ಶನಿವಾರ, 21 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮುಳಬಾಗಿಲು | ಬಾರದ ಮಳೆ: ಒಣಗಿ ಹೋಗುತ್ತಿರುವ ಮಳೆಯಾಶ್ರಿತ ಬೆಳೆಗಳು

ಕೆ.ತ್ಯಾಗರಾಜಪ್ಪ ಕೊತ್ತೂರು
Published : 21 ಸೆಪ್ಟೆಂಬರ್ 2024, 6:57 IST
Last Updated : 21 ಸೆಪ್ಟೆಂಬರ್ 2024, 6:57 IST
ಫಾಲೋ ಮಾಡಿ
Comments

ಮುಳಬಾಗಿಲು: ಪ್ರಸಕ್ತ ಸಾಲಿನಲ್ಲಿ ಮಳೆ ಕೈಕೊಟ್ಟಿರುವ ಕಾರಣ ಮಳೆಯನ್ನೇ ನಂಬಿ ನಾಟಿ ಮಾಡಿದ್ದ ಬೆಳೆಯು ಒಣಗುತ್ತಿದೆ.  ಸಾಲ–ಸೋಲ ಮಾಡಿ ಬಿತ್ತನೆ ಮಾಡಿದ ಬೆಳೆಯು ಇದೀಗ ಕೈಗೆ ಬಾರದಂತಾಗಿದ್ದು, ರೈತರು ತಲೆ ಮೇಲೆ ಕೈಹೊತ್ತು ಕೂರುವಂತಾಗಿದೆ. 

ಬರಗಾಲದ ತಾಲ್ಲೂಕು ಎಂಬ ಹಣೆಪಟ್ಟಿ ಹೊತ್ತಿರುವ ತಾಲ್ಲೂಕಿನಲ್ಲಿ ಮಳೆಯನ್ನೇ ನಂಬಿ 4,355 ಹೆಕ್ಟೇರ್ ಪ್ರದೇಶದಲ್ಲಿ ನೆಲಗಡಲೆ, 11,718 ಹೆಕ್ಟೇರ್‌ನಲ್ಲಿ ರಾಗಿ, 456 ಹೆಕ್ಟೇರ್‌ನಲ್ಲಿ ತೊಗರಿ, 885 ಹೆಕ್ಟೇರ್‌ನಲ್ಲಿ ಹುರುಳಿ, 1,914 ಹೆಕ್ಟೇರ್‌ನಲ್ಲಿ ಅವರೆ ಹಾಗೂ 216 ಹೆಕ್ಟೇರ್‌ನಲ್ಲಿ ಅಲಸಂದಿ ಸೇರಿದಂತೆ ಇನ್ನಿತರ ಬೆಳೆಗಳನ್ನು ರೈತರು ಬೆಳೆದಿದ್ದಾರೆ. ಆದರೆ ಕಾಲಕ್ಕೆ ಸರಿಯಾಗಿ ಮಳೆ ಬಾರದ ಕಾರಣ ಮಣ್ಣಿನಲ್ಲಿ ತೇವಾಂಶ ಕಡಿಮೆಯಾಗಿ ಬೆಳೆಗಳು ಒಣಗಿ ಹೋಗುತ್ತಿವೆ. 

ನಾಲ್ಕು ವರ್ಷಗಳ ಹಿಂದೆ ಸುರಿದಿದ್ದೇ ಕೊನೆಯ ಮಳೆ. ಆ ಬಳಿಕ ಈವರೆಗೆ ತಾಲ್ಲೂಕಿನಲ್ಲಿ ಮತ್ತೆ ಮಳೆಯೇ ಆಗಿಲ್ಲ. ಆದಾಗ್ಯೂ, ಈ ವರ್ಷವಾದರೂ ಮಳೆಯಾಗಲಿದೆ ಎಂಬ ಆಶಾಭಾವನೆಯೊಂದಿಗೆ ರೈತರು ತಮ್ಮ ಜಮೀನುಗಳಲ್ಲಿ ರಾಗಿ, ನೆಲಗಡಲೆ, ಅಲಸಂದಿ, ತೊಗರಿ, ಹುರುಳಿ ಸೇರಿದಂತೆ ಇನ್ನಿತರ ಬೆಳೆಯನ್ನು ಬಿತ್ತನೆ ಮಾಡಿದ್ದಾರೆ. ಬಿತ್ತನೆ ಮಾಡಿದ ಸಮಯದಲ್ಲಿ ಸ್ವಲ್ಪಮಟ್ಟಿಗೆ ಮಳೆಯಾಗಿದ್ದು ಹೊರತುಪಡಿಸಿ, ಈವರೆಗೆ ಮಳೆಯೇ ಆಗಿಲ್ಲ. ಹೀಗಾಗಿ ಎಲ್ಲ ಬೆಳೆಗಳು ಬಿಸಿಲಿಗೆ ಒಣಗಿ ನೆಲಕ್ಕೆ ಬೀಳುತ್ತಿವೆ ಎಂದು ರೈತರು ಅಳಲು ತೋಡಿಕೊಂಡರು. 

ಬೈರಕೂರು ಹೋಬಳಿ ಹಾಗೂ ತಾಯಲೂರು ಹೋಬಳಿಗಳಲ್ಲಿ ನೆಲಗಡಲೆಯನ್ನು ಉಳಿದ ಹೋಬಳಿಗಿಂತ ಹೆಚ್ಚು ಬೆಳೆದರೆ, ದುಗ್ಗಸಂದ್ರ, ತಾಯಲೂರು, ಆವಣಿ ಹಾಗೂ ಕಸಬಾ ಹೋಬಳಿಗಳಲ್ಲಿ ಬಹುತೇಕ ರೈತರು ರಾಗಿಯನ್ನೇ ಹೆಚ್ಚು ಬಿತ್ತನೆ ಮಾಡಿದ್ದಾರೆ. ಆದರೆ, ಯಾವುದೇ ಹೋಬಳಿಯಲ್ಲಿ ಕನಿಷ್ಠ ಮಳೆಯೂ ಆಗಿಲ್ಲ. ಇದರಿಂದಾಗಿ ತಾಲ್ಲೂಕಿನ ಬಹುತೇಕ ಭಾಗದಲ್ಲಿ ಬಿತ್ತನೆ ಮಾಡಿದ ಬೆಳೆಗಳು ಕೆಲವೇ ದಿನಗಳಲ್ಲಿ ಸಂಪೂರ್ಣವಾಗಿ ಒಣಗುವ ಹಂತಕ್ಕೆ ತಲುಪಲಿವೆ ಎಂದು ರೈತರು ಅಲವತ್ತುಕೊಂಡರು. 

ಕೊಳವೆ ಬಾವಿಗಳ ಸೌಕರ್ಯ ಇರುವ ರೈತರು ತಮ್ಮ ಜಮೀನಿನಲ್ಲಿ ಬೆಳೆದ ನೆಲಗಡಲೆ ಬೆಳೆಗೆ ನೀರು ಹರಿಸಿದ್ದಾರೆ. ನೀರಿನ ಸೌಲಭ್ಯವಿಲ್ಲದ ಸಣ್ಣ ಹಾಗೂ ಅತಿಸಣ್ಣ ರೈತರು, ನೀರಿಲ್ಲದೆ ತಾವು ಬೆಳೆದ ಬೆಳೆಗಣು ಒಣಗಿ ನಾಶವಾಗುತ್ತಿದ್ದರೂ ಏನೂ ಮಾಡಲು ಆಗದೆ ಕೈಮೇಲೆ ಕೈಹೊತ್ತು ಕೂತಿದ್ದಾರೆ. 

ನೆಲಗಡಲೆ ಸ್ವಲ್ಪಮಟ್ಟಿಗೆ ಕಾಯಿ ಬಿಟ್ಟಿದ್ದು, ಅಲ್ಪಸ್ವಲ್ಪ ಮಳೆಯಾಗಿದ್ದರೂ, ಸ್ವಲ್ಪ ಫಸಲು ಕೈಗೆ ಸಿಗುತ್ತಿತ್ತು. ಆದರೆ ಮಳೆಯೇ ಇಲ್ಲದ ಕಾರಣ ಸಸಿಗಳಲ್ಲಿ ಬಿಟ್ಟಿರುವ ನೆಲಗಡಲೆ ಭೂಮಿಯಲ್ಲೇ ಒಣಗಿ ನಾಶವಾಗುತ್ತಿದೆ ಎಂದು ಮುಷ್ಟೂರು ಗ್ರಾಮದ ರೈತ ಗಟ್ಟಪ್ಪ ಹೇಳಿದರು.

ರಾಗಿ, ತೊಗರಿ, ಅವರೆ, ಅಲಸಂದಿ, ಹುರುಳಿ, ಹಾರಕ, ನವಣೆ, ಸಜ್ಜೆ ಮತ್ತಿತರ ಬೆಳೆಗಳು ಕೆಲವೇ ದಿನಗಳಲ್ಲಿ ಸಂಪೂರ್ಣವಾಗಿ ಒಣಗಿ ಭೂಮಿಯಲ್ಲಿ ಹುದುಗಲಿವೆ ಎಂದು ರೈತರು ತಮ್ಮ ನೋವು ಹೇಳಿದರು. 

‘ಗಗನ ಕುಸುಮವಾದ ಗುರಿಸಾಧನೆ’

ತಾಲ್ಲೂಕಿನಲ್ಲಿ 8233 ಹೆಕ್ಟೇರ್‌ ಪ್ರದೇಶಗಳಲ್ಲಿ ನೆಲಗಡಲೆ  ಬೆಳೆಯುವ ಗುರಿ ಹೊಂದಲಾಗಿತ್ತು. ಅದೇ ರೀತಿ ರಾಗಿ 11776 ಹೆಕ್ಟೇರ್ ತೊಗರಿ 917 ಹೆಕ್ಟೇರ್ ಹುರುಳಿ 885 ಅವರೆ 1914 ಅಲಸಂದಿ 216 ಹೆಕ್ಟೇರುಗಳಷ್ಟು ಪ್ರದೇಶದಲ್ಲಿ ಬೆಳೆಯುವ ಇರಾದೆ ಇತ್ತು. ಆದರೆ ಮಳೆಯ ಅಭಾವದಿಂದಾಗಿ ಗುರಿ ಸಾಧನೆ ಸಾಧ್ಯವಾಗಿಲ್ಲ. ಅಲ್ಲದೆ ಬಿತ್ತನೆ ಮಾಡಿದ ಬೆಳೆಯೂ ಒಣಗುತ್ತಿದೆ– ರವಿಕುಮಾರ್ ಸಹಾಯಕ ನಿರ್ದೇಶಕ ಕೃಷಿ ಇಲಾಖೆ

ತೊಂಡಹಳ್ಳಿ ಗ್ರಾಮದ ಹೊರವಲಯದಲ್ಲಿ ಬಹುತೇಕ ಒಣಗಿ ನಾಶವಾಗುತ್ತಿರುವ ರಾಗಿ ಬೆಳೆ
ತೊಂಡಹಳ್ಳಿ ಗ್ರಾಮದ ಹೊರವಲಯದಲ್ಲಿ ಬಹುತೇಕ ಒಣಗಿ ನಾಶವಾಗುತ್ತಿರುವ ರಾಗಿ ಬೆಳೆ
ತೊಂಡಹಳ್ಳಿ ಬಳಿ ರಾಗಿ ಸಂಪೂರ್ಣವಾಗಿ ಒಣಗಿ ಸುರುಗಾಗಿರುವುದು.
ತೊಂಡಹಳ್ಳಿ ಬಳಿ ರಾಗಿ ಸಂಪೂರ್ಣವಾಗಿ ಒಣಗಿ ಸುರುಗಾಗಿರುವುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT