ಕಾಡಾನೆ ದಾಳಿಯಿಂದ ಸತತ ಬೆಳೆನಷ್ಟ ಅನುಭವಿಸಿ ಬೇಸತ್ತ ಕನಕಪುರ ತಾಲ್ಲೂಕಿನ ಕಾಡಂಚಿನ ರೈತರು ಭೂಮಿಯನ್ನು ಪಾಳು ಬಿಟ್ಟಿರುವುದು
ಚನ್ನಪಟ್ಟಣ ತಾಲ್ಲೂಕಿನ ಗಡಿಗ್ರಾಮ ಕಂಚನಹಳ್ಳಿ ಗ್ರಾಮದ ಕರೆಯೊಂದಲ್ಲಿ ನೀರಾಟದಲ್ಲಿ ತೊಡಗಿದ್ದ ಕಾಡಾನೆಗಳ ಹಿಂಡು
ಚನ್ನಪಟ್ಟಣ ತಾಲ್ಲೂಕಿನ ಅರಳಾಲುಸಂದ್ರ ಗ್ರಾಮದಲ್ಲಿ ಕಾಡಾನೆಗಳ ದಾಳಿಗೆ ಧ್ವಂಸವಾದ ಬಾಳೆತೋಟದಲ್ಲಿ ಮಹಿಳೆಯ ರೋದನ
ಚನ್ನಪಟ್ಟಣ ತಾಲ್ಲೂಕಿನ ತೆಂಗಿನಕಲ್ಲು ಅರಣ್ಯಪ್ರದೇಶದಲ್ಲಿ ಕಳೆದ ಜೂನ್ ತಿಂಗಳಿನಲ್ಲಿ ಅಭಿಮನ್ಯು ನೇತೃತ್ವದಲ್ಲಿ ಸೆರೆ ಹಿಡಿದಿದ್ದ ಪುಂಡಾನೆ
ಕನಕಪುರ ತಾಲ್ಲೂಕಿನ ಅಳ್ಳಿಕೆರೆದೊಡ್ಡಿಯಲ್ಲಿ ಕಾಡಾನೆ ದಾಳಿಯಿಂದ ಮೃತಪಟ್ಟ ತಿಮ್ಮಪ್ಪ ಅವರ ಕುಟುಂಬದವರ ರೋದನ
ಕಾಡಿನಲ್ಲಿ ಮೇವು ನೀರಿದ್ದರೂ ಕೆಲ ಆನೆಗಳು ಜಮೀನುಗಳಿಗೆ ಬರುತ್ತಿವೆ. ಕಾಡಾನೆ ದಾಳಿಯಿಂದಾಗುವ ಬೆಳೆನಷ್ಟದ ಪರಿಹಾರವನ್ನು ಹೊಸ ಮಾರ್ಗಸೂಚಿ ಪ್ರಕಾರ ಕೊಡುತ್ತಿದ್ದೇವೆ
– ಎ.ಎಲ್.ದಾಳೇಶ್ ಆರ್‌ಎಫ್‌ಒ ಪ್ರಾದೇಶಿಕ ವಲಯ ಅರಣ್ಯ ಕನಕಪುರಅರಣ್ಯ ಪ್ರದೇಶದಲ್ಲಿ ಕಾಡಾನೆಗಳಿಗೆ ಬೇಕಾಗುವಷ್ಟು ನೀರು ಮತ್ತು ಮೇವಿನ ವ್ಯವಸ್ಥೆ ಮಾಡಿದರೆ ಅವು ನಾಡಿಗೆ ಬರುವುದು ತಗ್ಗುತ್ತದೆ. ಇದರಲ್ಲಿ ಅರಣ್ಯ ಇಲಾಖೆಯ ವೈಫಲ್ಯವೂ ಇದೆ. ಬೆಳೆನಷ್ಟ ಪರಿಹಾರ ಸಹ ಸರಿಯಾಗಿ ಸಿಗುತ್ತಿಲ್ಲ
– ಎಚ್.ಕೆ.ರವಿ ಜಿಲ್ಲಾ ದಿಶಾ ಕಮಿಟಿ ಸದಸ್ಯ ಕನಕಪುರ‘ರೈಲ್ವೆ ಬ್ಯಾರಿಕೇಡ್ ಎಂಬ ಮುಗಿಯದ ಯೋಜನೆ’
ಕಾಡಾನೆಗಳು ಕಾಡು ಬಿಟ್ಟು ನಾಡು ಸೇರದಂತೆ ತಡೆಯಲು ರೂಪಿಸಿರುವ ಯೋಜನೆಗಳಲ್ಲಿ ರೈಲ್ವೆ ಬ್ಯಾರಿಕೇಡ್ ಪ್ರಮುಖವಾದುದು. ಆದರೆ ಈ ಯೋಜನೆಯೇ ಒಂದು ರೀತಿ ಬಿಳಿಯಾನೆ ಇದ್ದಂತೆ. ಒಂದು ಕಿ.ಮೀ. ಬ್ಯಾರಿಕೇಡ್ ನಿರ್ಮಾಣಕ್ಕೆ ಬರೋಬ್ಬರಿ ₹1.50 ಕೋಟಿ ವೆಚ್ಚವಾಗುತ್ತದೆ. ಆದರೂ ಇದನ್ನು ಸಮರೋಪಾದಿಯಲ್ಲಿ ಪೂರ್ಣಗೊಳಿಸಿ ಜೀವಹಾನಿ ಮತ್ತು ಬೆಳೆಹಾನಿ ತಡೆಯುವ ಬದ್ಧತೆ ಸರ್ಕಾರಕ್ಕಿಲ್ಲ. ಕನಕಪುರ ತಾಲ್ಲೂಕಿನಲ್ಲಿ ಬನ್ನೇರುಘಟ್ಟ ವನ್ಯಜೀವಿ ಧಾಮ(ಕೋಡಿಹಳ್ಳಿ ಹಾರೋಹಳ್ಳಿ ಆನೇಕಲ್) ಕಾವೇರಿ ವನ್ಯಜೀವಿ ಧಾಮ (ಮುಗ್ಗೂರು ಸಂಗಮ ಹಲಗೂರು) ಸಾಮಾಜಿಕ ಅರಣ್ಯ ಮತ್ತು ಪ್ರಾದೇಶಿಕ ಅರಣ್ಯ ಬೆಸೆದುಕೊಂಡಿದೆ. ಸುಮಾರು 200ಕ್ಕೂ ಹೆಚ್ಚು ಕಿ.ಮೀ. ಅರಣ್ಯ ಪ್ರದೇಶದ ಗಡಿ ಇದೆ. ಈ ಪೈಕಿ 50 ಕಿ.ಮೀ. ಮಾತ್ರ ರೈಲ್ವೆ ಬ್ಯಾರಿಕೇಡ್ ನಿರ್ಮಿಸಲಾಗಿದೆ. ಉಳಿದೆಡೆ ನಿರ್ಮಾಣಕ್ಕೆ ಗ್ರಹಣ ಹಿಡಿದಿದೆ. ರೈತರ ಬೇಡಿಕೆಗಳೇನು? – ಕಾಡಾನೆಗಳು ನಾಡಿಗೆ ಬರುತ್ತಿರುವ ಅರಣ್ಯ ಪ್ರದೇಶದಲ್ಲಿ ರೈಲ್ವೆ ಬ್ಯಾರಿಕೇಡ್ ಅಳವಡಿಸುವ ಕೆಲಸವನ್ನು ಶೀಘ್ರ ಪೂರ್ಣಗೊಳಿಸಬೇಕು.– ಸೌರವಿದ್ಯುತ್ ಬೇಲಿ ಅಳವಡಿಕೆಯನ್ನು ಹೆಚ್ಚಿಸಬೇಕು.– ಕಾಡಾನೆಗಳ ಚಲನವಲನದ ಮೇಲೆ ಕಣ್ಣಿಡಬೇಕು. ಜೀವಹಾನಿ ಮತ್ತು ಬೆಳೆಹಾನಿಗೂ ಮುಂಚೆಯೇ ಅರಣ್ಯ ಇಲಾಖೆ ಕಾಡಾನೆಗಳನ್ನು ತಡೆಯೇಬೇಕು.– ಬೆಳೆಹಾನಿಗೆ ಮಾರುಕಟ್ಟೆ ದರ ಆಧರಿಸಿ ಪರಿಹಾರ ನೀಡಬೇಕು.– ಜೀವಹಾನಿಯಾದಾಗ ಕುಟುಂಬದ ಒಬ್ಬರಿಗೆ ಸರ್ಕಾರಿ ಉದ್ಯೋಗ ನೀಡಬೇಕು. ಪರಿಹಾರ ಮೊತ್ತ ದುಪ್ಪಟ್ಟುಗೊಳಿಸಬೇಕು.
‘ಶೇ 25ರಷ್ಟು ಬ್ಯಾರಿಕೇಡ್ ನಿರ್ಮಾಣ’
‘ಕಾಡಿನಲ್ಲಿ ಆನೆಗಳ ಸಂತತಿಯು ಹೆಚ್ಚುತ್ತಿದ್ದು ಸದ್ಯ 250 ಆನೆಗಳಿವೆ. ಈ ಪೈಕಿ ಶೇ 10ರಷ್ಟು ಮಾತ್ರ ಹೊರಗಡೆ ಬಂದು ಉಪಟಳ ನೀಡುತ್ತಿವೆ. ಇವುಗಳನ್ನು ಮತ್ತೆ ಕಾಡಿಗಟ್ಟಿದರೂ ವಾಪಸ್ ಬಂದು ಜಮೀನಿಗೆ ದಾಳಿ ಮಾಡುತ್ತವೆ. ಸಿಕ್ಕಿದ್ದನ್ನು ತಿಂದು ಬೆಳೆ ಹಾನಿಗೊಳಿಸುತ್ತವೆ. ಅರಣ್ಯದುದ್ದಕ್ಕೂ ರೈಲ್ವೆ ಬ್ಯಾರಿಕೇಡ್ ಅಳವಡಿಸಿದರೆ ಮಾತ್ರ ಅವು ನಾಡಿಗೆ ಬಾರದಂತೆ ತಡೆಯಲು ಸಾಧ್ಯ. ತಾಲ್ಲೂಕಿನಲ್ಲಿ ಶೇ 25ರಷ್ಟು ಮಾತ್ರ ಬ್ಯಾರಿಕೇಡ್ ನಿರ್ಮಾಣವಾಗಿದ್ದು ಉಳಿದಿದ್ದು ಪೂರ್ಣಗೊಳ್ಳಬೇಕಿದೆ’. – ಡಿ. ದೇವರಾಜು ಆರ್‌ಎಫ್‌ಒ ಸಂಗಮ ವನ್ಯಜೀವಿ ವಲಯ ಅರಣ್ಯ ಕನಕಪುರ ‘ಗುಳೆ ಹೋಗುವ ಸ್ಥಿತಿ ನಿರ್ಮಾಣ’ ‘ಕಾಡಾನೆ ಹಂದಿ ಹಾಗೂ ಕಾಡೆಮ್ಮೆಗಳ ಹಾವಳಿಯಿಂದ ರೈತರು ಕೃಷಿ ಮಾಡುವುದೇ ಕಷ್ಟವಾಗಿದೆ. ಆನೆಗಳು ರೇಷ್ಮೆಸೊಪ್ಪು ಬಿಟ್ಟು ಬೇರೆಲ್ಲಾ ಬೆಳೆ ತಿನ್ನುತ್ತವೆ. ಜಿಂಕೆ ಮತ್ತು ಕಾಡೆಮ್ಮೆಗಳು ರೇಷ್ಮೆ ಸೊಪ್ಪು ಮತ್ತು ಸೀಮೆ ಹುಲ್ಲನ್ನು ತಿನ್ನುತ್ತವೆ. ಇದರಿಂದ ರೇಷ್ಮೆ ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಬೆಳೆನಷ್ಟಕ್ಕೆ ಪರಿಹಾರ ಕೊಡುತ್ತೇವೆ ಎನ್ನುವುದೇ ಪರಿಹಾರವಲ್ಲ. ಅದರ ಬದಲು ಶಾಶ್ವತವಾಗಿ ಕಾಡಾನೆ ಸೇರಿದಂತೆ ವನ್ಯಜೀವಿಗಳು ಊರಿನತ್ತ ಬಾರದಂತೆ ತಡೆಯಬೇಕಿದೆ. ವನ್ಯಜೀವಿಗಳ ಹಾವಳಿಯಿಂದ ಜನ ತಮ್ಮ ಜಮೀನು ಮತ್ತು ಮನೆ ಬಿಟ್ಟು ಗುಳೆ ಹೋಗಬೇಕಾದ ಸ್ಥಿತಿ ನಿರ್ಮಾಣವಾಗಿದೆ’. – ತಿಮ್ಮೇಗೌಡ ರೈತ ಜವನಮ್ಮನದೊಡ್ಡಿ ಕನಕಪುರ ತಾಲ್ಲೂಕು ‘ಮೂಲಜಾಗದಲ್ಲೇ ತಡೆಯಬೇಕು’ ‘ನಾಡಿಗೆ ಬರುವ ಕಾಡಾನೆಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದೆ. ಪ್ರತಿ ವರ್ಷ ಕನಿಷ್ಠ 50 ಆನೆಗಳನ್ನು ಕಾವೇರಿ ಅರಣ್ಯ ಪ್ರದೇಶ ಹಾಗೂ ಬನ್ನೇರಘಟ್ಟ ಅರಣ್ಯ ಪ್ರದೇಶಕ್ಕೆ ವಾಪಸ್ ಓಡಿಸಲಾಗುತ್ತಿದೆ. ಆ ಪೈಕಿ ಕೆಲವು ವಾಪಸ್ ಬರುತ್ತಲೇ ಇವೆ. ರೈಲ್ವೆ ಬ್ಯಾರಿಕೇಡ್ ಹಾಗೂ ಸೌರವಿದ್ಯುತ್ ಬೆಳಿ ಬೇಲಿ ಹಾಕಿದ್ದರೂ ಅವುಗಳನ್ನು ದಾಟಿಕೊಂಡು ಊರಿನತ್ತ ಮುಖ ಮಾಡುತ್ತಿವೆ. ಹಾಗಾಗಿ ಕಾಡಾನೆಗಳು ನಾಡಿಗೆ ಹೋಗದಂತೆ ಮೂಲ ಜಾಗದಲ್ಲಿಯೇ ತಡೆಯಬೇಕಿದೆ. ಅದುವೇ ಈ ಸಮಸ್ಯೆಗೆ ಶಾಶ್ವತ ಪರಿಹಾರ’ ಎನ್ನುತ್ತಾರೆ ಸಾತನೂರು ಅರಣ್ಯ ವಲಯದ ಆರ್‌ಎಫ್‌ಒ ಆಶಾ ರೆಡ್ಡಿ ಮತ್ತು ಡಿಆರ್‌ಎಫ್‌ಒ ಮುತ್ತು ನಾಯಕ್. ‘ಶಾಶ್ವತವಾಗಿ ಕಾಡಿಗಟ್ಟಬೇಕು’ ‘ತಾಲ್ಲೂಕಿನ ಅರಣ್ಯ ಪ್ರದೇಶದಲ್ಲಿ 55ಕ್ಕೂ ಹೆಚ್ಚು ಕಾಡಾನೆಗಳು ಬೀಡು ಬಿಟ್ಟಿವೆ. ಅರಣ್ಯ ಇಲಾಖೆಯು ನಾಲ್ಕೈದು ಆನೆಗಳನ್ನು ಮಾತ್ರ ಇತ್ತೀಚೆಗೆ ಸೆರೆ ಹಿಡಿದು ಕಾಡಿಗೆ ಬಿಟ್ಟಿದ್ದಾರೆ. ಆದರೆ ಉಳಿದವುಗಳಿಂದ ಪ್ರಾಣಹಾನಿಯ ಆತಂಕ ಇದ್ದೇ ಇದೆ. ಇನ್ನು ಬೆಳೆಹಾನಿಗೆ ಲೆಕ್ಕವೇ ಇಲ್ಲ. ತಾಲ್ಲೂಕಿನಲ್ಲಿ ಬೀಡು ಬಿಟ್ಟಿರುವ ಎಲ್ಲಾ ಆನೆಗಳನ್ನು ಶಾಶ್ವತವಾಗಿ ಕಾಡಿಗಟ್ಟುವ ಕೆಲಸವಾಗಬೇಕು. ಆಗ ಮಾತ್ರ ರೈತರ ಬೆಳೆ ಹಾಗೂ ಪ್ರಾಣವನ್ನು ರಕ್ಷಿಸಲು ಸಾಧ್ಯ’. – ಸಿ. ಪುಟ್ಟಸ್ವಾಮಿ ಹಿರಿಯ ರೈತ ಮುಖಂಡ ಅರಳಾಳುಸಂದ್ರ
ಆನೆ ದಾಳಿ ಪ್ರಕರಣಗಳು
ಚನ್ನಪಟ್ಟಣ – 2021 ಜುಲೈ 27: ದೊಡ್ಡನಹಳ್ಳಿ ಗ್ರಾಮದಲ್ಲಿ ತೋಟದಲ್ಲಿ ಕೆಲಸ ಮಾಡುತ್ತಿದ್ದ ರೈತ ಸತೀಶ (27) ಅವರ ಮೇಲೆ ಹಿಂದಿನಿಂದ ದಾಳಿ ನಡೆಸಿದ್ದ ಕಾಡಾನೆ ಅವರನ್ನು ತುಳಿದು ಕೊಂದು ಹಾಕಿತ್ತು. – 2022 ಆ. 8: ಚನ್ನಿಗನ ಹೊಸಹಳ್ಳಿ ಗ್ರಾಮದಲ್ಲಿ ರೈತ ಮಹಿಳೆ ಚನ್ನಮ್ಮ (55) ಅವರನ್ನು ಕಾಡಾನೆ ತುಳಿದು ಸಾಯಿಸಿತ್ತು. – 2023 ಜೂನ್ 3: ಕಾಡಾನೆ ದಾಳಿಗೆ ವಿರುಪಸಂದ್ರ ಗ್ರಾಮದಲ್ಲಿ ಮಾವಿನತೋಟದ ಕಾವಲುಗಾರ ವೀರಭದ್ರಯ್ಯ (52) ಬಲಿ ಕನಕಪುರ 2022 ನ. 7: ಸುಂಡಘಟ್ಟ ಅರಣ್ಯದಲ್ಲಿ ಗಸ್ತು ತಿರುಗುತ್ತಿದ್ದಾಗ ಕಾಡಾನೆ ದಾಳಿಯಿಂದ ಅರಣ್ಯ ರಕ್ಷಕ ಸುಂಡುಗಟ್ಟ ಗ್ರಾಮದ ಹೊಳಸಾಲಯ್ಯ ಸಾವು. 2023 ಮೇ 30: ಹೊಸಕಬ್ಬಾಳು ಗ್ರಾಮದಲ್ಲಿ ರಾತ್ರಿ ಮಾವಿನ ತೋಟದ ಕಾವಲು ಕಾಯುತ್ತಿದ್ದ ಅದೇ ಗ್ರಾಮದ ರೈತ ಕಾಳಯ್ಯ ಅವರನ್ನು ತುಳಿದು ಸಾಯಿಸಿದ್ದ ಕಾಡಾನೆ. 2023 ಜೂನ್ 19: ಅಚ್ಚಲು ಗ್ರಾಮದಲ್ಲಿ ಬೆಳಗ್ಗೆ ಜಮೀನಿಗೆ ಹೊರಟಿದ್ದ ಅಕ್ಕ-ತಂಗಿಯ ಮೇಲೆ ಒಂಟಿ ಸಲಗ ದಾಳಿ ನಡೆಸಿದ್ದು ಅಕ್ಕ ಜಯಮ್ಮ(50) ಮೃತಪಟ್ಟಿದ್ದಾರೆ. ತಂಗಿ ವೆಂಕಟ ಲಕ್ಷ್ಮಮ್ಮ ಗಂಭೀರವಾಗಿ ಗಾಯಗೊಂಡಿದ್ದರು. 2023 ಸೆ. 6: ಕೊಳಗೊಂಡನಹಳ್ಳಿ ಸಮೀಪದ ಕಾಡಿನಲ್ಲಿ ನಡೆದುಕೊಂಡು ಬರುತ್ತಿದ್ದ ಗಟ್ಟಿಗುಂದ ಗ್ರಾಮದ ಕೂಲಿ ಕಾರ್ಮಿಕ ಚಿಕ್ಕರಾಮಯ್ಯ (60) ಆನೆ ದಾಳಿಯಿಂದ ಮೃತಪಟ್ಟಿದ್ದರು. 2023 ನ. 4: ಹೊನಗಳ್ಳಿ ಅರಣ್ಯ ಪ್ರದೇಶದ ಬಳಿ ಕುರಿ ಮೇಯಿಸುತ್ತಿದ್ದ ಹೊನಗಳ್ಳಿ ಗ್ರಾಮದ ಮರಿಗೌಡ (79) ರೈತ ಕಾಡಾನೆ ದಾಳಿಗೆ ಸಾವು. 2023 ಡಿ. 17: ಅಳ್ಳಿಕೆರೆದೊಡ್ಡಿಯಲ್ಲಿ ನಸುಕಿನಲ್ಲಿ ತಮ್ಮ ಮನೆಯಿಂದ ಅನತಿ ದೂರದಲ್ಲಿರುವ ರೇಷ್ಮೆ ಮನೆಗೆ ಹೋಗಿದ್ದ ರೈತ ತಿಮ್ಮಪ್ಪ(60) ಕಾಡಾನೆಗೆ ಬಲಿಯಾಗಿದ್ದರು. 2023 ಡಿ. 27: ಬನ್ನಿಮುಕ್ಕೊಡ್ಲು ಗ್ರಾಮದಲ್ಲಿ ಕಾಡಿಗೆ ಕಟ್ಟಿಗೆ ತರಲು ಹೋಗಿದ್ದ ರಾಮಕೃಷ್ಣ (52) ಎಂಬುವರ ಮೇಲೆ ದಾಳಿ ನಡೆಸಿ ಕೊಂದ ಕಾಡಾನೆ.