ಶನಿವಾರ, 5 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಅಳವಂಡಿ: ಕಾಳು ಕಟ್ಟದ ಮೆಕ್ಕೆಜೋಳ ಬೆಳೆ

ಕಳಪೆ ಬೀಜದ ಆರೋಪ: ಜಮೀನಿಗೆ ಕೃಷಿ ಅಧಿಕಾರಿಗಳು, ವಿಜ್ಞಾನಿಗಳು ಭೇಟಿ
Published : 5 ಅಕ್ಟೋಬರ್ 2024, 6:29 IST
Last Updated : 5 ಅಕ್ಟೋಬರ್ 2024, 6:29 IST
ಫಾಲೋ ಮಾಡಿ
Comments

ಅಳವಂಡಿ: ಉತ್ತಮ ಮಳೆಯಿಂದ, ಉತ್ತಮ ಬೆಲೆ ಬಂದಿದೆ ಎಂದು ಮೆಕ್ಕೆಜೋಳ ಬೆಳೆಯ ಹತ್ತಿರ ಹೋಗಿ ತೆನೆ ಮುರಿದರೆ ಕಾಳುಗಳೇ ಇಲ್ಲ. ಕಳಪೆ ಮೆಕ್ಕೆಜೋಳ ಬೀಜದಿಂದ ರೈತನ ಕೈಗೆ ಬಂದ ಬೆಳೆ ಬಾಯಿಗೆ ಬಾರದಂತಾಗಿದೆ.

ಅಳವಂಡಿ ಸಮೀಪದ ಬೆಟಗೇರಿ ಗ್ರಾಮದ ರಾಜೇಂದ್ರಪ್ಪ ಶಿವಪ್ಪ ಕಡ್ಡಳ್ಳಿ ಅವರು ತಮ್ಮ 10 ಎಕರೆ ಜಮೀನಿನಲ್ಲಿ ಮೆಕ್ಕೆಜೋಳ ಬಿತ್ತನೆ ಮಾಡಿದ್ದಾರೆ. ಕಳೆದ ವರ್ಷ ಬರಗಾಲದಿಂದ ರೈತಾಪಿ ವರ್ಗ ಕಂಗಾಲಾಗಿತ್ತು. ಆದರೆ ಈ ವರ್ಷ ಭರ್ಜರಿ ಮಳೆಯಿಂದ, ಬೆಳೆ ಉತ್ತಮವಾಗಿದೆ. ಇದರಿಂದ ಲಾಭದ ನಿರೀಕ್ಷೆಯಲ್ಲಿ ಇದ್ದ ರೈತನಿಗೆ ಕಳಪೆ ಬೀಜದಿಂದಾಗಿ ಸಂಕಷ್ಟ ಎದುರಾಗಿದೆ.

ಜಮೀನಿಗೆ ಬಿತ್ತನೆ ಮಾಡಲು ಬೀಜ, ಗೊಬ್ಬರ, ಬಿತ್ತನೆ ಹಾಗೂ ಕೂಲಿ ಖರ್ಚು ಸೇರಿ ಸುಮಾರು ₹8ರಿಂದ ₹10 ಸಾವಿರ ಖರ್ಚು ಮಾಡಿದ್ದಾರೆ. 10 ಎಕರೆಯಲ್ಲಿ ಬಿತ್ತನೆ ಮಾಡಿದ ಮೆಕ್ಕೆಜೋಳ ಬೆಳೆಯು ಅಲ್ಲಲ್ಲಿ ಮಾತ್ರ ತೆನೆ ಇದೆ. ಅಲ್ಪಸ್ವಲ್ಪ ಮಾತ್ರ ತೆನೆ ಇದ್ದರೂ ಕಾಳು ಕಟ್ಟಿಲ್ಲ. ಒಟ್ಟಾರೆಯಾಗಿ ಮೆಕ್ಕೆಜೋಳ ತೆನೆಯಲ್ಲಿ ಕಾಳುಗಳೇ ಇಲ್ಲದಂತಾಗಿದೆ. ಸುಮಾರು 150ರಿಂದ 160 ಕ್ವಿಂಟಲ್ ಫಸಲಿನ ನಿರೀಕ್ಷೆಯನ್ನು ರೈತ ಹೊಂದಿದ್ದರು.

‘ನಮ್ಮ ಜಮೀನಿನಲ್ಲಿ ಮೈ ಸೀಡ್ಸ್ ರನ್ ಎಂಬ ಕಂಪನಿಯ ಮೆಕ್ಕೆಜೋಳ ಬೀಜ ಬಿತ್ತನೆ ಮಾಡಿದ್ದು, ತೆನೆ ಕಾಳು ಕಟ್ಟಿಲ್ಲ ಎಂದು ಮೈ ಸೀಡ್ಸ್ ಕಂಪನಿಯವರಿಗೆ ತಿಳಿಸಿದರೆ ನಮ್ಮ ಬೀಜಗಳು ಕಳಪೆ ಇಲ್ಲ. ನೀವು ಏನಾದರೂ ಮಾಡಿಕೊಳ್ಳಿ ಎಂದು ಉತ್ತರಿಸುತ್ತಾರೆ. ಮಳೆ ಜಾಸ್ತಿಯಾದ ಕಾರಣ ತೇವಾಂಶ ಹೆಚ್ಚಾಗಿ ಈ ರೀತಿಯಾಗಿದೆ ಎಂದು ಉತ್ತರಿಸುತ್ತಾರೆ. ಜಮೀನಿಗೆ ಭೇಟಿ ನೀಡಿ ಪರಿಶೀಲನೆ ಮಾಡಿ ಎಂದು ಹಲವಾರು ಬಾರಿ ಮನವಿ ಮಾಡಿಕೊಂಡರೂ ಭೇಟಿ ನೀಡಿಲ್ಲ’ ಎಂದು ರೈತನ ಪುತ್ರ ಉಮೇಶ ದೂರುತ್ತಾರೆ.

ಈ ಕುರಿತು ರೈತ ರಾಜೇಂದ್ರಪ್ಪ ಅವರು ಮೆಕ್ಕೆಜೋಳ ತೆನೆಯ ಕಾಳು ಕಟ್ಟದೇ ಇರುವುದರಿಂದ ಬೆಳೆಯನ್ನು ಪರಿಶೀಲನೆ ಮಾಡಿ, ಮೈ ಸೀಡ್ಸ್ ರನ್ ಕಂಪನಿಯ ಕಳಪೆ ಬೀಜದಿಂದ ಆಗಿರುವ ಬೆಳೆಯ ಹಾನಿಯ ಪರಿಹಾರ ನೀಡುವಂತೆ ಹಾಗೂ ಕಂಪನಿಯ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೃಷಿ ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ. ಅದರಂತೆ ಕೃಷಿ ಅಧಿಕಾರಿಗಳು ಹಾಗೂ ವಿಜ್ಞಾನಿಗಳು ಜಮೀನಿಗೆ ಖುದ್ದಾಗಿ ಭೇಟಿ ಬೆಳೆ ಪರಿಶೀಲನೆ ಮಾಡಿದ್ದಾರೆ.

ಜಮೀನಿಗೆ ಈಗಾಗಲೇ ವಿಜ್ಞಾನಿಗಳು ಹಾಗೂ ಕೃಷಿ ಅಧಿಕಾರಿಗಳು ಭೇಟಿ ನೀಡಿದ್ದಾರೆ. ಲ್ಯಾಬ್ ವರದಿ ಬಂದ ಬಳಿಕ ಏನಾಗಿದೆ ಎಂಬುದು ಗೊತ್ತಾಗುತ್ತದೆ.
ಜೀವನಸಾಬ ಕುಷ್ಟಗಿ, ಸಹಾಯಕ ಕೃಷಿ ನಿರ್ದೇಶಕ
ಮೆಕ್ಕೆಜೋಳ ಬೆಳೆಯು ಉತ್ತಮವಾಗಿದ್ದರೂ ತೆನೆ ಹಾಗೂ ಕಾಳು ಕಟ್ಟಿಲ್ಲ. ಈ ಬಗ್ಗೆ ಕಂಪನಿಯವರಿಗೆ ಮಾಹಿತಿ ನೀಡಿದರೂ ಸ್ಪಂದಿಸುತ್ತಿಲ್ಲ. ಈ ಬಗ್ಗೆ ಕೃಷಿ ಇಲಾಖೆಗೆ ದೂರು ಸಲ್ಲಿಸಿದ್ದೇವೆ.
ಉಮೇಶ ಕಡಳ್ಳಿ, ರೈತನ ಪುತ್ರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT