ಸೋಮವಾರ, 16 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

Bengaluru Mysuru Expresswayಯಲ್ಲಿ ಅಪಘಾತ ಹೆಚ್ಚಳ: ಪರಿಶೀಲಿಸಿದ ತಜ್ಞರ ಸಮಿತಿ

ಅಪಘಾತ ಸ್ಥಳ, ಮೇಲ್ಸೇತುವೆ, ಪ್ರವೇಶ–ನಿರ್ಗಮನ ರಸ್ತೆ ಪರಿಶೀಲನೆ
Published : 19 ಜುಲೈ 2023, 19:52 IST
Last Updated : 19 ಜುಲೈ 2023, 19:52 IST
ಫಾಲೋ ಮಾಡಿ
Comments

ರಾಮನಗರ: ಅಪಘಾತಗಳ ಹೆಚ್ಚಳದ ಹಿನ್ನೆಲೆಯಲ್ಲಿ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಮೂವರು ತಜ್ಞರ ಸಮಿತಿಯು ಬೆಂಗಳೂರು– ಮೈಸೂರು ಎಕ್ಸ್‌ಪ್ರೆಸ್ ವೇಯ ವಿವಿಧ ಸ್ಥಳಗಳಿಗೆ ಬುಧವಾರ ಭೇಟಿ ನೀಡಿತು. 

ರಸ್ತೆ ಸುರಕ್ಷತೆ ಸಲಹೆಗಾರ ಸುದರ್ಶನ್ ಕೆ. ಪೊಪ್ಲಿ, ಪ್ರಾಧಿಕಾರದ ಉಪ ವ್ಯವಸ್ಥಾಪಕ ಹಾಗೂ ರಸ್ತೆ ಸುರಕ್ಷತಾ ಅಧಿಕಾರಿ ಪ್ರವೀಣ್ ಕುಮಾರ್ (ಆರ್‌ಎಸ್‌ಒ) ಹಾಗೂ ಸೊಹ್ನಾ-ದೌಸಾ ಎಕ್ಸ್‌ಪ್ರೆಸ್ ಯೋಜನೆ ಜಾರಿ ಘಟಕದ ವ್ಯವಸ್ಥಾಪಕ ಜೈವರ್ಧನ್ ಸಿಂಗ್ ಅವರನ್ನೊಳಗೊಂಡ ಸಮಿತಿ, ಹೆದ್ದಾರಿ ಸುರಕ್ಷತೆ ಮತ್ತು ಕೈಗೊಳ್ಳಬೇಕಾದ ಸುಧಾರಣಾ ಕ್ರಮಗಳ ಕುರಿತು ಪರಿಶೀಲನೆ ನಡೆಸಿತು.

ಕಣಿಮಿಣಿಕೆ, ಹೆಜ್ಜಾಲ, ಹನುಮಂತನಗರ, ವಂಡರ್‌ ಲಾ ಗೇಟ್, ಕೇತುಗಾನಹಳ್ಳಿ ಮೇಲ್ಸೇತುವೆ, ದಾಸಪ್ಪನದೊಡ್ಡಿ, ಕೆಂಪನಹಳ್ಳಿ ಗೇಟ್, ಮಾಯಗಾನಹಳ್ಳಿ, ಸಂಗಬಸವನದೊಡ್ಡಿ ಸೇರಿದಂತೆ ಹೆದ್ದಾರಿಯುದ್ದಕ್ಕೂ ಸಮಿತಿ ಸಂಚರಿಸಿತು. ಅಪಘಾತ ಹೆಚ್ಚಾಗಿರುವ ಸ್ಥಳಗಳು ಹಾಗೂ ವಾಹನಗಳ ಪ್ರವೇಶ ಮತ್ತು ನಿರ್ಗಮನ ರಸ್ತೆಗಳನ್ನು ಪರಿಶೀಲಿಸಿತು.

ಮೇಲ್ಸೇತುವೆ ಮತ್ತು ಕೆಳಸೇತುವೆಗಳಿಗೂ ಭೇಟಿ ನೀಡಿದ ಸಮಿತಿ ಸದಸ್ಯರು, ಕೆಲವೆಡೆ ಸಾರ್ವಜನಿಕರು ಹಾಗೂ ವಾಹನ ಸವಾರರೊಂದಿಗೂ ಸಂವಾದ ನಡೆಸಿ ಮಾಹಿತಿ ಕಲೆ ಹಾಕಿದರು. ಪ್ರಾಧಿಕಾರದ ಸ್ಥಳೀಯ ಅಧಿಕಾರಿಗಳು ಸಮಿತಿಗೆ ಸಾಥ್ ನೀಡಿದರು.

ಎಕ್ಸ್‌ಪ್ರೆಸ್ ವೇ ವಾಹನಗಳ ಸಂಚಾರಕ್ಕೆ ಮುಕ್ತಗೊಂಡ ಕಳೆದ ಒಂಬತ್ತು ತಿಂಗಳಲ್ಲಿ ಸಂಭವಿಸಿದ 550ಕ್ಕೂ ಹೆಚ್ಚು ಅಪಘಾತಗಳಲ್ಲಿ 158ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದರು. ರಸ್ತೆಯ ಸುರಕ್ಷತೆ ಕುರಿತು ವ್ಯಾಪಕ ಚರ್ಚೆಗಳು ಆರಂಭವಾಗಿದ್ದವು. ಅವೈಜ್ಞಾನಿಕವಾಗಿ ರಸ್ತೆ ನಿರ್ಮಿಸಿರುವುದೇ ಇದಕ್ಕೆ ಕಾರಣ ಎಂಬ ಆರೋಪಗಳು ಕೇಳಿ ಬಂದಿದ್ದವು.

ಹೆದ್ದಾರಿಯನ್ನು ಪರಿಶೀಲನೆ ನಡೆಸಿದ್ದ ಜಿಲ್ಲಾ ಪೊಲೀಸರು, ಅಪಘಾತ ಸ್ಥಳಗಳನ್ನು ಗುರುತಿಸಿ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಪ್ರಾಧಿಕಾರಕ್ಕೆ ವರದಿ ಕೊಟ್ಟಿದ್ದರು. ಸಂಚಾರ ಮತ್ತು ಸುರಕ್ಷತೆ ವಿಭಾಗದ ಎಡಿಜಿಪಿ ಸಹ ಎಕ್ಸ್‌ಪ್ರೆಸ್ ವೇಗೆ ಭೇಟಿ ನಡೆಸಿದ್ದರು. ಅಧಿವೇಶನದಲ್ಲೂ ಅಪಘಾತ ಹೆಚ್ಚಳದ ವಿಷಯ ಪ್ರತಿಧ್ವನಿಸಿತ್ತು.

ಅದರ ಬೆನ್ನಲ್ಲೇ, ಪ್ರಾಧಿಕಾರವು ಎಕ್ಸ್‌ಪ್ರೆಸ್ ಸುರಕ್ಷತೆ ಮತ್ತು ಸುಧಾರಣಾ ಕ್ರಮಗಳ ಪರಿಶೀಲನೆಗಾಗಿ ಸಮಿತಿಯನ್ನು ಜುಲೈ 14ರಂದು ರಚಿಸಿತ್ತು. ಹತ್ತು ದಿನದೊಳಗೆ ವರದಿ ನೀಡಬೇಕು ಎಂದು ಸೂಚಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT