ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಬೊಂಬೆ ನಗರ ಖ್ಯಾತಿಯ ಚನ್ನಪಟ್ಟಣಕ್ಕೆ ಕಸವೇ ಕಂಟಕ

ಪ್ರತಿದಿನ ನಗರದಲ್ಲಿ 30 ರಿಂದ 50 ಟನ್‌ವರೆಗೆ ತ್ಯಾಜ್ಯ ಸಂಗ್ರಹ
Published 24 ಜೂನ್ 2024, 3:19 IST
Last Updated 24 ಜೂನ್ 2024, 3:19 IST
ಅಕ್ಷರ ಗಾತ್ರ

ಚನ್ನಪಟ್ಟಣ: ಬೊಂಬೆನಗರ ಎಂದು ಖ್ಯಾತಿ ಪಡೆದಿರುವ ಚನ್ನಪಟ್ಟಣ ಕಸದ ನಗರವಾಗಿ ಮಾರ್ಪಟ್ಟಿದೆ. ಹಲವು ವರ್ಷಗಳಿಂದಲೂ ಇಲ್ಲಿನ ಕಸದ ಸಮಸ್ಯೆಗೆ ಮುಕ್ತಿ ಸಿಕ್ಕಿಲ್ಲ.

ಬೆಂಗಳೂರು–ಮೈಸೂರು ಹೆದ್ದಾರಿ ಸೇರಿದಂತೆ ನಗರದ ಯಾವುದೇ ರಸ್ತೆಗೆ ಹೋದರೂ ಕಸದ ರಾಶಿ ಸ್ವಾಗತಿಸುತ್ತಿದೆ. ಎಲ್ಲೆಂದರಲ್ಲಿ ಕಸದ ರಾಶಿ ತುಂಬಿ ಜನರು ರಸ್ತೆಯಲ್ಲಿ ಸಂಚರಿಸಲು ಮುಜುಗರ ಪಡುವಂತಾಗಿದೆ.

ಪ್ರತಿದಿನ ನಗರದಲ್ಲಿ 30 ರಿಂದ 50 ಟನ್‌ವರೆಗೆ ತ್ಯಾಜ್ಯ ಸಂಗ್ರಹಣೆ ‌ಆಗುತ್ತದೆ. ಈ ಪ್ರಮಾಣದ ತ್ಯಾಜ್ಯ ವಿಲೇವಾರಿ ಮಾಡಲು ಸೂಕ್ತ ವ್ಯವಸ್ಥೆ ಮಾಡಿಕೊಳ್ಳದ ನಗರಸಭೆ, ಕಸವನ್ನು ಅಲ್ಲಲ್ಲೇ ಬಿಡುತ್ತಿದೆ. ಮಳೆಗಾಲ ಆರಂಭಗೊಂಡಿರುವ ಹಿನ್ನೆಲೆಯಲ್ಲಿ ಕಸದ ರಾಶಿ ಹಾಗೆ ಬಿಟ್ಟಿರುವುದು  ನಾಗರಿಕರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆ ಇದೆ ಎನ್ನುವ ಆರೋಪ ಇದೆ.

ಮುಸ್ಲಿಂ ಸಮುದಾಯ ವಾಸಿಸುವ ವಾರ್ಡ್‌ಗಳಲ್ಲಿ ಕಸದ ರಾಶಿ ಬೀಳುತ್ತಿದೆ. ಎರಡು ಮೂರು ದಿನಗಳಿಗೊಮ್ಮೆ, ಒಮ್ಮೊಮ್ಮೆ ವಾರಕೊಮ್ಮೆ ತೆರವು ಮಾಡುವ ಕಾರಣ ಅಷ್ಟೊತ್ತಿಗೆ ಕಸದ ಬೆಟ್ಟವೇ ಬೆಳೆದಿರುತ್ತದೆ. ಅಧಿಕಾರಿಗಳು ಮಾತ್ರ ಈ ಬಗ್ಗೆ ತಲೆಕೆಡಿಸಿಕೊಳ್ಳುತ್ತಿಲ್ಲ ಎಂದು ಅಲ್ಲಿನ ನಿವಾಸಿಗಳಾದ ಫರಿದಾ, ವಹಿದಾ, ಸಿರಿನ್ ತಾಜ್ ಆರೋಪಿಸುತ್ತಾರೆ.

ಕಸದ ರಾಶಿಗಳು ಬಹುತೇಕ ಚರಂಡಿ ಅಕ್ಕಪಕ್ಕ ಬೀಳುವ ಕಾರಣ ಚರಂಡಿಯಲ್ಲಿ ಕಸ ತುಂಬಿಕೊಂಡು ಆಗಾಗ್ಗೆ ಚರಂಡಿಯಲ್ಲಿ ನೀರು ಸಾಗದೆ ಕೆಲವೆಡೆ ರಸ್ತೆಗಳಲ್ಲಿಯೂ ಹರಿಯುತ್ತದೆ. ಈ ನೀರು ದುರ್ನಾತ ಬೀರುತ್ತಿದೆ ಎಂಬುದು ನಾಗರಿಕರಾದ ಜಯರಾಮು, ಶ್ರೀಧರ್ ಆರೋಪ.

ನಗರದಲ್ಲಿ ಉತ್ಪಾದನೆಯಾಗುವ ಕಸದ ರಾಶಿ ವಿಲೇವಾರಿ ಮಾಡಲು ತಾಲ್ಲೂಕಿನ ಕಣ್ವ ಗ್ರಾಮದ ಬಳಿ ನಗರಸಭೆ ಜಾಗವೊಂದನ್ನು ಗುರ್ತಿಸಿತ್ತು. ಆದರೆ, ಅಲ್ಲಿನ ನಿವಾಸಿಗಳು ಇದಕ್ಕೆ ವಿರೋಧ ವ್ಯಕ್ತಪಡಿಸಿದ ಕಾರಣ ಅಲ್ಲಿ ಕಸ ವಿಲೇವಾರಿ ಮಾಡಲು ಸಾಧ್ಯವಾಗಲಿಲ್ಲ. ನಂತರ ಕೂಡ್ಲೂರಿನ ಬಳಿ ಜಾಗ ಪರಿಶೀಲನೆ ಮಾಡಲಾಗಿತ್ತು. ಆದರೆ, ಅಲ್ಲಿಯೂ ಜಾಗ ಸೂಕ್ತವಾಗಲಿಲ್ಲ. ಈಗ ಎಲೇಕೆರಿ ಬಳಿಯ ಕುಂಬಾರಗುಂಡಿ ಪ್ರದೇಶದಲ್ಲಿ ಕಸ ವಿಲೇವಾರಿ ಮಾಡಲಾಗುತ್ತಿದೆ ಎಂದು ನಗರಸಭೆ ಅಧಿಕಾರಿಗಳು ತಿಳಿಸುತ್ತಾರೆ.

ಜನರು ನಗರಸಭೆ ಕಸದ ಗಾಡಿ ಬಂದಾಗ ಹಸಿಕಸ, ಒಣಕಸ ಎಂದು ವಿಂಗಡಣೆ ಮಾಡಿ ನೀಡಿದರೆ ಕಸದ ಸಮಸ್ಯೆಗೆ ಮುಕ್ತಿ ಸಿಗುತ್ತದೆ. ಆದರೆ, ಜನರು ಕಸವನ್ನು ರಸ್ತೆ ಬದಿಯಲ್ಲಿ ಎಸೆದು ಹೋಗುತ್ತಾರೆ. ಇದರಿಂದ ಅಲ್ಲಲ್ಲಿ ಕಸದ ರಾಶಿ ಬೀಳುವಂತಾಗಿದೆ. ಈ ಕಸವನ್ನು ವಿಲೇವಾರಿ ಮಾಡುವುದು ಸಹ ಕಷ್ಟವಾಗುತ್ತಿದೆ ಎಂದು ಹೆಸರೇಳಿಚ್ಛಿಸದ ನಗರಸಭಾ ಅಧಿಕಾರಿಯೊಬ್ಬರು ತಿಳಿಸಿದರು.

ಚನ್ನಪಟ್ಟಣದ ಮುಸ್ಲಿಂ ವಾರ್ಡ್ ನ ರಸ್ತೆಯೊಂದರಲ್ಲಿ ಕಸದ ರಾಶಿ ಬಿದ್ದಿರುವುದು
ಚನ್ನಪಟ್ಟಣದ ಮುಸ್ಲಿಂ ವಾರ್ಡ್ ನ ರಸ್ತೆಯೊಂದರಲ್ಲಿ ಕಸದ ರಾಶಿ ಬಿದ್ದಿರುವುದು
ಚನ್ನಪಟ್ಟಣದ ಕೆಂಪೇಗೌಡ ಬಡಾವಣೆಯ ರಸ್ತೆಯೊಂದರಲ್ಲಿ ಚರಂಡಿ ಬಳಿ ಕಸದ ರಾಶಿ
ಚನ್ನಪಟ್ಟಣದ ಕೆಂಪೇಗೌಡ ಬಡಾವಣೆಯ ರಸ್ತೆಯೊಂದರಲ್ಲಿ ಚರಂಡಿ ಬಳಿ ಕಸದ ರಾಶಿ

ನಗರಸಭೆ ಮೌನ

ನಗರದಲ್ಲಿ ಕಸದ ರಾಶಿಯಿಂದಾಗಿ ಇಷ್ಟೆಲ್ಲ ಸಮಸ್ಯೆಗಳಿದ್ದರೂ ನಗರಾಡಳಿತ ಮಾತ್ರ ಮೌನಕ್ಕೆ ಶರಣಾಗಿದೆ. ನಗರಸಭೆ ಅಧಿಕಾರಿಗಳಿಗೆ ಈ ಬಗ್ಗೆ ಕಾಳಜಿ ಇಲ್ಲ. ನಗರಸಭೆ ಅಧಿಕಾರಿಗಳು ಕಸದ ರಾಶಿ ವಿಲೇವಾರಿಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಎನ್ನುವುದು ನಾಗರಿಕರ ಒತ್ತಾಯವಾಗಿದೆ. ಈ ಬಗ್ಗೆ ಪ್ರತಿಕ್ರಿಯೆ ಕೇಳಲು ನಗರಸಭೆ ಅಧ್ಯಕ್ಷ ಪ್ರಶಾಂತ್ ಹಾಗೂ ಆಯುಕ್ತ ಪುಟ್ಟಸ್ವಾಮಿ ಅವರಿಗೆ ಕರೆ ಮಾಡಿದರೆ ಅವರ ಮೊಬೈಲ್ ಸಕ್ರಿಯವಾಗಿರಲಿಲ್ಲ.

ಬೀದಿನಾಯಿಗಳ ಹಿಂಡು

ಕಸದ ರಾಶಿಗಳ ಬಳಿ ಬೀದಿನಾಯಿಗಳ ಹಾವಳಿ ಹೆಚ್ಚಾಗಿದೆ. ನಗರದ ಪ್ರಮುಖ ಬಡಾವಣೆಗಳಲ್ಲಿ ನಾಯಿಗಳು ಗುಂಪು ಗುಂಪಾಗಿ ತಿರುಗಾಡುತ್ತಿವೆ. ಇವು ಕಸದ ರಾಶಿಗೆ ಮುಗಿ ಬೀಳುವ ಕಾರಣ ರಸ್ತೆಯಲ್ಲಿ ಸಂಚರಿಸುವ ಜನರಿಗೆ ಸಂಕಷ್ಟ ತಂದೊಡ್ಡಿದೆ. ಜನವಸತಿ ಬಡಾವಣೆಯಲ್ಲಿ ನಾಯಿಗಳು ಹಿಂಡು ಹಿಂಡಾಗಿ ತಿರುಗಾಡುತ್ತಿವೆ.‌ ಚಿಕ್ಕಮಕ್ಕಳು ರಸ್ತೆಗಿಳಿದರೆ ಅಪಾಯ ಕಟ್ಟಿಟ್ಟ ಬುತ್ತಿ. ಬೀದಿ ನಾಯಿಗಳಿಗೆ ಕಡಿವಾಣ ಹಾಕುವಲ್ಲಿ ನಗರಸಭೆ ಅಧಿಕಾರಿಗಳು ವಿಫಲರಾಗಿದ್ದಾರೆ ಎಂದು ನಾಗರಿಕರು ಆಕ್ರೋಶ ವ್ಯಕ್ತಪಡಿಸುತ್ತಾರೆ. ಇದರ ಜತೆಗೆ ನಗರದಲ್ಲಿ ಹಂದಿಗಳ ಹಾವಳಿ ವಿಪರೀತವಾಗಿದೆ. ಚರಂಡಿ ಮತ್ತು ಕಸದ ರಾಶಿಗೆ ಮುತ್ತಿಗೆ ಹಾಕುವ ಹಂದಿಗಳು ಚರಂಡಿ ಬಗೆದು ಮತ್ತಷ್ಟು ಗಬ್ಬೆಬ್ಬಿಸುತ್ತಿವೆ. ಇದರಿಂದಾಗಿ ಜನರು ರಸ್ತೆಯಲ್ಲಿ ತಿರುಗಾಡಲು ಅಸಹ್ಯ ಪಡುವ ಪರಿಸ್ಥಿತಿ ಇದೆ ಎಂದು ತಿಮ್ಮರಾಜು ಬೀರೇಶ್ ದೂರುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT