ಶನಿವಾರ, 6 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ರಾಮನಗರ ಜಿಲ್ಲೆಯಲ್ಲಿ ವಿಮಾನ ನಿಲ್ದಾಣ? ಕಾರ್ಯಸಾಧ್ಯತೆ ವರದಿಗೆ ಸೂಚನೆ

Published 3 ಜುಲೈ 2024, 15:29 IST
Last Updated 3 ಜುಲೈ 2024, 15:29 IST
ಅಕ್ಷರ ಗಾತ್ರ

ರಾಮನಗರ: ರಾಜಧಾನಿ ಬೆಂಗಳೂರು ಹೊರವಲಯದ ದೇವನಹಳ್ಳಿಯಲ್ಲಿರುವ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ (ಕೆಐಎ) ಪರ್ಯಾಯವಾಗಿ ಮತ್ತೊಂದು ವಿಮಾನ ನಿಲ್ದಾಣ ನಿರ್ಮಾಣಕ್ಕೆ ರಾಜ್ಯ ಸರ್ಕಾರ ಮುಂದಾಗಿದೆ.

ತಮಿಳುನಾಡು ಸರ್ಕಾರ ಬೆಂಗಳೂರಿಗೆ ಹೊಂದಿಕೊಂಡಂತಿರುವ ಹೊಸೂರಿನಲ್ಲಿ ಹೊಸದಾಗಿ ವಿಮಾನ ನಿಲ್ದಾಣ ಸ್ಥಾಪಿಸುವ ನಿರ್ಧಾರ ‍ಘೋಷಿಸಿದ ಬೆನ್ನಲ್ಲೇ ರಾಜ್ಯ ಇಂತಹದ್ದೊಂದು ಹೆಜ್ಜೆ ಇಟ್ಟಿದೆ.

ಉನ್ನತ ಅಧಿಕಾರಿಗಳ ಸಭೆ ನಡೆಸಿರುವ ರಾಜ್ಯ ಕೈಗಾರಿಕೆ ಮತ್ತು ಮೂಲಸೌಕರ್ಯ ಅಭಿವೃದ್ಧಿ ಸಚಿವ ಎಂ.ಬಿ. ಪಾಟೀಲ ಅವರು  ಬೆಂಗಳೂರು ಹೊರವಲಯದಲ್ಲಿ ನಿಲ್ದಾಣಕ್ಕೆ ಭೂಮಿ ಲಭ್ಯತೆ ಪರಿಶೀಲಿಸಿ ಕಾರ್ಯಸಾಧ್ಯತೆ ವರದಿ ನೀಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಹಾಗಾಗಿ, ರಾಜಧಾನಿಗೆ ಹೊಂದಿಕೊಂಡಂತಿರುವ ರಾಮನಗರ ಜಿಲ್ಲೆಯಲ್ಲಿ ಮತ್ತೊಂದು ನಿಲ್ದಾಣ ತಲೆ ಎತ್ತುವ ಸಾಧ್ಯತೆ ಹೆಚ್ಚಾಗಿದೆ.

ದಟ್ಟಣೆಗೆ ಪರಿಹಾರ:

ದೇವನಹಳ್ಳಿಯಲ್ಲಿ 2008ರಲ್ಲಿ ಕಾರ್ಯಾರಂಭ ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರ ದಟ್ಟಣೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಪ್ರತಿ ವರ್ಷ ಪ್ರಯಾಣಿಕರ ಸಂಖ್ಯೆ ಶೇ 10ರಷ್ಟು ಹೆಚ್ಚಳವಾಗುತ್ತಿದೆ. 4,700 ಎಕರೆಯಲ್ಲಿರುವ ನಿಲ್ದಾಣದಲ್ಲಿ ಸದ್ಯ ಎರಡು ಟರ್ಮಿನಲ್‌ಗಳಿದ್ದು ಪ್ರಯಾಣಿಕರ ಸಂಖ್ಯೆ ಹೆಚ್ಚುತ್ತಲೇ ಹೋದರೆ ಮುಂದೆ ದಟ್ಟಣೆ ನಿರ್ವಹಣೆ ಸವಾಲಾಗಲಿದೆ. ಅದಕ್ಕಾಗಿ ಪರ್ಯಾಯವಾಗಿ ಮತ್ತೊಂದು ವಿಮಾನ ನಿಲ್ದಾಣ ನಿರ್ಮಿಸಲು ಸರ್ಕಾರ ಚಿಂತನೆ ನಡೆಸಿದೆ ಎಂದು ಇಲಾಖೆಯ ಮೂಲಗಳು ತಿಳಿಸಿವೆ.

‘ರಾಷ್ಟ್ರೀಯ ಹೆದ್ದಾರಿ ಸಂಪರ್ಕ ಸೇರಿದಂತೆ ರಾಜಧಾನಿಯನ್ನು ತ್ವರಿತವಾಗಿ ತಲುಪಬಲ್ಲ ಸಂಪರ್ಕ ವ್ಯವಸ್ಥೆ ಇರುವ ಸ್ಥಳಗಳಲ್ಲಿ ಹೊಸ ನಿಲ್ದಾಣಕ್ಕಾಗಿ ಜಾಗ ಹುಡುಕಲಾಗುತ್ತಿದೆ. ಭೂಮಿ ಲಭ್ಯತೆ ಪರಿಶೀಲಿಸಿ ನಿಲ್ದಾಣದ ಕಾರ್ಯಸಾಧ್ಯತೆ ವರದಿ ಸಿದ್ದಪಡಿಸಿ ಸರ್ಕಾರಕ್ಕೆ ಸಲ್ಲಿಸಲಾಗುವುದು’ ಎಂದು ಮೂಲಗಳು ಹೇಳಿವೆ.

ಸದ್ಯ ಬೆಂಗಳೂರಿಗೆ ಹೊಂದಿಕೊಂಡಂತಿರುವ ರಾಮನಗರ ಜಿಲ್ಲೆ ಹೊಸ ವಿಮಾನ ನಿಲ್ದಾಣಕ್ಕೆ ಪ್ರಶಸ್ತ ಜಾಗ ಎಂದು ಗುರುತಿಸಲಾಗಿದೆ.  ಬೆಂಗಳೂರು–ಮೈಸೂರು ಮತ್ತು ಬೆಂಗಳೂರು–ಮಂಗಳೂರು ರಾಷ್ಟ್ರೀಯ ಹೆದ್ದಾರಿಗಳು ಜಿಲ್ಲೆಯ ವ್ಯಾಪ್ತಿಯಲ್ಲಿ ಹಾದು ಹೋಗುತ್ತವೆ.

ರಾಜಧಾನಿಗೆ ತ್ವರಿತ ರಸ್ತೆ ಸಂಪರ್ಕ ವ್ಯವಸ್ಥೆ ಹೊಂದಿರುವ ಮಾಗಡಿ ತಾಲ್ಲೂಕಿನ ಸೋಲೂರು ಸುತ್ತಮುತ್ತ, ಇಲ್ಲವೇ ರಾಮನಗರ ಅಥವಾ ಚನ್ನಪಟ್ಟಣದ ಆಚೆಗಿನ ಜಾಗವನ್ನು ಸಹ ನಿಲ್ದಾಣಕ್ಕೆ ಪರಿಶೀಲಿಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT