ಸೋಮವಾರ, 8 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ರಾಜ್ಯ ಸರ್ಕಾರದಿಂದ ಸಣ್ಣತನದ ರಾಜಕಾರಣ: ಕೇಂದ್ರ ಸಚಿವ ಕುಮಾರಸ್ವಾಮಿ ಕಿಡಿ

Published 5 ಜುಲೈ 2024, 12:32 IST
Last Updated 5 ಜುಲೈ 2024, 12:32 IST
ಅಕ್ಷರ ಗಾತ್ರ

ಮಂಡ್ಯ: ‘ಮುಖ್ಯಮಂತ್ರಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವರು ನಡೆಸುವ ಜನಸಂಪರ್ಕ ಸಭೆಗಳಿಗೆ ಮಾತ್ರ ಅಧಿಕಾರಿಗಳು ಹೋಗಬೇಕು ಎಂದು ರಾಜ್ಯ ಸರ್ಕಾರ ಸುತ್ತೋಲೆ ಹೊರಡಿಸಿ ಸಣ್ಣತನದ ರಾಜಕಾರಣ ಪ್ರದರ್ಶಿಸುತ್ತಿದೆ’ ಎಂದು ಕೇಂದ್ರದ ಉಕ್ಕು ಮತ್ತು ಬೃಹತ್ ಕೈಗಾರಿಕಾ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿದರು.

ನಗರದ ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಕೇಂದ್ರ ಸಚಿವರಾದ ನಂತರ ಮೊದಲ ಬಾರಿಗೆ ಶುಕ್ರವಾರ ಏರ್ಪಡಿಸಿದ್ದ ‘ಜನತಾ ದರ್ಶನ’ಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಇಂದಿನ ಜನತಾದರ್ಶನ ಕಾರ್ಯಕ್ರಮಕ್ಕೆ ಅಧಿಕಾರಿಗಳು ಬರದಂತೆ ರಾಜ್ಯ ಸರ್ಕಾರ ತಡೆಹಿಡಿದಿದೆ ಎಂದು ಕಿಡಿಕಾರಿದರು. 

ಜನರ ಸಮಸ್ಯೆಗಳನ್ನು ಆಲಿಸಬೇಕು ಮತ್ತು ಪರಿಹಾರ ಕಲ್ಪಿಸಬೇಕು ಎಂಬ ಉದ್ದೇಶದಿಂದ ಜನತಾದರ್ಶನ ಮಾಡಬೇಕು ಎಂದು ತೀರ್ಮಾನಿಸಿ, ಈ ಸಂಬಂಧ  ಮಂಡ್ಯ ಜಿಲ್ಲಾಧಿಕಾರಿಗೆ ಪತ್ರ ಬರೆದಿದ್ದೆ. ಆದರೆ, ನಿನ್ನೆ ಗುರುವಾರ ಸರ್ಕಾರ ಕ್ಯಾಬಿನೆಟ್‍ನಲ್ಲಿ ಒಂದು ಸುತ್ತೋಲೆ ಹೊರಡಿಸಿ, ಮುಖ್ಯಮಂತ್ರಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವರಿಗೆ ಮಾತ್ರ ಜನತಾದರ್ಶನಕ್ಕೆ ಅವಕಾಶವಿದೆ. ಬೇರೆಯವರ ಜನತಾದರ್ಶನಕ್ಕೆ ಕಾನೂನಿನಲ್ಲಿ ಅವಕಾಶವಿಲ್ಲ ಎಂದು ಆದೇಶ ಹೊರಡಿಸಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. 

ಈ ಸರ್ಕಾರ ಚುನಾವಣೆಗೆ ಮುಂಚೆ ರಾಮನಗರದಲ್ಲಿ ಹೇಗೆ ನಡೆದುಕೊಂಡರು ಎನ್ನೋದು ಗೊತ್ತಿದೆ. ಡಿ.ಕೆ. ಸುರೇಶ್ ಹಿಂದೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಭೆ ನಡೆಸಿದ್ದರು. ಜನಸ್ಪಂದನ ಕಾರ್ಯಕ್ರಮದ ಹೆಸರಲ್ಲಿ ಅಧಿಕಾರಿಗಳನ್ನು ಹಳ್ಳಿ ಹಳ್ಳಿಗೆ ತಿರುಗಿಸಿದ್ದರು. ಉಸ್ತುವಾರಿ ಸಚಿವರು ಮಾಡಬೇಕಾದ ಸಭೆಗಳನ್ನು ಮಾಡಿದ್ದರು. ಇದಕ್ಕೆ ಅನುಮತಿ ಕೊಟ್ಟವರು ಯಾರು? ಯಾವ ನಿಯಮವಿತ್ತು? ಎಂದು ಪ್ರಶ್ನಿಸಿದರು.

ಇವತ್ತು ಕೇಂದ್ರದ ಒಬ್ಬ ಮಂತ್ರಿ, ಜನರ ಅಹವಾಲು ಸ್ವೀಕರಿಸಲು ಬಂದಿದ್ದೇನೆ. ಹೊಸ ನಿಯಾಮವಳಿ ಮೂಲಕ ತಡೆಯಲು ಮುಂದಾಗಿದ್ದಾರೆ. ಇದರಿಂದ ಅವರಿಗೆ ಏನೂ ದೊರಕಲ್ಲ ಎಂದು ಹೇಳಿದರು. ಇದು ನನ್ನ ಮನೆ ಅಥವಾ ಸರ್ಕಾರಿ ಕಾರ್ಯಕ್ರಮವಲ್ಲ. ಕಾರ್ಯಕರ್ತರು, ಮತದಾರರ ಸಮಸ್ಯೆ ಆಲಿಸುವ ಕಾರ್ಯಕ್ರಮ. ಮಾಜಿ ಸಚಿವರು, ಶಾಸಕರು ಇಲ್ಲೇ ಇದ್ದು ಸಮಸ್ಯೆ ಅರ್ಥಮಾಡಿಕೊಳ್ಳಿ ಎಂದರು.

ದೆಹಲಿ ಮಟ್ಟದಲ್ಲಿ ಬಿಡುವಿಲ್ಲದ ಕಾರ್ಯಕ್ರಮಗಳಿವೆ. ಎರಡು ಪ್ರಮುಖ ಖಾತೆಗಳನ್ನ ನನಗೆ ಕೊಡಲಾಗಿದೆ. ಮತ ಕೊಟ್ಟು ಆಶೀರ್ವಾದ ಮಾಡಿದ ಜನ ನೀವು, ನಿಮ್ಮ ಕಷ್ಟ ಆಲಿಸಲು ಬಂದಿದ್ದೇನೆ. ಇದು ಸರ್ಕಾರದ ಅಧಿಕೃತ ಕಾರ್ಯಕ್ರಮ ಅಲ್ಲ.

ಜನತಾದರ್ಶನದಲ್ಲಿ ಜೆಡಿಎಸ್‌ ಯುವ ಘಟಕದ ರಾಜ್ಯ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ, ಮಾಜಿ ಸಚಿವರಾದ ಸಿ.ಎಸ್.ಪುಟ್ಟರಾಜು, ಡಿ.ಸಿ.ತಮ್ಮಣ್ಣ, ಶಾಸಕ ಎಚ್.ಟಿ. ಮಂಜು, ಮಾಜಿ ಶಾಸಕರಾದ ರವೀಂದ್ರ ಶ್ರೀಕಂಠಯ್ಯ, ಸುರೇಶ್‍ಗೌಡ, ಕೆ.ಅನ್ನದಾನಿ, ಕೆ.ಟಿ. ಶ್ರೀಕಂಠೇಗೌಡ, ಕೇಂದ್ರ ಸಚಿವರ ವಿಶೇಷ ಕರ್ತವ್ಯ ಅಧಿಕಾರಿ , ನಿವೃತ್ತ ಐಎಎಸ್ ಅಧಿಕಾರಿ ಕೃಷ್ಣಯ್ಯ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT