ಶನಿವಾರ, 5 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ದಸರಾ ಕವಿಗೋಷ್ಠಿ: ಕವಿಗಳ ಆಯ್ಕೆ ಪ್ರಕ್ರಿಯೆಗೆ ‘ಅಪಸ್ವರ’

ದಸರಾ ಕವಿಗೋಷ್ಠಿ ಉಪ ಸಮಿತಿಯ ಕಾರ್ಯಕ್ಕೆ ಸಾಮಾಜಿಕ ಜಾಲತಾಣದಲ್ಲಿ ಟೀಕೆ
Published : 5 ಅಕ್ಟೋಬರ್ 2024, 7:02 IST
Last Updated : 5 ಅಕ್ಟೋಬರ್ 2024, 7:02 IST
ಫಾಲೋ ಮಾಡಿ
Comments

ಮೈಸೂರು: ದಸರಾ ಅಂಗವಾಗಿ ಅ.5ರಿಂದ 9ರವರೆಗೆ ಇಲ್ಲಿನ ಜಗನ್ಮೋಹನ ಅರಮನೆ ಸಭಾಂಗಣದಲ್ಲಿ ಆಯೋಜಿಸಿರುವ ಕವಿಗೋಷ್ಠಿಗಳಿಗೆ ಆಯ್ಕೆ ಪ್ರಕ್ರಿಯೆ ಬಗ್ಗೆ ಅಪಸ್ವರ ಕೇಳಿಬಂದಿದೆ. ಪಾಲಿಸಲಾಗುತ್ತಿರುವ ಮಾನದಂಡಗಳೇನು ಎಂಬ ಪ್ರಶ್ನೆಯೂ ಎದ್ದಿದೆ.

ಈ ಬಾರಿ ‘ಪಂಚ ಕಾವ್ಯೋತ್ಸವ’ ಶೀರ್ಷಿಕೆಯಲ್ಲಿ ಕ್ರಮವಾಗಿ ‘ಸಮರಸ’, ‘ಸಮಾನತಾ’, ‘ಸಂತಸ’, ‘ಸಮಷ್ಟಿ’ ಹಾಗೂ ‘ಸಮೃದ್ಧ’ ಎಂಬ ಹೆಸರಿನಲ್ಲಿ ಕವಿಗೋಷ್ಠಿಗಳನ್ನು ಜಗನ್ಮೋಹ ಅರಮನೆ ಸಭಾಂಗಣದಲ್ಲಿ ಆಯೋಜಿಸಲಾಗಿದೆ.

‘ಕವಿಗೋಷ್ಠಿಗೆ ಆಯ್ಕೆ ಮಾಡಲಾಗಿರುವ ಅತಿಥಿಗಳು ಮತ್ತು ಕವಿಗಳಲ್ಲಿ ಬಹುತೇಕರು ಉಪಸಮಿತಿಯ ಕಾರ್ಯಾಧ್ಯಕ್ಷೆ ಎನ್.ಕೆ. ಲೋಲಾಕ್ಷಿ ಅವರ ಆಪ್ತ ವಲಯದವರೆ ಆಗಿದ್ದಾರೆ. ಹಿತೈಷಿಗಳಿಗೆ ಹೆಚ್ಚು ಅವಕಾಶದ ಮೂಲಕ ಸ್ವಜನ ಪಕ್ಷಪಾತ ಮಾಡಿದ್ದಾರೆ’ ಎಂದು ಆರೋಪಿಸಲಾಗಿದೆ.

‘ಒಮ್ಮೆಯಾದರೂ ಅವಕಾಶ ಸಿಗಲೆಂದು ನಾಡಿನ ಬಹಳಷ್ಟು ಕವಿಗಳು ಕಾಯುತ್ತಿದ್ದಾರೆ. ಹೀಗಿರುವಾಗ, ಹೊರ ರಾಜ್ಯಗಳು ಮತ್ತು ವಿದೇಶಿ ಕವಿಗಳನ್ನು ವಿಮಾನದಲ್ಲಿ ಕರೆಸಿ ಲಕ್ಷಾಂತರ ರೂಪಾಯಿ ವ್ಯಯಿಸುವ ಅಗತ್ಯ ಏನಿತ್ತು’ ಎಂಬ ಪ್ರಶ್ನೆಯೂ ಅವಕಾಶ ವಂಚಿತರದ್ದು.

‘ಒಂದು ಕವನ ಸಂಕಲನ ಪ್ರಕಟಿಸದವರಿಗೂ ‘ಜಾಗ’ ಮಾಡಿಕೊಡಲಾಗಿದೆ. ಆಪ್ತರಿಗೆ ಮಣೆ ಹಾಕುವ ತಂತ್ರವನ್ನು ಹಾಗೂ ಹಲವು ಎಡವಟ್ಟುಗಳನ್ನು ಉಪ ಸಮಿತಿ ಮಾಡಿದೆ’ ಎಂದು ಆರೋಪಿಸಲಾಗುತ್ತಿದೆ.

‘ದಸರಾದಲ್ಲಿ ಕವಿತೆ ಓದುವುದರಿಂದ ಏನೋ ಆಗಿಬಿಡುತ್ತದೆ ಎಂದಲ್ಲ. ಆದರೆ, ಅದೊಂದು ಪ್ರತಿನಿಧೀಕರಣ; ಸ್ವಾಭಿಮಾನ. ಹಳ್ಳಿಗಾಡಿನ ಕವಿಗೆ ಅದೊಂದು ಗರ್ವ. ಕನ್ನಡ ಕವಿತೆಯನ್ನು ಪೊರೆದ ನಮ್ಮ ಭಾಗದ ಎಷ್ಟೋ ಕವಿಗಳು ಮೈಸೂರನ್ನೂ ನೋಡದೇ, ದಸರೆಯನ್ನೂ ನೋಡದೆ ಕಾಲದಲ್ಲಿ ಲೀನವಾಗಿದ್ದಾರೆ. ಆದರೆ, ಮೈಸೂರಿನ ಜಯಪ್ಪ ಹೊನ್ನಾಳಿ ಅವರಿಗೆ 3ನೇ ಬಾರಿಗೆ ಅವಕಾಶ ದೊರೆತಿದೆ. ಎಚ್‌.ಎಸ್. ಶಿವಪ್ರಕಾಶ್ ಅವರು 2022ರ ದಸರಾ ಕವಿಗೋಷ್ಠಿ ಅಧ್ಯಕ್ಷತೆ ವಹಿಸಿದ್ದರು. ಈ ಸಲ ಅವರೇ ಉದ್ಘಾಟಿಸುತ್ತಿದ್ದಾರೆ. ಬೇರೆಯವರು ದೊರೆಯದಷ್ಟು ಕನ್ನಡ ಕಾವ್ಯ ಲೋಕ ಬಡವಾಗಿದೆಯೇ’ ಎಂದು ಬೆಳಗಾವಿಯ ಕವಿ ವೀರಣ್ಣ ಮಡಿವಾಳರ ಪ್ರಶ್ನಿಸಿದ್ದಾರೆ.

ಏನೇನಾಗಿದೆ?

  • 2014ರ ಕವಿಗೋಷ್ಠಿಯ ಮುಖ್ಯ ಅತಿಥಿ 2019ರಲ್ಲಿ ‘ವಿಖ್ಯಾತ’ ಕವಿಗೋಷ್ಠಿ ಅಧ್ಯಕ್ಷತೆ ವಹಿಸಿದ್ದ ಎಚ್.ಎಲ್.ಪುಷ್ಪಾ ಅವರೇ ಈ ಬಾರಿಯೂ ‘ಸಮೃದ್ಧ’ ಕವಿಗೋಷ್ಠಿ ಉದ್ಘಾಟಕರು.

  • ನವಿರುದ್ದೀನ್ ದೇಮಗಾರ ಎಂಬ ಕವಿ ಯಾರು ಎಂದು ಹಲವು ಕವಿಗಳು ಸಾಮಾಜಿಕ ಜಾಲತಾಣದಲ್ಲಿ ಕೇಳಿದ್ದಾರೆ. ಏಕೆಂದರೆ ಮೈನುದ್ದೀನ್ ರೇವಡಿಗಾರ ಅವರ ಹೆಸರನ್ನು ತಪ್ಪಾಗಿ  ಮುದ್ರಿಸಲಾಗಿದೆ ಎನ್ನಲಾಗುತ್ತಿದೆ.

  • 2015ರಲ್ಲಿ ದಸರಾ ಕವಿಗೋಷ್ಠಿ ಉದ್ಘಾಟಿಸಿದ್ದ ಲತಾ ರಾಜಶೇಖರ್ ಅವರಿಗೆ ಈ ಬಾರಿ ಅತಿಥಿ ಸ್ಥಾನ.

  • ಬಿ.ಆರ್.ಲಕ್ಷ್ಮಣರಾವ್ 2022ರ ಕವಿಗೋಷ್ಠಿಯಲ್ಲೂ ಪಾಲ್ಗೊಂಡಿದ್ದರು.

  • 2014ರಲ್ಲಿ ಅಂದಿನ ಪುಸ್ತಕ ಪ್ರಾಧಿಕಾರದ ಅಧ್ಯಕ್ಷರಾಗಿದ್ದ ಬಂಜಗೆರೆ ಜಯಪ್ರಕಾಶ್ ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದರು. 2017ರಲ್ಲಿ ಕವನ ವಾಚಿಸಿದ್ದರು. ಈ ಬಾರಿ ವಿಶೇಷ ಅತಿಥಿ.

  • ಕನ್ನಡ ಸಾಹಿತ್ಯ ಅಕಾಡೆಮಿ ಸದಸ್ಯ ಸಿದ್ದರಾಮ ಹೊನ್ಕಲ್ ಕವಿಗೋಷ್ಠಿಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ.

  • ಮೈಸೂರಿನವರೇ ಆದ ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಮಾಸನ ‘ಸಮರಸ’ ಕವಿಗೋಷ್ಠಿ ಅಧ್ಯಕ್ಷತೆ ವಹಿಸಲಿದ್ದಾರೆ.

ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆಯಾದ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷರನ್ನು ಕವಿಗೋಷ್ಠಿಯ ಕಾರ್ಯಕ್ರಮಗಳಿಗೆ ಆಹ್ವಾನಿಸದಿರುವುದು ಯಾಕೆ ಎಂಬುದು ನನಗೆ ಅರ್ಥವಾಗಿಲ್ಲ. ಹಿಂದೆ ಆಹ್ವಾನಿಸುತ್ತಿದ್ದರು.
ಮಡ್ಡೀಕೆರೆ ಗೋಪಾಲ್, ಅಧ್ಯಕ್ಷರು, ಕಸಾಪ ಜಿಲ್ಲಾ ಘಟಕ
ಮೈಸೂರು ವಿಶ್ವವಿದ್ಯಾಲಯದ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯವರೇ ಸಮಿತಿ ರಚಿಸಿಕೊಂಡು ಕವಿಗಳನ್ನು ಆಯ್ಕೆ ಮಾಡಿದ್ದಾರೆ. ನಮ್ಮ ಪಾತ್ರವೇನೂ ಅದರಲ್ಲಿಲ್ಲ.
ವಿ.ಎನ್. ಮಲ್ಲಿಕಾರ್ಜುನಸ್ವಾಮಿ, ಜಂಟಿ ನಿರ್ದೇಶಕ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮೈಸೂರು ವಿಭಾಗ
ಕವಿಗೋಷ್ಠಿಗೆ ಯಾರು ಆಯ್ಕೆಯಾಗಲಿಲ್ಲವೋ ಅವರು ಮೊಸರಲ್ಲಿ ಕಲ್ಲು ಹುಡುಕುವ ಪ್ರಯತ್ನವನ್ನು ಮಾಡುತ್ತಿರುತ್ತಾರೆ. ಆದರೆ ನಾವು ಮಾನದಂಡದ ಪ್ರಕಾರವೇ ನಿರ್ವಹಿಸಿದ್ದೇವೆ.
ಎನ್.ಕೆ. ಲೋಕಾಕ್ಷಿ, ಕಾರ್ಯಾಧ್ಯಕ್ಷೆ, ದಸರಾ ಕವಿಗೋಷ್ಠಿ ಉಪ ಸಮಿತಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT