ಭಾನುವಾರ, 7 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮಾಗಡಿ: ಶಿಥಿಲ ಕೊಠಡಿಯಲ್ಲೇ ಮಕ್ಕಳಿಗೆ ಪಾಠ, ಅಡುಗೆ

ನನೆಗುದಿಗೆ ಬಿದ್ದ ಗುಡ್ಡಹಳ್ಳಿ ಗ್ರಾಮದ ಕಿರಿಯ ಪ್ರಾಥಮಿಕ ಶಾಲೆಯ ದುರಸ್ತಿ ಕಾರ್ಯ
ಸುಧೀಂದ್ರ.ಸಿ.ಕೆ.
Published 27 ಜೂನ್ 2024, 12:32 IST
Last Updated 27 ಜೂನ್ 2024, 12:32 IST
ಅಕ್ಷರ ಗಾತ್ರ

ಮಾಗಡಿ: ಈ ಶಾಲೆಯಲ್ಲಿರುವುದು ಒಂದೇ ಕೊಠಡಿ. ಶಿಥಿಲವಾಗಿರುವ ಈ ಕೊಠಡಿಯ ಒಂದರ್ಧ ಭಾಗದಲ್ಲಿ ವಿದ್ಯಾರ್ಥಿಗಳಿಗೆ ಪಾಠ–ಪ್ರವಚನ ನಡೆದರೆ, ಉಳಿದರ್ಧವು ಅಡುಗೆ ಮನೆಗೆ ಸೀಮಿತ.

ಮಳೆ ಬಂದಾಗ ಚಾವಣಿಯಿಂದ ನೀರು ಸೋರಿದರೆ, ಬಿಸಿಲಿನಲ್ಲಿ ಪೇಂಟ್ ಮತ್ತು ಸಿಮೆಂಟ್ ಕಾಂಕ್ರೀಟ್ ಚಕ್ಕೆಗಳು ಆಗಾಗ ಉದುರುತ್ತವೆ.

ತಾಲೂಕಿನ ಗುಡ್ಡಹಳ್ಳಿ ಗ್ರಾಮದ ಕಿರಿಯ ಪ್ರಾಥಮಿಕ ಶಾಲೆಯ ದುಃಸ್ಥಿತಿ ಇದು.

ಹಳೆಯದಾದ ಶಾಲಾ ಕಟ್ಟಡವನ್ನು ದುರಸ್ತಿ ಮಾಡಿ, ಇಲ್ಲದಿದ್ದರೆ ಹೊಸ ಕಟ್ಟಡ ನಿರ್ಮಿಸಿ ಕೊಡಿ ಎಂದು ಗ್ರಾಮಸ್ಥರು ಮತ್ತು ಶಾಲಾ ಶಿಕ್ಷಕರು ಒತ್ತಾಯಿಸುತ್ತಲೇ ಬಂದಿದ್ದಾರೆ. ಆದರೆ, ಕಟ್ಟಡಕ್ಕೆ ಮಾತ್ರ ದುರಸ್ತಿ ಅಥವಾ ಹೊಸ ಕಟ್ಟಡದ ಭಾಗ್ಯ ಇನ್ನೂ ಸಿಕ್ಕಿಲ್ಲ. ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಆತಂಕದಲ್ಲೇ ಕಟ್ಟಡದಲ್ಲಿ ಕಳೆಯಬೇಕಾಗಿದೆ.

ಹಳೆಯ ಕಟ್ಟಡ: ‘ಶಾಲಾ ಕಟ್ಟಡವು ದಶಕಗಳಿಗೂ ಹಳೆಯದಾಗಿದೆ. 1ನೇ ತರಗತಿಯಿಂದ 5ನೇ ತರಗತಿವರೆಗಿನ ಮಕ್ಕಳು ಓದುವ ಈ ಶಾಲಾ ಕಟ್ಟಡವು ಸುಸ್ಥಿತಿಯಲ್ಲಿದ್ದಾಗ ಮಕ್ಕಳ ಸಂಖ್ಯೆ ಹೆಚ್ಚಾಗಿತ್ತು. ಯಾವಾಗ ಕಟ್ಟಡ ಶಿಥಿಲವಾಗಿ, ಮಳೆ–ಗಾಳಿಗೆ ಹಾನಿಯಾಯಿತೊ ಅಂದಿನಿಂದ ಮಕ್ಕಳ ಸಂಖ್ಯೆಯೂ ಕಡಿಮೆಯಾಗುತ್ತಾ ಬಂದಿದೆ. ಸದ್ಯ ಕಟ್ಟಡದ ಗೋಡೆಗಳು ಕೆಲವೆಡೆ ಬಿರುಕು ಬಿಟ್ಟಿವೆ. ಮಕ್ಕಳು ಮತ್ತು ನಾವು ಆತಂಕದಿಂದಲೇ ಕೊಠಡಿಯಲ್ಲಿ ಕಾಲ ಕಳೆಯುತ್ತಿದ್ದೇವೆ’ ಎಂದು ಶಾಲೆಯ ಮುಖ್ಯ ಶಿಕ್ಷಕಿ ಸುಜಾತ ‘ಪ್ರಜಾವಾಣಿ’ಗೆ ತಿಳಿಸಿದರು.

‘ಸದ್ಯ ಶಾಲೆಯಲ್ಲಿ 19 ವಿದ್ಯಾರ್ಥಿ ಗಳಷ್ಟೇ ಓದುತ್ತಿದ್ದಾರೆ. ಕಟ್ಟಡವು ಶಿಥಿಲಾವಸ್ಥೆ ತಲುಪಿರುವುದರಿಂದ ಗ್ರಾಮದ ಕೆಲ ಪೋಷಕರು ತಮ್ಮ ಮಕ್ಕಳನ್ನು ಇಲ್ಲಿಂದ ಬಿಡಿಸಿ ಖಾಸಗಿ ಶಾಲೆಗೆ ಸೇರಿಸಿದ್ದಾರೆ. ಅಲ್ಲದೆ, ಹೊಸದಾಗ ಒಂದನೇ ತರಗತಿಗೆ ಇಲ್ಲಿಗೆ ಸೇರಿಸುವವರ ಸಂಖ್ಯೆಯೂ ವರ್ಷದಿಂದ ವರ್ಷಕ್ಕೆ ತಗ್ಗಿದೆ’ ಎಂದು ಬೇಸರ ವ್ಯಕ್ತ ಪಡಿಸಿದರು.

ಪಾಠಕ್ಕೆ ತೊಂದರೆ: ‘ಒಂದೇ ಕೊಠಡಿಯಲ್ಲಿ ಮಕ್ಕಳಿಗೆ ಪಾಠದ ಜೊತೆಗೆ ಮಧ್ಯಾಹ್ನದ ಬಿಸಿಯೂಟವನ್ನೂ ತಯಾರಿಸುವುದರಿಂದ ನಮಗೆ ಮತ್ತು ವಿದ್ಯಾರ್ಥಿಗಳಿಗೂ ಕಿರಿಕಿರಿಯಾಗು ತ್ತಿದೆ. ಅಡುಗೆ ಮಾಡುವ ಬರುವ ಶಬ್ದ, ವಾಸನೆ, ಹೊಗೆಯಿಂದಾಗಿ ಮಕ್ಕಳು ಏಕಾಗ್ರತೆಯಿಂದ ಪಾಠ ಕೇಳಲು ಸಾಧ್ಯವಾಗುವುದಿಲ್ಲ. ಇಲ್ಲಿನ ಸಮಸ್ಯೆಯನ್ನು ಶಿಕ್ಷಣ ಇಲಾಖೆ ಅಧಿಕಾರಿಗಳ ಗಮನಕ್ಕೂ ತರಲಾಗಿದೆ. ಸ್ಪಂದಿಸುವುದಾಗಿ ಭರವಸೆ ನೀಡಿದ್ದಾರೆ. ಪ್ರತ್ಯೇಕ ಅಡುಗೆ ಮನೆಯೊಂದಿಗೆ ಎರಡು ಕೊಠಡಿಗಳು ಇದ್ದರೆ ಮಕ್ಕಳಿಗೆ ಪಾಠ ಮಾಡಲು ಅನುಕೂಲವಾಗುತ್ತದೆ’ ಎಂದರು.

ಶಾಲೆಗೆ ಪ್ರತ್ಯೇಕವಾಗಿ ಅಡುಗೆ ಕೊಠಡಿಯೊಂದನ್ನು ನಿರ್ಮಿಸುವುದಕ್ಕೆ ಈಗಾಗಲೇ ಪ್ರಯತ್ನಗಳು ನಡೆದಿದ್ದವು. ಆದರೆ, ಕೊಠಡಿ ದಾನಕ್ಕೆ ಮುಂದೆ ಬಂದಿರುವವರು ಮತ್ತು ಗ್ರಾಮ ಪಂಚಾಯಿತಿ ಸದಸ್ಯರ ನಡುವಣ ಭಿನ್ನಾಭಿಪ್ರಾಯದಿಂದಾಗಿ ಅಡುಗೆ ಮನೆ ನಿರ್ಮಾಣ ಕಾರ್ಯ ಫಲಪ್ರದ ವಾಗಿಲ್ಲ. ದೊಡ್ಡವರ ಪ್ರತಿಷ್ಠೆಯಲ್ಲಿ ಮಕ್ಕಳು ಮತ್ತು ಶಿಕ್ಷಕರು ತೊಂದರೆ ಅನುಭವಿಸುತ್ತಿದ್ದಾರೆ ಎಂದು ಗ್ರಾಮಸ್ಥರೊಬ್ಬರು ಅಸಮಾಧಾನ ವ್ಯಕ್ತಪಡಿಸಿದರು.

ಗುಡ್ಡಹಳ್ಳಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಪ್ರತ್ಯೇಕ ಅಡುಗೆ ಮನೆ ಇಲ್ಲದಿರುವುದರಿಂದ, ತರಗತಿಕೊಠಡಿಯೇ ಅಡುಗೆ ಮನೆಯಾಗಿ ಮಾರ್ಪಟ್ಟಿದೆ

ಗುಡ್ಡಹಳ್ಳಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಪ್ರತ್ಯೇಕ ಅಡುಗೆ ಮನೆ ಇಲ್ಲದಿರುವುದರಿಂದ, ತರಗತಿಕೊಠಡಿಯೇ ಅಡುಗೆ ಮನೆಯಾಗಿ ಮಾರ್ಪಟ್ಟಿದೆ

ಸಾವನದುರ್ಗ ಅರಣ್ಯ ಪ್ರದೇಶಕ್ಕೆ ಹೊಂದಿಕೊಂಡಿರುವ ಗುಡ್ಡಹಳ್ಳಿ ಗ್ರಾಮದಲ್ಲಿ ಕಿರಿಯ ಪ್ರಾಥಮಿಕ ಶಾಲೆಯು ದಾನಿಯೊಬ್ಬರು ನೀಡಿದ ಜಾಗದಲ್ಲಿ ನಿರ್ಮಾಣವಾಗಿದೆ. 

ಶಾಲೆಗೆ ಪ್ರತ್ಯೇಕವಾಗಿ ಅಡುಗೆ ಕೊಠಡಿಯೊಂದನ್ನು ನಿರ್ಮಿಸುವುದಕ್ಕೆ ಈಗಾಗಲೇ ಪ್ರಯತ್ನಗಳು ನಡೆದಿದ್ದವು. ಆದರೆ, ದಾನಿ ಮತ್ತು ಗ್ರಾಮ ಪಂಚಾಯಿತಿ ಸದಸ್ಯರ ನಡುವಣ ಭಿನ್ನಾಭಿಪ್ರಾಯದಿಂದಾಗಿ, ಅನುದಾನ ಬಿಡುಗಡೆಯಾದರೂ ಅಡುಗೆ ಮನೆ ನಿರ್ಮಾಣ ಕಾರ್ಯ ಫಲಪ್ರದವಾ ಗಿಲ್ಲ. ದೊಡ್ಡವರ ಪ್ರತಿಷ್ಠೆಯಲ್ಲಿ ಮಕ್ಕಳು ಮತ್ತು ಶಿಕ್ಷಕರು ತೊಂದರೆ ಅನುಭವಿಸುತ್ತಿದ್ದಾರೆ ಎಂದು ಗ್ರಾಮಸ್ಥರೊಬ್ಬರು ಅಸಮಾಧಾನ ವ್ಯಕ್ತಪಡಿಸಿದರು.

ತೊಂದರೆ ಕೊಟ್ಟಿಲ್ಲ: ‘ಗ್ರಾಮ ಮತ್ತು ಶಾಲಾಭಿವೃದ್ಧಿ ವಿಷಯಕ್ಕೆ ಸದಾ ನನ್ನ ಬೆಂಬಲವಿದೆ. ಶಾಲೆಗೆ ಜಾಗ ಕೊಟ್ಟ ದಾನಿಗಳೇ ಅಡುಗೆ ಮನೆ ಕಟ್ಟಿಸುತ್ತೇವೆ ಎಂದು ಹೇಳಿರುವುದರಿಂದ, ಪಂಚಾಯಿತಿಯಿಂದ ಆ ಕುರಿತು ಯಾವುದೇ ನಿರ್ಧಾರ ಮಾಡಿಲ್ಲ. ಅಲ್ಲದೆ, ಯಾವುದೇ ರೀತಿಯಿಂದಲೂ ತೊಂದರೆ ಕೊಟ್ಟಿಲ್ಲ. ಈ ವಿಷಯದಲ್ಲಿ ನಮ್ಮ ವಿರುದ್ಧ ಸುಮ್ಮನೆ ಆರೋಪ ಮಾಡುವುದು ಸರಿಯಲ್ಲ’ ಎಂದು ಹಂಚಿಕುಪ್ಪೆ ಗ್ರಾಮ ಪಂಚಾಯಿತಿ ಸದಸ್ಯ ರಂಗನಾಥ್ ಹೇಳಿದರು.

‘ಜಾಗದ ದಾನಿಗಳು ಅಡುಗೆ ಮನೆ ನಿರ್ಮಿಸದಿದ್ದರೆ ಹೇಳಲಿ. ನಾವು ಪಂಚಾಯಿತಿ ಕಡೆಯಿಂದ ಅಡುಗೆ ಮನೆ ಜೊತೆಗೆ ಶಾಲಾ ಕಟ್ಟಡ ದುರಸ್ತಿಗೂ ಪಂಚಾಯಿತಿ ಅನುಮೋದನೆ ಪಡೆದು ಕ್ರಮ ಕೈಗೊಳ್ಳುತ್ತೇವೆ. ಒಟ್ಟಿನಲ್ಲಿ ನಮ್ಮೂರ ಮಕ್ಕಳು ಓದುವ ಶಾಲೆಗೆ ಅನುಕೂಲವಾಗಬೇಕು ಎಂಬುದಷ್ಟೇ ನಮ್ಮ ಇಚ್ಛೆ’ ಎಂದರು.

‘ಶಾಲಾ ಕಟ್ಟಡವು ಶಿಥಿಲಾವಸ್ಥೆಯಲ್ಲಿರುವುದು ಗಮನಕ್ಕೆ ಬಂದಿದೆ. ಕಟ್ಟಡವನ್ನು ₹4 ಲಕ್ಷ ವೆಚ್ಚದಲ್ಲಿ ದುರಸ್ತಿ ಕಾರ್ಯ ಮಾಡಲು ಇಲಾಖೆಗೆ ಪ್ರಸ್ತಾವ ಕಳಿಸಲಾಗಿದೆ. ಅನುದಾನ ಬಂದ ಬಳಿಕ ಕೆಲಸ ಶುರುವಾಗಲಿದೆ’ ಎಂದು ಶಿಕ್ಷಣ ಇಲಾಖೆಯ ಸಿಆರ್‌ಪಿ ಯೋಗಾನಂದ ಅವರು ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

‘ದುರಸ್ತಿಗೆ ಪ್ರಸ್ತಾವ ಸಲ್ಲಿಕೆ’

‘ಗುಡ್ಡಹಳ್ಳಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಅಡುಗೆ ಮನೆ ನಿರ್ಮಾಣ ವಿಳಂಬಕ್ಕೆ, ಶಾಲಾ ಜಾಗದ ದಾನಿಗಳು ಮತ್ತು ಗ್ರಾಮ ಪಂಚಾಯಿತಿ ಸದಸ್ಯರ ನಡುವಿನ ಗೊಂದಲ ಕಾರಣ. ಶಾಲಾ ಕಟ್ಟಡವು ಶಿಥಿಲಾವಸ್ಥೆಯಲ್ಲಿರುವುದು ಗಮನಕ್ಕೆ ಬಂದಿದೆ. ಈ ವರ್ಷದ ಕ್ರಿಯಾಯೋಜನೆಯಲ್ಲಿ ಕಟ್ಟಡದ ದುರಸ್ತಿ ವಿಷಯವನ್ನು ಸಹ ಸೇರಿಸಲಾಗಿದೆ. ಅನುದಾನ ಬಂದ ಸಿಕ್ಕ ತಕ್ಷಣ ಶಾಲಾ ಕಟ್ಟಡದ ದುರಸ್ತಿ ಕಾರ್ಯವನ್ನು ಕೈಗೆತ್ತಿಕೊಳ್ಳಲಾಗುವುದು. ಸೋಮವಾರ ಶಾಲೆಗೆ ಭೇಟಿ ನೀಡಿ ಕಟ್ಟಡವನ್ನು ಪರಿಶೀಲನೆ ನಡೆಸುವೆ’ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಚಂದ್ರಶೇಖರ್ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ಮಾಗಡಿ ತಾಲ್ಲೂಕಿನ ಗುಡ್ಡಹಳ್ಳಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲಾ ಕಟ್ಟಡದ ಚಾವಣಿ ಶಿಥಿಲಗೊಂಡು, ಅಲ್ಲಲ್ಲಿ ಉದುರಿರುವ ಕಾಂಕ್ರೀಟ್ (ಎಡಚಿತ್ರ), ಮಾಗಡಿ ಶಾಲಾ ಕಟ್ಟಡ ಶಿಥಿಲಗೊಂಡು ಗೋಡೆಗಳು ಬಿರುಕು ಬಿಟ್ಟಿರುವುದು

ಮಾಗಡಿ ತಾಲ್ಲೂಕಿನ ಗುಡ್ಡಹಳ್ಳಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲಾ ಕಟ್ಟಡದ ಚಾವಣಿ ಶಿಥಿಲಗೊಂಡು, ಅಲ್ಲಲ್ಲಿ ಉದುರಿರುವ ಕಾಂಕ್ರೀಟ್ (ಎಡಚಿತ್ರ), ಮಾಗಡಿ ಶಾಲಾ ಕಟ್ಟಡ ಶಿಥಿಲಗೊಂಡು ಗೋಡೆಗಳು ಬಿರುಕು ಬಿಟ್ಟಿರುವುದು

ಶಾಲಾ ಕಟ್ಟಡ ದುರಸ್ತಿಗೆ ಮುಖ್ಯ ಶಿಕ್ಷಕರು ಗ್ರಾಮ ಪಂಚಾಯಿತಿಗೆ ಮನವಿ ಕೊಟ್ಟರೆ, ಅಗತ್ಯ ಅನುದಾನ ಬಿಡುಗಡೆಗೆ ಪಂಚಾಯಿತಿ ಅಧ್ಯಕ್ಷರ ಜತೆ ಚರ್ಚಿಸಿ ಬಿಡುಗಡೆಗೆ ಕ್ರಮ ಕೈಗೊಳ್ಳಲಾಗುವುದು

-ರಂಗನಾಥ್, ಗ್ರಾ. ಪಂ. ಸದಸ್ಯ, ಗುಡ್ಡಹಳ್ಳಿ

ಸೋರುತ್ತಿರುವ ಶಾಲಾ ಕೊಠಡಿಯಲ್ಲೇ ಮಕ್ಕಳು ಪಾಠ ಕೇಳುವ ಸ್ಥಿತಿ ಬಂದಿರುವುದು ನಿಜಕ್ಕೂ ದುರಂತ. ಶಿಕ್ಷಣ ಇಲಾಖೆಯವರು ಸೋರುತ್ತಿರುವ ಕೊಠಡಿ ಕೆಡವಿ ಹೊಸ ಕಟ್ಟಡ ಮತ್ತು ಅಡುಗೆ ಮನೆ ನಿರ್ಮಿಸಬೇಕು

-ಪುರುಷೋತ್ತಮ್, ಗ್ರಾಮಸ್ಥ 

ಮಾಗಡಿ ತಾಲ್ಲೂಕಿನ ಗುಡ್ಡಹಳ್ಳಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲಾ ಕಟ್ಟಡ ಶಿಥಿಲಗೊಂಡು ಗೋಡೆಗಳು ಬಿರುಕು ಬಿಟ್ಟಿರುವುದು

ಮಾಗಡಿ ತಾಲ್ಲೂಕಿನ ಗುಡ್ಡಹಳ್ಳಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲಾ ಕಟ್ಟಡ ಶಿಥಿಲಗೊಂಡು ಗೋಡೆಗಳು ಬಿರುಕು ಬಿಟ್ಟಿರುವುದು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT