಜ್ಞ ಡಾ.ಜಿ.ಮುನಿವೆಂಕಟಪ್ಪ ಅಭಿಪ್ರಾಯ ಪಡುತ್ತಾರೆ.

ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯಲ್ಲಿ ವೀರಗಲ್ಲುಗಳನ್ನು ಸಂಗ್ರಹಿಸಿ ಪ್ರವಾಸಿ ತಾಣವಾಗಿ ಮಾಡಲಾಗಿದೆ. ಇದೇ ರೀತಿಯಲ್ಲಿ ಕೋಲಾರ ತಾಲ್ಲೂಕಿನ ಅರಾಭಿಕೊತ್ತನೂರು ಬಳಿಯೂ ವೀರಗಲ್ಲು ಸಂಗ್ರಹಿಸಿಡಲಾಗಿದೆ. ತಾಲ್ಲೂಕಿನಲ್ಲಿ ಇರುವ ವೀರಗಲ್ಲುಗಳನ್ನು ಅರಾಭಿಕೊತ್ತನೂರು ಬಳಿ ಅಥವಾ ತಾಲ್ಲೂಕಿನಲ್ಲಿ ಎಲ್ಲಿಯಾದರೂ ಸಂಗ್ರಹಿಸಿ ಕಾಪಾಡಿದರೆ ತಾಲ್ಲೂಕಿನ ಇತಿಹಾಸ ಎಲ್ಲರೂ ತಿಳಿಯಲು ಸಹಕಾರಿಯಾಗುತ್ತದೆ ಎಂದು ತೊಂಡಹಳ್ಳಿ ಡಾ.ಟಿ.ಎಸ್.ಶ್ರೀನಿವಾಸ್ ಹೇಳಿದರು.

ಅಪರೂಪದ ವೀರಗಲ್ಲು

ತಾಲ್ಲೂಕಿನ ಬೈಯಪ್ಪನಹಳ್ಳಿ ಬಳಿ ಇರುವ ವೀರಗಲ್ಲಿನಲ್ಲಿ ಒಬ್ಬ ವೀರ ಕತ್ತಿಯನ್ನು ಹಿಡಿದು ಊರಿನ ಹೆಣ್ಣನ್ನು ರಕ್ಷಣೆ ಮಾಡುತ್ತಿರುವ ದೃಶ‍್ಯವಿದೆ. ಶತೃಗಳು ಊರಿನ ಹೆಂಗಸರ ಮೇಲೆ ದೌರ್ಜನ್ಯ ಅಥವಾ ಅಪಹರಣ ಮಾಡಲು ಬಂದಾಗ ವೀರರು ಶತೃಗಳಿಂದ ಹೆಣ್ಣನ್ನು ರಕ್ಷಣೆ ಮಾಡಿ ಶತೃಗಳ ಪ್ರಾಣ ತೆಗೆದು ತಮ್ಮ ಕಾಲಿನ ಕೆಳಗೆ ತುಳಿಯುತ್ತಿರುವ ವೀರಗಲ್ಲಿದೆ. ಇದನ್ನು ಪೆಣ್ ಬೋಯಿಲ್ ಎನ್ನುತ್ತಾರೆ.ಇಂತಹ ಅಪರೂಪದ ವೀರಗಲ್ಲುಗಳು ಮುಂದಿನ ಪೀಳಿಗೆಗೆ ಗತಿಸಿದ ಜೀವನ ತಿಳಿಸಲಿದೆ.

-ಕೆ.ಆರ್.ನರಸಿಂಹನ್, ಶಾಸನ ತಜ್ಞ

ರಕ್ಷಣೆ ಮಾಡಲು ಆಗ್ರಹ

‌ಇಂದಿನ ಜನರ ಬಗ್ಗೆ ವೀರಗಲ್ಲು ಬಗ್ಗೆ ತಿಳಿವಳಿಕೆ ಕಡಿಮೆ ಇದೆ. ಗ್ರಾಮ ಪಂಚಾಯಿತಿ ನರೇಗಾ ಯೋಜನೆಯಲ್ಲಿ ವೀರಗಲ್ಲು ಹಾಗೂ ಶಾಸನ ಸಂರಕ್ಷಿಸಿ ಕಾಪಾಡಲು ಅವಕಾಶ ಇದೆ. ಸ್ಥಳೀಯ ಗ್ರಾಮ ಪಂಚಾಯಿತಿಗಳು ವೀರಗಲ್ಲುಗಳನ್ನು ಸಂರಕ್ಷಣೆ ಮಾಡಿ ಜನರಿಗೆ ಪರಿಚಯಿಸುವ ಕೆಲಸ ಮಾಡಬೇಕು. ಇದರಿಂದ ಪ್ರಾಚೀನ ಕಾಲದ ಆಳ್ವಿಕೆ, ಜೀವನ ಪದ್ಧತಿ ಹಾಗೂ ಅಂದಿನ ನೈತಿಕ ಮೌಲ್ಯ ಅರಿಯಲು ಅನುಕೂಲವಾಗುತ್ತದೆ.

-ಡಾ.ಅರಿವು ಜಿ. ಶಿವಪ್ಪ, ಇತಿಹಾಸ ತಜ್ಞರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT