ಶನಿವಾರ, 5 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮುಂಡಗೋಡ | ʼಕತ್ತಲು ಭಾಗ್ಯʼಕ್ಕೆ ಜನರ ಆಕ್ರೋಶ

ಬೆಳಗದ ಬೀದಿ ಬೀದಿ: ಲೋಕೋಪಯೋಗಿ, ಗುತ್ತಿಗೆದಾರರ ನಿರ್ಲಕ್ಷ್ಯ
Published : 6 ಜುಲೈ 2024, 5:57 IST
Last Updated : 6 ಜುಲೈ 2024, 5:57 IST
ಫಾಲೋ ಮಾಡಿ
Comments

ಮುಂಡಗೋಡ: ಅಸಮರ್ಪಕ ನಿರ್ವಹಣೆಯಿಂದ ಪಟ್ಟಣವು ಕತ್ತಲೆಯಲ್ಲಿ ಮುಳುಗುತ್ತಿದ್ದು, ಒಂದು ವರ್ಷದ ಹಿಂದೆ ಪಟ್ಟಣದ ಪ್ರಮುಖ ರಸ್ತೆಗಳ ಇಕ್ಕೆಲಗಳಲ್ಲಿ ಅಳವಡಿಸಿದ್ದ ಬೀದಿ ದೀಪಗಳು ಅಲ್ಲೊಂದು ಇಲ್ಲೊಂದು ಉರಿಯುತ್ತಿವೆ. ಒಂದೊಂದು ದಿನ ಇಡೀ ಒಂದು ಮಾರ್ಗವೇ ಕತ್ತಲಿನಲ್ಲಿ ಇರುವಂತ ಪರಿಸ್ಥಿತಿ ನಿರ್ಮಾಣವಾಗಿದೆ.

ಲೋಕೋಪಯೋಗಿ ಇಲಾಖೆಯ ಯೋಜನೆ ಮತ್ತು ರಸ್ತೆಗಳ ಆಸ್ತಿ ನಿರ್ವಹಣಾ ಕೇಂದ್ರದವರು (ಪ್ರಾಮ್ಸಿ) ಪಟ್ಟಣದ ಪ್ರಮುಖ ರಸ್ತೆಗಳಲ್ಲಿ 195ಕ್ಕೂ ಹೆಚ್ಚು ಅಲಂಕೃತ ವಿದ್ಯುತ್‌ ದೀಪಗಳನ್ನು ಅಳವಡಿಸಿದ್ದಾರೆ. ಹೊಸ ಕಾಮಗಾರಿಯಿಂದ ಈ ಹಿಂದೆ ಬೆಳಕು ನೀಡುತ್ತಿದ್ದ ಹಳೆಯ ವಿದ್ಯುತ್‌ ಕಂಬಗಳ ಸಂಪರ್ಕ ಸಹ ಕಡಿತಗೊಳಿಸಿದ್ದಾರೆ. ಆರಂಭದಲ್ಲಿ ಬಣ್ಣದ ಬೆಳಕಿನ ಜೊತೆಗೆ ಕಣ್ಣು ಕುಕ್ಕುವಂತ ಬೆಳಕು ಬೀರಿದ್ದ ಹೊಸ ದೀಪಗಳು ನಿಧಾನವಾಗಿ ಆರತೊಡಗಿವೆ.

ಬಂಕಾಪುರ-ಯಲ್ಲಾಪುರ ರಸ್ತೆ ಹಾಗೂ ಹುಬ್ಬಳ್ಳಿ-ಶಿರಸಿ ಹೆದ್ದಾರಿ ಪಕ್ಕದಲ್ಲಿ ಅಳವಡಿಸಿರುವ ಬೀದಿ ದೀಪಗಳು ಸಮರ್ಪಕವಾಗಿ ಬೆಳಕು ಬೀರುತ್ತಿಲ್ಲ. ಒಂದೊಂದು ದಿನ ಒಂದೊಂದು ಬಲ್ಬ್‌ ಆರುತ್ತಿವೆ. ಪ್ರಮುಖ ರಸ್ತೆಗಳೇ ಕತ್ತಲೆಯಲ್ಲಿ ಇರುತ್ತಿರುವುದರಿಂದ, ಪಟ್ಟಣವು ರಾತ್ರಿ ಸಮಯದಲ್ಲಿ ಕಳೆಗುಂದಿದಂತೆ ಕಾಣುತ್ತಿದೆ.

ಬಸ್‌ ನಿಲ್ದಾಣ ರಸ್ತೆಯಲ್ಲಿಯೂ ಬಹುತೇಕ ಬೀದಿ ದೀಪಗಳು ನಿರಂತರವಾಗಿ ಉರಿಯುತ್ತಿಲ್ಲ. ಕೆಲವೆಡೆ ಕಂಬಗಳನ್ನು ಅಳವಡಿಸುವುದು ಇನ್ನೂ ಬಾಕಿಯಿದ್ದು, ಆರಂಭದ ಕಾಮಗಾರಿ ಮಾಡಿ, ಉಳಿದ ಕೆಲಸವನ್ನು ಹಾಗೆಯೇ ಬಿಡಲಾಗಿದೆ. ಮೊದಲಿಗೆ ಇದ್ದಂತ ಹೈಮಾಸ್ಟ್‌ ಬೆಳಕು ಹಾಗೂ ಟಿಫೈ ಬಲ್ಬ್‌ಗಳ ಬೆಳಕು ಪಟ್ಟಣವಾಸಿಗಳಿಗೆ ಸಹಾಯವಾಗಿತ್ತು. ಅಲಂಕೃತ ಬೀದಿ ದೀಪಗಳಿಂದ ಇನ್ನಷ್ಟು ಸೌಂದರ್ಯ ಹೆಚ್ಚಿಸಲು ಹೋಗಿ, ಇದ್ದ ಬೆಳಕನ್ನು ಕಳೆದುಕೊಂಡಂತಾಗಿದೆ ಎಂದು ಸಾರ್ವಜನಿಕರು ದೂರುತ್ತಿದ್ದಾರೆ.

ʼಕಾಮಗಾರಿ ಮುಗಿದಿದೆಯೋ ಅಥವಾ ಇನ್ನೂ ಬಾಕಿ ಇದೆಯೋ ಎಂಬುದು ಅಧಿಕಾರಿಗಳಲ್ಲಿಯೇ ಗೊಂದಲವಿದೆ. ಅಲಂಕೃತ ವಿದ್ಯುತ್‌ ದೀಪಗಳ ಅಳವಡಿಕೆ ಯೋಜನೆಯನ್ನು ಲೋಕೋಪಯೋಗಿ ಇಲಾಖೆಯವರು ಕೈಗೊಂಡಿದ್ದಾರೆ. ಆದರೆ, ಇನ್ನೂ ತನಕ ಪಟ್ಟಣ ಪಂಚಾಯಿತಿಗೆ ಹಸ್ತಾಂತರವಾಗಿಲ್ಲ. ಬೀದಿ ದೀಪ ಆರಿದರೆ ಸಾರ್ವಜನಿಕರು ಪಟ್ಟಣ ಪಂಚಾಯಿತಿಗೆ ದೂರು ನೀಡುತ್ತಿದ್ದಾರೆ. ಪ್ರಮುಖ ರಸ್ತೆಗಳ ಬದಿ ಅಳವಡಿಸಿರುವ ಬೀದಿ ದೀಪಗಳ ಸಮಸ್ಯೆ ಒಂದೆಡೆಯಾದರೆ, ವಾರ್ಡ್‌ಗಳಲ್ಲಿ ಹೊಸದಾಗಿ ಅಳವಡಿಸಿರುವ ಎಲ್‌ಇಡಿ ಬೀದಿ ದೀಪಗಳು ಸಹ ಆರುತ್ತಿವೆ. ಒಟ್ಟಿನಲ್ಲಿ ಪಟ್ಟಣಕ್ಕೆ ಕತ್ತಲು ವ್ಯಾಪಕವಾಗಿ ಆವರಿಸುವ ದಿನಗಳು ದೂರವಿಲ್ಲ ಎನ್ನುವಂತಾಗಿದೆʼ ಎಂದು ಪಟ್ಟಣ ಪಂಚಾಯಿತಿ ಸದಸ್ಯ ಮಂಜುನಾಥ ಹರಮಲಕರ ದೂರಿದರು.

ʼಅಲಂಕೃತ ಬೀದಿ ದೀಪಗಳ ಕಾಮಗಾರಿ ಪಟ್ಟಣ ಪಂಚಾಯಿತಿಗೆ ಇನ್ನೂ ತನಕ ಹಸ್ತಾಂತರವಾಗಿಲ್ಲ. ಬಂಕಾಪುರ ರಸ್ತೆಯಲ್ಲಿ ಕೆಲವೆಡೆ ನೆಲದಡಿ ಹಾದು ಹೋಗಿರುವ ಮಾರ್ಗದಿಂದ ವಿದ್ಯುತ್‌ ಶಾಖ ತಗುಲಿದಂತ ಅನುಭವವಾಗಿದೆ ಎಂಬ ದೂರು ಕೇಳಿಬಂದಿತ್ತು. ಕೆಲವೆಡೆ ಬಲ್ಬ್‌ಗಳು ಹತ್ತುವುದಿಲ್ಲ ಎನ್ನುವ ದೂರನ್ನು ಲೋಕೋಪಯೋಗಿ ಅಧಿಕಾರಿಗಳಿಗೆ ತಿಳಿಸಲಾಗಿದೆʼ ಎಂದು ಮುಖ್ಯಾಧಿಕಾರಿ ಚಂದ್ರಶೇಖರ ಬಿ. ಹೇಳಿದರು.

ʼಬೀದಿ ದೀಪಗಳ ಕಾಮಗಾರಿ ಮಾಡಿದವರನ್ನು ಈ ಹಿಂದೆ ಕರೆಯಿಸಿ ಸಮಸ್ಯೆಯನ್ನು ತಿಳಿಸಲಾಗಿದೆ. ಬೆಳಕು ಬೀರದಿರುವ ಬಲ್ಬ್‌ಗಳ ಬಗ್ಗೆ ಮಾಹಿತಿ ಸಂಗ್ರಹಿಸಿ, ಬದಲಾವಣೆ ಮಾಡುವುದಾಗಿ ಹೇಳಿದ್ದಾರೆ. ಪಟ್ಟಣ ಪಂಚಾಯಿತಿ ವಿದ್ಯುತ್‌ ನಿರ್ವಹಣೆ ಮಾಡುವ ಸಿಬ್ಬಂದಿಯೂ ಜೊತೆಗಿದ್ದರು. ಪ್ರಾಮ್ಸಿ ವಿಭಾಗದವರಿಗೆ ಈ ಕುರಿತು ವರದಿ ನೀಡಲಾಗಿದೆʼ ಎಂದು ಲೋಕೋಪಯೋಗಿ ಇಲಾಖೆಯ ಎಇಇ ಮಹದೇವಪ್ಪ ಹ್ಯಾಟಿ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT