ಶನಿವಾರ, 5 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಜನಸ್ಪಂದನ ಕಾರ್ಯಕ್ರಮ | ಜನರ ಸಮಸ್ಯೆ ಶೀಘ್ರ ಪರಿಹರಿಸಿ: ಜಿಲ್ಲಾಧಿಕಾರಿ

Published : 6 ಜುಲೈ 2024, 6:22 IST
Last Updated : 6 ಜುಲೈ 2024, 6:22 IST
ಫಾಲೋ ಮಾಡಿ
Comments

ಬ್ರಹ್ಮಾವರ: ‘ಜನಸಾಮಾನ್ಯರು ತಮ್ಮ ಸಮಸ್ಯೆಗಳನ್ನು ಅಹವಾಲು ಮೂಲಕ ನೀಡಿದ ಅರ್ಜಿಗಳನ್ನು ಅಧಿಕಾರಿಗಳು ನಿರ್ಲಕ್ಷ್ಯ ವಹಿಸದೆ ಶೀಘ್ರ ಸ್ಪಂದಿಸಬೇಕು ಎಂದು ಜಿಲ್ಲಾಧಿಕಾರಿ ಕೆ.ವಿದ್ಯಾಕುಮಾರಿ ಹೇಳಿದರು.

ಬ್ರಹ್ಮಾವರದ ನಾರಾಯಣಗುರು ಸಭಾಭವನದಲ್ಲಿ ಶುಕ್ರವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಬ್ರಹ್ಮಾವರ ತಾಲ್ಲೂಕು ಆಡಳಿತ ಹಾಗೂ ತಾಲ್ಲೂಕು ಪಂಚಾಯಿತಿ ಸಹಯೋಗದಲ್ಲಿ ನಡೆದ ಜನಸ್ಪಂದನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ಜನಸ್ಪಂದನ ಸಭೆಗಳು ಜನರಿಗೆ ಸಹಕಾರಿಯಾಗಬೇಕು. ಅಧಿಕಾರಿಗಳು ಸಮಸ್ಯೆ ಇತ್ಯರ್ಥಪಡಿಸಲು ಸೂಕ್ಷ್ಮ ರೀತಿಯಲ್ಲಿ ಸ್ಪಂದಿಸಬೇಕು. ರಸ್ತೆ ಸಮಸ್ಯೆ, ಸೇತುವೆ ನಿರ್ಮಾಣ ಸೇರಿದಂತೆ ಮತ್ತಿತರ ಹಣಕಾಸಿನ ಅವಶ್ಯವಿರುವ ಸಮಸ್ಯೆಗಳನ್ನು ಸಂಬಂಧಪಟ್ಟ ಇಲಾಖೆಯ ಗಮನಕ್ಕೆ ತಂದು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದಾಗ ಸರ್ಕಾರದ ಮಟ್ಟದಲ್ಲಿ ಅವುಗಳನ್ನು ಇತ್ಯರ್ಥಪಡಿಸಲಾಗುವುದು. ಜನರ ದೈನಂದಿನ ಸಮಸ್ಯೆಗಳ ಅರ್ಜಿಗಳನ್ನು ಸ್ಥಳೀಯ ಹಂತದಲ್ಲಿ ಪರಿಹರಿಸಲಾಗುವುದು’ ಎಂದರು.

ಸಾರ್ವಜನಿಕರ ಕೆಲವು ಸಣ್ಣ-ಪುಟ್ಟ ಸಮಸ್ಯೆಗಳಾದ ಖಾತೆ ಬದಲಾವಣೆ, ಹಕ್ಕುಪತ್ರ ವಿತರಣೆ, ಪ್ರಮಾಣ ಪತ್ರ ಸೇರಿದಂತೆ ಮತ್ತಿತರ ಸಮಸ್ಯೆಗಳಿಗೆ ಅಧಿಕಾರಿಗಳ ನೇತೃತ್ವದಲ್ಲಿ ತಕ್ಷಣವೇ ಸ್ಪಂದಿಸಬೇಕು ಎಂದರು.

ಕುಂದಾಪುರ ಶಾಸಕ ಕಿರಣ್ ಕುಮಾರ್ ಕೊಡ್ಗಿ ಮಾತನಾಡಿ, ‘ಕಳೆದ ಸಾಲಿನಲ್ಲಿ ಸ್ವೀಕೃತವಾದ ಅರ್ಜಿಗಳಿಗೆ ಪರಿಹಾರ ಸಿಕ್ಕಾಗ ಮಾತ್ರ ಈ ಯೋಜನೆ ಅರ್ಥಪೂರ್ಣವಾಗಿರುತ್ತದೆ. ಜನರು ತಮ್ಮ ಅರ್ಜಿಗಳನ್ನು ಹಿಡಿದುಕೊಂಡು ಕಚೇರಿಗಳಿಗೆ ಅಲೆಯುವಂತಾಗಬಾರದು. ಕಾನೂನಿನ ಚೌಕಟ್ಟಿನೊಳಗೆ ಅಧಿಕಾರಿಗಳು ಜನರ ಸಮಸ್ಯೆಗೆ ಪರಿಹಾರ ಒದಗಿಸಬೇಕು’ ಎಂದರು.

ಕಾರ್ಯಕ್ರಮದಲ್ಲಿ ಬಸ್ ಸೌಲಭ್ಯ, ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಶುಶ್ರೂಷಕಿ ನೇಮಿಸುವುದು, ವಿದ್ಯುತ್ ಸಂಪರ್ಕ ಕಲ್ಪಿಸುವುದು, ಅಪಾಯಕಾರಿ ಮರಗಳನ್ನು ತೆರವಿಗೆ, ರಸ್ತೆ ದುರಸ್ತಿ, ಸರ್ಕಾರಿ ಸ್ಥಳ ಅತಿಕ್ರಮಣ, ಕಟ್ಟಡಗಳ ಸಕ್ರಮ, ಪ್ಲಾಟಿಂಗ್ ಕಾರ್ಯ ಪೂರ್ಣಗೊಳಿಸುವ ಬಗ್ಗೆ, ಖಾತೆ ಬದಲಾವಣೆ, 94 ಸಿಯಲ್ಲಿ ಹಕ್ಕುಪತ್ರ ನೀಡುವುದು, ಪಹಣಿ ತಿದ್ದುಪಡಿ, ನೀರಿನ ಸೌಲಭ್ಯ ಸೇರಿದಂತೆ ಸುಮಾರು 91 ಅಹವಾಲುಗಳು ಸಲ್ಲಿಕೆಯಾಗಿದ್ದವು.

ಕಳೆದ ಸಾಲಿನಲ್ಲಿ ಬ್ರಹ್ಮಾವರ ವಲಯದ ಸರ್ಕಾರಿ ಶಾಲೆಗಳಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಸಾಧನೆಗೈದ ವಿದ್ಯಾರ್ಥಿಗಳಾದ ಸಹನಾ, ಸನಿತಾ, ಅಮೃತ ಅಡಿಗ ಹಾಗೂ ಧರಿತ್ರಿ ಕಾಮತ್ ಅವರಿಗೆ ಲ್ಯಾಪ್‌ಟಾಪ್‌ ವಿತರಿಸಲಾಯಿತು.

ಎಎಸ್‌ಪಿ ಪರಮೇಶ್ವರ್ ಹೆಗಡೆ, ಕುಂದಾಪುರ ಸಹಾಯಕ ಕಮೀಷನರ್ ರಶ್ಮಿ ಎಸ್.ಆರ್, ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ರಾಧಾಕೃಷ್ಣ ಅಡಿಗ, ಬ್ರಹ್ಮಾವರ ತಹಶೀಲ್ದಾರ್ ಶ್ರೀಕಾಂತ ಎಸ್ ಹೆಗ್ಡೆ, ಬ್ರಹ್ಮಾವರ ತಾಲ್ಲೂಕು ಪಂಚಾಯಿತಿ ಇಒ ಇಬ್ರಾಹಿಂಪುರ, ವಾರಂಬಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ನಿತ್ಯಾನಂದ ಬಿ.ಆರ್ ಇದ್ದರು.

‘ಬಸ್‌ಗಳ ಸಂಚಾರಕ್ಕೆ ಸೂಕ್ತ ವ್ಯವಸ್ಥೆ ಕಲ್ಪಿಸಿ’
ತಾಲ್ಲೂಕು ಮಟ್ಟದಲ್ಲಿ ಜನರ ಸಮಸ್ಯೆ ಆಲಿಸಿ ಖುದ್ದಾಗಿ ಪರಿಹಾರ ನೀಡುವ ಕಾರ್ಯಕ್ರಮ ಜನಸ್ಪಂದನ. ಸರ್ಕಾರದ ಯೋಜನೆಗಳು ಸೌಲಭ್ಯಗಳು ಜನರ ಮನೆ ಬಾಗಿಲಿಗೆ ತಲುಪುವಂತಾಗಬೇಕು. ಅವುಗಳನ್ನು ಸಮರ್ಪಕವಾಗಿ ಜನರಿಗೆ ತಲುಪಿಸುವುದು ಅಧಿಕಾರಿಗಳ ಕರ್ತವ್ಯ ಎಂದು ಶಾಸಕ ಯಶ್‌ಪಾಲ್ ಸುವರ್ಣ ಹೇಳಿದರು.  ಜಿಲ್ಲೆಯಲ್ಲಿ ಕಳೆದ ಒಂದು ವಾರದ ಅವಧಿಯಲ್ಲಿ ಗಾಳಿ-ಮಳೆಯಿಂದ ಬಹಳಷ್ಟು ನಷ್ಟ ಉಂಟಾಗಿದ್ದು ಶೀಘ್ರ ಸರ್ಕಾರ ಪರಿಹಾರ ನೀಡಬೇಕು ಎಂದ ಅವರು ಬಸ್‌ಗಳ ಸಮಸ್ಯೆಯಿಂದಾಗಿ ಸಾರ್ವಜನಿಕರು ಪ್ರತಿನಿತ್ಯ ಪರದಾಡುವಂತಾಗಿದ್ದು ಬಸ್‌ಗಳ ಸಂಚಾರಕ್ಕೆ ಸೂಕ್ತ ವ್ಯವಸ್ಥೆ ಕಲ್ಪಿಸಬೇಕು ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT