ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ರಾಮಮಂದಿರ ಒಂದು ಪಕ್ಷದ ಸ್ವತ್ತಲ್ಲ: ಶಾಸಕ ಕೊತ್ತೂರು ಮಂಜುನಾಥ್‌

Published 11 ಜನವರಿ 2024, 16:53 IST
Last Updated 11 ಜನವರಿ 2024, 16:53 IST
ಅಕ್ಷರ ಗಾತ್ರ

ಕೋಲಾರ: ‘ರಾಮಮಂದಿರ ದೇಶದ ಹಾಗೂ ಜನರ ಸೊತ್ತು. ಯಾವುದೇ ಒಂದು ಪಕ್ಷ, ಧರ್ಮಕ್ಕೆ ಸೇರಿದ್ದಲ್ಲ. ಅಯೋಧ್ಯೆಗೆ ಯಾರು ಬೇಕಾದರೂ ಹೋಗಬಹುದು, ಹೋಗದೇ ಇರಬಹುದು. ನನಗೆ ಆಹ್ವಾನ ಬಂದಿದ್ದರೆ ಖಂಡಿತ ಹೋಗುತ್ತಿದ್ದೆ’ ಎಂದು ಕಾಂಗ್ರೆಸ್‌ ಶಾಸಕ ಕೊತ್ತೂರು ಮಂಜುನಾಥ್‌ ತಿಳಿಸಿದರು.

ನಗರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ದೇಶದಲ್ಲಿರುವ ಎಲ್ಲರೂ ರಾಮಭಕ್ತರೇ. ಎಲ್ಲರೂ ರಾಮಭಕ್ತರಾಗಬೇಕು. ಅದರಲ್ಲಿ ಯಾವುದೇ ತಪ್ಪು ಇಲ್ಲ. ಆದರೆ, ಬಿಜೆಪಿ ರಾಮಭಕ್ತರು, ಜೆಡಿಎಸ್‌, ಕಾಂಗ್ರೆಸ್‌ ರಾಮಭಕ್ತರು ಎಂಬುದು ತಪ್ಪು’ ಎಂದರು.

‘ನಾವೂ ರಾಮಭಕ್ತರೇ. ಜ.22ರಂದು ರಾಮನ ಪೂಜೆ ಮಾಡಲಿದ್ದೇವೆ. ಮುಜರಾಯಿ ದೇಗುಲಗಳಲ್ಲಿ ಅಂದು ವಿಶೇಷ ಪೂಜೆ ಮಾಡಬೇಕೆಂದು ರಾಜ್ಯ ಸರ್ಕಾರವೇ ಆದೇಶ ಹೊರಡಿಸಿದೆ. ವಾಲ್ಮೀಕಿ ಇದ್ದದ್ದು ನಮ್ಮ ಕೋಲಾರ ಜಿಲ್ಲೆಯ ಆವಣಿಯಲ್ಲಿ’ ಎಂದು ತಿಳಿಸಿದರು.

‘ದೇಶದಲ್ಲಿ ಇರುವವರು ರಾಮನಿಗೂ, ಮಸೀದಿಗೂ, ಚರ್ಚಿಗೂ ಭಕ್ತರಾಗಿರುತ್ತಾರೆ. ನಾನು ಚರ್ಚ್‌, ಮಸೀದಿಗೆ ಹೋಗುತ್ತೇನೆ. ರಾಮಮಂದಿರಕ್ಕೂ ಹೋಗುತ್ತೇನೆ. ಬಿಜೆಪಿಗೆ ಮಾತುಗಳೇ ವ್ಯಾಪಾರ. ಹೀಗಾಗಿ, ಪದೇಪದೇ ಏನೇನೊ ಹೇಳುತ್ತಿರುತ್ತಾರೆ’ಎಂದರು.

‘ಆಹ್ವಾನ ಬಂದಿದ್ದರೆ ಯಾರು ಬೇಡವೆಂದು ಹೇಳಿದ್ದರೂ ನಾನು ಅಯೋಧ್ಯೆ ಕಾರ್ಯಕ್ರಮಕ್ಕೆ ಹೋಗುತ್ತಿದ್ದೆ. ಪಕ್ಷ ಹೇಳಿದ ಮಾತಿಗೆ ನಾನು ಗೌರವ ಕೊಡುತ್ತೇನೆ. ಆದರೆ, ದೇವಸ್ಥಾನಕ್ಕೆ ಹೋಗುವುದು, ಪೂಜೆಗೆ ಹೋಗುವ ವಿಚಾರ ವೈಯಕ್ತಿಕ. ಮದುವೆಯಾಗಲೂ ಪಕ್ಷದ ಅಪ್ಣಣೆ ಬೇಕೇ? ವೈಯಕ್ತಿಕ ವಿಚಾರಗಳೇ ಬೇರೆ, ಪಕ್ಷವೇ ಬೇರೆ’ ಎಂದು ಕೊತ್ತೂರು ತಿಳಿಸಿದರು.

‘ಸ್ವಂತ ಆಸ್ತಿ ಮಾಡಿಕೊಂಡಿದ್ದರು’

‘ಕೋಲಾರ ಟಿಎಪಿಸಿಎಂಎಸ್‌ ಚುನಾವಣೆಯಲ್ಲಿ 1642 ಮತಗಳಿದ್ದವು. ಅದರಲ್ಲಿ ಕೋಲಾರ ಕ್ಷೇತ್ರಕ್ಕೆ ಸೇರುವ ವಕ್ಕಲೇರಿ ನರಸಾಪುರ ವೇಮಗಲ್‌ನಲ್ಲಿ ಕೇವಲ 274 ಮತಗಳಿದ್ದವು. ಶ್ರೀನಿವಾಸಪುರ ಹಾಗೂ ಬಂಗಾರಪೇಟೆ ಕ್ಷೇತ್ರದ ವ್ಯಾಪ್ತಿಯಲ್ಲಿ ಹೆಚ್ಚು ಮತಗಳಿದ್ದವು. ಒಂದು ಸಮುದಾಯದ ಮತಗಳೇ ಹೆಚ್ಚು ಇವೆ. 42 ವರ್ಷಗಳಿಂದ ಕಾಂಗ್ರೆಸ್‌ನವರು ಚುನಾವಣೆಯಲ್ಲಿ ಪಾಲ್ಗೊಂಡಿರಲಿಲ್ಲ’ ಎಂದು ವಿಧಾನ ಪರಿಷತ್‌ ಸದಸ್ಯ ಎಂ.ಎಲ್‌.ಅನಿಲ್‌ ಕುಮಾರ್‌ ಹೇಳಿದರು. ‘ಈ ಚುನಾವಣೆಗೂ ಲೋಕಸಭೆ ಚುನಾವಣೆಗೂ ಸಂಬಂಧ ಇಲ್ಲ. ಕೋಲಾರ ಲೋಕಸಭೆ ಕ್ಷೇತ್ರದ ವ್ಯಾಪ್ತಿಯಲ್ಲಿ ಎಂಟು ವಿಧಾನಸಭೆ ಕ್ಷೇತ್ರಗಳಿವೆ. ಅದು ಹೇಗೆ ಲೋಕಸಭೆ ಚುನಾವಣೆಯಲ್ಲಿ ಗೆಲ್ಲುವುದಾಗಿ ಜೆಡಿಎಸ್‌–ಬಿಜೆಪಿಯವರು ಹೇಳುತ್ತಾರೆ’ ಎಂದು ಪ್ರಶ್ನಿಸಿದರು. ‘ಶಾಸಕ ಕೆ.ವೈ.ನಂಜೇಗೌಡರ ನಿವಾಸದ ಮೇಲೆ ಜಾರಿ ನಿರ್ದೇಶನಾಲಯ ಅಧಿಕಾರಿಗಳು ಎರಡು ದಿನ 40 ಗಂಟೆ ಕಾಲ ಶೋಧಿಸಿದ್ದಾರೆ. ಬೆಟ್ಟ ಬಗೆದು ಇಲಿ ಹಿಡಿದಂತೆ ₹ 16 ಲಕ್ಷ ಸಿಕ್ಕಿದೆಯಂತೆ. ಇದು ರಾಜಕೀಯ ಪ್ರೇರಿತ. ಕಾಂಗ್ರೆಸ್‌ ಹೋರಾಟ ಮಾಡಲಿದೆ’ ಎಂದು ಹೇಳಿದರು. ‘ಕೋಲಾರ ಟಿಎಪಿಸಿಎಂಎಸ್‌ಗೆ 42 ವರ್ಷಗಳಿಂದ ಚುನಾವಣೆಯೇ ನಡೆದಿರಲಿಲ್ಲ. ಕಾಂಗ್ರೆಸ್‌ನವರು ಚುನಾವಣೆಯನ್ನೇ ಎದುರಿಸಿಲ್ಲ. ಜನತಾ ಪರಿವಾರದವರು ಸ್ವಂತ ಆಸ್ತಿ ಮಾಡಿಕೊಂಡಿದ್ದರು. ನಾವು ಬಂದ ಮೇಲೆ ಚುನಾವಣೆ ನಡೆದಿದ್ದು ಬಿಜೆಪಿ–ಜೆಡಿಎಸ್‌ ಸೇರಿ 8 ಸ್ಥಾನ ಗೆದ್ದಿದ್ದಾರೆ. ನಾವು ಏಕಾಂಗಿಯಾಗಿ ಆರು ಸ್ಥಾನ ಜಯಿಸಿದ್ದೇವೆ. ಮುಂದಿನ ದಿನಗಳಲ್ಲಿ ಷೇರು ಪಡೆದು ಹೆಚ್ಚಿನ ಸಂಖ್ಯೆಯಲ್ಲಿ ಸದಸ್ಯರಾಗುತ್ತೇವೆ’ ಎಂದು ಕೊತ್ತೂರು ಮಂಜುನಾಥ್‌ ಹೇಳಿದರು. ‘ಈ ಚುನಾವಣೆಗೂ ಲೋಕಸಭೆ ಚುನಾವಣೆಗೂ ಯಾವುದೇ ಸಂಬಂಧ ಇಲ್ಲ. ವಿಧಾನಸಭೆ ಚುನಾವಣೆಯಲ್ಲಿ ಏನಾಯಿತು ಗೊತ್ತಿಲ್ಲವೇ ಜನರು ಕಡಿಮೆ ಅವಧಿಯಲ್ಲಿ ನನ್ನನ್ನು ಗೆಲ್ಲಿಸಲಿಲ್ಲವೇ?’ ಎಂದು ತಿರುಗೇಟು ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT