ಗುರುವಾರ, 19 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ವಿಶ್ವ ತೆಂಗು ದಿನಾಚರಣೆ: ನೈಸರ್ಗಿಕ ‘ತೆಂಗು’ ಕೃಷಿಗೆ ಒತ್ತು ನೀಡಿ

ವಿಶ್ವ ತೆಂಗು ದಿನಾಚರಣೆ: ಕೇಂದ್ರ ಕೃಷಿ ಖಾತೆ ರಾಜ್ಯ ಸಚಿವ ರಾಮನಾಥ್ ಠಾಕೂರ್ ಸಲಹೆ
Published : 19 ಸೆಪ್ಟೆಂಬರ್ 2024, 6:21 IST
Last Updated : 19 ಸೆಪ್ಟೆಂಬರ್ 2024, 6:21 IST
ಫಾಲೋ ಮಾಡಿ
Comments

ರಾಮನಗರ: ‘ತೆಂಗು ಬೆಳೆಗಾರರು ಸಾಧ್ಯವಾದಷ್ಟು ನೈಸರ್ಗಿಕ ಕೃಷಿಗೆ ಒತ್ತು ನೀಡಬೇಕು. ನಮ್ಮ ಭೂಮಿ ಸ್ವಸ್ಥವಾಗಿದ್ದರೆ ನಾವೂ ಆರೋಗ್ಯವಾಗಿರುತ್ತೇವೆ. ರಾಸಾಯನಿಕ ಬಳಕೆಯಿಂದ ಕಳೆದ 30 ವರ್ಷಗಳಿಂದ ಮಣ್ಣಿನ ಫಲವತ್ತತೆ ಕಡಿಮೆಯಾಗುತ್ತಿದೆ. ಹಾಗಾಗಿ,ಮಣ್ಣಿನ ಸತ್ವ ಕಾಪಾಡಿಕೊಂಡು ಕೃಷಿ ಮಾಡಬೇಕಾದ ಹೊಣೆಗಾರಿಕೆ ಬೆಳೆಗಾರರ ಮೇಲಿದೆ’ ಎಂದು ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ಖಾತೆಯ ರಾಜ್ಯ ಸಚಿವ ರಾಮನಾಥ್ ಠಾಕೂರ್ ಸಲಹೆ ನೀಡಿದರು.

ನಗರದ ಮಂಜುನಾಥ ಕನ್ವೆನ್ಷನ್‌ ಹಾಲ್‌ನಲ್ಲಿ ತೆಂಗು ಅಭಿವೃದ್ಧಿ ಮಂಡಳಿ ಹಾಗೂ ತೋಟಗಾರಿಕೆ ಇಲಾಖೆ ಸಹಯೋಗದಲ್ಲಿ ಬುಧವಾರ ಹಮ್ಮಿಕೊಂಡಿದ್ದ ವಿಶ್ವ ತೆಂಗು ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ‘ವಿಶ್ವದಲ್ಲಿ ತೆಂಗು ಉತ್ಪಾದನೆಯಲ್ಲಿ ಇಂಡೊನೇಷ್ಯಾ, ಫಿಲಿಪ್ಪಿನ್ಸ್ ಬಳಿಕ ಭಾರತ ಮೂರನೇ ಸ್ಥಾನದಲ್ಲಿದೆ. ನಾವು ಮೊದಲ ಸ್ಥಾನಕ್ಕೇರಲು ಬೆಳೆಗಾರರು ಶ್ರಮಿಸಬೇಕು’ ಎಂದರು.

‘ದೇಶದಲ್ಲಿ ಶೇ 17.6ರಷ್ಟು ಪ್ರದೇಶದಲ್ಲಿ ಶೇ 28.81ರಷ್ಟು ತೆಂಗು ಉತ್ಪಾದನೆಯಾಗುತ್ತಿದೆ. ಪ್ರತಿ ಹೆಕ್ಟೇರ್‌ಗೆ 9,882 ತೆಂಗಿನಕಾಯಿ ಇಳುವರಿ ಸಿಗುತ್ತಿದೆ. ತೆಂಗು ಸೇರಿದಂತೆ ತೋಟಗಾರಿಕೆ ಬೆಳೆಗಳ ಅಭಿವೃದ್ಧಿಗೆ ಕೃಷಿ ಇಲಾಖೆಯು ವಿವಿಧ ಯೋಜನೆಗಳನ್ನು ಹಮ್ಮಿಕೊಂಡಿದೆ. ರೈತರು ಇವುಗಳ ಪ್ರಯೋಜನ ಪಡೆಯಬೇಕು. ಬೆಳೆಯ ಗುಣಮಟ್ಟ ಮತ್ತು ಮೌಲ್ಯವರ್ಧನೆಗೆ ಆದ್ಯತೆ ನೀಡಬೇಕು’ ಎಂದು ಕಿವಿಮಾತು ಹೇಳಿದರು.

ತೆಂಗು ಅಭಿವೃದ್ಧಿ ಮಂಡಳಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಡಾ. ಪ್ರಭಾತ್ ಕುಮಾರ್ ಮಾತನಾಡಿ, ‘ತೆಂಗು ಉತ್ಪನ್ನಗಳೆಂದರೆ ತೆಂಗಿನಕಾಯಿ ಮತ್ತು ಎಳನೀರು ಮಾತ್ರವಾಗಿದ್ದ ಕಾಲ ಈಗಿಲ್ಲ. ತೆಂಗಿನ 25ಕ್ಕೂ ಹೆಚ್ಚು ಬಗೆಯ ಉತ್ಪನ್ನಗಳನ್ನು ನಾವೀಗ ಕಾಣುತ್ತಿದ್ದೇವೆ. ತೆಂಗು ಸಂಪೂರ್ಣ ಮರುಬಳಕೆಯ ಬೆಳೆಯಾಗಿದ್ದು, ವೈಜ್ಞಾನಿಕ ಕ್ರಮಗಳಿಂದಾಗಿ ಅದರ ಪ್ರತಿ ಅಂಗವನ್ನು ಬಳಸಿಕೊಳ್ಳುತ್ತಿದ್ದೇವೆ’ ಎಂದರು.

‘ತೆಂಗಿನ ಇಳುವರಿ ಹೆಚ್ಚಿಸುವಲ್ಲಿ ನಾವು ಸಫಲರಾಗಿದ್ದೇವೆ. ಮಂಡ್ಯ ಜಿಲ್ಲೆಯಲ್ಲಿ ಉತ್ತಮ ಬೀಜಗಳನ್ನು ಒದಗಿಸುವ ಸಂಸ್ಥೆಯನ್ನು ಶುರು ಮಾಡಲಾಗಿದೆ. ಉತ್ತಮ ತಳಿಯ ಬೀಜಗಳನ್ನು ಬಳಸಿಕೊಂಡು ತೋಟಗಾರಿಕೆ ಮಾಡಿದಾಗ, ಬೆಳೆ ನಷ್ಟ ತಗ್ಗಿಸಬಹುದು. ನೀರಾದಿಂದ ತಯರಾಗುವ ಸಕ್ಕರೆಗೆ ಮಾರುಕಟ್ಟೆಯಲ್ಲಿ ಹೆಚ್ಚಿನ ಬೆಲೆ ಇದೆ. ಇಂತಹ ಹೊಸ ಉತ್ಪನ್ನಗಳ ಬಗ್ಗೆ ರೈತರು ತಿಳಿದುಕೊಂಡು ಗಮನ ಹರಿಸಬೇಕು’ ಎಂದು ತಿಳಿಸಿದರು.

ತೆಂಗು ಬೆಳೆಯ ವಿವಿಧ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟ ಮಳಿಗೆಗಳನ್ನು ಸಚಿವ ಠಾಕೂರ್ ಉದ್ಘಾಟಿಸಿದರು. ಬೆಂಗಳೂರಿನ ಜೆಕೆವಿಕೆಯ ವಿಷಯ ತಜ್ಞ ಡಾ. ಶ್ರೀನಿವಾಸ ರೆಡ್ಡಿ ಉಪನ್ಯಾಸ ನೀಡಿದರು. ತೋಟಗಾರಿಕೆ ಇಲಾಖೆಯ ಹೆಚ್ಚುವರಿ ನಿರ್ದೇಶಕ ಡಾ. ಸೊಬರದ, ಜಂಟಿ ನಿರ್ದೇಶಕ ಕದಿರೇಗೌಡ, ತೆಂಗು ಅಭಿವೃದ್ಧಿ ಮಂಡಳಿ ಅಧಿಕಾರಿಗಳು, ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳು, ತೋಟಗಾರಿಕೆ ಇಲಾಖೆಯ ಅಧಿಕಾರಿಗಳು ಹಾಗೂ ಅಕ್ಕಪಕ್ಕದ ಜಿಲ್ಲೆಗಳ ತೆಂಗು ಬೆಳೆಗಾರರು ಇದ್ದರು.

ಮಂಡಳಿಯ ಮುಖ್ಯ ತೆಂಗು ಅಭಿವೃದ್ಧಿ ಅಧಿಕಾರಿ ಡಾ. ಬಿ. ಹನುಮಂತೇಗೌಡ ಸ್ವಾಗತಿಸಿದರು. ತೋಟಗಾರಿಕೆ ಇಲಾಖೆಯ ಉಪ ನಿರ್ದೇಶಕ ಎಂ.ಎಸ್. ರಾಜು ವಂದಿಸಿದರು. ತಾಂತ್ರಿಕ ಅಧಿಕಾರಿಗಳಾದ ಚಂದ್ರಿಕಾ ಮತ್ತು ಅಕ್ಷತಾ ಪ್ರಾರ್ಥನೆ ಹಾಡಿದರು.

ಕಾರ್ಯಕ್ರಮಕ್ಕೂ ಮುಂಚೆ ತೆಂಗು ಉತ್ಪನ್ನಗಳ ಮಳಿಗೆಗೆ ಭೇಟಿ ನೀಡಿದ ಸಚಿವ ರಾಮ್‌ನಾಥ್ ಠಾಕೂರ್ ಅವರಿಗೆ ತೆಂಗು ಅಭಿವೃದ್ಧಿ ಮಂಡಳಿ ಅಧ್ಯಕ್ಷ ಸಿಇಒ ಡಾ. ಪ್ರಭಾತ್ ಕುಮಾರ್ ಉತ್ಪನ್ನಗಳ ಕುರಿತು ಮಾಹಿತಿ ನೀಡಿದರು
ಕಾರ್ಯಕ್ರಮಕ್ಕೂ ಮುಂಚೆ ತೆಂಗು ಉತ್ಪನ್ನಗಳ ಮಳಿಗೆಗೆ ಭೇಟಿ ನೀಡಿದ ಸಚಿವ ರಾಮ್‌ನಾಥ್ ಠಾಕೂರ್ ಅವರಿಗೆ ತೆಂಗು ಅಭಿವೃದ್ಧಿ ಮಂಡಳಿ ಅಧ್ಯಕ್ಷ ಸಿಇಒ ಡಾ. ಪ್ರಭಾತ್ ಕುಮಾರ್ ಉತ್ಪನ್ನಗಳ ಕುರಿತು ಮಾಹಿತಿ ನೀಡಿದರು

ನಾಲ್ಕು ಭಾಷೆಗಳ ಸಂಗಮ

ಕಾರ್ಯಕ್ರಮವು ನಾಲ್ಕು ಭಾಷೆಗಳ ಸಂಗಮಕ್ಕೆ ಸಾಕ್ಷಿಯಾಯಿತು. ಸಚಿವ ರಾಮನಾಥ್ ಠಾಕೂರ್ ಅವರು ಹಿಂದಿಯಲ್ಲಿ ತೆಂಗು ಅಭಿವೃದ್ಧಿ ಮಂಡಳಿ ಅಧ್ಯಕ್ಷ ಶುಭ ನಾಗರಾಜನ್ ಅವರು ತಮಿಳಿನಲ್ಲಿ ಹಾಗೂ ಸಿಇಒ ಡಾ. ಪ್ರಭಾತ್ ಕುಮಾರ್ ಇಂಗ್ಲಿಷ್‌ನಲ್ಲಿ ಭಾಷಣ ಮಾಡಿದರು. ವೇದಿಕೆಯಲ್ಲಿದ್ದ ರಾಜ್ಯದ ಗಣ್ಯರು ಹಾಗೂ ಅಧಿಕಾರಿಗಳು ಕನ್ನಡದಲ್ಲಿ ಮಾತನಾಡಿದರು. ಬೇರೆ ಭಾಷೆಯ ಭಾಷಣವನ್ನು ಆಯೋಜಕರು ಕನ್ನಡದಲ್ಲಿ ಅನುದಾನ ಮಾಡಿದರು. ಸ್ಥಳೀಯ ಜನಪ್ರತಿನಿಧಿಗಳ ಗೈರು ತೆಂಗು ಬೆಳೆಯುವ ಪ್ರಮುಖ ಜಿಲ್ಲೆಗಳಲ್ಲೊಂದಾದ ರಾಮನಗರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವರು ಭಾಗವಹಿಸಿದ್ದರೂ ಸ್ಥಳೀಯ ಜನಪ್ರತಿನಿಧಿಗಳ ಗೈರು ಎದ್ದು ಕಾಣುತ್ತಿತ್ತು. ತೋಟಗಾರಿಕೆ ಸಚಿವ ಎಸ್‌.ಎಸ್. ಮಲ್ಲಿಕಾರ್ಜುನ್ ಜಿಲ್ಲಾ ಉಸ್ತುವಾರಿ ಸಚಿವ ರಾಮಲಿಂಗಾ ರೆಡ್ಡಿ ಸ್ಥಳೀಯ ಶಾಸಕ ಎಚ್.ಎ. ಇಕ್ಬಾಲ್ ಹುಸೇನ್ ಸಂಸದ ಡಾ. ಸಿ.ಎನ್. ಮಂಜುನಾಥ್ ಸೇರಿದಂತೆ ಯಾವೊಬ್ಬ ಜನಪ್ರತಿನಿಧಿಗಳು ಸಹ ವೇದಿಕೆಯಲ್ಲಿರಲಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT