ಸೋಮವಾರ, 23 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಇಲ್ಲದ ರಸ್ತೆ: ಕೋಲಿಗೆ ಶವ ಕಟ್ಟಿ ಸಾಗಿಸಿದರು!

ನಗರಸಭೆ ವ್ಯಾಪ್ತಿಯಲ್ಲಿದ್ದರೂ ರಸ್ತೆ ವ್ಯವಸ್ಥೆ ಇಲ್ಲದ ಗುಡ್ಡೆಹಳ್ಳಿ ಗ್ರಾಮ
Published : 22 ಸೆಪ್ಟೆಂಬರ್ 2024, 23:15 IST
Last Updated : 22 ಸೆಪ್ಟೆಂಬರ್ 2024, 23:15 IST
ಫಾಲೋ ಮಾಡಿ
Comments

ಕಾರವಾರ: ನಗರಸಭೆ ವ್ಯಾಪ್ತಿಯಲ್ಲೇ ಇದ್ದರೂ ರಸ್ತೆ ವ್ಯವಸ್ಥೆ ಹೊಂದಿಲ್ಲದ ಗುಡ್ಡೆಹಳ್ಳಿ ಗ್ರಾಮದ ವ್ಯಕ್ತಿಯೊಬ್ಬರು ಮೃತಪಟ್ಟಿದ್ದರಿಂದ ಅವರ ಶವವನ್ನು ಭಾನುವಾರ ಗ್ರಾಮಸ್ಥರು ಮರದ ಕೋಲಿಗೆ ಕಟ್ಟಿ ಐದು ಕಿ.ಮೀ ದೂರದವರೆಗೆ ಹೊತ್ತು ಸಾಗಿಸಿದರು.

ಗ್ರಾಮದ ರಾಮಾ ಮನ್ನಾ ಗೌಡ (60) ಶನಿವಾರ ತಡರಾತ್ರಿ ಹೃದಯಾಘಾತಕ್ಕೆ ಒಳಗಾಗಿದ್ದರು. ಅವರನ್ನು ಜಿಲ್ಲಾಸ್ಪತ್ರೆಗೆ ಹೊತ್ತುಕೊಂಡು ಕರೆತರಲಾಗಿತ್ತು. ಆಸ್ಪತ್ರೆಗೆ ತರುವಷ್ಟರಲ್ಲೇ ಅವರು ಮೃತಪಟ್ಟಿದ್ದರಿಂದ ಆಂಬುಲೆನ್ಸ್ ಮೂಲಕ ಮೃತದೇಹವನ್ನು ನಗರದ ಹೈಚರ್ಚ್ ರಸ್ತೆ ಕೊನೆಗೊಳ್ಳುವವರೆಗೆ ತರಲಾಯಿತು. ಅಲ್ಲಿಂದ ಗುಡ್ಡ ಏರಲು ವ್ಯವಸ್ಥಿತ ರಸ್ತೆ ಇಲ್ಲದ್ದರಿಂದ ಶವವನ್ನು ಅಲ್ಲಿಯೇ ಇಳಿಸಿ ವಾಹನ ಮರಳಿತ್ತು.

ಗ್ರಾಮದ ಐದಾರು ಮಂದಿ ಸೇರಿ ಶವಕ್ಕೆ ಕಂಬಳಿ ಸುತ್ತಿ, ಅದನ್ನು ಉದ್ದನೆಯ ದಪ್ಪ ಕೋಲಿಗೆ ಹಗ್ಗದ ಮೂಲಕ ಕಟ್ಟಿಕೊಂಡು ಸಾಗಿಸಿದರು. ಈ ವೇಳೆ ವಿಧಾನ ಪರಿಷತ್ ಸದಸ್ಯ ಗಣಪತಿ ಉಳ್ವೇಕರ್, ಮಾಜಿ ಸಚಿವ ಆನಂದ್ ಅಸ್ನೋಟಿಕರ್ ಕೂಡ ಸ್ಥಳದಲ್ಲಿದ್ದರು.

ನಗರದ ವಾರ್ಡ್ ನಂ.31ರ ವ್ಯಾಪ್ತಿಯಲ್ಲಿರುವ ಗುಡ್ಡೆಹಳ್ಳಿ ಗ್ರಾಮವು ಎತ್ತರದ ಗುಡ್ಡದ ಮೇಲಿದೆ. ಹಿಂದುಳಿದ ಹಾಲಕ್ಕಿ ಸಮುದಾಯಕ್ಕೆ ಸೇರಿ ಜನರ 12ಕ್ಕೂ ಹೆಚ್ಚು ಮನೆಗಳಿವೆ. ಗ್ರಾಮಕ್ಕೆ ಕಚ್ಚಾ ರಸ್ತೆ ಮಾತ್ರ ಸಂಚಾರಕ್ಕೆ ಆಧಾರವಾಗಿದ್ದು, ದ್ವಿಚಕ್ರ ವಾಹನ ಮಾತ್ರ ಸಾಗಲು ಅವಕಾಶವಿದೆ. ಮಳೆಗಾಲದಲ್ಲಿ ಕಾಲ್ನಡಿಗೆ ಹೊರತಾಗಿ ಜನರು ಸಂಚರಿಸಲು ಆಗುತ್ತಿಲ್ಲ.

‘ಗುಡ್ಡೆಹಳ್ಳಿಗೆ ರಸ್ತೆ ನಿರ್ಮಿಸಲು ಹಲವು ವರ್ಷದಿಂದ ಜನರು ಒತ್ತಡ ಹೇರುತ್ತಿದ್ದರೂ ಈವರೆಗೆ ಕ್ರಮವಾಗಿಲ್ಲ. ಒಂದೂವರೆ ಕಿ.ಮೀ ಜಲ್ಲಿ ರಸ್ತೆ ಮಂಜೂರಾಗಿದ್ದು ಸದ್ಯ ಕಾಮಗಾರಿಯೂ ನಿಂತಿದೆ. ಈ ಘಟನೆಯಿಂದಾದರೂ ಆಡಳಿತ ವ್ಯವಸ್ಥೆ ಎಚ್ಚೆತ್ತು ಗ್ರಾಮಕ್ಕೆ ರಸ್ತೆ ನಿರ್ಮಿಸಿಕೊಡಲಿ’ ಎಂದು 31ನೇ ವಾರ್ಡ್‌ನ ನಗರಸಭೆ ಸದಸ್ಯೆ ರುಕ್ಮಿಣಿ ಗೌಡ ಪ್ರತಿಕ್ರಿಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT